‘ಟಗರುಪಲ್ಯ’ ಸಿನಿಮಾ ಮೂಲಕ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದ ‘ಲವ್ಲಿಸ್ಟಾರ್’ ಪ್ರೇಮ್ ಪುತ್ರಿ ನಟಿ ಅಮೃತಾ ಪ್ರೇಮ್ ಇದೀಗ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ.
ಮಹೇಶ್ ಬಾಬು ಆ್ಯಕ್ಷನ್ ಕಟ್ ಹೇಳುತ್ತಿರುವ ಹೊಸ ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್‌ಗೆ ಜೋಡಿಯಾಗಿ ಅಮೃತ ನಟಿಸಲಿದ್ದಾರೆ. ಮಹೇಶ್ ಬಾಬು ಸಾರಥ್ಯದಲ್ಲಿ ನಡೆದ 15 ದಿನಗಳ ಕಾರ್ಯಾಗಾರದಲ್ಲಿ ನಾಯಕ ರಕ್ಷಿತ್, ನಾಯಕಿ ಅಮೃತಾ ಪ್ರೇಮ್ ಸೇರಿದಂತೆ ಇಡೀ ತಂಡ ಭಾಗಿಯಾಗಿದ್ದು, ಚಿತ್ರದ ಚಿತ್ರೀಕರಣವೂ ಆರಂಭಗೊಂಡಿದೆ.
ಕಿರುಚಿತ್ರ, ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸ್ಮೈಲ್ ಗುರು ರಕ್ಷಿತ್ ನಾಯಕನಾಗಿ ಚಂದನವನಕ್ಕೆ ಈ ಸಿನಿಮಾ ಮೂಲಕ ಹೆಜ್ಜೆ ಇಡುತ್ತಿದ್ದಾರೆ. ‘ಆಕಾಶ್’, ‘ಅರಸು’ ಮುಂತಾದ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಮಹೇಶ್ ಬಾಬು ಮತ್ತೊಂದು ಯೂತ್‌ಫುಲ್ ಎಂಟರ್‌ಟೈನರ್ ಕಥಾಹಂದರದ ಸಿನಿಮಾದೊಂದಿಗೆ ಬರುತ್ತಿದ್ದಾರೆ. ಚಿತ್ರದಲ್ಲಿ ‘ವೀರ ಮದಕರಿ’ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ ಜೆರುಶಾ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಶೀರ್ಷಿಕೆ ಇನ್ನಷ್ಟೇ ಅಂತಿಮಗೊಳ್ಳಬೇಕಾಗಿದೆ. ಎಂಎಂಎಂ ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಸತ್ಯ ಅವರ ಛಾಯಾಚಿತ್ರಗ್ರಹಣ, ಸತೀಶ್ ಚಂದ್ರಯ್ಯ ಅವರ ಸಂಕಲನ ಚಿತ್ರಕ್ಕಿದೆ. ನಾಯಕ ರಕ್ಷಿತ್ ಚಿತ್ರಕ್ಕೆ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಇದೆ.