ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಚರಿತ್ರೆ | ಬಾಗಲಕೋಟೆ: ಕಾಂಗ್ರೆಸ್‌ನ ಎಚ್‌.ಬಿ. ಪಾಟೀಲರಿಗೆ ಪ್ರಯಾಸದ ಗೆಲುವು

ಜನತಾ ಪಕ್ಷದಿಂದ ತೀವ್ರ ಸ್ಪರ್ಧೆಯೊಡ್ಡಿದ್ದ ಎಂ.ಪಿ. ನಾಡಗೌಡ
Published 12 ಏಪ್ರಿಲ್ 2024, 4:52 IST
Last Updated 12 ಏಪ್ರಿಲ್ 2024, 4:52 IST
ಅಕ್ಷರ ಗಾತ್ರ

ಬಾಗಲಕೋಟೆ: ಸತತ ಏಳು ಲೋಕಸಭಾ ಚುನಾವಣೆಗಳಲ್ಲಿ ಸರಳವಾಗಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ 1984ರಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಸಾವಿನ ಅನುಕಂಪದಲ್ಲಿಯೂ ಗೆಲುವು ಸಾಧಿಸಲೂ ಪ್ರಯಾಸ ಪಟ್ಟಿತು. ಅದಕ್ಕೆ ಕಾರಣ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಹಾಗೂ 32ನೇ ವರ್ಷಕ್ಕೆ ರಾಜಕೀಯಕ್ಕೆ ಕಾಲಿಟ್ಟಿದ್ದ ನಾಡಗೌಡ ಮನೆತನದ ಎಂ.‍ಪಿ. ನಾಡಗೌಡ.

1980ರಲ್ಲಿ ಗೆಲುವು ಸಾಧಿಸಿ ಸಂಸದರಾಗಿದ್ದ, ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಮತ್ತೆ ಬಾಗಲಕೋಟೆಯಿಂದ ಸ್ಪರ್ಧಿಸಲು ಮುಂದಾಗಲಿಲ್ಲ. ಹಾಗಾಗಿ, ಹೊಸ ಮುಖಕ್ಕೆ ಮಣೆ ಹಾಕಬೇಕಾಯಿತು. ಕಾಂಗ್ರೆಸ್‌ ಟಿಕೆಟ್‌ಗಾಗಿ ಹಲವು ಆಕಾಂಕ್ಷಿಗಳಿದ್ದರು. ಎಚ್‌.ಬಿ. ಪಾಟೀಲ ಅವರನ್ನು ಕಣಕ್ಕಿಳಿಸಲಾಯಿತು.

ರಾಜ್ಯದಲ್ಲಿ ಆಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದು, ಜನತಾ ಪಕ್ಷ ಅಧಿಕಾರದಲ್ಲಿತ್ತು. ಜನತಾ ಪಕ್ಷದಿಂದ ಸಹಕಾರ ಸಚಿವರಾಗಿ ನಿಧನರಾಗಿದ್ದ ಪಿ.ಎಂ. ನಾಡಗೌಡರ ಪುತ್ರ ಎಂ.ಪಿ. ನಾಡಗೌಡ ಅವರನ್ನು ಕಣಕ್ಕಿಳಿಸಲಾಯಿತು. ಇಂದಿರಾಗಾಂಧಿ ಅವರ ಸಾವಿನ ಅನುಕಂಪದ ಅಲೆಯ ನಡುವೆಯೂ ತೀವ್ರ ಪೈಪೋಟಿ ನಡೆಯಿತು. 

ಎಚ್‌.ಬಿ. ಪಾಟೀಲರು 2,34,955 ಮತಗಳನ್ನು ಪಡೆದರೆ, ಎಂ.ಪಿ. ನಾಡಗೌಡರಿ 2,24,443 ಮತಗಳನ್ನು ಪಡೆದರು. ಕೇವಲ 10,512 ಮತಗಳ ಅಂತರದಿಂದ ಸೋತರು. ಈಗಲೂ ಈ ಕ್ಷೇತ್ರದಲ್ಲಿ ಇದು ಅತಿ ಕಡಿಮೆ ಅಂತರದ ಸೋಲು ಎಂಬ ದಾಖಲೆಯಾಗಿದೆ.

ಬಾದಾಮಿ ತಾಲ್ಲೂಕಿನ ರಡ್ಡೇರ ತಿಮ್ಮಾಪುರದವರಾದ ಎಚ್‌.ಬಿ. ಪಾಟೀಲ (ಹನಮಂತಗೌಡ, ಭೀಮನಗೌಡ) ಕೆ.ಎಚ್‌. ಪಾಟೀಲ ಹಾಗೂ ಸುನಗದ ಎಸ್‌.ಬಿ. ಪಾಟೀಲರ ಅನುಯಾಯಿಗಳಾಗಿದ್ದರು. ಗದ್ದನಕೇರಿಯಲ್ಲಿ ನೂಲಿನ ಗಿರಣಿಯ ಚೇರ್ಮನ್‌ರಾಗಿ ಕಾರ್ಯ ನಿರ್ವಹಿಸಿದ್ದರು.

ಲಿಂಗಾಯತ ಹಾಗೂ ಒಕ್ಕಲಿಗರ ಲಾಬಿ ನಡುವೆ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಹೆಗಡೆ ಭಾಷಣದಲ್ಲಿ ‘ನಮ್ಮ ಅಭ್ಯರ್ಥಿಯ ಹೆಸರಿನ ಮುಂದೆ ಎಂ.ಪಿ (ಎಂ.ಪಿ. ನಾಡಗೌಡ) ಎಂದಿದೆ. ಅದನ್ನು ಹೆಸರಿನ ನಂತರ ಬರುವಂತೆ ಮಾಡಬೇಕು’ ಎಂದು ಹೇಳುತ್ತಿದ್ದರು.

‘ಆಗ ಚುನಾವಣಾ ಖರ್ಚಿನ ಮಿತಿ ₹50 ಸಾವಿರ ಇತ್ತು. ಮತಗಟ್ಟೆಗೆ ₹100 ಖರ್ಚು ಮಾಡಿದರೆ ಹೆಚ್ಚು. ಬಹಿರಂಗ ಸಭೆಗಳಿಗೆ ಸುತ್ತಲಿನ ಜನರು ಎತ್ತಿನ ಬಂಡಿ ಕಟ್ಟಿಕೊಂಡು ತಾವೇ ಬರುತ್ತಿದ್ದರು. ಪ್ರಚಾರ ಸಂದರ್ಭದಲ್ಲಿ ಮಂಡಳ ಒಗ್ಗರಣಿ, ಊಟ ಬಿಟ್ಟರೆ ಬೇರೇನು ಖರ್ಚಿರುತ್ತಿರಲಿಲ್ಲ. ಗ್ರಾಮಗಳ ಮುಖಂಡರೇ ಖರ್ಚು ಹಾಕಿ, ಮುಂದೆ ನಿಂತು ಚುನಾವಣೆ ಮಾಡುತ್ತಿದ್ದರು’ ಎಂದು ಎಂ.ಪಿ. ನಾಡಗೌಡ ನೆನಸಿಕೊಳ್ಳುತ್ತಾರೆ.

ಜನತಾ ಪಕ್ಷದಿಂದ ಎಚ್‌.ಡಿ. ದೇವೇಗೌಡ, ರಾಮಕೃಷ್ಣ ಹೆಗಡೆ ಇದ್ದರೆ, ಕಾಂಗ್ರೆಸ್‌ನಿಂದ ಎಸ್‌. ಬಂಗಾರಪ್ಪ, ಗುಂಡೂರಾವ್ ಪ್ರಚಾರದಲ್ಲಿ ಭಾಗಿಯಾಗಿದ್ದರು. ತೀವ್ರ ಸ್ಪರ್ಧೆಯ ನಡುವೆಯೂ ಕಾಂಗ್ರೆಸ್‌ ಮತ್ತೊಮ್ಮೆ ಗೆಲುವು ದಾಖಲಿಸಿತು.

ಎಂ.‍ಪಿ. ನಾಡಗೌಡ
ಎಂ.‍ಪಿ. ನಾಡಗೌಡ

ಸರ್ಕಾರಿ ನೌಕರಿ ಬಿಟ್ಟು ಚುನಾವಣಾ ಕಣಕ್ಕೆ

‘ ಚುನಾವಣೆಗೂ ಮುನ್ನ ಎಂ.ಪಿ. ನಾಡಗೌಡರು ಇಳಕಲ್‌ನಲ್ಲಿ ವೈದ್ಯಾಧಿಕಾರಿಯಾಗಿದ್ದರು. ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಚುನಾವಣೆಗೆ ಸ್ಪರ್ಧಿಸಲು ನಾಡಗೌಡರನ್ನು ಆಯ್ಕೆ ಮಾಡಿದರು. ರಾಜಕೀಯ ಹಿನ್ನೆಲೆ ಹೊಂದಿದ್ದ ನಾಡಗೌಡರು ಸರ್ಕಾರಿ ನೌಕರಿಗೆ ರಾಜೀನಾಮೆ ಕೊಟ್ಟು ಚುನಾವಣೆಗೆ ಸ್ಪರ್ಧಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT