ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಭದ್ರತೆಗೆ 1.40 ಲಕ್ಷ ಸಿಬ್ಬಂದಿ

Last Updated 11 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಚುನಾವಣೆ ದಿನದಂದು ರಾಜ್ಯದಾದ್ಯಂತ 1.40 ಲಕ್ಷ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು ತಿಳಿಸಿದರು.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೂಕ್ಷ್ಮ ಹಾಗೂ ಸಾಮಾನ್ಯ ಎಂಬ ಎರಡು ವಿಧಗಳಲ್ಲಿ ಮತಗಟ್ಟೆಗಳನ್ನು ವಿಭಾಗಿಸಿ ಭದ್ರತೆ ಕೈಗೊಳ್ಳಲಿದ್ದೇವೆ. ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಛತ್ತೀಸಗಡ ಹಾಗೂ ಗೋವಾ ರಾಜ್ಯಗಳಿಂದಲೂ ಪೊಲೀಸರು ಬಂದಿದ್ದಾರೆ’ ಎಂದರು.

‘ಅರೆಸೇನಾ ಪಡೆಯ ಅಧಿಕಾರಿಗಳಿಗೆ 3,907 ಸಿಮ್‌ ಕಾರ್ಡ್‌ಗಳನ್ನು ಕೊಟ್ಟಿದ್ದೇವೆ. ಭದ್ರತೆ ಬಗ್ಗೆ ತ್ವರಿತವಾಗಿ ಮಾಹಿತಿ ಸಿಗಲಿದೆ. ಕಿರಿಯ ಹಾಗೂ ಹಿರಿಯ ಅಧಿಕಾರಿಗಳ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ರಚಿಸಲಾಗಿದೆ. ಸಿಬ್ಬಂದಿಯು ಅದರಲ್ಲೇ ಫೋಟೊ ಸಹಿತ ಮಾಹಿತಿ ಕಳುಹಿಸಲಿದ್ದಾರೆ. ಏನಾದರೂ ಅವಘಡ ಸಂಭವಿಸಿದರೆ, ತ್ವರಿತವಾಗಿ ಕ್ರಮ ಕೈಗೊಳ್ಳಲು ನೆರವಾಗಲಿದೆ’ ಎಂದರು.

‘ಲೋಕಾಯುಕ್ತ, ಎಸಿಬಿ, ಸಿಐಡಿ, ತರಬೇತಿ ಘಟಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯನ್ನೂ ಈ ಬಾರಿ ಭದ್ರತೆಗೆ ಬಳಸಿಕೊಳ್ಳುತ್ತಿದ್ದೇವೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಅರೆಸೇನಾ ತುಕಡಿಗಳನ್ನು ನಿಯೋಜಿಸಲಿದ್ದೇವೆ’ ಎಂದರು.

ಪರವಾನಗಿ ಇಲ್ಲದ ಪಿಸ್ತೂಲ್: ‘ಚುನಾವಣೆ ಹಿನ್ನೆಲೆಯಲ್ಲಿ 97,049 ಶಸ್ತ್ರಾಸ್ತ್ರಗಳನ್ನು ಠೇವಣಿ ಇಟ್ಟುಕೊಂಡಿದ್ದೇವೆ. ಪರವಾನಗಿ ಇಲ್ಲದ 22 ಪಿಸ್ತೂಲ್‌ಗಳು ಸಿಕ್ಕಿದ್ದು, ಅವುಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ನೀಲಮಣಿ ರಾಜು ಹೇಳಿದರು.

‘ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 117 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ. ಮುಂಜಾಗ್ರತಾ ಕ್ರಮವಾಗಿ 49,569 ಮಂದಿಯನ್ನು ಬಂಧಿಸಿ ಎಚ್ಚರಿಕೆ ನೀಡಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದೇವೆ. ₹166 ಕೋಟಿ ಮೌಲ್ಯದ ವಸ್ತುಗಳನ್ನು ಚೆಕ್‌ ಪೋಸ್ಟ್‌ಗಳಲ್ಲಿ ಜಪ್ತಿ ಮಾಡಿದ್ದೇವೆ’ ಎಂದರು.

ಅಂಕಿಅಂಶ

ಗಸ್ತು ಪಡೆಗಳು (ಇನ್‌ಸ್ಪೆಕ್ಟರ್, ಡಿವೈಎಸ್ಪಿ, ಮೇಲ್ವಿಚಾರಕರು) – 4642

ಸಂಚಾರ ದಳಗಳು – 472

ಸ್ಥಿರ ತಪಾಸಣಾ ತಂಡಗಳು (ಎಸ್‌ಎಸ್‌ಟಿ) – 462

ಅರೆಸೇನಾ ಪಡೆಯ ತುಕಡಿಗಳು – 585

ಕೆಎಸ್‌ಆರ್‌ಪಿ, ಸಿಎಆರ್, ಡಿಎಆರ್, ಆರ್‌ಎಎಫ್‌ ತುಕಡಿಗಳು – 754

ಕುಡಿದ ಅಮಲಿನಲ್ಲಿ ಗಲಾಟೆ– ಕೊಲೆ

‘ಮೈಸೂರು, ಹಾಸನ, ಕೊಡಗು ಹಾಗೂ ಬೆಂಗಳೂರಿನಲ್ಲಿ ನಾಲ್ಕು ಕ್ಷುಲ್ಲಕ ಘಟನೆಗಳು ನಡೆದಿದ್ದು, ಅವನ್ನು ಹೊರತುಪಡಿಸಿ ಪ್ರಚಾರ ಶಾಂತಿಯುತವಾಗಿ ನಡೆದಿದೆ’ ಎಂದು ನೀಲಮಣಿ ರಾಜು ಹೇಳಿದರು.

‘ಚಿಕ್ಕಬಳ್ಳಾಪುರದಲ್ಲಿ ಎರಡು ಗುಂಪುಗಳ ನಡುವೆ, ಕುಡಿದ ಅಮಲಿನಲ್ಲಿ ನಡೆದ ಗಲಾಟೆಯಲ್ಲಿ ವಿನಯ್ ಎಂಬ ಯುವಕನ ಕೊಲೆಯಾಗಿದೆ. ಅದರಲ್ಲಿ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದರು.

ಧರ್ಮಸ್ಥಳದ ಸಂದೇಶ ಹೊತ್ತ ಕರಪತ್ರ ಹಂಚಿಕೆ

ಪಾಂಡವಪುರ: ‘ಭ್ರಷ್ಟರ ಹಣಕ್ಕೆ ಮಾಡುವ ಆಣೆ–ಪ್ರಮಾಣ ಉಲ್ಲಂಘಿಸಿದರೆ ತಪ್ಪೆನಿಸದು. ಆತ್ಮಸಾಕ್ಷಿಯ ಮತದಾನ ಪ್ರತಿಯೊಬ್ಬರ ಆದ್ಯ ಕರ್ತವ್ಯ’ ಎಂಬ ಹೆಸರಿನ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಸಂದೇಶವನ್ನು ಹೊತ್ತ ಕರಪತ್ರ ಎಲ್ಲರ ಗಮನ ಸೆಳೆದಿದೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ವರಾಜ್ ಇಂಡಿಯಾ ಪಕ್ಷವು ಇಂತಹ ಕರಪತ್ರವನ್ನು ಮತದಾರರಿಗೆ ಹಂಚುತ್ತಿದೆ.

‘ನಮ್ಮ ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈ ಜಾತ್ಯತೀತ ರಾಷ್ಟ್ರದಲ್ಲಿ ಜನಿಸಿರುವುದು ನಮ್ಮ ಪೂರ್ವಜನ್ಮದ ಸುಕೃತ. ಈ ಮಾದರಿಯ ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈಗ ಚುನಾವಣಾ ಸಮಯವಾಗಿರುವುದರಿಂದ ಕೆಲವು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಣ, ಒಡವೆ, ಸೀರೆ ಇತ್ಯಾದಿ ವಸ್ತುಗಳ ಆಮಿಷಗಳನ್ನು ನಿಮಗೆ ಒಡ್ಡುತ್ತಾರೆ. ಅದಕ್ಕಾಗಿ ಶ್ರೀಕ್ಷೇತ್ರದ ಹಾಗೂ ಇನ್ನಿತರ ಧಾರ್ಮಿಕ ದೇವರ ಫೋಟೊಗಳನ್ನು ಇಟ್ಟು ಪ್ರಮಾಣ ಮಾಡಿಸುತ್ತಾರೆ. ಇದು ಅಕ್ಷಮ್ಯ ಅಪರಾಧ. ಇದಕ್ಕೆ ಬಲಿಯಾಗಿ ಪ್ರಮಾಣ ಮಾಡಿದರೂ ಚಿಂತಿಸಬೇಕಿಲ್ಲ. ಏಕೆಂದರೆ ಅದು ಅವರು ಕಷ್ಟಪಟ್ಟು ದುಡಿದು ಗಳಿಸಿದ ನ್ಯಾಯವಾದ ಹಣವಾಗಿರುವುದಿಲ್ಲ. ಹೀಗಾಗಿ ಶ್ರೀಕ್ಷೇತ್ರಕ್ಕೆ ಯಾವುದೇ ರೀತಿಯ ಕಪ್ಪ ಕಾಣಿಕೆ ಕಟ್ಟುವ ಅವಶ್ಯಕತೆ ಇಲ್ಲ. ಚುನಾವಣೆಯಲ್ಲಿ ನಾವೆಲ್ಲರೂ ನಮ್ಮ ಆತ್ಮಸಾಕ್ಷಿಯಂತೆ ಮತದಾನ ಮಾಡಿ ಯೋಗ್ಯರನ್ನು ಚುನಾಯಿಸೋಣ. ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ’ ಎಂಬ ಸಂದೇಶ ಕರಪತ್ರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT