ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ ಲೋಕಸಭಾ ಕ್ಷೇತ್ರ: ಬಿಜೆಪಿ ಎದುರಿದೆ ಹಲವು ಸವಾಲು

2009ರ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಕಮಲದ ಅಧಿಪತ್ಯ
Published 3 ಏಪ್ರಿಲ್ 2024, 5:01 IST
Last Updated 3 ಏಪ್ರಿಲ್ 2024, 5:01 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸತತ ಗೆಲುವುಗಳ ಮೂಲಕ ದಾಖಲೆ ಬರೆದಿದ್ದ ಕಾಂಗ್ರೆಸ್‌, 2004ರಲ್ಲಿ ಬಿಜೆಪಿ ಎದುರು ಸೋಲೊಪ್ಪಿತ್ತು. ಅಂದಿನಿಂದ ಈವರೆಗೆ ಕ್ಷೇತ್ರದಲ್ಲಿ ಬಿಜೆಪಿಯದ್ದೇ ಅಧಿಪತ್ಯ. ಆದರೆ, ಈ ಸಲ ಚುನಾವಣೆ ಗೆಲುವು ಬಿಜೆಪಿಗೆ ಸುಲಭವಲ್ಲ. ಕ್ಷೇತ್ರ ಉಳಿಸಿಕೊಳ್ಳುವ ಬಹುದೊಡ್ಡ ಸವಾಲು ಈಗ ಅದರ ಮುಂದಿದೆ.   

ಕ್ಷೇತ್ರ ಮರುವಿಂಗಡಣೆ ಬಳಿಕ 2008ರಲ್ಲಿ ಪರಿಶಿಷ್ಠ ಪ‍ಂಗಡಕ್ಕೆ (ಎಸ್‌ಟಿ) ಮೀಸಲಾದ ಬಳ್ಳಾರಿ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದೇ ಗುರುತಿಸಿಕೊಂಡಿದೆ. ಹೆಚ್ಚೂ ಕಡಿಮೆ ಎರಡು ದಶಕಗಳ ಬಿಜೆಪಿ ಪಾರುಪತ್ಯ 2018ರಲ್ಲಿ ಒಂದು ಸಣ್ಣ ಅವಧಿಗೆ ಕಾಂಗ್ರೆಸ್‌ ಕೈ ಸೇರಿತ್ತು. ಆಗ ಕಾಂಗ್ರೆಸ್‌ ನಾಯಕ ವಿ.ಎಸ್‌ ಉಗ್ರಪ್ಪ ಸಂಸದರಾಗಿ ಆಯ್ಕೆಯಾಗಿದ್ದರು. 2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮರಳಿ ಬಿಜೆಪಿಗೆ ಜಯ ಒಲಿಯಿತು. 

ರಾಜ್ಯದಲ್ಲಿ ಈಗ ಆಡಳಿತದಲ್ಲಿರುವ ಕಾಂಗ್ರೆಸ್, ಕ್ಷೇತ್ರವನ್ನು ಮತ್ತೆ ‘ಕೈ’ ವಶ ಮಾಡಿಕೊಳ್ಳಲು ಕಸರತ್ತು ನಡೆಸಿದೆ. ಹಿರಿಯ ಶಾಸಕ ಇ. ತುಕಾರಾಮ್‌ ಅವರನ್ನೇ ಪಕ್ಷ ಕಣಕ್ಕಿಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಕ್ಷೇತ್ರದ ಬಗ್ಗೆ ಮುತುವರ್ಜಿ ವಹಿಸಿದ್ದಾರೆ. ಸಚಿವರಾದ ಬಿ. ನಾಗೇಂದ್ರ, ಜಮೀರ್‌ ಅಹಮದ್‌, ಸಂತೋಷ್‌ ಲಾಡ್‌ ಮತ್ತು ಕ್ಷೇತ್ರ ವ್ಯಾಪ್ತಿಯ ಆರು ಶಾಸಕರು, ಮುಖಂಡರು ‘ಕೈ’ ಬಲಪಡಿಸುತ್ತಿದ್ದಾರೆ. 

ಬಿಜೆಪಿ ಸುಮ್ಮನೆ ಇಲ್ಲ. ಕಾಂಗ್ರೆಸ್‌ಗೂ ಮೊದಲೇ ತನ್ನ ಅಭ್ಯರ್ಥಿ ಘೋಷಿಸಿದ ಬಿಜೆಪಿ ಪ್ರಚಾರದಲ್ಲಿ ಪಕ್ಕಾ ಯೋಜನೆಹಾಕಿಕೊಂಡಿದೆ. ಈಗಾಗಲೇ ಒಂದು ಹಂತದ ಪ್ರಚಾರ ಕಾರ್ಯ ಪೂರ್ಣಗೊಳಿಸಿರುವ ಬಿಜೆಪಿ ಈಗ ಮತ್ತಷ್ಟು ಸ್ಥಳೀಯ ಮಟ್ಟಕ್ಕೆ ಚುನಾವಣಾ ಯಾತ್ರೆಯನ್ನು ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿದೆ. ಇದರ ಜೊತೆಗೆ ಜೆಡಿಎಸ್‌ ಜತೆಗಿನ ಮೈತ್ರಿ ಚೈತನ್ಯ ತುಂಬುವ ಸಾಧ್ಯತೆ ಇದೆ. ಶಾಸಕ ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಮರಳಿರುವುದು ಬಲ ತುಂಬಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT