ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ, ಡಿಕೆಶಿ ನಡುವೆ ತಾಳ–ಮೇಳ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Published 1 ಏಪ್ರಿಲ್ 2024, 16:21 IST
Last Updated 1 ಏಪ್ರಿಲ್ 2024, 16:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ತಾಳ- ಮೇಳ ಇಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಇಲ್ಲಿಯ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಹು-ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಅವರು ತೆರಿಗೆ ಭಯೋತ್ಪಾದನೆ ಬಗ್ಗೆ ಮಾತನಾಡುತ್ತಿದ್ದಾರೆ. ಇವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡುವುದು ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು. 

‘ರಾಹುಲ್ ಗಾಂಧಿ ಗ್ರಾಮಾಪೋನು ಇದ್ದಂತೆ. ಹೇಳಿದ್ದನ್ನೇ ಪುನರಾವರ್ತಿಸುತ್ತಾರೆ. ಕಾಂಗ್ರೆಸ್ ಸೋಲು ಒಪ್ಪಿಕೊಳ್ಳುವುದಿಲ್ಲ. ಮಾತೆತ್ತಿದ್ದರೆ ಮ್ಯಾಚ್ ಫಿಕ್ಸಿಂಗ್ ಎನ್ನುತ್ತಿದ್ದಾರೆ’ ಎಂದು ಆರೋಪಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇವುಗಳನ್ನು ಪ್ರತಿಯೊಬ್ಬ ಮತದಾರರಿಗೆ ತಿಳಿಸಬೇಕಾಗಿದೆ. ಕೇಂದ್ರದಲ್ಲಿ ಮೋದಿ ಅವರನ್ನು ಪ್ರಧಾನಿಯನ್ನಾಗಿಸಬೇಕು ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಲ್ಹಾದ ಜೋಶಿ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕು’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಹು-ಧಾ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಮೇಯರ್ ವೀಣಾ ಬರದ್ವಾಡ, ಪ್ರಮುಖರಾದ ಮಾ. ನಾಗರಾಜ, ಲಿಂಗರಾಜ ಪಾಟೀಲ, ವೀರಣ್ಣ ಸವಡಿ, ಉಮಾ ಮುಕುಂದ, ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ, ರಂಗಾ ಬದ್ದಿ ಇತರರು ಇದ್ದರು.

ಮಿತ್‌ ಶಾ ಕುರುಬರನ್ನು ಕಡೆಗಣಿಸಿಲ್ಲ: ಜೋಶಿ

‘ಬಿಜೆಪಿ ವರಿಷ್ಠ ಅಮಿತ್ ಶಾ ಕುರುಬ ಸಮಾಜವನ್ನು ಕಡೆಗಣಿಸಿ ಮಾತನಾಡಿಲ್ಲ. ಕುರುಬ ಸಮುದಾಯವನ್ನು ಬಿಜೆಪಿಯಿಂದ ದೂರ ಮಾಡಲು ವಿರೋಧಿಗಳು ಮಾಡಿರುವ ತಂತ್ರವಿದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ನಗರದಲ್ಲಿ ಭಾನುವಾರ ರಾತ್ರಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರೊಬ್ಬರು ‘ಅಮಿತ್ ಶಾ  ಕುರುಬ ಸಮಾಜವನ್ನು ಕಡೆಗಣಿಸಿ ಮಾತನಾಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ’ ಎಂದು ಹೇಳಿದಾಗ ಜೋಶಿ ಪ್ರತಿಕ್ರಿಯಿಸಿದರು. ‘ಆ ಸಮುದಾಯದವರೇ ಮುಖ್ಯಮಂತ್ರಿಯಾಗಿರುವ ಕಾರಣ ಸಹಜವಾಗಿ ತಮ್ಮ ಸಮುದಾಯದವರನ್ನು ಸೆಳೆಯಲು ಪ್ರಯತ್ನಿಸಬಹುದು. ಅವರನ್ನು ಬಿಟ್ಟುಕೊಡಬೇಡಿ. ಅವರನ್ನು ಪಕ್ಷದಲ್ಲಿಯೇ (ಬಿಜೆಪಿ) ಉಳಿಸಿಕೊಳ್ಳಿ ಎಂದು ಶಾ ಹೇಳಿದ್ದು ಸತ್ಯ. ಇನ್ನುಳಿದಿದ್ದೆಲ್ಲವೂ ಸುಳ್ಳು’ ಎಂದು ಹೇಳಿದರು. 

‘ಕಾಂಗ್ರೆಸ್‌ ಸೋಲಿನ ಬಗ್ಗೆ ರಾಹುಲ್‌ಗೆ ಕನಸು’

ರಾಹುಲ್‌ ಗಾಂಧಿಗೆ ಕಾಂಗ್ರೆಸ್‌ ಸೋಲಿನ ಬಗ್ಗೆ ಕನಸುಗಳು ಬೀಳುತ್ತಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು. ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕನಸು ಬೀಳುವುದಷ್ಟೆ ಅಲ್ಲ ಕಾಂಗ್ರೆಸ್‌ ಸೋಲುತ್ತದೆ  ಎನ್ನುವ ಸತ್ಯ ಕೂಡ ಅವರಿಗೆ ಗೊತ್ತಾಗಿದೆ. ಕಳೆದ ಸಲಕ್ಕಿಂತ ಈ ಸಲ ಕಡಿಮೆ ಸ್ಥಾನಗಳಿಗೆ ಲಭಿಸಲಿವೆ ಎನ್ನುವುದು ಅವರಿಗೆ ಗೊತ್ತಾಗಿದೆ’ ಎಂದು ವ್ಯಂಗ್ಯವಾಡಿದರು. ‘ಸೋಲು ಖಚಿತಗೊಂಡ ನಂತರ ಕಾಂಗ್ರೆಸ್‌ ನಾಯಕರು ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುವುದು ವಿದ್ಯುನ್ಮಾನ ಮತಯಂತ್ರದ (ಇವಿಎಂ) ಮೇಲೆ ಅನುಮಾನ ಪಡುವುದು ಮಾಡುತ್ತಿದ್ದಾರೆ’ ಎಂದು ಟೀಕಿಸಿದರು. ‘ಕರ್ನಾಟಕ ತೆಲಂಗಾಣ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಗೆದ್ದಾಗ ಅವರಿಗೆ ಇವಿಎಂ ಮೇಲೆ ಅನುಮಾನ ಬರುವುದಿಲ್ಲ. ಅದೇ ಬಿಜೆಪಿ ಗೆದ್ದಾಗ ಮಾತ್ರ ಅವರಿಗೆ ಅನುಮಾನ ಬರುತ್ತದೆ. ಕಾಂಗ್ರೆಸ್‌ನವರದ್ದು ದ್ವಂದ್ವ ನೀತಿ’ ಎಂದು ಟೀಕಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT