ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುನಿರತ್ನ ಹೆಸರು ಹೇಳುವಂತೆ ಬೆದರಿಸಿದ್ದ ಮುನಿರಾಜಗೌಡ’

ಅಕ್ರಮವಾಗಿ ಗುರುತಿನ ಚೀಟಿ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್‌ * ಬಿಜೆಪಿ ಅಭ್ಯರ್ಥಿ ವಿರುದ್ಧ ಎರಡು ಎಫ್‌ಐಆರ್‌
Last Updated 11 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಾಲಹಳ್ಳಿಯಲ್ಲಿ ಅಕ್ರಮವಾಗಿ ಗುರುತಿನ ಚೀಟಿಗಳನ್ನು ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದೆ. ‘ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಬಿಜೆಪಿ ಅಭ್ಯರ್ಥಿ ಪಿ.ಎಂ. ಮುನಿರಾಜಗೌಡ ಪ್ರಯತ್ನಿಸಿದ್ದರು’ ಎಂದು ಮತದಾರರಿಬ್ಬರು ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.

‘ಚುನಾವಣೆ ಘೋಷಣೆಯಾಗುವ 6 ತಿಂಗಳ ಮುನ್ನವೇ ಮುನಿರಾಜಗೌಡ, ಸಾವಿರಾರು ಮತದಾರರಿಂದ ಗುರುತಿನ ಚೀಟಿಗಳನ್ನು ಸಂಗ್ರಹಿಸಿದ್ದರು. ಆ ಚೀಟಿಗಳೇ ಜಾಲಹಳ್ಳಿಯ ‘ಎಸ್‌ಎಲ್‌ವಿ ಪಾರ್ಕ್‌ ವ್ಯೂ’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಸಿಕ್ಕಿವೆ. ಮುನಿರತ್ನ ಅವರ ಬೆಂಬಲಿಗರೇ ಆ ಚೀಟಿಗಳನ್ನು ಸಂಗ್ರಹಿಸಿದ್ದರು ಎಂಬುದಾಗಿ ಸುಳ್ಳು ಹೇಳುವಂತೆ ಮುನಿರಾಜಗೌಡ ಜೀವ ಬೆದರಿಕೆ ಹಾಕಿದ್ದರು’ ಎಂದು ಆರ್‌.ಕುಮಾರ್‌ (39) ಹಾಗೂ ಸಿ.ಆನಂದ್ (49) ಎಂಬುವರು ಪ್ರತ್ಯೇಕ ದೂರಿನಲ್ಲಿ ಆರೋಪಿಸಿದ್ದಾರೆ.

‘ಲಗ್ಗೆರೆ ಕೆಎಸ್‌ಸಿಬಿ ವಸತಿ ಸಮುಚ್ಚಯದಲ್ಲಿ ವಾಸವಿದ್ದೇನೆ. ಮುನಿರಾಜಗೌಡ ನಮ್ಮ ಪ್ರದೇಶದಲ್ಲಿ ರಂಗೊಲಿ ಸ್ಪರ್ಧೆ ಏರ್ಪಡಿಸಿದ್ದರು. ಅದೇ ವೇಳೆ ಬಹುಮಾನದ ಹೆಸರಿನಲ್ಲಿ ಮತದಾರರಿಗೆ ಚಿನ್ನ, ಬೆಳ್ಳಿ ಹಾಗೂ ನಗದು ವಿತರಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲ ತಮ್ಮ ಕ್ಷೇತ್ರದವರೇ ಎಂಬುದನ್ನು ಖಾತ್ರಿಪಡಿಸಿ ಕೊಳ್ಳಲು ಸಾವಿರಕ್ಕೂ ಹೆಚ್ಚು ಚುನಾವಣಾ ಗುರುತಿನ ಚೀಟಿಗಳನ್ನು ಸಂಗ್ರಹಿಸಿದ್ದರು’ ಎಂದು ಕುಮಾರ್‌ ತಿಳಿಸಿದ್ದಾರೆ.

ಆನಂತರ, ‘ನಾನು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದೇನೆ. ತಾವೆಲ್ಲರೂ ನನಗೆ ಮತ ಹಾಕಿ. ಅದಕ್ಕೆ ಪ್ರತಿಯಾಗಿ ಬೆಲೆಬಾಳುವ ಉಡುಗೊರೆಗಳನ್ನು ಕೊಡು
ತ್ತೇನೆ. ಜತೆಗೆ, ಮತದಾನದ ದಿನದಂದೇ ಮತಗಟ್ಟೆ ಬಳಿ ನಿಮ್ಮೆಲ್ಲರ ಗುರುತಿನ ಚೀಟಿಗಳನ್ನು ವಾಪಸ್‌ ಕೊಡುತ್ತೇನೆ’ ಎಂದಿದ್ದರು. ಇದನ್ನು ವಿರೋಧಿಸಿದ್ದಕ್ಕೆ ಜೀವ ಬೆದರಿಕೆವೊಡ್ಡಿದ್ದರು’ ಎಂದು ಕುಮಾರ್ ದೂರಿದ್ದಾರೆ.

‘ಮತದಾನ ದಿನ ಸಮೀಪಿಸುತ್ತಿರುವಾಗ ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಗುರುತಿನ ಚೀಟಿಗಳು ಪತ್ತೆಯಾದವು. ಆಗ ನಮ್ಮನ್ನು ಸಂಪರ್ಕಿಸಿದ್ದ ಮುನಿರಾಜಗೌಡ, ‘ನಿಮ್ಮ ಚೀಟಿಗಳನ್ನು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರ ಕಡೆಯವರು ಸಂಗ್ರಹಿಸಿದ್ದಾರೆ ಎಂದು ಪೊಲೀಸರಿಗೆ ಹೇಳಿ. ನನ್ನ ಹೆಸರೇನಾದರೂ ಹೇಳಿದರೆ ಪರಿಣಾಮ ನೆಟ್ಟಗಿರಲ್ಲ’ ಎಂದು ಬೆದರಿಕೆ ಹಾಕಿದ್ದರು. ಹೀಗಾಗಿ, ಕೆಲ ದಿನ ಮೌನವಾಗಿದ್ದೆವು’ ಎಂದು ಕುಮಾರ್‌ ಹೇಳಿದ್ದಾರೆ.

ದೂರು ಸ್ವೀಕರಿಸಲು ನಿರಾಕರಿಸಿದ್ದ ಪೊಲೀಸರು: ಗುರುತಿನ ಚೀಟಿಗಳನ್ನು ಮುನಿರಾಜಗೌಡ ದುರುಪಯೋಗ ಪಡಿಸಿಕೊಂಡಿದ್ದು ಗೊತ್ತಾಗುತ್ತಿದ್ದಂತೆ ಮತದಾರರು, ದೂರು ನೀಡಲು ಠಾಣೆಗೆ ಹೋಗಿದ್ದರು. ಆದರೆ, ಪೊಲೀಸರ ದೂರು ಪಡೆಯಲು ನಿರಾಕರಿಸಿದ್ದರು.

ನೊಂದ ಮತದಾರರು, ನ್ಯಾಯಾ ಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆದೇಶ ಹೊರಡಿಸಿದೆ.

ಸಂಪೂರ್ಣ ವಿತರಣೆಯಾಗದ ಚೀಟಿಗಳು: ಅಪಾರ್ಟ್‌ಮೆಂಟ್‌ ಸಮುಚ್ಚಯದ ಪ್ಲ್ಯಾಟ್‌ ನಂ. 115ರ ಮೇಲೆ ಮೇ 8ರಂದು ದಾಳಿ ಮಾಡಿದ್ದ ಚುನಾವಣಾ ಅಧಿಕಾರಿಗಳು,  9,746 ಚೀಟಿಗಳನ್ನು ಜಪ್ತಿ ಮಾಡಿದ್ದರು. ಮೇ 28ರಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯೂ ಮುಗಿದಿದೆ. ಆದರೆ, ಜಪ್ತಿ ಮಾಡಿರುವ ಚೀಟಿಗಳನ್ನು ಸಂಪೂರ್ಣವಾಗಿ ಅರ್ಹರಿಗೆ ವಿತರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT