ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ; ಕಾಂಗ್ರೆಸ್‌ನಲ್ಲಿ ನಿರುತ್ಸಾಹ

ಗಣ್ಯರ ಮನೆಗಳಿಗೆ ಭೇಟಿ ನೀಡುತ್ತಿರುವ ಸಂಸದ ಜಾಧವ; ಇಂದು ಕಾರ್ಯಕರ್ತರ ಸಭೆ
Published 22 ಮಾರ್ಚ್ 2024, 6:10 IST
Last Updated 22 ಮಾರ್ಚ್ 2024, 6:10 IST
ಅಕ್ಷರ ಗಾತ್ರ

ಕಲಬುರಗಿ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಅಂತಹ ಉತ್ಸಾಹ ಕಾಣಿಸಿಕೊಳ್ಳುತ್ತಿಲ್ಲ. ಮತ್ತೊಂದೆಡೆ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರ ಪಡೆ ಚುನಾವಣೆಯನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮೊದಲಿನಿಂದಲೂ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ಕಾಂಗ್ರೆಸ್‌ನಲ್ಲಿ ಕಗ್ಗಂಟಾಗಿಯೇ ಉಳಿದಿತ್ತು. ಗುರುವಾರ ರಾತ್ರಿ ಪ್ರಕಟವಾದ ಪಟ್ಟಿಯಲ್ಲಿ ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ರಾಧಾಕೃಷ್ಣ ದೊಡ್ಡಮನಿ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.

ಮತದಾರರನ್ನು ತಲುಪಲು ಕಾಂಗ್ರೆಸ್ ಮುಖಂಡರಾಗಲೀ, ಕಾರ್ಯಕರ್ತರಾಗಲೀ ಪ್ರಯತ್ನ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಅಭ್ಯರ್ಥಿ, ಸಂಸದ ಡಾ. ಉಮೇಶ ಜಾಧವ ಅವರು ಟಿಕೆಟ್ ಘೋಷಣೆಗೂ ಮುನ್ನವೇ ಒಂದು ಸುತ್ತು ಚುನಾವಣಾ ಪ್ರಚಾರವನ್ನು ಮುಗಿಸಿಬಿಟ್ಟಿದ್ದು, ಇದೀಗ ಪಕ್ಷದ ಸೂಚನೆಯ ಮೇರೆಗೆ ಗಣ್ಯರ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ. 

ಚುನಾವಣೆ ಘೋಷಣೆಯಾದ ದಿನವೇ ಬೆಳಿಗ್ಗೆ ನಗರದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿದ್ದ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಯಿಸಿ ಭರ್ಜರಿ ಪ್ರಚಾರಕ್ಕೆ ಚಾಲನೆ ನೀಡಿತು. ಅದಕ್ಕೂ ಮುನ್ನ ಕಾಂಗ್ರೆಸ್‌ನಿಂದ ಗ್ಯಾರಂಟಿ ಸಮಾವೇಶ ನಡೆಯಿತಾದರೂ ಪೂರ್ಣ ಪ್ರಮಾಣದ ಚುನಾವಣಾ ಪ್ರಚಾರ ಸಭೆಯಾಗಿರದೇ ಸರ್ಕಾರಿ ಯೋಜನೆಗಳನ್ನು ಹೇಳುವ ಮೂಲಕ ಪಕ್ಷವನ್ನು ಬೆಂಬಲಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಕೋರಿದರು.

ಅದನ್ನು ಹೊರತುಪಡಿಸಿ ಜಿಲ್ಲಾ ಮಟ್ಟ, ಬ್ಲಾಕ್‌ ಮಟ್ಟದಲ್ಲಾಗಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಗಳು ನಡೆದಿಲ್ಲ. ಬಿಜೆಪಿಯು ಇದೇ 22ರಂದು ಕಲಬುರಗಿ ಗ್ರಾಮೀಣ ಹಾಗೂ ಚಿತ್ತಾಪುರ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಗಳನ್ನು ಆಯೋಜಿಸಿದ್ದು, ಇದರಲ್ಲಿ ಚುನಾವಣಾ ಪ್ರಚಾರದ ಕುರಿತು ಚಿಂತನ ಮಂಥನ ನಡೆಸಲಿದೆ. ಸಾಮಾಜಿಕ ಜಾಲತಾಣಗಳಗಳ ಬಳಕೆಯಲ್ಲಿ ಉಳಿದೆಲ್ಲ ಪಕ್ಷಗಳಿಗಿಂತ ಮುಂದಿರುವ ಬಿಜೆಪಿ ಈಗಲೂ ಕೇಂದ್ರ ಸರ್ಕಾರದ ಯೋಜನೆಗಳು, ಪ್ರಧಾನಿ ಮೋದಿ ಅವರ ಭಾಷಣಗಳನ್ನು ಮತದಾರರಿಗೆ ಕಳಿಸುತ್ತಿದೆ. ಜೊತೆಗೆ, ಸ್ಥಳೀಯ ಸಂಸದ ಡಾ. ಜಾಧವ ಕಳೆದ ಐದು ವರ್ಷಗಳಲ್ಲಿ ತಂದ ಅನುದಾನ, ವಂದೇ ಭಾರತ್, ಭಾರತ್ ಮಾಲಾ ಯೋಜನೆ, ರೈಲು ಸೇತುವೆಗಳನ್ನು ನಿರ್ಮಿಸಿರುವುದು, ಶಹಾಬಾದ್, ಕಮಲಾಪುರಕ್ಕೆ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಯಂತಹ ಕೆಲಸಗಳನ್ನು ಒತ್ತು ಕೊಟ್ಟು ಮತದಾರರಿಗೆ ತಲುಪಿಸಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸ್ಥಳೀಯರೇ ಆದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಸೇರಿದಂತೆ ಕಾಂಗ್ರೆಸ್‌ ಶಾಸಕರು ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಬಗ್ಗೆ ನಿರ್ದಿಷ್ಟ ಕಾರ್ಯಸೂಚಿಯನ್ನು ಇಲ್ಲಿಯವರೆಗೂ ರೂಪಿಸಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಲ್ಲಿ ಗುಪ್ತಗಾಮಿನಿಯಾದ ಮುನಿಸು!

ಇತ್ತೀಚೆಗೆ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಪರಿಗಣಿಸಿಲ್ಲ ಎಂಬ ಕಾರಣಕ್ಕೆ ಜಿಲ್ಲಾ ಕಾಂಗ್ರೆಸ್‌ನ ಕೆಲ ಮುಖಂಡರು ಕಾರ್ಯಕರ್ತರಲ್ಲಿ ಮುನಿಸು ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಕೆಕೆಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಪುತ್ರ ಅರುಣಕುಮಾರ್ ಪಾಟೀಲ ಹೆಸರನ್ನು ಶಾಸಕ ಎಂ.ವೈ. ಪಾಟೀಲ ಸೂಚಿಸಿದ್ದರು. ಅದರೆ ಎಂ.ವೈ. ಪಾಟೀಲ ಅವರನ್ನೇ ಅಧ್ಯಕ್ಷರನ್ನಾಗಿ ಮುಖ್ಯಮಂತ್ರಿ ಅವರು ನೇಮಕ ಮಾಡಿದ್ದರು. ಇದರಿಂದ ಬೇಸರಗೊಂಡಿರುವ ಶಾಸಕರು ಆ ಹುದ್ದೆ ಒಪ್ಪಿಕೊಳ್ಳದಿರಲು ತೀರ್ಮಾನಿಸಿದ್ದಾರೆ.  ಮತ್ತೊಂದೆಡೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಕಾಡಾ ಹುದ್ದೆಗಳನ್ನು ಮುಸ್ಲಿಂ ಸಮುದಾಯದವರಿಗೇ ನೀಡಿದ ಬಗ್ಗೆ ಪಕ್ಷದಲ್ಲಿನ ಇತರ ಸಮುದಾಯದವರಿಗೆ ಬೇಸರ ತರಿಸಿದೆ. ಈಗಾಗಲೇ ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹುದ್ದೆಯನ್ನು ಕನೀಜ್ ಫಾತಿಮಾ ಅವರಿಗೆ ನೀಡಲಾಗಿತ್ತು. ಜಿಲ್ಲೆಯ ಎರಡು ಪ್ರಮುಖ ಹುದ್ದೆಗಳನ್ನೂ ಅಲ್ಪಸಂಖ್ಯಾತ ಸಮುದಾಯಕ್ಕೇ ನೀಡಿದ್ದರಿಂದ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಲಿಂಗಾಯತ ಬ್ರಾಹ್ಮಣ ಕೋಲಿ ಕುರುಬ ಸೇರಿದಂತೆ ಇತರ ಸಮುದಾಯದ ಮುಖಂಡರು ಅಸಮಾಧಾನಗೊಂಡಿದ್ದಾರೆ ಎಂದು ‍ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT