ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್ ಸಮೀಕ್ಷೆ: ತ್ಯಾಗ– ಸ್ವಾಭಿಮಾನ ಸಂಗತಿಗಳ ಸಂಘರ್ಷ

ಲೆಕ್ಕಕ್ಕೆ ಸಿಗದ ಪಕ್ಷಗಳ ಬಲಾಬಲ, ಚರ್ಚೆಗೆ ಬಾರದ ಅಭಿವೃದ್ಧಿ– ಸಮಸ್ಯೆಗಳು
Published 7 ಮೇ 2023, 19:53 IST
Last Updated 7 ಮೇ 2023, 19:53 IST
ಅಕ್ಷರ ಗಾತ್ರ

ಅಥಣಿ: ‘ತರಗೆಲೆ, ಪೀಡೆ, ಶನಿ, ಬೆಳವ, ರಕ್ತ, ಹೆಣ...’ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಪದೇಪದೇ ಕೇಳಿಸುತ್ತಿರುವ ಪದಗಳಿವು.  2018ರಲ್ಲಿ ಲಕ್ಷ್ಮಣ ಸವದಿ ಸೋಲಿನಿಂದಾಗಿ ಹೆಸರಾಗಿದ್ದ ಈ ಕ್ಷೇತ್ರ, 2019ರಲ್ಲಿ ‘ಆಪರೇಷನ್‌ ಕಮಲ’ದಿಂದ ದೊಡ್ಡ ಸುದ್ದಿಯಾಯಿತು. ಆ ಆ‍‍ಪ‍ರೇಷನ್‌ ಅಡ್ಡಪರಿಣಾಮ ಬೀರಿ ಲಕ್ಷ್ಮಣ ಸವದಿ ಕಾಂಗ್ರೆಸ್‌ ಸೇರಿದರು. ಈ ಅನಿರೀಕ್ಷಿತ ಬೆಳವಣಿಗೆಗಳ ಕಾರಣ ಕ್ಷೇತ್ರವು ಮತ್ತೊಮ್ಮೆ ಗಮನ ಸೆಳೆದಿದೆ.

20 ವರ್ಷಗಳಿಂದ ಕಾಂಗ್ರೆಸ್‌ಗಾಗಿ ದುಡಿದ ಮಹೇಶ ಕುಮಠಳ್ಳಿ ಈಗ ಬಿಜೆಪಿ ಅಭ್ಯರ್ಥಿ. ಅಷ್ಟೇ ಸಮಯ ಬಿಜೆಪಿಯಲ್ಲಿದ್ದ ಲಕ್ಷ್ಮಣ ಸವದಿ ಕಾಂಗ್ರೆಸ್‌ ಉಮೇದುವಾರ. ಅಭ್ಯರ್ಥಿಗಳ ಈ ‘ಅದಲು– ಬದಲು’ ಕುತೂಹಲವನ್ನು ಹೆಚ್ಚಿಸಿದೆ.

ಪ್ರತಿಷ್ಠೆ, ಪ್ರತಿಜ್ಞೆ, ಪ್ರಜ್ಞೆ: ಲಕ್ಷ್ಮಣ ಸವದಿ ಅವರನ್ನು ಸೋಲಿಸುವ ಹೊಣೆಯನ್ನು ಬಿ.ಎಸ್.ಯಡಿಯೂರಪ್ಪ ಹಾಗೂ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ವಹಿಸಿದೆ. ಸವದಿಯ ಕಾರಣಕ್ಕೆ ಇತರ ಕ್ಷೇತ್ರಗಳಲ್ಲಿ ಲಿಂಗಾಯತ ಮತದಾರರು ಬಿಜೆಪಿಯಿಂದ ಚದುರದಂತೆ ನೋಡಿಕೊಳ್ಳುವಂತೆಯೂ ಸೂಚಿಸಿದೆ. 

ರಮೇಶ ಜಾರಕಿಹೊಳಿ ಅವರ ‘ಪ್ರತಿಜ್ಞೆ’ ಕೂಡ ಬಿಜೆಪಿ ಕಾರ್ಯಕರ್ತರನ್ನು ಅತ್ತಿತ್ತ ಸುಳಿಯದಂತೆ ಮಾಡಿದೆ. ಬಿಜೆಪಿ ಸರ್ಕಾರ ರಚನೆಗೆ ಮಹೇಶ ಕುಮಠಳ್ಳಿ ತ್ಯಾಗ ಮಾಡಿದರು. ಆ ತ್ಯಾಗ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಮತದಾರರ ಜವಾಬ್ದಾರಿ ಎಂದು ಕಟ್ಟಿಹಾಕುತ್ತಿದ್ದಾರೆ.

‘ಹೊರಗಿನವರು ಬಂದು ನನ್ನ ‘ಸ್ವಾಭಿಮಾನ’ಕ್ಕೆ ಪೆಟ್ಟು ನೀಡಿದ್ದಾರೆ. ಅಥಣಿಯ ಮಗ ಸೋತರೆ ಕ್ಷೇತ್ರದ ಸ್ವಾಭಿಮಾನವೇ ಸೋತಂತೆ’ ಎಂದು ಲಕ್ಷ್ಮಣ ಸವದಿ ಭಾವುಕರಾಗುತ್ತ ಸಾಗಿದ್ದಾರೆ. ಅಭಿವೃದ್ಧಿ–ಸಮಸ್ಯೆಗಳಿಗಿಂತ ‘ತ್ಯಾಗ–ಸ್ವಾಭಿಮಾನ’ ಎಂಬ ಸಂಗತಿಗಳೇ ಚುನಾವಣಾ ಅಸ್ತ್ರಗಳಾಗಿವೆ.  

ವರ್ಚಸ್ಸು ಒರೆಗೆ ಹಚ್ಚಿದ ಸವದಿ: ಎರಡು ದಶಕಗಳಲ್ಲಿ ಮೂರು ಬಾರಿ ಬಿಜೆಪಿಯಿಂದ ಗೆದ್ದವರು ಲಕ್ಷ್ಮಣ ಸವದಿ. ಸಚಿವರಾಗಿ, ಉಪಮುಖ್ಯಮಂತ್ರಿ ಆಗಿ ವರ್ಚಸ್ಸು ಹೆಚ್ಚಿಸಿಕೊಂಡವರು. ಕರಿಮಸೂರಿ ಏತ ನೀರಾವರಿ ಯೋಜನೆ ಪೂರ್ಣ, 40 ಹಳ್ಳಿಗಳಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಸರಬರಾಜು, ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪನೆ, ಪಟ್ಟಣದ ರಸ್ತೆಗಳಿಗೆ ಆಧುನಿಕ ಸ್ಪರ್ಶ ಇವೇ ಮುಂತಾದ ಅಂಶಗಳು ಅವರಿಗೆ ವರವಾಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಪ್ರಬಲ ಆಕಾಂಕ್ಷಿಗಳಾಗಿದ್ದ ಬಣಜಿಗ ಸಮಾಜದ ಗಜಾನನ ಮಂಗಸೂಳಿ, ಮಾಳಿ ಸಮಾಜದ ಬುಟಾಳೆ ಸಹೋದರರು ಕೂಡ ಲಕ್ಷ್ಮಣ ಸವದಿ ಬೆಂಬಲಕ್ಕೆ ನಿಂತಿದ್ದಾರೆ. 2019ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಇದೇ ಗಜಾನನ 59,214 ಮತ ಪಡೆದಿದ್ದರು.

ಮುಸ್ಲಿಂ ಸಮಾವೇಶ ಮಾಡಿದ ಸವದಿ ಅವರು ‘ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ’ ಎಂದೂ ಹೇಳಿದ್ದರು. ಬಿಜೆಪಿಯಲ್ಲಿದ್ದಾಗಲೂ ಸವದಿ ಮುಸ್ಲಿಂ ಸಮಾಜವನ್ನು ಟೀಕಿಸಿದವರಲ್ಲ. ಈಗ ಕಾಂಗ್ರೆಸ್‌ ಮತಗಳು, ಮುಸ್ಲಿಂ ಮತಗಳು, ಸವದಿ ಕುಟುಂಬದ ನಿಷ್ಠಾವಂತ ಮತಗಳು ಒಂದಾಗಿ ‘ರೊಟ್ಟಿ ಜಾರಿ ತುಪ್ಪಕ್ಕೆ ಬೀಳುತ್ತದೆ’ ಎನ್ನುವುದು ಅವರ ಕಡೆಯವರ ಮಾತು.

‘ಕ್ಷೇತ್ರದ ಜನರಿಗೆ ಸುಲಭವಾಗಿ ಸಿಗುವುದಿಲ್ಲ. ಗ್ರಾಮೀಣ ರಸ್ತೆಗಳತ್ತ ನಿರ್ಲಕ್ಷ್ಯ ಮಾಡಿದ್ದಾರೆ. ಪ್ರವಾಹದಿಂದ ತತ್ತರಿಸುವ ಹಳ್ಳಿಗಳ ರಕ್ಷಣೆಗೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಹೊಲ–ಮನೆ ಮುಳುಗಿದವರಿಗೆ ಪರಿಹಾರ ಧನ ಸಿಕ್ಕಿಲ್ಲ’ ಎಂಬ ಅಂಶಗಳು ಅವರ ಕಾಲೆಳೆಯಬಹುದು. 

ಗಟ್ಟಿಯಾಗಿ ಬೇರೂರಿದ ಕುಮಠಳ್ಳಿ: ಮಹೇಶ ಕುಮಠಳ್ಳಿ 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಾಗ ಹುಮ್ಮಸ್ಸಿನ ರಾಜಕಾರಣಿ ಅನಿಸಿದ್ದರು. 2019ರ ಉಪಚುನಾವಣೆಯಲ್ಲೂ ಗೆದ್ದಾಗ ಅನುಭವಿ ಆದರು. ನಾಲ್ಕು ವರ್ಷಗಳ ಅವಧಿಯಲ್ಲಿ ಗಟ್ಟಿಯಾಗಿ ಬೇರೂರಿದ್ದಾರೆ.

ಕುಮಠಳ್ಳಿ ಸಿವಿಲ್‌ ಎಂಜಿನಿಯರ್‌ ಆಗಿದ್ದಾಗ ‘ಅಮ್ಮಾಜೇಶ್ವರಿ ಏತ ನೀರಾವರಿ’ ಯೋಜನೆಯ ರೂಪುರೇಷೆ ಸಿದ್ಧಪಡಿಸಿದ್ದರು. ತಾವು ಶಾಸಕರಾದ ಮೇಲೆ ಅದಕ್ಕೆ ಮಂಜೂರಾತಿ ಪಡೆದರು. ಮಿನಿ ವಿಮಾನ ನಿಲ್ದಾಣಕ್ಕೂ ಮಂಜೂರಾತಿ ಪಡೆದಿದ್ದಾರೆ. ಕ್ಷೇತ್ರಕ್ಕೆ ₹2,700 ಕೋಟಿ ಅನುದಾನ ತಂದಿದ್ದಾರೆ ಎನ್ನುವ ಅಂಶಗಳು ಅವರಿಗೆ ವರವಾಗಿವೆ.

‘ಮೃದು ಸ್ವಭಾವದ ನಾಯಕ, ಜನರಿಗೆ ಸುಲಭವಾಗಿ ಸಿಗುತ್ತಾರೆ, ಪಂಚಮಸಾಲಿ ಸಮಾಜಕ್ಕೆ ಸೇರಿದವರು, ಪ್ರತಿಯೊಂದು ಸಮಾಜದ ಸಮುದಾಯ ಭವನಕ್ಕೂ ತಲಾ ₹50 ಲಕ್ಷ ನೀಡಿದ್ದಾರೆ’ ಎನ್ನುವ ಮಾತುಗಳು ಅವರ ಬಲ ಹೆಚ್ಚಿಸಿವೆ.

ರಮೇಶ ಜಾರಕಿಹೊಳಿ ಅವರು ಕುಮಠಳ್ಳಿ ಮೂಲಕ ಅಥಣಿಯಲ್ಲಿ ಅಧಿಪತ್ಯ ಸ್ಥಾಪಿಸಲು ಯತ್ನಿಸುತ್ತಿದ್ದಾರೆ. ಕುಮಠಳ್ಳಿ ಗೆದ್ದರೂ ಜಾರಕಿಹೊಳಿ ಕುಟುಂಬವೇ ನಿಯಂತ್ರಿಸುತ್ತದೆ. ಹಿಂದೆ ‘ಆಪರೇಷನ್‌’ಗೆ ಒಳಗಾದವರು ಮತ್ತೆ ಅಂಥದ್ದೇ ಆಪರೇಷನ್‌ಗೆ ಒಪ್ಪಿದರೆ ಮಾಡುವುದೇನು? ಎಂಬ ಮತದಾರರ ಪ್ರಶ್ನೆಗಳು ಬಿಜೆಪಿಗೆ ಬಿಸಿತುಪ್ಪ ಆಗುವ ಸಾಧ್ಯತೆಯೂ ಇದೆ.

ಜೆಡಿಎಸ್‌ನಿಂದ ಕಣಕ್ಕಿಳಿದ ಶಶಿಕಾಂತ ಪಡಸಲಗಿ ಅವರು ಈ ಭಾಗದಲ್ಲಿ ಗುರೂಜಿ ಎಂದೇ ಪರಿಚಿತರು. ಇಂಚಗೇರಿ ಮಠದ ಅಧ್ಯಾತ್ಮ ಸಂಪ್ರದಾಯ ಪಾಲಕರೂ ಆಗಿದ್ದಾರೆ. ಹಳ್ಳಿಮಟ್ಟದಲ್ಲಿ ಲಿಂಗಾಯತ ಮತಗಳನ್ನು ಅವರು ಸೆಳೆಯುವ ಸಾಧ್ಯತೆಯೂ ಇದೆ. 

ಮಹೇಶ ಕುಮಠಳ್ಳಿ
ಮಹೇಶ ಕುಮಠಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT