ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆ ಅಧಿಕಾರಿಗಳು ಗಡಿದಾಟಿಯೇ ಬರಬೇಕು

ಅರಣ್ಯದಲ್ಲಿನ ಕಮ್ಮರಗಾಂವದಲ್ಲಿ ಮತದಾನ
Published 23 ಏಪ್ರಿಲ್ 2024, 19:34 IST
Last Updated 23 ಏಪ್ರಿಲ್ 2024, 19:34 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕು ಕೇಂದ್ರದಿಂದ 35 ಕಿ.ಮೀ ದೂರ ದಟ್ಟ ಅರಣ್ಯದ ನಡುವೆ ಇರುವ ‘ಕಮ್ಮರಗಾಂವ’  ಗ್ರಾಮದಲ್ಲಿ ದಶಕದ ಹಿಂದೆ ಮುಚ್ಚಿರುವ ಶಾಲೆಯಲ್ಲಿ ಚುನಾವಣೆ ವೇಳೆ ಮತಗಟ್ಟೆ ತೆರೆಯಲಾಗುತ್ತದೆ.

ಇದು ರಾಜ್ಯದಲ್ಲೇ ಇದ್ದರೂ ಮತಗಟ್ಟೆಗೆ ಅಧಿಕಾರಿಗಳು 70 ಕಿ.ಮೀ ದೂರವನ್ನು ಗೋವಾ ರಾಜ್ಯದ ಮೂಲಕ ಕ್ರಮಿಸಿ, ಅಲ್ಲಿಂದ ಪುನಃ ರಾಜ್ಯದ ಗಡಿ ಪ್ರವೇಶಿಸಬೇಕು.

‘ಚುನಾವಣೆ ಎದುರಾದಾಗ ಅಧಿಕಾರಿಗಳು ದೂರದಿಂದ ಮತಯಂತ್ರಗಳನ್ನು ತಂದು ನಮ್ಮ ಮತದ ಹಕ್ಕು ಚಲಾಯಿಸಲು ಅನುಕೂಲ ಕಲ್ಪಿಸುತ್ತಾರೆ. ಚುನಾವಣೆ ಹೊರತಾದ ದಿನಗಳಲ್ಲಿ ನಮ್ಮ ಸಂಕಷ್ಟವನ್ನು ಯಾರೂ ಕೇಳುವುದಿಲ್ಲ’ ಎಂದು ಕಮ್ಮರಗಾಂವ ಗ್ರಾಮಸ್ಥ ತಾಬ್ಡೊ ವೆಳಿಪ ತಿಳಿಸಿದರು.

ಕಾರವಾರ ತಾಲ್ಲೂಕಿನ ಗೋಟೆಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ 35 ಮನೆಗಳಿವೆ. 67 ಪುರುಷ ಮತ್ತು 64 ಮಹಿಳೆಯರು ಸೇರಿ 131 ಮತದಾರರಿದ್ದಾರೆ.

ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚಿದ್ದ ಶಾಲೆ ಈಗ ಮತಗಟ್ಟೆಯಾಗಿ ಬಳಕೆ ಆಗುತ್ತದೆ. ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲ. ಬಹುತೇಕ ಜನರದ್ದು ಕೂಲಿ ಕೆಲಸ. ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಕ್ಕೆ ಗೋವಾ ರಾಜ್ಯವನ್ನೇ ಅವಲಂಬಿಸಿದ್ದಾರೆ.

ಮತಗಟ್ಟೆಗೆ ಬೇಕಿರುವ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮದ ಸಮಸ್ಯೆಗಳ ಪರಿಹಾರಕ್ಕೆ ಚುನಾವಣೆ ಮುಗಿದ ಬಳಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು.
–ಕೆ.ಪುರಂದರ, ತಹಶೀಲ್ದಾರ್ ಕಾರವಾರ

‘ಸರ್ಕಾರ ಉಚಿತವಾಗಿ ನೀಡುವ ಪಡಿತರ ಪಡೆಯಲು ಪ್ರತಿ ತಿಂಗಳು ಐದಾರು ಸಾವಿರ ರೂಪಾಯಿ ಖರ್ಚು ಮಾಡಬೇಕು. ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಲು 8 ಕಿ.ಮೀ ನಡೆಯಬೇಕು. ಪಡಿತರ ತರಲು ಸಹ 8 ಕಿ.ಮೀ ನಡೆಯಬೇಕು. ಅಕ್ಕಿಮೂಟೆ ಹೊತ್ತು ಅಷ್ಟು ದೂರ ನಡೆಯಲಾಗದ ಕಾರಣ ಬಾಡಿಗೆ ವಾಹನ ಪಡೆದು ಮಾಜಾಳಿ–ಗೋವಾ–ಬಾಡಪೋಲಿ ಕ್ರಾಸ್ ಮಾರ್ಗವಾಗಿ 70 ಕಿ.ಮೀ ವಾಹನದಲ್ಲಿ ಸಾಗಬೇಕು. ಇದಕ್ಕೆ ಹೆಚ್ಚು ವೆಚ್ಚವಾಗುತ್ತದೆ’ ಎಂದು ಗ್ರಾಮಸ್ಥೆ ಸುಶೀಲಾ ಗಾಂವ್ಕರ ತಿಳಿಸಿದರು.

‘ಅರಣ್ಯದ ನಡುವೆ ಇರುವ ಕಾರಣಕ್ಕೆ ನಮ್ಮ ಗ್ರಾಮಕ್ಕೆ ಈವರೆಗೆ ರಸ್ತೆ ನಿರ್ಮಿಸಲಾಗಿಲ್ಲ. ಅನಾರೋಗ್ಯಕ್ಕೆ ಒಳಗಾದರೆ, ಸಮೀಪದಲ್ಲಿ ಆಸ್ಪತ್ರೆಯೂ ಇಲ್ಲ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಶಾಲೆಯೂ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT