ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಣಿವರಿಯದ ‘ಶಾ‘ಗೆ ಕುಂದದ ಉಮೇದು...

Last Updated 26 ಫೆಬ್ರುವರಿ 2019, 14:26 IST
ಅಕ್ಷರ ಗಾತ್ರ

ನಾಯಕ ನಟ, ನಟಿ ಇಲ್ಲವೇ ಖಳ ನಟ, ನಟಿಯ ಪಾತ್ರ ನಿರ್ವಹಿಸಿದವರು ಬಾಲಿವುಡ್‌ನಲ್ಲಿ ದೀರ್ಘ ಕಾಲ ನೆನಪಿನಲ್ಲಿ ಉಳಿಯುತ್ತಾರೆ. ಆದರೆ, ದಶಕಗಳಿಂದ ಪ್ರಮುಖ ಪಾತ್ರಗಳು ಅಲ್ಲದೇ ಆಗಾಗ್ಗೆ ಪೋಷಕ, ಹಾಸ್ಯ ಸೇರಿದಂತೆ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿಕೊಂಡು ಸದಾ ಸುದ್ದಿಯಲ್ಲಿದ್ದು ತಮ್ಮ ಅಸ್ತಿತ್ವ ಕಾಪಾಡಿಕೊಂಡವರು ತುಂಬಾನೇ ವಿರಳ. ಅಂಥ ಕೆಲವೇ ಮೇರು ನಟರಲ್ಲಿ ನಾಸೀರುದ್ದೀನ್ ಶಾ ಕೂಡ ಒಬ್ಬರು.

1980ರ ದಶಕದಲ್ಲಿ ಬಾಲಿವುಡ್ ಪ್ರವೇಶಿಸಿದ ನಾಸಿರುದ್ದೀನ್ ಶಾ ಒಂದೇ ಪಾತ್ರಕ್ಕೆ ಎಂದಿಗೂ ಸೀಮಿತಗೊಳ್ಳಲು ಇಷ್ಟಪಡಲಿಲ್ಲ. ಆಯಾ ಚಿತ್ರಗಳ ಮಹತ್ವ ಅರಿತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತ ಕರಿಯರ್ ರೂಪಿಸಿಕೊಂಡ ಅವರು ಈಗಲೂ ಬೇಡಿಕೆಯ ನಟ. ವಿಶೇಷ ಪಾತ್ರಗಳಿಗೆ ನಿಭಾಯಿಸುವಿಕೆ ವಿಷಯ ಪ್ರಸ್ತಾಪವಾದಾಗಲೆಲ್ಲ, ನಿರ್ದೇಶಕರು–ನಿರ್ಮಾಪಕರಿಗೆ ಮೊದಲಿಗೆ ನೆನಾಪಾಗುವ ಹೆಸರು: ನಾಸೀರುದ್ದೀನ್ ಶಾ.

ಉತ್ತರ ಪ್ರದೇಶ ಬರಬಂಕಿ ಎಂಬ ಊರಿನ ಶಾ ಅವರು ಪ್ರಾಥಮಿಕ ಶಿಕ್ಷಣವನ್ನು ನೈನಿತಾಳದಲ್ಲಿ ಪೂರ್ಣಗೊಳಿಸಿದರೆ, ಪದವಿ ಶಿಕ್ಷಣವನ್ನು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪೂರೈಸಿದರು. ಕಲಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ ಅವರು ನೇರವಾಗಿ ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್ಎಸ್‌ಡಿ) ಸೇರಿಕೊಂಡರು. 1980ರಲ್ಲಿ ‘ಹಮ್ ಪಾಂಚ್’ ಮೂಲಕ ಬಾಲಿವುಡ್ ಪ್ರವೇಶಿಸಿದರೂ ಅವರಿಗೆ 1986ರಲ್ಲಿ ತೆರೆ ಕಂಡ 'ಕರ್ಮಾ’ ಚಿತ್ರ ಹೆಸರು ತಂದುಕೊಟ್ಟಿತು.

ನಂತರದ ದಿನಗಳಲ್ಲಿ ಸಾಕಷ್ಟು ಕಮರ್ಷಿಯಲ್ ಚಿತ್ರಗಳಲ್ಲಿ ಅಭಿನಯಿಸಿದ ಅವರು ಗಂಭೀರವಾದ ಪಾತ್ರಗಳತ್ತ ಹೆಚ್ಚಿನ ಗಮನ ಹರಿಸತೊಡಗಿದರು. ಕಲಾತ್ಮಕ ಮತ್ತು ಕಮರ್ಷಿಯಲ್ ಚಿತ್ರಗಳ ಆಯ್ಕೆ ವಿಷಯ ಬಂದಾಗಲೆಲ್ಲ, ಕಲಾತ್ಮಕ ಚಿತ್ರಗಳಿಗೆ ಹೆಚ್ಚಿನ ಆದ್ಯತೆ ನೀಡತೊಡಗಿದರು. ಆದರೆ ಕಮರ್ಷಿಯಲ್ ಚಿತ್ರಗಳಲ್ಲಿ ಆಗಾಗ್ಗೆ ಹುಡುಕಿಕೊಂಡು ಬರುತ್ತಿದ್ದ ಅವಕಾಶ ಕಳೆದುಕೊಳ್ಳಲು ಬಯಸಲಿಲ್ಲ. ಈ ಕಾರಣಕ್ಕೆಂದೇ ಕಮಲ್ ಹಾಸನ್ ನಿರ್ದೇಶನದ ‘ಹೇಯ್ ರಾಮ್’ ಚಿತ್ರದಲ್ಲಿ ಗಾಂಧಿ ಪಾತ್ರದಲ್ಲಿ, ‘ಮೊಹ್ರಾ’ ಚಿತ್ರದಲ್ಲಿ ಖಳ ನಟ, ಅಮೀರ್ ಖಾನ್ ನಟನೆಯ ‘ಸರ್ಫರೋಶ್’ ಚಿತ್ರದಲ್ಲಿ ಗುಲ್ಫಾಮ್ ಹಸನ್ ಪಾತ್ರ ಮತ್ತು ಸಾಮಾನ್ಯ ವ್ಯಕ್ತಿಯೊಬ್ಬನ ಕಥೆಯಾಧಾರಿತ ‘ಎ ವೆಡ್ನೆಸ್‌ಡೇ’ ಚಿತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು.

ಬಾಲಿವುಡ್‌ಗೆ ಸೀಮಿತರಾಗದೇ ಹಾಲಿವುಡ್‌ಗೂ ಪ್ರವೇಶಿಸಿದ ಶಾ ಅವರು ಅಲ್ಲಿಯೂ ಕೂಡ ಅಭಿಮಾನಿಗಳನ್ನು ಗಳಿಸಿದರು. ‘ಮಾನ್ಸೂನ್ ವೆಡ್ಡಿಂಗ್’, ‘ದಿ ಲೀಗ್ ಆಫ್ ಎಕ್ಸಟ್ರಾರ್ಡನರಿ ಜೆಂಟಲ್‌ಮೆನ್‌’ ಮುಂತಾದ ಚಿತ್ರಗಳಲ್ಲಿ ಅವರು ಉತ್ತಮ ಪಾತ್ರಗಳನ್ನು ನಿಭಾಯಿಸಿದರು. ಅವರು ಅಭಿನಯಿಸಿದ ಪಾಕಿಸ್ತಾನದ ‘ಜಿಂದಾ ಭಾಗ್’ ಚಿತ್ರವು ಆಸ್ಕರ್ ಪ್ರಶಸ್ತಿಯ ಅತ್ಯುತಮ ವಿದೇಶಿ ಭಾಷೆಗೆ ನಾಮನಿರ್ದೇಶನಗೊಂಡಿತು.

ಚಿತ್ರಗಳ ಅಭಿನಯದಿಂದ ಬಿಡುವು ಸಿಕ್ಕಾಗಲೆಲ್ಲ ಅವರು ಟಿವಿ ಧಾರಾವಾಹಿ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ರಂಗಭೂಮಿಯಲ್ಲಿ ತೊಡಗುವುದು ಅವರಿಗೆ ಅತ್ಯಂತ ಖುಷಿಯ ಕೆಲಸ.

‘ಜಾನೆ ಭಿ ದೋ ಯಾರೊ’ ಚಿತ್ರದ ಎರಡನೇ ಭಾಗಕ್ಕೆ ಸಿದ್ಧತೆ

ನಾಸೀರುದ್ದೀನ್ ಶಾ ಅಭಿನಯಿಸಿದ ‘ಜಾನೆ ಭಿ ದೋ ಯಾರೊ’ (1983) ಚಿತ್ರದ ಎರಡನೇ ಭಾಗವನ್ನು ಹೊರತರುವ ಕುರಿತು ಪ್ರಯತ್ನ ನಡೆದಿದೆ.

ಇಬ್ಬರು ಪತ್ರಿಕಾ ಛಾಯಾಗ್ರಹಕರ ಕಥೆ ಆಧರಿಸಿದ ಈ ಚಿತ್ರವು 1980ರ ದಶಕದಲ್ಲಿ ದೊಡ್ಡ ಸಂಚಲವನ್ನೇ ಉಂಟು ಮಾಡಿತು. ದೇಶದಲ್ಲಿ ಭ್ರಷ್ಟಾಚಾರ ಹೇಗೆ ವ್ಯಾಪಿಸಿದೆ, ಕೊಲೆ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಹೇಗೆ ನಡೆಯುತ್ತದೆ, ತಮ್ಮದಲ್ಲದ ತಪ್ಪಿಗೆ ಛಾಯಾಗ್ರಾಹಕರು ಹೇಗೆ ಜೈಲು ಸೇರುತ್ತಾರೆ ಮುಂತಾದ ವಿಷಯಗಳನ್ನು ಕೇಂದ್ರೀಕರಿಸಿದ ಈ ಚಿತ್ರವನ್ನು ಎನ್ಎಫ್‌ಡಿಸಿ ನಿರ್ಮಿಸಿದರೆ, ಕುಂದನ್ ಶಾ ನಿರ್ದೇಶಿಸಿದರು.

ನಾಸೀರುದ್ದೀನ್ ಶಾ (ವಿನೋದ್ ಚೋಪ್ರಾ) ಮತ್ತು ರವಿ ಬಾಸ್ವಾನಿ (ಸುಧೀರ್ ಮಿಶ್ರಾ) ಛಾಯಾಗ್ರಾಹಕರ ಪಾತ್ರ ನಿಭಾಯಿಸಿದರು. ಪ್ರಮುಖ ಪಾತ್ರಗಳನ್ನು ನಿಭಾಯಿಸಿದವರಲ್ಲಿ ಈಗ ರವಿ ಬಾಸ್ವಾನಿ ಮತ್ತು ಓಂ ಪುರಿ ಬದುಕಿಲ್ಲ.

ಆ ಚಿತ್ರದಲ್ಲಿ ಅಭಿನಯಿಸಿದ ಪಂಕಜ್ ಕಪೂರ್, ಸತೀಶ್ ಶಾ, ಸತೀಶ್ ಕೌಶಿಕ್, ನೀನಾ ಗುಪ್ತಾ ಮುಂತಾದ ನಟ, ನಟಿಯರ ಸಹಯೋಗದಲ್ಲಿ ಚಿತ್ರದ ಎರಡನೇ ಭಾಗವನ್ನು ಹೊರತರಲು ಸಿದ್ಧತೆ ನಡೆದಿದೆ. ಕುಂದನ್ ಶಾ ಅವರು ಚಿತ್ರಕಥೆ ಬರೆದಿದ್ದು, ಎನ್ಎಫ್‌ಡಿಸಿ ಮತ್ತು ಚಿತ್ರ ನಿರ್ಮಾಪಕ ನಾಡಿಯಾಡವಾಲಾ ಜೊತೆಗೂಡಿ ಚಿತ್ರ ನಿರ್ಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT