ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ಜೆಡಿಎಸ್‌ ಮೈತ್ರಿ ಅವಕಾಶವಾದಿತನ: ಬಿ.ಕೆ. ಚಂದ್ರಶೇಖರ್

Published 22 ಏಪ್ರಿಲ್ 2024, 14:36 IST
Last Updated 22 ಏಪ್ರಿಲ್ 2024, 14:36 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಸೋಲಿಸಲು ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವುದು ಅವಕಾಶವಾದಿತನ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.

‘ಎಚ್‌.ಡಿ. ಕುಮಾರಸ್ವಾಮಿ ಕಣದಲ್ಲಿರುವ ಮಂಡ್ಯದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ಜೆಡಿಎಸ್ ಬಿಜೆಪಿಯ ‘ಬಿ’ ತಂಡ ಎಂಬ ತಮ್ಮ ಹಿಂದಿನ ಮಾತನ್ನು ಪುನರುಚ್ಚರಿಸಿದ್ದರು. ಜೆಡಿಎಸ್‍ನ ಅವಕಾಶವಾದಿತನಕ್ಕೆ ಇದಕ್ಕಿಂತ ಬೇರೆ ದೃಷ್ಟಾಂತ ಬೇಕೆ ಎಂದೂ ಪ್ರಶ್ನಿಸಿದರು. ಆದರೆ, ಈ ಆರೋಪವನ್ನು‌ ಅಲ್ಲಗಳೆದಿರುವ ಕುಮಾರಸ್ವಾಮಿ, ‘ತಾವು ಅವಕಾಶವಾದಿಗಳೂ ಅಲ್ಲ, ಅಧಿಕಾರಕ್ಕಾಗಿಯೂ ಇಲ್ಲ’ ಎಂದು ಸಮರ್ಥಿಸಿಕೊಂಡರು. ಹಾಗಾದರೆ, ಅವಕಾಶವಾದಿತನ ಎಂದರೇನು’ ಎಂಬುದಾಗಿ ಪ್ರಶ್ನಿಸಿದ್ದಾರೆ.

‘ಕಹಿ ಅನುಭವದ ಹೊರತಾಗಿಯೂ ಜನತಾ ದಳ ‘ಜಾತ್ಯತೀತ’ದ ಮೈತ್ರಿಯ 2024ರ ಪ್ರಸ್ತಾವವನ್ನು ಬಿಜೆಪಿ ಒಪ್ಪಿಕೊಂಡು, ಅದೂ ತನ್ನ ಅವಕಾಶವಾದಿತನವನ್ನು ಮೆರೆದಿದೆ. ದೇವೇಗೌಡರು ಈ ಮೈತ್ರಿಕೂಟವನ್ನು ‘ಪಕ್ಷದ ಉಳಿವಿಗಾಗಿ’ ಎಂದು ಸಮರ್ಥಿಸಿಕೊಂಡು, ‘ಜೆಡಿಎಸ್ ಅಧಿಕಾರದಾಹಿಯಲ್ಲ, ಅವಕಾಶವಾದಿತನ ಮಾಡುವುದಿಲ್ಲ. ಇದರಲ್ಲಿ ಸ್ವಾರ್ಥ ಏನೂ ಇಲ್ಲ. ನಾನೇ ಈ ನಿರ್ಧಾರ ಮಾಡಿದೆ’ ಎಂದು ವಿವರಣೆ ನೀಡಿದರು. ಅಂದರೆ, ಇದು ಅವರ ಮೊದಲ ಹಾಗೂ ಪ್ರಾಮಾಣಿಕ ತಪ್ಪೊಪ್ಪಿಗೆ! ಇದರ ಅರ್ಥ, ಅವರಿಗೆ ‘ಗುರಿ’ ಮುಖ್ಯವಾಗಿತ್ತು, ‘ಮಾರ್ಗ’ (ಬಿಜೆಪಿಯ ಕೋಮುವಾದ) ಮುಖ್ಯವಾಗಲಿಲ್ಲ, ಅದು ಜೆಡಿಎಸ್‍ನ ಕಸದ ಬುಟ್ಟಿಗೆ ಸೇರಿತು’ ಎಂದಿದ್ದಾರೆ.

‘ರಾಜ್ಯದ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ನೀರಾವರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನನ್ನ ಏಕಮಾತ್ರ ಗುರಿಯಾಗಿದೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಜನ ಇದನ್ನು ನಂಬುವರೆ? ಕರ್ನಾಟಕಕ್ಕೆ ಸಹಾಯವಾಗುವಂತೆ ಕಾವೇರಿ ವಿವಾದವನ್ನು ನಿಭಾಯಿಸುವ ಅವಕಾಶವನ್ನು ದೇವೇಗೌಡರು ಪ್ರಧಾನಿಯಾಗಿದ್ದಾಗ ಕಳೆದುಕೊಂಡರು’ ಎಂದೂ ಚಂದ್ರಶೇಖರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT