ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಶಿವಮೊಗ್ಗದಲ್ಲಿ ₹ 7.72 ಕೋಟಿ ಮೊತ್ತದ ದಿನಸಿ ಸಾಮಗ್ರಿ ವಶ

ಚುನಾವಣೆ ವೇಳೆ ಹಂಚಲು ಇಟ್ಟಿದ್ದ ಶಂಕೆ
Published 31 ಮಾರ್ಚ್ 2024, 16:16 IST
Last Updated 31 ಮಾರ್ಚ್ 2024, 16:16 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕಸಭಾ ಚುನಾವಣೆ ವೇಳೆ ಮತದಾರರಿಗೆ ಹಂಚಲು ಸಂಗ್ರಹಿಸಿ ಇಟ್ಟಿರುವ ಅನುಮಾನದ ಮೇಲೆ ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಪೊಲೀಸರು ₹7.72 ಕೋಟಿ ಮೌಲ್ಯದ ದಿನಸಿ ಸಾಮಗ್ರಿ ಹಾಗೂ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಅಲ್ಲದೆ, ಜಿಲ್ಲೆಯ ವಿವಿಧೆಡೆ ದಾಖಲೆರಹಿತವಾಗಿ ಸಂಗ್ರಹಿಸಲಾಗಿದ್ದ ₹ 46.50 ಲಕ್ಷ ಮೌಲ್ಯದ ಬಟ್ಟೆ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

‘ದಿನಸಿ ಸಾಮಗ್ರಿ ಚುನಾವಣೆ ವೇಳೆ ಹಂಚಲು ಬಳಕೆಯಾಗಲಿದೆ ಎಂಬ ಮಾಹಿತಿ ಮೇರೆಗೆ ಶಿವಮೊಗ್ಗದ ಹೊನ್ನಾಳಿ ರಸ್ತೆಯ ರಾಗಿಗುಡ್ಡದ ಫ್ಲೈಓವರ್‌ ಪಕ್ಕದ ರೈಸ್‌ಮಿಲ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದ ₹ 4.62 ಕೋಟಿ ಮೊತ್ತದ ದಿನಸಿ ಸಾಮಗ್ರಿಯನ್ನು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ರೈಸ್‌ಮಿಲ್‌ನಲ್ಲಿ ತಲಾ 10, 20, 26, 30 ಕೆ.ಜಿಯ ಪ್ಯಾಕೆಟ್‌ಗಳಲ್ಲಿ ಅಂದಾಜು 3,500 ಚೀಲ ಅಕ್ಕಿ, 450 ಚೀಲ ಗೋಧಿ, 800 ಚೀಲ ಬೇಳೆ ಸೇರಿದಂತೆ 272 ಬಗೆಯ ವಿವಿಧ ದಿನಸಿ ಸಾಮಗ್ರಿಗಳು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.

ವಿನೋಬನಗರದ ಎಪಿಎಂಸಿಯ ಉಗ್ರಾಣವೊಂದರಲ್ಲಿ ಅಕ್ರಮವಾಗಿ ಬೇರೆ ಬೇರೆ ತೂಕದ ಪ್ಯಾಕೆಟ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದ ₹ 2.80 ಕೋಟಿ ಮೌಲ್ಯದ 22,900 ಚೀಲ ಅಕ್ಕಿಯನ್ನು ಭಾನುವಾರ ರಾತ್ರಿ ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

‘ರೈಸ್‌ಮಿಲ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದ ದಿನಸಿ ಸಾಮಗ್ರಿಗೆ ಬಿಲ್ ಸೇರಿದಂತೆ ಯಾವುದೇ ಸೂಕ್ತ ದಾಖಲೆಗಳು ಇರಲಿಲ್ಲ. ಹೀಗಾಗಿ ಪ್ರಕರಣವನ್ನು ವಾಣಿಜ್ಯ ತೆರಿಗೆ ಇಲಾಖೆಗೆ ವರ್ಗಾಯಿಸಿದ್ದೇವೆ. ಸದರಿ ದಿನಸಿ ಸಾಮಗ್ರಿ ಯಾವ ಪಕ್ಷದವರು ಸಂಗ್ರಹಿಸಿಟ್ಟಿದ್ದರು ಎಂಬುದು ಇನ್ನೂ ಖಚಿತಪಟ್ಟಿಲ್ಲ. ಎಪಿಎಂಸಿಯ ಉಗ್ರಾಣದಲ್ಲಿ ಪತ್ತೆ ಆಗಿರುವ ಅಕ್ಕಿಯ ಮೂಲ ಪತ್ತೆಯಾಗಿಲ್ಲ. ಸೂಕ್ತ ದಾಖಲೆಯೂ ಇರಲಿಲ್ಲ’ ಎಂದು ಮಿಥುನ್‌ಕುಮಾರ್ ಹೇಳಿದರು.

ಇಲ್ಲಿನ ತುಂಗಾನಗರ ಠಾಣೆ ವ್ಯಾಪ್ತಿಯ ಮಲ್ಲಿಗೇನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಭಾನುವಾರ ಸಂಜೆ ₹ 6.50 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

₹ 46.50 ಲಕ್ಷ ಮೌಲ್ಯದ ಬಟ್ಟೆ ವಶ: ಜಿಲ್ಲೆಯ ಸಾಗರದಲ್ಲಿ ₹ 31.50 ಲಕ್ಷ ಹಾಗೂ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ₹ 15 ಲಕ್ಷ ಮೌಲ್ಯದ ಬಟ್ಟೆ, ಪ್ಲಾಸ್ಟಿಕ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಾಮಗ್ರಿಗಳಿಗೆ ಸೂಕ್ತ ದಾಖಲೆ ಇರಲಿಲ್ಲ. ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT