ಸಹ ಭೋಜನಕ್ಕೆ ಸಾಕ್ಷಿಯಾದ ಎಳ್ಳಮಾವಾಸ್ಯೆ

7
ಗ್ರಾಮೀಣರಲ್ಲಿ ಮುಗಿಲು ಮುಟ್ಟಿದ ಸಂಭ್ರಮ; ನಗರ/ಪಟ್ಟಣಿಗರಲ್ಲಿ ಪಿಕ್‌ನಿಕ್‌ ಸಡಗರ

ಸಹ ಭೋಜನಕ್ಕೆ ಸಾಕ್ಷಿಯಾದ ಎಳ್ಳಮಾವಾಸ್ಯೆ

Published:
Updated:
Prajavani

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಶನಿವಾರ (ಜ.5) ಸಡಗರವೇ ಮೈದಳೆದಿತ್ತು. ಎತ್ತ ನೋಡಿದರೂ ಎಳ್ಳಮಾವಾಸ್ಯೆಯ ಸಂಭ್ರಮ ನಿರ್ಮಾಣಗೊಂಡಿತ್ತು.

ಊರ ಹೊರಗಿನ ಹೊಲಗಳತ್ತ ಒಮ್ಮೆ ದೃಷ್ಟಿ ಹರಿಸಿದರೆ ಜನ ಸಮೂಹದ ಗುಂಪು... ರಸ್ತೆ ಬದಿಯುದ್ದಕ್ಕೂ ವಾಹನಗಳ ಸಾಲು... ಎತ್ತ ನೋಡಿದರೂ ತಂಡೋಪ ತಂಡವಾಗಿ ಹೊಲದತ್ತ ಹೆಜ್ಜೆ ಹಾಕಿದ ಜನರ ಚಿತ್ರಣವೇ ಗೋಚರಿಸಿತು.

ಗ್ರಾಮೀಣ ಪರಿಸರದಲ್ಲಿ ಹಬ್ಬದ ವಾತಾವರಣ ಸೃಷ್ಟಿಗೊಂಡಿತ್ತು. ನಗರ, ಪಟ್ಟಣ ಪ್ರದೇಶಗಳ ಜನರು ಎಳ್ಳಮಾವಾಸ್ಯೆಯ ಸಂಭ್ರಮವನ್ನು ಒಂದು ದಿನದ ಪಿಕ್‌ನಿಕ್‌ ರೀತಿ ಅನುಭವಿಸಿ, ಸವಿದರು. ತಮ್ಮ ಆತ್ಮೀಯ ಒಡನಾಡಿಗಳು, ಆಪ್ತೇಷ್ಟರ ಆಹ್ವಾನ ಮನ್ನಿಸಿ, ದೂರದ ಹೊಲಗಳಿಗೆ ತೆರಳಿ ಭೂರಮೆಯ ಪೂಜೆಯಲ್ಲಿ ಭಾಗಿಯಾದರು.

ಚಿಣ್ಣರ ಕಲರವಕ್ಕೆ ಮಿತಿಯಿರಲಿಲ್ಲ. ಶನಿವಾರ ನಸುಕಿನಲ್ಲೇ ಶಾಲೆಗೆ ತೆರಳಿ, ಮಧ್ಯಾಹ್ನದ ವೇಳೆಗೆ ಮನೆಗೆ ಮರಳಿದ್ದ ಮಕ್ಕಳು, ಕುಟುಂಬ ವರ್ಗ, ಬಂಧುಗಳ ಜತೆ ಖುಷಿಯಿಂದ ಹೊಲಕ್ಕೆ ತೆರಳಿದರು. ಬೆಳೆಯಿಲ್ಲದೆ ವಿಶಾಲ ಮೈದಾನದಂತಿದ್ದ ಜಮೀನುಗಳಲ್ಲಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿದ ಚಿತ್ರಣ ಗೋಚರಿಸಿತು.

ಅಘೋಷಿತ ರಜೆ
ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನದ ಬಳಿಕ ಅಘೋಷಿತ ರಜೆಯ ವಾತಾವರಣ ಕಂಡು ಬಂತು. ಸರಾಫ್‌ ಬಜಾರ್‌, ಕಿರಾಣಾ ಬಜಾರ್, ಲಾಲ್‌ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಸೇರಿದಂತೆ ಇನ್ನಿತರೆಡೆ ಬಹುತೇಕ ಅಂಗಡಿಗಳ ಬಾಗಿಲು ಮುಚ್ಚಿದ್ದವು. ಆಪ್ತ ಒಡನಾಡಿಗಳ ಪ್ರೀತಿಯ ಕರೆಗೆ ಓಗೊಟ್ಟು ಹೊಲದತ್ತ ಹೆಜ್ಜೆ ಹಾಕಿದವರೇ ಹೆಚ್ಚಿದ್ದರು.

ಮಧ್ಯಾಹ್ನದ ವೇಳೆಗೆ ಕುಟುಂಬದವರೊಟ್ಟಿಗೆ ಆಪ್ತೇಷ್ಟರ ಹೊಲಕ್ಕೆ ದಾಂಗುಡಿಯಿಟ್ಟಿದ್ದ ಕುಟುಂಬ ವರ್ಗಗಳು, ಭೂ ರಮೆಗೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಿ, ಅಪ್ಪಟ ಜವಾರಿ ಭೋಜನ ಸವಿದರು. ಮುಸ್ಸಂಜೆಯವರೆಗೂ ನಿತ್ಯದ ಜಂಜಡದಿಂದ ಹೊರಗುಳಿದು, ಗ್ರಾಮೀಣ ಪರಿಸರದ ಚಿತ್ರಣವನ್ನು ಆನಂದಿಸಿದರು.

ನಗರ ಪ್ರದೇಶದಲ್ಲಿ ವಾಸವಿರುವ ಗೃಹಿಣಿಯರು, ತವರನ್ನು ನೆನಪಿಸಿಕೊಂಡು ಅಮಾವಾಸ್ಯೆ ಮುನ್ನ ದಿನವೇ ತಮ್ಮೂರುಗಳಿಗೆ ಮಕ್ಕಳೊಂದಿಗೆ ತೆರಳಿದ್ದರು. ಪತ್ನಿಯರನ್ನು ಹಿಂಬಾಲಿಸಿಕೊಂಡು ಶನಿವಾರ ನಸುಕಿನಲ್ಲೇ ಪತಿರಾಯರು ಹಳ್ಳಿಗೆ ತೆರಳಿದ ಚಿತ್ರಣ ವಿವಿಧೆಡೆ ಗೋಚರಿಸಿತು.

ಭೂ ತಾಯಿಗೆ ನಮನ
ಗ್ರಾಮೀಣ ಪ್ರದೇಶದಲ್ಲಿ ಎಳ್ಳಮಾವಾಸ್ಯೆಯ ಸಡಗರ ಮೇರೆ ಮೀರಿತ್ತು. ರೈತ ಕುಟುಂಬಗಳು ಮುಂಜಾನೆಯೇ ಹೊಲದ ಪೂಜೆಗೆ ತೆರಳಲು ಮನೆ ಮುಂಭಾಗ ಚಕ್ಕಡಿ ಸಿದ್ಧಗೊಳಿಸಿದ್ದವು. ಎತ್ತುಗಳ ಮೈ ತೊಳೆದು ಅಲಂಕರಿಸಿದ್ದರು.

ಮನೆಯಲ್ಲಿನ ಪೂಜೆ ಮುಗಿಯುತ್ತಿದ್ದಂತೆ, ತಮ್ಮ ಆಪ್ತೇಷ್ಟರಿಗೆ ಆಹ್ವಾನ ನೀಡಿ, ಎತ್ತಿನ ಬಂಡಿಯಲ್ಲಿ ಹೊಲದತ್ತ ಸಂಭ್ರಮದಿಂದ ತೆರಳಿದರು. ಭೂ ತಾಯಿಗೆ ಪೂಜೆ ಸಲ್ಲಿಸುವ ಜತೆ, ಬನ್ನಿ ಗಿಡಕ್ಕೂ ವಿಶೇಷ ಪೂಜೆಗೈದರು. ನಂತರ ಅಲ್ಲಿಯೇ ಲಕ್ಷ್ಮೀ ಪೂಜೆ ನೆರವೇರಿಸಿ ನೈವೇದ್ಯ ಅರ್ಪಿಸಿದ್ದು ವಿಶೇಷವಾಗಿತ್ತು. ಸಂಪ್ರದಾಯದಂತೆ ಪೂಜೆ ಸಲ್ಲಿಸಿದ ಬಳಿಕ, ಭೂಮಿ ತಾಯಿಗೆ ಹಣೆ ಮಣಿದು ನಮಸ್ಕರಿಸಿದರು.

ಧಾರ್ಮಿಕ ಸಂಪ್ರದಾಯ ಪಾಲನೆಗೊಂಡ ಬಳಿಕ ಎಲ್ಲರೂ ಒಟ್ಟಿಗೆ ಕುಳಿತು ಮನೆಯಿಂದ ತಂದಿದ್ದ ಶೇಂಗಾ ಹೋಳಿಗೆ, ಕಡುಬು, ಚಪಾತಿ, ಸಜ್ಜೆ ರೊಟ್ಟಿ, ಎಲ್ಲ ತರಹದ ಕಾಳಿನ ಪಲ್ಲೆ, ಅನ್ನ–ಕಟ್ಟಿನ ಸಾರಿನ ಜವಾರಿ ಭೋಜನ ಸವಿದೆವು. ಮುಸ್ಸಂಜೆ ವೇಳೆ ಮನೆಗೆ ಮರಳುವ ಮುನ್ನ ಮತ್ತೊಮ್ಮೆ ಭೂ ತಾಯಿಗೆ ನಮಿಸಿ ಹೊಲದಿಂದ ಬಂದೆವು ಎಂದು ಕೊಲ್ಹಾರದ ಸಿದ್ದಪ್ಪ ಈಶ್ವರಪ್ಪ ಪೂಜೇರಿ ಎಳ್ಳಮಾವಾಸ್ಯೆ ಆಚರಿಸಿದ ಚಿತ್ರಣವನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !