ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಶಿಯವರೇ, ನಿಮ್ಮ ಕುತಂತ್ರ ನಮ್ಮ ಮುಂದೆ ನಡೆಯುವುದಿಲ್ಲ– ದಿಂಗಾಲೇಶ್ವರ ಶ್ರೀ

Published 8 ಏಪ್ರಿಲ್ 2024, 8:37 IST
Last Updated 8 ಏಪ್ರಿಲ್ 2024, 8:37 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಲ್ಹಾದ ಜೋಶಿಯವರ ಚೇಲಾಗಳು ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಜೋಶಿಯವರೇ, ನಿಮ್ಮ ಯಾವುದೇ ಕುತಂತ್ರ ನಮ್ಮ ಮುಂದೆ ನಡೆಯುವುದಿಲ್ಲ’ ಎಂದು ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ಗದಗ ಜಿಲ್ಲೆಯ ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜೋಶಿಯವರ ದುರಾಡಳಿತ ಬಗ್ಗೆ ಹೈಕಮಾಂಡ್ ನಾಯಕರು ಗಮನಹರಿಸುತ್ತಿಲ್ಲ. ಅವರಿಗೆ ಅದೇ ಬೇಕಾಗಿದೆ ಅನಿಸುತ್ತೆ. ಹೀಗಾಗಿ ಈ ದಿಂಗಾಲೇಶ್ವರ ರಾಜಕೀಯ ಪ್ರವೇಶ ಮಾಡಬೇಕಾಯಿತು. ಸ್ಪರ್ಧೆ ಮಾಡುವಂತೆ ಮತದಾರರು ನನಗೆ ಒತ್ತಾಯ ಮಾಡಿದ್ದಾರೆ’ ಎಂದರು. 

‘ನಿಮಗೆ ಜೋಶಿ ಅನ್ಯಾಯ ಮಾಡುತ್ತಾರೆ ಎಂದು ನಾನು ಕೆ.ಎಸ್‌. ಈಶ್ವರಪ್ಪ ಅವರಿಗೆ ಆರು ತಿಂಗಳು ಮೊದಲೇ  ಹೇಳಿದ್ದೆ‌. ಆದರೆ, ಈಶ್ವರಪ್ಪ ಅವರು ಇದರ ಬಗ್ಗೆ ಎಚ್ಚೆತ್ತುಕೊಂಡಿಲ್ಲ. ನಾನು ಏನ್ ಹೇಳಿದ್ನೋ ಅದೇ ಇವತ್ತು ಈಶ್ವರಪ್ಪ ಅವರಿಗೆ ಆಗಿದೆ. ಈಶ್ವರಪ್ಪಗೆ ಎಷ್ಟರ ಮಟ್ಟಿಗೆ ಅವಮಾನ ಮಾಡಿದ್ದಾರೆ ಅಂತ ನೋಡಿದ್ದೇವೆ. ದೆಹಲಿಗೆ ಕರೆಸಿದ ಬಿಜೆಪಿ ಹೈಕಮಾಂಡ್, ನಂತರ ವಾಪಸ್ ಕಳುಹಿಸಿದೆ. ಈ‌ ಮೂಲಕ ಅವಮಾನ ಮಾಡಿದ್ದಾರೆ’ ಎಂದರು.

‘‌ಟಿಕೆಟ್ ಸಿಕ್ಕ ಬಳಿಕ ಪ್ರಲ್ಹಾದ ಜೋಶಿ ಅವರು 5 ಲಕ್ಷಗಳ ಅಂತರದಿಂದ ಗೆದ್ದು ಬರುತ್ತೇನೆಂದು ಹೇಳುತ್ತಿದ್ದಾರೆ. ಅವರ ಜೇಬಿನಲ್ಲಿ 5 ಲಕ್ಷ ಮತಗಳು ಇದೆಯಾ’ ಎಂದೂ ಪ್ರಶ್ನಿಸಿದರು.

‘ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ನನಗೆ ಮನವಿ ಮಾಡಿದ್ದಾರೆ. ಆದರೆ, ಕೆಲವರು ನನ್ನ ಸ್ಪರ್ಧೆ ಹಿಂದೆ ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್‌ ಅವರ ಕೈವಾಡ ಇದೆಯೆಂದು ಹೇಳುತ್ತಿದ್ದಾರೆ. ಇದೆಲ್ಲಾ ಸುಳ್ಳು. ನನ್ನ ವಿರುದ್ಧ ಯಾರೇ ಮಠಾಧೀಶರು ಹೇಳಿಕೆ ಕೊಟ್ಟಿದ್ದರೂ ಅದು ಪ್ರಲ್ಹಾದ ಜೋಶಿಯವರ ಭಯಕ್ಕೆ ಕೊಟ್ಟಿದ್ದಾರೆ’ ಎಂದೂ ಹೇಳಿದರು.

‘ಪ್ರಧಾನಿ ಮೋದಿ ಭೇಟಿಗೆ  ರಾಜ್ಯ ಬಿಜೆಪಿಯ ಯಾವುದೇ ಸಂಸದರಿಗೆ ಜೋಶಿ ಅವಕಾಶ ಕೊಡಲಿಲ್ಲ. ಮೋದಿ ಅವರಿಂದ ದೂರ ಆಗಬಹುದೆಂಬ ಭಯ ಜೋಶಿ ಅವರಿಗಿದೆ’ ಎಂದೂ ದಿಂಗಾಲೇಶ್ವರ ಶ್ರೀ ಹೇಳಿದರು.

‘ನನ್ನ ಗುರಿಯನ್ನು ಮುಟ್ಟುವವರೆಗೂ ಇನ್ನು ಮುಂದೆ ಮಾಲೆಯನ್ನು ಧರಿಸಲ್ಲ. ಹೂಮಾಲೆಯನ್ನು  ಸ್ವೀಕರಿಸುವುದಿಲ್ಲ’ ಎಂದೂ ಶಪಥ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT