ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ ಲೋಕಸಭೆ ಕ್ಷೇತ್ರ: ‘ಕಮಲ’ ಕೋಟೆ ವಶಕ್ಕೆ ‘ಕೈ’ ಶತಪ್ರಯತ್ನ

Published 1 ಮೇ 2024, 23:32 IST
Last Updated 1 ಮೇ 2024, 23:32 IST
ಅಕ್ಷರ ಗಾತ್ರ

ಬಾಗಲಕೋಟೆ: ಸತತ ನಾಲ್ಕು ಬಾರಿ ಬಾಗಲಕೋಟೆ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸಿರುವ ಪಿ.ಸಿ.ಗದ್ದಿಗೌಡರ್‌, ಐದನೇ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಯುವ ಮುಖ ಸಂಯುಕ್ತಾ ಪಾಟೀಲ ಅವರನ್ನು ಅಖಾಡಕ್ಕಿಳಿಸಿದೆ.

ಇಲ್ಲಿ 2004ರಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿ ಪಿ.ಸಿ. ಗದ್ದಿಗೌಡರದ್ದು. ಐದನೇ ಬಾರಿ ವಿಜಯಪತಾಕೆ ಹಾರಿಸುವ ಉಮೇದಿನಲ್ಲಿ ಅವರು ಇದ್ದಾರೆ. ಬಾದಾಮಿ ತಾಲ್ಲೂಕಿನಲ್ಲಿ ಮಾಜಿ ಶಾಸಕ ಪಿ.ಕೆ. ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪುರ ಅಸಮಾಧಾನ ಶಮನವಾಗಿದ್ದು, ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ, ಮಾಜಿ ಸಚಿವ ಮುರುಗೇಶ ನಿರಾಣಿ ಸೇರಿ ಹಲವರ ಮಧ್ಯದ ಮುನಿಸಿನ ಪರಿಣಾಮ ಸೋಲಾಗಿತ್ತು. ಈಗಲೂ ಅದು ಮುಂದುವರಿದಿದ್ದು, ಶಮನವಾಗದಿದ್ದರೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ಜೆಡಿಎಸ್‌ ಜೊತೆಗಿನ ಮೈತ್ರಿ ಫಲಕಾರಿ ಆಗಬಹುದು ಎಂಬ ನಿರೀಕ್ಷೆ ಬಿಜೆಪಿಯಲ್ಲಿದೆ. ಜನತಾ ಪರಿವಾರದ ಹಿನ್ನೆಲೆಯ ಗದ್ದಿಗೌಡರಿಗೆ ಜಿಲ್ಲೆಯಲ್ಲಿ ಹಲವು ನಾಯಕರೊಂದಿಗೆ ಉತ್ತಮ ಸ್ನೇಹ ಸಂಬಂಧ ಇರುವುದು ಕೂಡ ನೆರವಿಗೆ ಬರಬಹುದು ಎಂಬ ಆಶಾಭಾವವೂ ಇದೆ.

ಸಂಯುಕ್ತಾ ಪಾಟೀಲ ಅವರ ಗೆಲುವಿಗೆ ತಂದೆ, ಸಚಿವ ಶಿವಾನಂದ ಪಾಟೀಲರು ಶ್ರಮಿಸುತ್ತಿದ್ದಾರೆ. ಸಂಯುಕ್ತಾ ಪಾಟೀಲ ಜಿಲ್ಲೆಯ ಹೊರಗಿನವರು ಎಂದು ಬಿಂಬಿಸುವುದನ್ನು ತಡೆಯಲು ಶ್ರಮಿಸುತ್ತಿದ್ದಾರೆ. ಗೆಲುವು ದಾಖಲಿಸಲು ರಣತಂತ್ರ ರೂಪಿಸುತ್ತಿದ್ದಾರೆ.

2019ರ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಅಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವಾನಂದ ಪಾಟೀಲರೇ ವಹಿಸಿಕೊಂಡಿದ್ದರು. ಆ  ಅನುಭವ ಅವರಿಗೆ ನೆರವಾಗಲಿದೆ. ಜಿಲ್ಲೆಯಲ್ಲಿ ನೇಕಾರರ ಸಂಖ್ಯೆ ಹೆಚ್ಚಿದೆ. ಅವರಿಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ನೀಡುತ್ತಿರುವುದು ಪ್ರಭಾವ ಬೀರಬಹುದು. ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚಿದ್ದು, ಸಕ್ಕರೆ ಸಚಿವರಾಗಿರುವುದು ನೆರವಿಗೆ ಬರಬಹುದು ಎಂಬ ಅಂದಾಜು ಕಾಂಗ್ರೆಸ್‌ನವರದ್ದು.

ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಕಾಂಗ್ರೆಸ್‌ನ ವೀಣಾ ಕಾಶಪ್ಪನವರ (ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ) ಮುನಿಸು ಸಂಪೂರ್ಣವಾಗಿ ಶಮನವಾಗಿಲ್ಲ. ನಾಮಪತ್ರ ಸಲ್ಲಿಕೆಯ ದಿನ ಬರಲಿಲ್ಲ. ಪ್ರಚಾರ ಸಭೆಗಳಲ್ಲೂ ಕಾಣಿಸಿಕೊಂಡಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳಾಗಿದ್ದ ತೇರದಾಳದ ಡಾ.ಪದ್ಮಜಿತ್ ನಾಡಗೌಡ, ಮುಧೋಳದ ಸತೀಶ ಬಂಡಿವಡ್ಡರ ಸೇರ್ಪಡೆಗೆ ವಿರೋಧ ವ್ಯಕ್ತವಾಗಿತ್ತು. ಅದು ಇನ್ನೂ ಪೂರ್ಣವಾಗಿ ಬಗೆಹರಿದಿಲ್ಲ. ಬಾದಾಮಿ, ಜಮಖಂಡಿಯಲ್ಲಿ ಎರಡು ಬಣಗಳಾಗಿದ್ದು, ಬಣಗಳ ಒಗ್ಗೂಡಿಸುವಿಕೆ ಯತ್ನ ಮುಂದುವರಿದಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದು, ಅವರ ಬಲವೂ ಪಕ್ಷಕ್ಕೆ ವರವಾಗಲಿದೆ ಎಂಬ ನಿರೀಕ್ಷೆಯಲ್ಲಿ ಶಿವಾನಂದ ಪಾಟೀಲರಿದ್ದಾರೆ.

ಕ್ಷೇತ್ರದಲ್ಲಿ ಅಭ್ಯರ್ಥಿಗಳ ವರ್ಚಸ್ಸಿಗಿಂತ ಬಿಜೆಪಿಯವರು ಮೋದಿಯ ಅಲೆ ನೆಚ್ಚಿಕೊಂಡರೆ, ಕಾಂಗ್ರೆಸ್‌ನವರು ಗ್ಯಾರಂಟಿ ಯೋಜನೆಗಳ ಪ್ರಭಾವದಲ್ಲಿ ಮಹಿಳೆಯರ ಮತಗಳ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರದ ಜನರು ‘ಕೈ’ ಹಿಡಿಯುವರೇ ಅಥವಾ ‘ಕಮಲ’ ಅರಳಿಸುವರೇ ಎಂಬುದು ನಿಗೂಢವಾಗಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT