ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಮತ ಕೊಡುವುದು, ದೇಶಕ್ಕೆ ಮತ ನೀಡಿದಂತೆ: ಆಶ್ವತ್ಥ ನಾರಾಯಣ

ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಡಾ.ಸಿ.ಎನ್ ಅಶ್ವತ್ಥ ನಾರಾಯಣ
Last Updated 12 ಏಪ್ರಿಲ್ 2023, 6:33 IST
ಅಕ್ಷರ ಗಾತ್ರ

ಶಿವಮೊಗ್ಗ: ‘ದೇಶದಲ್ಲಿ ಜನಪರವಾದ ಬಿಜೆಪಿ ಎಲ್ಲರ ಭಾವನೆ, ಆಶೋತ್ತರಗಳಿಗೆ ಒತ್ತು ನೀಡುತ್ತದೆ. ಹೀಗಾಗಿ ಬಿಜೆಪಿಗೆ ಮತ ಕೊಡುವುದು, ಭಾರತಕ್ಕೆ ಮತ ನೀಡಿದಂತೆ’ ಎಂದು ಉನ್ನತ ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.

ಮಂಗಳವಾರ ಹಮ್ಮಿಕೊಂಡಿದ್ದ ‘ಡಿಜಿಟಲ್ ಕಾರ್ಯಕರ್ತರ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿ ಪಕ್ಷಗಳು, ಸಮಾಜದ ಸವಾಲುಗಳು ಹಾಗೂ ತಮ್ಮತನವನ್ನು ಮರೆತು ಬಿಜೆಪಿಯನ್ನು ವಿರೋಧಿಸುತ್ತ ಬಂದಿವೆ. ಆ ಎಲ್ಲ ಶಕ್ತಿಗಳಿಗೆ ಬಿಜೆಪಿಯು ಪ್ರತ್ಯುತ್ತರ ನೀಡಿ, ದೇಶದಲ್ಲಿ ಬಲಿಷ್ಠವಾಗಿ ಬೆಳೆದು ನಿಂತಿದೆ. ಬಿಜೆಪಿ ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿದೆ. ಅಭಿವೃದ್ಧಿ ಕಾರ್ಯಗಳಲ್ಲಿಯೂ ಶ್ರಮಿಸಿದೆ. ಕುಡಿಯುವ ನೀರು, ಸಾರಿಗೆ ವ್ಯವಸ್ಥೆ, ರಸ್ತೆ ನಿರ್ಮಾಣ, ರೈಲ್ವೆ ಯೋಜನೆ, ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣ, ಶೌಚಾಲಯ, ಸ್ವಚ್ಛ ಭಾರತ, ಆತ್ಮ ನಿರ್ಭರ, ಡಿಜಿಟಲ್ ಇಂಡಿಯಾ ರೀತಿಯ ಯೋಜನೆಗಳನ್ನು ಸಮಾಜಕ್ಕೆ ಪೂರಕವಾಗಿ ಕೊಡುಗೆ ನೀಡಿದೆ’ ಎಂದರು.

‘ದೇಶದಲ್ಲಿ ಸಂಸ್ಕೃತಿ, ಆಚಾರ–ವಿಚಾರ, ಧರ್ಮ ಪಾಲನೆಯಲ್ಲಿ ಬಿಜೆಪಿ ಶ್ರಮಿಸಿದೆ. ವಿಶ್ವದಲ್ಲಿ ಭಾರತ ಜಿಡಿಪಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಅದೇ ರೀತಿ ದೇಶದಲ್ಲಿ ನಮ್ಮ ರಾಜ್ಯ ಆರ್ಥಿಕ ಪ್ರಗತಿಯಲ್ಲಿ ಪ್ರಥಮ ಸ್ಥಾನದಲ್ಲಿದೆ’ ಎಂದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡುತ್ತಿದೆ. ಅವರು ಅಧಿಕಾರಕ್ಕೆ ಬರುವುದೇ ಅನುಮಾನ. ಹೀಗಾಗಿ ಗ್ಯಾರಂಟಿ ಯೋಜನೆ ಘೋಷಣೆ ಮಾಡುತ್ತಿದೆ. ಜನರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸುಳ್ಳು ಭರವಸೆ ನೀಡುತ್ತಿವೆ’ ಎಂದು ಆರೋಪಿಸಿದರು.

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಎಲ್ಲ ಜಾತಿ, ಸಮುದಾಯಗಳಿಗೆ ಮೀಸಲಾತಿ ನೀಡಲು ಶ್ರಮಿಸಿದೆ. ಮೀಸಲಾತಿ ವಿಚಾರವಾಗಿ ಪ್ರತಿ ಪಕ್ಷಗಳಿಗೆ ನಡುಕ ಹುಟ್ಟಿದೆ. ಚುನಾವಣೆಯಲ್ಲಿ ಹೊಸ ವಿಚಾರಗಳಿಂದ ಜನರ ಗಮನ ಸೆಳೆಯುವ ಕಾರ್ಯ ಆಗಬೇಕಿದೆ. ಪಕ್ಷ ಸಂಘಟನೆಗೆ ಸಾಮಾಜಿಕ ಜಾಲ ತಾಣದ ಮೂಲಕ ಜನರನ್ನು ತಲುಪಬೇಕಿದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಜಾಗೃತಿ ಮೂಡಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ, ಪಕ್ಷದ ಪರವಾಗಿ ಕೆಲಸ ಮಾಡಿ, ಮತ್ತೊಮ್ಮೆ ಅಧಿಕಾರಕ್ಕೆ ಬರಲು ಶ್ರಮಿಸಬೇಕು’
ಎಂದರು.

ಮೇಯರ್ ಎಸ್. ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಎಸ್. ರುದ್ರೇಗೌಡ, ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ. ಮೇಘರಾಜ್, ರಾಜ್ಯ ಮಾಧ್ಯಮ ಸಂಚಾಲಕ ವಿಕಾಸ್ ಪುತ್ತೂರು, ಗಿರೀಶ್ ಪಟೇಲ್, ಶರತ್ ಕಲ್ಯಾಣಿ, ಚೇತನ್ ಕುಮಾರ್, ಜಯಶಂಕರ್, ಮೋನಪ್ಪ ಭಂಡಾರಿ ಇದ್ದರು.

.............

ಶಿವಮೊಗ್ಗ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಎಂಎಫ್ ಬಗ್ಗೆ ಮಾತಾಡುತ್ತಾರೆ. ಅವರ ಮನೆಯಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್, ವಾಲ್‌ಮಾರ್ಟ್‌ನಿಂದ ಏನೇನು ತರಿಸಿಕೊಳ್ಳುತ್ತಾರೆ ಗೊತ್ತಾ?’ ಎಂದು ಉನ್ನತ ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ವ್ಯಂಗ್ಯವಾಡಿದರು.

‘ರಾಜ್ಯದಲ್ಲಿ ಮೊದಲ ಬಾರಿಗೆ ಬಿ.ಎಸ್‌. ಯಡಿಯೂರಪ್ಪ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಿದ್ದರು. ಜೊತೆಗೆ ಕೆಎಂಎಫ್ ಬೆಳವಣಿಗೆಗೂ ಉತ್ತೇಜನ ಕೂಡ ನೀಡಲಾಗಿದೆ’ ಎಂದರು.

‘ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ಆರು ರಾಜ್ಯಗಳಿಗೆ ಕೆಎಂಎಫ್ ಉತ್ಪನ್ನಗಳು ಪೂರೈಕೆ ಆಗುತ್ತಿವೆ. ಅಮೂಲ್ ಉತ್ಪನ್ನಗಳು ಹಲವು ವರ್ಷಗಳಿಂದ ರಾಜ್ಯದಲ್ಲಿ ಮಾರಾಟವಾಗುತ್ತಿವೆ. ಅಮೂಲ್ ರಾಜ್ಯಕ್ಕೆ ಹೊಸದೇನೂ ಅಲ್ಲ. ಅಮೂಲ್ ಉತ್ಪನ್ನಗಳಿಂದ ಕೆಎಂಎಫ್ (ನಂದಿನಿ) ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೊರ ರಾಜ್ಯದಲ್ಲಿಯೂ ಕೆಎಂಎಫ್ ಉತ್ಪನ್ನಗಳು ಮಾರಾಟವಾಗುತ್ತಿವೆ’ ಎಂದು ಹೇಳಿದರು.

‘ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಮೊದಲ ಸಭೆಯಲ್ಲೇ ಶೇ 80ರಷ್ಟು ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿದೆ. ಎಲ್ಲ ಸಮುದಾಯದವರಿಗೂ ಅವಕಾಶ ಕೊಡಬೇಕು. ಆದ್ದರಿಂದ ಬಿಜೆಪಿಯ ಪಟ್ಟಿ ಬಿಡುಗಡೆ ತಡವಾಗಿದೆ. ಮತದಾರರು ಸಮ್ಮಿಶ್ರ ಸರ್ಕಾರದ ಪರಿಸ್ಥಿತಿ ಬಗ್ಗೆ ಅವಲೋಕಿಸಿದ್ದಾರೆ. ಸಮ್ಮಿಶ್ರ ಸರ್ಕಾರಗಳು ಜನಪರವಾಗಿರಲು ಸಾಧ್ಯವಿಲ್ಲ’ ಎಂದು ಹೇಳಿದರು.

ಕೆಲವು ನಾಯಕರು ತಮ್ಮ ಮಕ್ಕಳಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ‘ಪ್ರಜಾಪ್ರಭುತ್ವದಲ್ಲಿ ಟಿಕೆಟ್‌ ಅಪೇಕ್ಷೆ ಸಹಜ. ಸೂಕ್ತವಾದವರಿಗೆ ಪಕ್ಷ ಟಿಕೆಟ್‌ ನೀಡಲಿದೆ. ಸಾಮಾನ್ಯ ಕಾರ್ಯಕರ್ತರಂತೆ ಪಕ್ಷದ ಕೆಲಸ ಮಾಡುವ ಎಲ್ಲರಿಗೂ ಟಿಕೆಟ್‌ ಸಿಗಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT