ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಕೋವಿಡ್‌ನಿಂದ ನಿಧನ 

Last Updated 26 ಏಪ್ರಿಲ್ 2021, 19:47 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ನಿಂದ ಬಳಲುತ್ತಿದ್ದ ಚಿತ್ರ ನಿರ್ಮಾಪಕ, ನಟಿ ಮಾಲಾಶ್ರೀ ಅವರ ಪತಿ ರಾಮು (52) ಅವರು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ನಿಧನಹೊಂದಿದರು.

ಸೋಂಕು ಪೀಡಿತರಾಗಿದ್ದ ಅವರು ಏ. 24ರಂದು ನಗರದ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಮೂಲತಃ ಕುಣಿಗಲ್‌ನವರಾಗಿದ್ದ ರಾಮು ಅವರು ದೊಡ್ಡ ಬಜೆಟ್‌ನ ನಿರ್ಮಾಪಕರು (ಕೋಟಿ ರಾಮು) ಎಂದೇ ಖ್ಯಾತರಾಗಿದ್ದವರು. ಅವರಿಗೆ ಪತ್ನಿ ಮಾಲಾಶ್ರೀ, ಪುತ್ರಿ ಅನನ್ಯಾ, ಪುತ್ರ ಆರ್ಯನ್‌ ಇದ್ದಾರೆ.

ಕನ್ನಡದಲ್ಲಿ ಅದ್ದೂರಿ ಬಜೆಟ್‌ನ ಚಿತ್ರಗಳನ್ನು ನೀಡುವ ಮೂಲಕ ಕನ್ನಡ ಚಿತ್ರರಂಗವನ್ನು ಇತರ ಭಾಷೆಯವರೂ ಕೂಡಾ ಗಮನಹರಿಸುವ ಮಟ್ಟಕ್ಕೆ ಹಲವಾರು ಪ್ರಯೋಗಗಳನ್ನು ನಡೆಸಿದ್ದರು. ಆರಂಭದಲ್ಲಿ ಕನ್ನಡ ಚಿತ್ರಗಳ ಹಂಚಿಕೆದಾರರಾಗಿ ಕೆಲಸ ಮಾಡಿದ್ದ ಅವರು, ಮುಂದೆ ‘ಗೋಲಿಬಾರ್‌’ (1993) ಚಿತ್ರ ನಿರ್ಮಿಸುವ ಮೂಲಕ ಚಿತ್ರ ನಿರ್ಮಾಣ ವಿಭಾಗಕ್ಕೆ ಕಾಲಿಟ್ಟರು.

‘ಲಾಕಪ್‌ ಡೆತ್‌’, ‘ಎ.ಕೆ. 47’, ‘ಕಲಾಸಿಪಾಳ್ಯ’, ‘ರಾಕ್ಷಸ’, ‘ಶಿವಾಜಿನಗರ’, ‘ಗೂಳಿ’, ‘ಕಿಚ್ಚ’, ‘ಹಾಲಿವುಡ್’, ‘ಚಾಮುಂಡಿ’, ‘99’ ಅವರ (ರಾಮು ಎಂಟರ್‌ಪ್ರೈಸಸ್‌) ನಿರ್ಮಾಣದಲ್ಲಿ ದಾಖಲೆ ನಿರ್ಮಿಸಿದ ಚಿತ್ರಗಳು. ಒಟ್ಟು 37 ಚಿತ್ರಗಳನ್ನು ಅವರು ನಿರ್ಮಿಸಿದ್ದಾರೆ. ಒಂದು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದರು. ರಾಮು ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

ಕನ್ನಡ ಚಿತ್ರರಂಗ ಒಬ್ಬ ಅದ್ಭುತ ನಿರ್ಮಾಪಕನನ್ನು ಕಳೆದುಕೊಂಡಿದೆ. ಎಲ್ಲರನ್ನೂ ಪ್ರೀತಿಸುವ, ಮೃದುಭಾಷಿ ರಾಮು ಅವರು ಇನ್ನಿಲ್ಲ ಎಂದರೆ ನಂಬಲಾಗುತ್ತಿಲ್ಲ. ಕೋವಿಡ್‌ ನಿಯಮಗಳ ಹಿನ್ನೆಲೆಯಲ್ಲಿ ಅಂತಿಮ ದರ್ಶನವನ್ನೂ ಮಾಡಲಾಗುತ್ತಿಲ್ಲ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಸಿಗಲಿ ಎಂದು ಚಿತ್ರನಟರಾದ ಪುನೀತ್‌ ರಾಜ್‌ಕುಮಾರ್‌, ಶ್ರೀಮುರಳಿ, ಸಂಸದೆ ಸುಮಲತಾ ಅಂಬರೀಷ್‌ ಸಹಿತ ಹಲವರು ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT