ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತವರ್ಷಿಣಿ ಖ್ಯಾತಿಯ ಬಹುಭಾಷಾ ನಟ ಶರತ್ ಬಾಬು ಇನ್ನಿಲ್ಲ

ಕನ್ನಡದ ಅಮೃತವರ್ಷಿಣಿ ಖ್ಯಾತಿಯ ನಟ ಶರತ್ ಬಾಬು ಅವರು ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
Published 22 ಮೇ 2023, 10:36 IST
Last Updated 22 ಮೇ 2023, 10:36 IST
ಅಕ್ಷರ ಗಾತ್ರ

ಹೈದರಾಬಾದ್: ಕನ್ನಡದ ಅಮೃತವರ್ಷಿಣಿ ಸಿನಿಮಾ ಖ್ಯಾತಿಯ ನಟ ಶರತ್ ಬಾಬು ಅವರು ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಾಗಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಅವರು ಮೃತರಾಗಿದ್ದಾರೆ.

ಶರತ್ ಬಾಬು ಅವರು ಮುಖ್ಯವಾಗಿ ತೆಲುಗು, ತಮಿಳು ಸೇರಿದಂತೆ ಕನ್ನಡ, ಮಲೆಯಾಳಂ, ಹಿಂದಿಯ ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

ಸತ್ಯಂಬಾಬು ದೀಕ್ಷಿತಲು ಎಂಬ ಮೂಲ ಹೆಸರಿನವರಾಗಿದ್ದ ಅವರು ಸಿನಿಮಾಗಳಿಂದ ಶರತ್ ಬಾಬು ಎಂದು ಜನಪ್ರಿಯರಾಗಿದ್ದರು. ಹಲವು ಚಿತ್ರಗಳಲ್ಲಿ ನಾಯಕ ನಟರಾಗಿಯೂ ಅಭಿನಯಿಸಿದ್ದ ಅವರು ಪೋಷಕ ಪಾತ್ರಗಳಿಂದ ಹೆಚ್ಚು ಖ್ಯಾತರಾಗಿದ್ದರು.

ತೆಲುಗು ಚಿತ್ರರಂಗದ ಮೂಲಕ ಚಿತ್ರರಂಗದ ಪಾದಾರ್ಪಣೆ ಮಾಡಿದ್ದ ಅವರು ತಮಿಳಿನ ಕೆ ಬಾಲಚಂದರ್ ನಿರ್ದೇಶನದ ನಿಜಂ ನಿಜಮಾಗಿರದು ಸಿನಿಮಾ ಮೂಲಕ ತಮಿಳಿನಲ್ಲಿ ಪ್ರಮುಖ ನಟನಾಗಿ ಗುರುತಿಸಿಕೊಂಡಿದ್ದರು. ಕನ್ನಡದಲ್ಲಿ ಅಮೃತವರ್ಷಿಣಿ, ಲೀಲಾ, ಬೃಂದಾವನ ಸೇರಿದಂತೆ 10ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

1973ರಲ್ಲಿ ತೆರೆಕಂಡ ತೆಲುಗಿನ ‘ರಾಮ ರಾಜ್ಯಂ’ ಚಿತ್ರದ ಮೂಲಕ ಅವರ ಸಿನಿ ಪಯಣ ಆರಂಭಗೊಂಡಿತು. 1978ರಲ್ಲಿ ತೆರೆಕಂಡ ಕೆ. ಬಾಲಚಂದರ್ ನಿರ್ದೇಶನದ ‘ನಿಳಲ್ ನಿಜಮಾಗಿರದು’ ಸಿನಿಮಾ ಅವರಿಗ ಒಳ್ಳೆಯ ಹೆಸರು ತಂದುಕೊಟ್ಟಿತು. ‘ಸಾಗರ ಸಂಗಮಂ’ನಲ್ಲಿ ನಟ ಕಮಲ್‌ ಹಾಸನ್‌ ಜೊತೆ ನಟಿಸಿದ ಸ್ನೇಹಿತನ ಪಾತ್ರ ಸಿನಿಪ್ರಿಯರ ಮನ ಸೆಳೆಯಿತು. 2021ರಲ್ಲಿ ತೆರೆಕಂಡ ತೆಲುಗಿನ ‘ವಕೀಲ್‌ ಸಾಬ್‌’ ಅವರ ನಟನೆಯ ಕೊನೆಯ ಚಿತ್ರ.

ಕನ್ನಡದಲ್ಲಿ ಅವರು ನಟಿಸಿದ ಮೊದಲ ಚಿತ್ರ ‘ತುಳಸಿ ದಳ’. ‘ಅಮೃತ ವರ್ಷಿಣಿ’, ‘ಬೃಂದಾವನ’ ಸೇರಿದಂತೆ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಅಮೃತ ವರ್ಷಿಣಿ ಚಿತ್ರದಲ್ಲಿನ ಅವರ ಅಭಿನಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.   

ಕೆ. ವಿಶ್ವನಾಥ್‌ ನಿರ್ದೇಶನದ ‘ಸಾಗರ ಸಂಗಮಂ’, ‘ಆಪದ್ಬಾಂಧವುಡು’, ‘ಕ್ರಿಮಿನಲ್‌’ ಅವರು ನಟಿಸಿರುವ ತೆಲುಗಿನ ಪ್ರಮುಖ ಸಿನಿಮಾಗಳು. ‘ಸೂಪರ್‌ ಸ್ಟಾರ್‌’ ರಜನಿಕಾಂತ್‌ ಜೊತೆಗೆ ತಮಿಳಿನ ‘ಮಲ್ಲುಮ್ ಮಲರುಮ್', ‘ವೇಳೈಕಾರನ್’, ‘ಅಣ್ಣಾಮಲೈ’ ಮತ್ತು ‘ಮುತ್ತು’ ಚಿತ್ರಗಳಲ್ಲಿಯೂ ಅವರು ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT