ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೇದಿಕೆಯಲ್ಲೇ ‘ಮೈತ್ರಿ’ ಮುಖಂಡರ ಜಟಾಪಟಿ!

Published 25 ಮಾರ್ಚ್ 2024, 20:46 IST
Last Updated 25 ಮಾರ್ಚ್ 2024, 20:46 IST
ಅಕ್ಷರ ಗಾತ್ರ

ತುರುವೇಕೆರೆ (ತುಮಕೂರು): ಪಟ್ಟಣದಲ್ಲಿ ಸೋಮವಾರ ನಡೆದ ಬಿಜೆಪಿ– ಜೆಡಿಎಸ್‌ ಮೈತ್ರಿ ಸಭೆ ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರ ಮಧ್ಯದ ವಾಗ್ವಾದಕ್ಕೆ ವೇದಿಕೆಯಾಯಿತು.

ಜೆಡಿಎಸ್‌ ಶಾಸಕ ಎಂ.ಟಿ.ಕೃಷ್ಣಪ್ಪ, ‘ಬಿಜೆಪಿಯ ಕೊಂಡಜ್ಜಿ ವಿಶ್ವನಾಥ್‌ 2014ರ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್‌ ಅಭ್ಯರ್ಥಿ ಮುದ್ದಹನುಮೇಗೌಡ ಅವರಿಗೆ ಬೆಂಬಲ ನೀಡಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿ ಇದ್ದುಕೊಂಡು ನನ್ನ ವಿರುದ್ಧ ಕೆಲಸ ಮಾಡಿದರು. ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಸಹಕಾರ ನೀಡುತ್ತಾರೆಯೇ ಅಥವಾ ಬೇರೆ ಏನಾದರೂ ಮಾಡುತ್ತಾರೆಯೇ?’ ಎಂದು ಪ್ರಶ್ನಿಸಿದ್ದು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿತು.

ಕೃಷ್ಣಪ್ಪ ಹೇಳಿಕೆಗೆ ಸಮಜಾಯಿಷಿ ಕೊಡಲು ಮುಂದಾದ ಕೊಂಡಜ್ಜಿ ವಿಶ್ವನಾಥ್‌ ಅವರನ್ನು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಡೆದರು. ‘ಈಗ ಏನೂ ಮಾತನಾಡುವುದು ಬೇಡ’ ಎಂದು ವಾಪಸ್‌ ಕಳುಹಿಸಿದರು. ಇದರಿಂದಾಗಿ ವೇದಿಕೆ ಮೇಲೆಯೇ ಮುಖಂಡರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಇದೇ ವೇಳೆ ವೇದಿಕೆಯ ಮುಂಭಾಗದಲ್ಲಿದ್ದ ಬಿಜೆಪಿಯ ಕಡೇಹಳ್ಳಿ ಸಿದ್ದೇಗೌಡ, ‘ಕೃಷ್ಣಪ್ಪ ಯಾವಾಗಲೂ ಇಂತಹ ದುರಹಂಕಾರದ ಮಾತುಗಳನ್ನಾಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನು ಕೇಳಿಸಿಕೊಂಡು ವೇದಿಕೆಯಲ್ಲಿದ್ದ ಜೆಡಿಎಸ್‌ನ ವೆಂಕಟಾಪುರದ ಯೋಗೇಶ್‌ ಅವರು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.

ವೇದಿಕೆಯಲ್ಲಿದ್ದ ಶಾಸಕ ಗೋಪಾಲಯ್ಯ, ಮುಖಂಡರಾದ ಎಂ.ಡಿ.ಲಕ್ಷ್ಮಿನಾರಾಯಣ, ಮಸಾಲೆ ಜಯರಾಂ, ನೆ.ಲ.ನರೇಂದ್ರಬಾಬು ಇತರರು ಎರಡೂ ಪಕ್ಷದ ಮುಖಂಡರನ್ನು ಸಮಾಧಾನ ಪಡಿಸಲು ಯತ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT