ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಪೂರ್ಣ ನಟನಾಗುವ ತುಡಿತ: ನಟ ವಿನೋದ್ ಪ್ರಭಾಕರ್‌ ಸಂದರ್ಶನ

Published 5 ಅಕ್ಟೋಬರ್ 2023, 23:31 IST
Last Updated 5 ಅಕ್ಟೋಬರ್ 2023, 23:31 IST
ಅಕ್ಷರ ಗಾತ್ರ

ನಟ ವಿನೋದ್‌ ಪ್ರಭಾಕರ್‌ ಅಭಿನಯದ ‘ಫೈಟರ್‌’ ಚಿತ್ರ ಇಂದು(ಅ.6) ತೆರೆ ಕಾಣುತ್ತಿದೆ. ತಮ್ಮ ವೃತ್ತಿಜೀವನ ಮೊದಲ ಸಿನಿಮಾ ‘ದಿಲ್‌’ನಿಂದ ಇಲ್ಲಿತನಕದ ಸಿನಿಪಯಣದ ಕುರಿತು ಅವರು ಮಾತನಾಡಿದ್ದಾರೆ...

‘ಫೈಟರ್‌’ನಲ್ಲಿ ನಿಮ್ಮ ಪಾತ್ರವೇನು?

‘ಮೋಹಕ್‌’ ಎಂಬ ಪಾತ್ರ ಮಾಡಿರುವೆ. ನಾಯಕಿ ಹೆಸರು ‘ವಿಸ್ಮಯ’. ಜೋಡಿ ಹೆಸರು ಚೆನ್ನಾಗಿ ಕೇಳುತ್ತದೆ ಎಂಬ ಕಾರಣಕ್ಕೆ ಪಾತ್ರಕ್ಕೆ ಈ ಹೆಸರಿಡಲಾಗಿದೆ. ನನ್ನ ತಾಯಿ ಜಿಲ್ಲಾಧಿಕಾರಿಯಾಗಿರುತ್ತಾರೆ. ಅವರಿಗೆ ತಿಳಿಯದಂತೆ ನಾನು ಅವರ ಕೆಲಸಗಳಿಗೆ ಸಹಾಯ ಮಾಡುತ್ತಿರುತ್ತೇನೆ. ಆದರೆ, ಅವರು ನನ್ನನ್ನು ಕೆಲಸ ಇಲ್ಲದವ, ಸೋಮಾರಿ ಎಂದು ಭಾವಿಸಿರುತ್ತಾರೆ. ವಾಸ್ತವವಾಗಿ ನಾನು ರೈತನ ಮಗನಾಗಿರುತ್ತೇನೆ. ಸಿನಿಮಾದ ಕೊನೆಯ 20 ನಿಮಿಷದಲ್ಲಿ ಭೂಮಿ ಕಳೆದುಕೊಂಡ ರೈತರ ಕಥೆ ಬರುತ್ತದೆ. 

ನಿಮ್ಮ ಹಿಂದಿನ ಸಿನಿಮಾಗಳಂತೆ ಇದೂ ಆ್ಯಕ್ಷನ್‌ ಸಿನಿಮಾವೇ?

2018ರಲ್ಲಿ ಪ್ರಾರಂಭಗೊಂಡ ಸಿನಿಮಾವಿದು. ಕೋವಿಡ್‌ನಿಂದಾಗಿ ಈಗ ತೆರೆ ಕಾಣುತ್ತಿದೆ. ನನ್ನ ಸಿನಿಮಾಗಳಲ್ಲಿ ಆ್ಯಕ್ಷನ್‌ ಇರಲೇಬೇಕು. ಅದಕ್ಕೆ ಒಂದು ವರ್ಗದ ಅಭಿಮಾನಿಗಳಿದ್ದಾರೆ. ಅದರಿಂದ ಹಿಂದಿ ಡಬ್ಬಿಂಗ್‌ ಹಕ್ಕು ಮಾರಾಟ ಸೇರಿ ಒಂದಷ್ಟು ವಹಿವಾಟುಗಳು ನಡೆಯುತ್ತವೆ. ಹೀಗಾಗಿ ಕಥೆಯೊಂದಿಗೆ ಆ್ಯಕ್ಷನ್‌ ಕೂಡ ಪ್ರಮುಖವಾಗಿದೆ. ಕಾಲಕ್ಕೆ ತಕ್ಕಂತೆ ಕಥೆ, ವಿಷಯಾಧಾರಿತ ಸಿನಿಮಾ ಮಾಡಬೇಕು. ಆದರೆ ಒಂದೇ ಸಲಕ್ಕೆ ಆ್ಯಕ್ಷನ್‌ ಇಮೇಜ್‌ನಿಂದ ಹೊರಬರುವುದು ಕಷ್ಟ. 

ಹಿಂದಿ ಡಬ್ಬಿಂಗ್‌ ಹಕ್ಕುಗಳ ಮಾರುಕಟ್ಟೆ ಈಗ ಹೇಗಿದೆ?

ಮೊದಲು ಟೀಸರ್‌, ಟ್ರೇಲರ್‌ ನೋಡಿ ಆ್ಯಕ್ಷನ್‌ ಸಿನಿಮಾದ ಡಬ್ಬಿಂಗ್‌ ಹಕ್ಕು ಮಾರಾಟವಾಗುತ್ತಿತ್ತು. ಈಗ ಅಲ್ಲಿಯೂ ಕಂಟೆಂಟ್‌ ಕೇಳುತ್ತಿದ್ದಾರೆ. ಪೂರ್ತಿ ಸಿನಿಮಾ ನೋಡಿದ ನಂತರವೇ ವಹಿವಾಟು ನಡೆಯುತ್ತಿದೆ. ಈ ಹಿಂದೆ ಯಶಸ್ಸಾಗಿದ್ದ ಒಂದು ವರ್ಗದ ನಾಯಕರಿಗೆ ಅವರದ್ದೇ ಆದ ಮಾರುಕಟ್ಟೆ ಇದೆ. ಆದರೆ ಅದನ್ನೇ ನಂಬಿಕೊಂಡು ಸಿನಿಮಾ ಮಾಡಬೇಡಿ, ಜನ ಇಷ್ಟಪಡುವ ಸಿನಿಮಾಗಳನ್ನೇ ಮಾಡಬೇಕು ಎಂದು ನಾನೇ ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಹೇಳಿರುವೆ. 

‘ದಿಲ್‌’ನಿಂದ ಇಲ್ಲಿತನಕ ಸಿನಿಮಾ ಪಯಣ ಹೇಗಿತ್ತು?

ನಾನು ನಟನಾಗಬೇಕು ಎಂದುಕೊಂಡಿರಲಿಲ್ಲ. ಎಲೆಕ್ಟ್ರಾನಿಕ್‌ ವಿದ್ಯಾರ್ಥಿ. ತಾಯಿ ಜೊತೆಗೆ ಬೆಳೆದವನು. ಹೀಗಾಗಿ ಅಪ್ಪನ ಸಿನಿಮಾದ ನಂಟು ನನಗೆ ಅಷ್ಟಿರಲಿಲ್ಲ. ಆದರೆ ಮೊದಲಿನಿಂದಲೂ ಆ್ಯಕ್ಷನ್‌ ಸಿನಿಮಾ ಪ್ರಿಯ. ಸಿನಿಮಾ ನೋಡುತ್ತಿದ್ದವನು ಫೈಟಿಂಗ್‌ ಮುಗಿದ ತಕ್ಷಣ ಎದ್ದು ಹೊರಟುಬಿಡುತ್ತಿದೆ. ಫೈಟರ್ ಆಗಬೇಕು ಎಂದು ಬಹಳ ಆಸೆಯಿತ್ತು. ನಮ್ಮದೇ ನಿರ್ಮಾಣದ ಸಿನಿಮಾದಲ್ಲಿ ತಂದೆ ನನ್ನನ್ನು ಯೋಧನಾಗಿ ಪರಿಚಯಿಸಿದರು. ಆದರೆ ಆ ಸಿನಿಮಾ ಪೂರ್ತಿಯಾಗಲೇ ಇಲ್ಲ. ಅದಾದ ಮೇಲೆ ಮೂರು ಸಿನಿಮಾದಲ್ಲಿ ನಟಿಸಿದೆ. ಯಾವುದೂ ತೆರೆಗೆ ಬರಲಿಲ್ಲ. ‘ದಿಲ್‌’ನಲ್ಲಿ ಮೊದಲ ಸಲ ತೆರೆಯ ಮೇಲೆ ಕಾಣಿಸಿಕೊಂಡೆ. ಸತತವಾಗಿ ಮೂರು ಸಿನಿಮಾಗಳು ಸೋತವು. ‘ನವಗ್ರಹ’ ಚಿತ್ರೋದ್ಯಮದಲ್ಲಿ ಮತ್ತೆ ನನ್ನನ್ನು ಪರಿಚಯಿಸಿದ ಸಿನಿಮಾ. ಅದಾದ ಬಳಿಕ ಒಳ್ಳೆ ದಿನಗಳು ಪ್ರಾರಂಭವಾಯಿತು. ‘ಹೋರಿ’ ಯಶಸ್ವಿಯಾಯಿತು. ‘ರಗಡ್‌’, ‘ಟೈಸನ್‌’, ದರ್ಶನ್‌ ಜೊತೆ ‘ರಾಬರ್ಟ್‌’...ನಿರ್ಮಾಪಕನಾಗುವ ಮಟ್ಟಕ್ಕೆ ಕರೆತಂದಿದೆ. 

ನಿಮ್ಮ ಮುಂದಿನ ಯೋಜನೆಗಳ ಕುರಿತು ಹೇಳಬಹುದೇ?

‘ಲಂಕಾಸುರ’ ಬಿಡುಗಡೆಗೆ ಸಿದ್ಧವಿದೆ. ನಮ್ಮದೇ ಸಂಸ್ಥೆ ನಿರ್ಮಾಣದ ಸಿನಿಮಾ. ‘ಮಾದೇವ’ ಸಿನಿಮಾ ಕೂಡ ಚಿತ್ರೀಕರಣ ಮುಗಿದಿದೆ. ಇದು ಕಂಟೆಂಟ್‌ ಆಧಾರಿತ ಸಿನಿಮಾ. ಇದರಲ್ಲಿ ನೇಣು ಹಾಕುವ ವ್ಯಕ್ತಿಯ ಪಾತ್ರ ಮಾಡಿರುವೆ. ತುಂಬ ವಿಭಿನ್ನವಾದ ಸಿನಿಮಾ. ಮತ್ತೊಂದು ಸಿನಿಮಾ ಶೀಘ್ರದಲ್ಲಿಯೇ ಘೋಷಿಸುತ್ತೇವೆ. ಅದರಲ್ಲಿ ಬೇರೆಯದೇ ರೀತಿಯ ಪಾತ್ರ ಮಾಡಿರುವೆ.

ಇಲ್ಲಿತನಕ ನೀವಂದುಕೊಂಡು ಮಾಡಲಾಗದ ಪಾತ್ರ ಯಾವುದು?

ನನಗೆ ಯಾವ ಸ್ಟಾರ್‌, ಯಾವ ಪಟ್ಟವೂ ಬೇಡ. ಹೀಗಾಗಿ ‘ಟೈಸನ್‌’ ಚಿತ್ರದ ಬಳಿಕ ಮರಿ ಟೈಗರ್‌ ಇತ್ಯಾದಿ ಪಟ್ಟಗಳನ್ನು ಸಿನಿಮಾದ ಪೋಸ್ಟರ್‌ಗಳಿಂದ ತೆಗೆಸಿರುವೆ. ನಾನೊಬ್ಬ ಪರಿಪೂರ್ಣ ನಟನಾಗಿ ಗುರುತಿಸಿಕೊಳ್ಳಬೇಕು. ಸಿನಿಮಾದಿಂದ ಸಿನಿಮಾಕ್ಕೆ ವಿಭಿನ್ನ ಪಾತ್ರಗಳನ್ನೇ ಮಾಡಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT