ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮನ ತದ್ವಿರುದ್ಧ ದಾರಿಯಲ್ಲಿ ಮೋದಿ: ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್‌ ತಾರಾ ಪ್ರಚಾರಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ
Published 23 ಏಪ್ರಿಲ್ 2024, 14:43 IST
Last Updated 23 ಏಪ್ರಿಲ್ 2024, 14:43 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಿಂದೂ ಪರಂಪರೆಯಲ್ಲಿ ನಾಯಕರನ್ನು ಸತ್ಯದ ದಾರಿ, ಸೇವಾ ಮನೋಭಾವದಲ್ಲಿ ಕಾಣುತ್ತೇವೆ. ಶ್ರೀರಾಮ ಕೂಡ ಇದೇ ಮಾರ್ಗದಲ್ಲಿ ನಡೆದುಕೊಂಡಿದ್ದರು. ಹತ್ತು ವರ್ಷಗಳಿಂದ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೊದಿ ಇದಕ್ಕೆ ತದ್ವಿರುದ್ಧವಾಗಿ ಆಡಳಿತ ನಡೆಸಿದ್ದಾರೆ. ಸುಳ್ಳಿನ ಸರಮಾಲೆಗಳನ್ನು ಹೆಣೆದಿದ್ದಾರೆ ಎಂದು ಕಾಂಗ್ರೆಸ್‌ ‘ತಾರಾ ಪ್ರಚಾರಕಿ’ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.

ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಕಾಂಗ್ರೆಸ್‌ ಮಂಗಳವಾರ ಹಮ್ಮಿಕೊಂಡಿದ್ದ ‘ನ್ಯಾಯ ಸಂಕಲ್ಪ ರ‍್ಯಾಲಿ’ಯಲ್ಲಿ ಅವರು ಮಾತನಾಡಿದರು.

‘ದೇಶದ ರಾಜಕೀಯ ಪರಂಪರೆ ಘನತೆಯಿಂದ ಕೂಡಿತ್ತು. ಈವರೆಗಿನ ಯಾವ ಪ್ರಧಾನಿ ಕೂಡ ದಾರಿ ಬಿಟ್ಟು ನಡೆದುಕೊಂಡಿರಲಿಲ್ಲ. ಈ ಸ್ಥಾನದಲ್ಲಿರುವ ರಾಜಕೀಯ ನಾಯಕ ಅಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ. ಅವರಿಗೆ ಅಧಿಕಾರದ ದರ್ಪ ಹೆಚ್ಚಾಗಿದ್ದು, ವೈಭೋಗದ ಜೀವನ ನಡೆಸುತ್ತಿದ್ದಾರೆ. ನೈತಿಕತೆ ಬಿಟ್ಟು ನಾಟಕ ಮಾಡುತ್ತಿದ್ದಾರೆ’ ಎಂದು ಕುಟುಕಿದರು.

‘ಬಿಜೆಪಿಯೇತರ ಪಕ್ಷ ಅಧಿಕಾರದಲ್ಲಿರುವ ಸರ್ಕಾರಗಳನ್ನು ತಪ್ಪು ದಾರಿಯಲ್ಲಿ ಕಿತ್ತುಕೊಳ್ಳಲಾಗುತ್ತಿದೆ. ನೂರಾರು ಕೋಟಿ ಕೊಟ್ಟು ನಾಯಕರನ್ನು ಖರೀದಿಸುತ್ತಿದ್ದಾರೆ. ಮಾಧ್ಯಮಗಳು ಇದನ್ನೇ ಮಾಸ್ಟರ್‌ ಸ್ಟ್ರೋಕ್‌ ಎಂದು ಬಣ್ಣಿಸುತ್ತಿವೆ. ಇದು ಅಸಾಂವಿಧಾನಿಕ ಹಾಗೂ ಅನೈತಿಕ ಮಾರ್ಗ ಎಂದು ಪ್ರಶ್ನಿಸುವ ಧೈರ್ಯ ಯಾರಿಗೂ ಇಲ್ಲವಾಗಿದೆ’ ಎಂದು ಆಕ್ರೋಶ ಹೊರಹಾಕಿದರು.

‘ಜಗತ್ತಿನಲ್ಲಿ ಮೋದಿ ‍ಪ್ರಸಿದ್ಧರು ಎಂಬುದಾಗಿ ನಂಬಿಸಲಾಗುತ್ತಿದೆ. ಅವರ ವೈಭೋಗದ ಜೀವನವನ್ನು ಅಹಂಕಾರದಿಂದ ಪ್ರದರ್ಶಿಸುತ್ತಿದ್ದಾರೆ. ಚಿಟಿಕಿ ಹೊಡೆಯುವಷ್ಟರಲ್ಲಿ ಯುದ್ಧ ನಿಲ್ಲಿಸುತ್ತಾರೆ ಎಂಬುದಾಗಿ ಮಾಧ್ಯಮಗಳು ಬಣ್ಣಿಸುತ್ತಿವೆ. ಇಷ್ಟು ಬಲಿಷ್ಠರಾಗಿರುವ ನೀವು ದೇಶದಲ್ಲಿರುವ ಬೆಲೆ ಏರಿಕೆ, ನಿರುದ್ಯೋಗ, ಕಷ್ಟಗಳನ್ನು ಏಕೆ ಕಡಿಮೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

‘ದೇಶದ ಗೌರವ ಹೆಚ್ಚಾಗಿದೆ, ಅಭಿವೃದ್ಧಿ ಹೊಂದಿದೆ ಎಂಬುದಾಗಿ ಬಿಂಬಿಸಲಾಗುತ್ತಿದೆ. ಜಸಮಾನ್ಯರ ಜೀವನದಲ್ಲಿ ಏದಾದರೂ ಬದಲಾವಣೆ ಆಗಿದೆಯೇ’ ಎಂದು ಪ್ರಶ್ನಿಸಿದ ಪ್ರಿಯಾಂಕಾ, ‘ಮೋದಿ ಅವರ ಇಬ್ಬರು ಬಂಡವಾಳಶಾಹಿ ಸ್ನೇಹಿತರ ಆಸ್ತಿ ಹೆಚ್ಚಾಗಿದೆ. ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಹತ್ತು ವರ್ಷಗಳ ಮೋದಿ ಸಾಧನೆ ಇದೆ ಇರಬೇಕು’ ಎಂದರು.

‘ಮೋದಿ ಅವರು ನಿಜವಾಗಿಯೂ ಹತ್ತು ವರ್ಷ ಕೆಲಸ ಮಾಡಿದ್ದರೆ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತಿದ್ದರು. ಜಾತಿ, ಧರ್ಮ ಮುಂದಿಟ್ಟುಕೊಂಡು ಮತಯಾಚನೆಗೆ ಬರುತ್ತಿರಲಿಲ್ಲ. ಪ್ರಧಾನಿ ಹುದ್ದೆಯಲ್ಲಿದ್ದವರು ಜನರ ಬಳಿಗೆ ಬರುತ್ತಿದ್ದರು. ಹಳ್ಳಿಯ ಜನರ ಸಂಕಷ್ಟಕ್ಕೆ ಮಿಡಿಯುತ್ತಿದ್ದರು. ಒಂದು ಪತ್ರ ಬರೆದರೂ ಪ್ರಧಾನಿ ಸ್ಪಂದಿಸುತ್ತಿದ್ದರು. ಈಗಿನವರಂತೆ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲ’ ಎಂದು ಹೇಳಿದರು.

‘ಧ್ವನಿ ಅಡಗಿಸುವ ಯತ್ನ’

ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವ ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಬ್ಬರು ಮುಖ್ಯಮಂತ್ರಿಗಳನ್ನು ಬಂಧಿಸಿ, ಕಾಂಗ್ರೆಸ್‌ ಬ್ಯಾಂಕ್‌ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು.

‘ಚುನಾವಣಾ ಬಾಂಡ್‌ ನೆಪದಲ್ಲಿ ಖಾಸಗಿ ಕಂಪನಿಗಳಿಂದ ನರೇಂದ್ರ ಮೋದಿ ದೇಣಿಗೆ ವಸೂಲಿ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹೆದರಿದ ಅನೇಕ ಕಂಪನಿಗಳು ಲಾಭಾಂಶಕ್ಕಿಂತ ಹೆಚ್ಚಿನ ಪಾಲನ್ನು ಬಿಜೆಪಿಗೆ ದೇಣಿಗೆ ನೀಡಿವೆ. ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶದಿಂದ ದೇಣಿಗೆ ನೀಡಿದವರ ಹೆಸರು ಬೆಳಕಿಗೆ ಬಂದಿದೆ’ ಎಂದು ಹೇಳಿದರು.

ಹುಮ್ಮಸ್ಸು ತುಂಬಿದ ಪ್ರಿಯಾಂಕಾ

ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮತಯಾಚನೆಗೆ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ‘ನ್ಯಾಯ ಸಂಕಲ್ಪ ರ‍್ಯಾಲಿ’ ಕೈ ಪಡೆಗೆ ಹುಮ್ಮಸ್ಸು ತುಂಬಿತು. ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿತು.

ಇಂದಿರಾಗಾಂಧಿ ಅವರ ಮೊಮ್ಮಗಳು ಎಂಬ ಅಭಿಮಾನದಿಂದ ಅನೇಕರು ಸಮಾವೇಶಕ್ಕೆ ಬಂದಿದ್ದರು. ಮಹಿಳೆಯರ ಸಂಖ್ಯೆಯೂ ಅಪಾರ ಪ್ರಮಾಣದಲ್ಲಿತ್ತು. ಪ್ರಿಯಾಂಕಾ ಅವರು ವೇದಿಕೆಗೆ ಬರುತ್ತಿದ್ದಂತೆ ಜನರು ಹರ್ಷೋದ್ಘಾರ ಮಾಡಿದರು. ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ಅವರನ್ನು ಟೀಕಿಸುತ್ತ, ಕಾಂಗ್ರೆಸ್‌ ಪ್ರಣಾಳಿಕೆಯ ಅಂಶಗಳನ್ನು ಬಿಡಿಸಿಟ್ಟ ಭಾಷಣದ ಪರಿಗೆ ಪ್ರೇಕ್ಷಕರು ತಲೆದೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT