ಅಮೀರ್‌ಗೆ ಎಡವದೇ ನಡೆಯುವಾಸೆ

7

ಅಮೀರ್‌ಗೆ ಎಡವದೇ ನಡೆಯುವಾಸೆ

Published:
Updated:
Prajavani

ನಟ, ನಿರ್ದೇಶಕ, ನಿರ್ಮಾಪಕ ಆಮೀರ್‌ ಖಾನ್‌ ಹೊಸ ವರ್ಷದಲ್ಲಿ ಏನು ಮಾಡಬೇಕು ಎಂಬ ಸ್ಪಷ್ಟ ಯೋಜನೆ ಹಾಕಿಕೊಂಡಿದ್ದಾರೆ. ತಮ್ಮ ‘ನ್ಯೂ ಇಯರ್‌ ರೆಸಲ್ಯೂಷನ್‌’ಗಳನ್ನು ಅವರು ಅಭಿಮಾನಿಗಳೊಂದಿಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. 2018ರಲ್ಲಿ ಕಂಡ ಯಶಸ್ಸಿಗಿಂತಲೂ ಸೋಲುಗಳನ್ನು ಮೆಟ್ಟಿಲಾಗಿಸಿಕೊಂಡು 2019ರ ವರ್ಷದುದ್ದಕ್ಕೂ ಹೆಜ್ಜೆಯಿಡುವ ಎಚ್ಚರ ಅವರದು. 

ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾದ ಅವರ ‘ಥಗ್ಸ್‌ ಆಫ್‌ ಹಿಂದೊಸ್ತಾನ್‌’ ಗೆಲ್ಲುವ ಚಿತ್ರವೆಂದೇ ಅಮೀರ್‌ ಸೇರಿದಂತೆ ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಚಿತ್ರ ತೋಪಾಯಿತು. ಅಸಲಿಗೆ, ಚಿತ್ರದಲ್ಲಿ ಅನೇಕ ಗೆಲ್ಲುವ ಅಂಶಗಳಿದ್ದವು. ಅಮಿತಾಭ್‌ ಬಚ್ಚನ್‌, ಕತ್ರಿನಾ ಕೈಫ್‌, ಫಾತಿಮಾ ಸಾರಾ ಶೇಖ್‌ ಅವರಂತಹ ತಾರಾ ಆಕರ್ಷಣೆ, ಹಾಲಿವುಡ್‌ನ ‘ಪೈರೆಟ್ಸ್‌ ಆಫ್‌ ದಿ ಕೆರೆಬಿಯನ್‌’ ಚಿತ್ರದ ಸೆಟ್‌ನಷ್ಟೇ ಅದ್ದೂರಿ ಸೆಟ್‌, ಮೇಕಿಂಗ್‌, ವೇಷಭೂಷಣ, ಬೃಹತ್‌ ಹಡಗುಗಳು ಮತ್ತು ಅವುಗಳಲ್ಲೇ ಚಿತ್ರೀಕರಣಗೊಂಡ ಯುದ್ಧದ ಸನ್ನಿವೇಶಗಳು, ವಿಜಯ್‌ ಆಚಾರ್ಯ ನಿರ್ದೇಶನ... ಈ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸಮಯದಿಂದ ಚರ್ಚೆಯ ವಸ್ತುಗಳಾಗಿದ್ದವು. ಆದರೆ ಚಿತ್ರ ಸೋತಿರುವುದಂತೂ ನಿಜ.

‘ಥಗ್ಸ್‌ ಆಫ್‌ ಹಿಂದೊಸ್ತಾನ್‌’ ಸೋಲು ಅಮೀರ್‌ ಕನಸುಗಳ ಮೇಲೆ ಬಿದ್ದ ಹೊಡೆತವೇ ಆದರೂ ಅವರು ಅದನ್ನು ಧನಾತ್ಮಕವಾಗಿ ಸ್ವೀಕರಿಸಿದ್ದು ಗಮನಾರ್ಹ. ಈ ಹೊಸ ವರ್ಷದ ಹೊಸ್ತಿಲಲ್ಲಿ ಅವರು ಪ್ರಕಟಿಸಿರುವ ರೆಸಲ್ಯೂಷನ್‌ಗಳೂ ಇದಕ್ಕೆ ಪೂರಕವಾಗಿವೆ.  

ಹೀಗೆ, ಸೋಲಿನ ಬಗ್ಗೆ ಕೊರಗುತ್ತಾ ಕೂರುವ ಬದಲು ಆತ್ಮಾವಲೋಕನಕ್ಕೆ ಅವಕಾಶ ಮಾಡಿಕೊಳ್ಳುವುದು ಸೂಕ್ತ ಎಂಬುದು ಅಮೀರ್‌ ಲೆಕ್ಕಾಚಾರ. ಅದೇ ಕಾರಣಕ್ಕೆ ಅವರು ಐದು ರೆಸಲ್ಯೂಷನ್‌ಗಳನ್ನು ತಮ್ಮ ಮುಂದಿಟ್ಟುಕೊಂಡು 2019ಕ್ಕೆ ಮುಖಾಮುಖಿಯಾಗಿದ್ದಾರೆ.

ಹಳೆಯ ಶೇಪ್‌ಗೆ ಬರಬೇಕು ಎಂಬುದು ಅಮೀರ್‌ ಮೊದಲ ರೆಸಲ್ಯೂಷನ್‌. ಶೇಪ್‌ ಅಂದರೆ, ದೇಹಾಕಾರ ಹಾಗೂ ವೃತ್ತಿ ಜೀವನದಲ್ಲಿ ಮತ್ತೆ ಹಿಂದಿನ ವರ್ಚಸ್ಸಿಗೆ ಬರಬೇಕು ಎಂಬ ಅರ್ಥ ಇದರಲ್ಲಿದೆ. ಉಳಿದ ನಾಲ್ಕು ಆಶಯಗಳನ್ನು ನೋಡೋಣ– ‘2018 ರಲ್ಲಿ ಮಾಡಿದ ತಪ್ಪುಗಳಿಂದ ಕಲಿತದ್ದನ್ನು ವಾಸ್ತವದಲ್ಲಿ ಅಳವಡಿಸಿಕೊಳ್ಳುವುದು, ಮೂರನೆಯದಾಗಿ, ಇದುವರೆಗೂ ನಾನು ಮಾಡದೇ ಇರುವಂತಹ ಚಲನಚಿತ್ರ ಮಾಡುವುದು, ನಾಲ್ಕನೆಯದಾಗಿ, ಹೊಸದೇನಾದರೂ ಕಲಿಯುವುದು, ಕೊನೆಯದಾಗಿ, ಮನೆ ಮಂದಿಯೊಂದಿಗೆ ಹೆಚ್ಚು ಕಾಲವನ್ನು ಕಳೆಯುವುದು!

ಸೋಲೇ ಗೆಲುವಿನ ಸೋಪಾನ ಎಂಬ ಮಾತು ಆಮೀರ್‌ಗೆ ಹೆಚ್ಚು ಹೊಂದುತ್ತದೆ. ಮರಳಿ ಯತ್ನವ ಮಾಡು ಎಂಬಂತೆ ಹಳೆಯ ತಪ್ಪುಗಳನ್ನು ತಿದ್ದಿಕೊಳ್ಳುತ್ತಲೇ ಹೊಸ ಪಾಠಗಳಿಗೂ, ಕಲಿಕೆಗಳಿಗೂ ತಮ್ಮನ್ನು ಮುಕ್ತವಾಗಿಡುವುದು ಆಮೀರ್‌ ದೊಡ್ಡತನ. 53ರ ಹರೆಯದಲ್ಲಿಯೂ ಕಲಿಯುವಾಸೆ ವ್ಯಕ್ತಪಡಿಸುವ ಮತ್ತು ಅದನ್ನು ಮುಕ್ತವಾಗಿ ಹೇಳಿಕೊಳ್ಳುವ ಆಮೀರ್‌, ಬದುಕು ಎಂಬ ಪ್ರಯೋಗಶಾಲೆಯ ವಿಧೇಯ ವಿದ್ಯಾರ್ಥಿ.

26ರಂದು ‘ರುಬಾರು ರೋಶ್ನಿ’ ಪ್ರಸಾರ

ಇದೇ 26ರಂದು ತಮ್ಮ ಅಭಿಮಾನಿಗಳಿಗೆ ಏನೋ ಉಡುಗೊರೆ ನೀಡುವುದಾಗಿ ಅಮೀರ್‌ ಖಾನ್‌ ಮೊನ್ನೆ ಪ್ರಕಟಿಸಿದಾಗಿನಿಂದಲೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಅಮೀರ್‌ ಮತ್ತು ಪತ್ನಿ ಕಿರಣ್‌ ರಾವ್‌ ನಿರ್ಮಿಸಿರುವ ಹೊಸ ಫೀಚರ್‌ ಫಿಲ್ಮ್‌ ಅಂದು ಸ್ಟಾರ್‌ ಪ್ಲಸ್‌ ವಾಹಿನಿಯಲ್ಲಿ ಪ್ರದರ್ಶನ ಕಾಣಲಿದೆ. ‘ಸತ್ಯಮೇವ ಜಯತೆ’ ಸರಣಿಯ ಬಳಿಕ ಕಿರುತೆರೆಯಿಂದ ದೂರವಿದ್ದ ಅಮೀರ್‌, ಇದೀಗ ತಮ್ಮದೇ ಆದ ಅಮೀರ್‌ ಖಾನ್‌ ಫಿಲ್ಮ್ಸ್‌ ನಿರ್ಮಾಣ ಸಂಸ್ಥೆಯ ಚಿತ್ರದೊಂದಿಗೆ ಕಿರುತೆರೆ ವೀಕ್ಷಕರಿಗೆ ಮುಖಾಮುಖಿಯಾಗಲಿದ್ದಾರೆ.

‘ರುಬಾರು ರೋಶ್ನಿ’ ಎಂಬ ಈ ಚಿತ್ರವನ್ನು ಸ್ವಾತಿ ಚಕ್ರವರ್ತಿ ನಿರ್ದೇಶಿಸಿದ್ದಾರೆ. ಗಣರಾಜ್ಯೋತ್ಸವ ದಿನ ಬೆಳಿಗ್ಗೆ 11ಕ್ಕೆ ಈ ಚಿತ್ರ ಪ್ರದರ್ಶನವಾಗಲಿದೆ. ‘ರುಬಾರು ರೋಶ್ನಿ’ ಅಂದರೆ ಬೆಳಕಿನೊಂದಿಗೆ ಮುಖಾಮುಖಿ ಎಂದರ್ಥ. ಪ್ರಸೂನ್‌ ಜೋಶಿ ಬರೆದ ಈ ಚಿತ್ರದ ಹಾಡುಗಳಿಗೆ ಎ.ಆರ್.ರೆಹಮಾನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶೇಷವೆಂದರೆ, ಅಮೀರ್‌ಗೂ ಪ್ರೇಕ್ಷಕರಿಗೂ ಅಚ್ಚುಮೆಚ್ಚಿನ ಚಿತ್ರವಾದ ‘ರಂಗ್ ದೆ ಬಸಂತಿ’ಯ ‘ರುಬಾರು ರೋಶ್ನಿ’ ಹಾಡು ಈ ಚಿತ್ರದಲ್ಲಿದೆ. 13 ವರ್ಷಗಳ ಹಿಂದೆ ಜನವರಿ 26ರಂದೇ ‘ರಂಗ್‌ ದೆ ಬಸಂತಿ’ಯೂ ಬಿಡುಗಡೆಯಾಗಿತ್ತು.

ಕೃಷ್ಣನಾಗಿ ಅಮೀರ್‌?

ಅಮೀರ್‌ ಖಾನ್‌ ಆಪ್ತ ವಲಯದ ಮಾಹಿತಿ ಪ್ರಕಾರ, ಅವರು ಈ ವರ್ಷ ಮಹತ್ವಾಕಾಂಕ್ಷೆಯ ಯೋಜನೆಯೊಂದರಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಮಹಾಭಾರತದ ಕತೆಯನ್ನೊಳಗೊಂಡ ಶೋವೊಂದರಲ್ಲಿ ಅಮೀರ್‌, ಶ್ರೀಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ‘ಮಹಾಭಾರತ’ ವೆಬ್‌ ಸರಣಿಯೋ ಅಥವಾ ಪೂರ್ಣಪ್ರಮಾಣದ ಚಲನಚಿತ್ರವೋ ಎಂಬುದು ಮಾತ್ರ ಇನ್ನೂ ಖಚಿತವಾಗಿಲ್ಲ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !