ಸನಂ ತನನಂ

7

ಸನಂ ತನನಂ

Published:
Updated:

ಆ ಹುಡುಗಿ ಎಂಜಿನಿಯರಿಂಗ್‌ ಓದಿದ್ದು ಇಂಗ್ಲೆಂಡ್‌ನಲ್ಲಿ. ಒಮ್ಮೆ ಶ್ರೀಲಂಕಾದ ಸಾಕ್ಷ್ಯಚಿತ್ರವೊಂದರಲ್ಲಿ ನಟಿಸಲು ಆಕೆಗೆ ಅವಕಾಶ ಸಿಕ್ಕಿತು. ಅದರ ಚಿತ್ರೀಕರಣ ನಡೆದಿದ್ದು ಬ್ರಿಟನ್‌ನಲ್ಲಿಯೇ. ಸಾಫ್ಟ್‌ವೇರ್‌ ಕ್ಷೇತ್ರದ‌ತ್ತ ಮುಖ ಮಾಡಲು ಬಯಸಿದ್ದ ಆಕೆಯ ದೃಷ್ಟಿ ಮಸೂರದತ್ತ ನೆಟ್ಟಿತು. ಸ್ನೇಹಿತರೊಟ್ಟಿಗೆ ಪ್ರಾಯೋಗಿಕವಾಗಿ ಕಿರುಚಿತ್ರಗಳ ನಿರ್ಮಾಣಕ್ಕಿಳಿದರು. ಫೇಸ್‌ಬುಕ್‌ನಲ್ಲಿ ಅವುಗಳನ್ನು ಅಪ್‌ಲೋಡ್‌ ಮಾಡುತ್ತಾ ನಟನೆಯ ಕನಸೆಂಬೋ ಕುದುರೆಯ ಬೆನ್ನೇರಿ ಕುಳಿತು ಬಿಟ್ಟಳು.

–ಬಹುಭಾಷಾ ನಟಿ ಸನಂ ಶೆಟ್ಟಿ ಸಿನಿಮಾ ಕ್ಷೇತ್ರದತ್ತ ಹೊರಳಿದ್ದು ಹೀಗೆ. ತಮಿಳು, ತೆಲುಗು, ಮಲಯಾಳ ಚಿತ್ರಗಳಲ್ಲಿ ನಟಿಸಿ ಈಗ ‘ಅರ್ಥವ’ ಚಿತ್ರದ ಮೂಲಕ ಚಂದನವನದಲ್ಲೂ ಛಾಪು ಮೂಡಿಸಲು ಹೊರಟಿದ್ದಾರೆ. ಇದು ಕನ್ನಡದಲ್ಲಿ ಅವರ ಮೊದಲ ಚಿತ್ರ.

ಸನಂ ಹುಟ್ಟಿದ್ದು ಬೆಂಗಳೂರಿನಲ್ಲಿ. ಆದರೆ, ಅವರ ಕುಟುಂಬ ನೆಲೆನಿಂತಿದ್ದು ಚೆನ್ನೈನಲ್ಲಿ. ಎಂಜಿನಿಯರಿಂಗ್‌ ಓದುತ್ತಿರುವಾಗಲೇ ಮಾಡೆಲಿಂಗ್‌ ಜಗತ್ತಿಗೆ ಕಾಲಿಟ್ಟ ಅವರು, ಈಗ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ.

‘ನಾನು ಮತ್ತು ನನ್ನ ಸ್ನೇಹಿತರು ತಯಾರಿಸಿದ ಕಿರುಚಿತ್ರಗಳು ಫೇಸ್‌ಬುಕ್‌ನ ಗೋಡೆಯ ಮೇಲೆ ರಾರಾಜಿಸುತ್ತಿದ್ದವು. ಅದು ನನಗೆ ಹವ್ಯಾಸವಾಗಿ ಹೋಯಿತು. ಇವುಗಳನ್ನು ನೋಡಿದ ತಮಿಳಿನ ‘ಅಂಬುಲಿ’ ಚಿತ್ರತಂಡ ಸಿನಿಮಾದಲ್ಲಿ ನಟಿಸುವಂತೆ ಫೇಸ್‌ಬುಕ್‌ ಮೂಲಕವೇ ಕೋರಿಕೆ ಇಟ್ಟಿತು’ ಎಂದು ತಾವು ನಟನಾ ಕ್ಷೇತ್ರಕ್ಕೆ ಪ್ರವೇಶಿಸಿದ ಬಗೆಯನ್ನು ವಿವರಿಸುತ್ತಾರೆ ಅವರು.

ಅವರು ಎಂದಿಗೂ ತಾನು ನಟಿಯಾಗಬೇಕು ಎಂದು ಯೋಚಿಸಿರಲಿಲ್ಲವಂತೆ. ಕಿರುಚಿತ್ರಗಳಲ್ಲಿ ಕಾಣಿಸಿಕೊಂಡ ಬಳಿಕವಷ್ಟೇ ನಟನೆಯತ್ತ ಅವರ ಆಸಕ್ತಿ ಹೊರಳಿತು. ಚಿತ್ರದಲ್ಲಿ ನಾಯಕನಿಗೆ ಸಿಗುವಷ್ಟೇ ಪ್ರಾಶಸ್ತ್ಯ ನಾಯಕಿಗೂ ಸಿಗಬೇಕು. ಅಂತಹ ಚಿತ್ರಗಳಿಗೆ ಯಶಸ್ಸು ಖಚಿತ ಎನ್ನುವುದು ಅವರ ಅನಿಸಿಕೆ. ‘ನನ್ನೊಳಗಿನ ನಟನೆಯನ್ನು ಸಾಬೀತುಪಡಿಸಲು ಅವಕಾಶ ಇರಬೇಕು. ಅಂತಹ ಪಾತ್ರಗಳಿಗಷ್ಟೇ ನನ್ನ ಮೊದಲ ಆದ್ಯತೆ. ಆ ಪಾತ್ರಕ್ಕೆ ನ್ಯಾಯ ಒದಗಿಸಲು ನಾನು ಸದಾ ಸಿದ್ಧ’ ಎನ್ನುತ್ತಾರೆ.

ಚಂದನವನ ಮತ್ತು ಇತರೇ ಚಿತ್ರರಂಗದ ನಡುವೆ ಸಾಕಷ್ಟು ವ್ಯತ್ಯಾಸ ಇರುವುದನ್ನು ಅವರು ಒಪ್ಪುತ್ತಾರೆ. ಆದರೆ, ಕನ್ನಡ ಚಿತ್ರರಂಗದ ಕೌಟುಂಬಿಕ ವ್ಯವಸ್ಥೆ ಕಂಡಾಗ ಅವರಿಗೆ ಎಲ್ಲಿಲ್ಲದ ಖುಷಿಯಂತೆ.

‘ಮಲಯಾಳ ಚಿತ್ರರಂಗದಲ್ಲಿ ಶಿಸ್ತುಬದ್ಧತೆಯಿದೆ. ಅಲ್ಲಿ ಚಿತ್ರವೊಂದು ಮುಹೂರ್ತ ನೆರವೇರಿದ ಬಳಿಕ ಹಂತ ಹಂತವಾಗಿ ಚಿತ್ರೀಕರಣ ಪೂರೈಸಿ ನಿರ್ದಿಷ್ಟ ದಿನದಂದೇ ತೆರೆಕಾಣುತ್ತದೆ. ತಮಿಳಿನಲ್ಲಿ ಚಿತ್ರಕಥೆಗೆ ಹೆಚ್ಚು ಮಹತ್ವ ಕೊಡುತ್ತಾರೆ. ಕಥೆ ಗಟ್ಟಿಯಾಗಿದ್ದರೆ ಶ್ರೇಷ್ಠ ನಟ, ನಟಿಗೆ ಸಿಗುವಷ್ಟೇ ಪ್ರಾಮುಖ್ಯತೆ ಹೊಸಬರಿಗೂ ಸಿಗುತ್ತದೆ. ತೆಲುಗಿನದ್ದು ಬಜೆಟ್‌ನ ಲೆಕ್ಕಾಚಾರ. ಅಲ್ಲಿ ದೊಡ್ಡ ಬಜೆಟ್‌ ಚಿತ್ರಗಳಿಗೆ ಒತ್ತು ಕೊಡುತ್ತಾರೆ. ನಟಿಯರಿಗೆ ರಾಣಿಯರಿಗೆ ನೀಡುವಂತಹ ಆತಿಥ್ಯ ಲಭಿಸುತ್ತದೆ. ಆದರೆ, ಕನ್ನಡದಲ್ಲಿನ ಕುಟುಂಬತನ ನನಗಿಷ್ಟ. ಸಿನಿಮಾ ಉತ್ತಮವಾಗಿ ಮೂಡಿಬರಲು ಎಲ್ಲರಿಗೂ ಪ್ರೋತ್ಸಾಹ, ಸಹಕಾರ ನೀಡುವ ಪರಿ ಅದ್ಭುತ’ ಎಂದು ಬೆರಗು ನೋಟ ಬೀರುತ್ತಾರೆ.

ಎಂಜಿನಿಯರಿಂಗ್‌ ವೃತ್ತಿಗಿಂತ ಅವರಿಗೆ ನಟನೆಯಲ್ಲಿಯೇ ಈಗ ಅಚ್ಚುಮೆಚ್ಚು. ಮಹಿಳಾ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಹಂಬಲ ಅವರದು. ‘ಎಲ್ಲ ನಟಿಯರಿಗೂ ಈ ಆಸೆ ಇರುತ್ತದೆ. ಇದರಿಂದ ನಾನೂ ಹೊರತಲ್ಲ. ತಮಿಳಿನ ‘ಮ್ಯಾಗಿ’ ಚಿತ್ರದಲ್ಲಿ ಅಂತಹ ಪಾತ್ರ ನಿರ್ವಹಿಸುತ್ತಿದ್ದೇನೆ. ಆ್ಯಕ್ಷನ್‌ ಮತ್ತು ಥ್ರಿಲ್ಲರ್‌ ಚಿತ್ರ ಇದು. ಸಾಮಾಜಿಕ ಸಂದೇಶವಿಟ್ಟು ನಿರ್ಮಿಸಿರುವ ಸಿನಿಮಾ ಇದಲ್ಲ. ಕಮರ್ಷಿಯಲ್ ಅಂಶಗಳ ಸುತ್ತ ಹೆಣೆದಿರುವ ಕಥೆ ಇದಾಗಿದೆ’ ಎಂಬುದು ಅವರ ವಿವರಣೆ. 

‘ಅರ್ಥವ’ ಚಿತ್ರದಲ್ಲಿ ಅವರು ಪತ್ರಿಕೋದ್ಯಮ ಪದವಿ ವಿದ್ಯಾರ್ಥಿನಿ. ‘ಚಿತ್ರದಲ್ಲಿ ನನ್ನದು ಬಬ್ಲಿ ಹುಡುಗಿಯ ಪಾತ್ರ. ನಾಯಕನಿಗೆ ಸಮಾನಾಂತರವಾದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಖುಷಿಯಿದೆ. ಕನ್ನಡದ ಚಿತ್ರಗಳಲ್ಲಿ ನಟಿಸಲಿಲ್ಲ ಎಂಬ ಕೊರಗಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ಹಲವು ಹಂತಗಳಲ್ಲಿ ಚಿತ್ರೀಕರಣ ನಡೆಯಿತು. ಹಾಗಾಗಿ, ಪ್ರತಿಯೊಂದು ಸ್ಥಳವೂ ನೆನಪಿನಲ್ಲಿ ಉಳಿದಿದೆ’ ಎಂದು ಖುಷಿ ಹಂಚಿಕೊಂಡರು.

ಕನ್ನಡದಲ್ಲಿ ಅವರಿಗೆ ಮಂಜುನಾಥ್‌ ಶೆಟ್ಟಿ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುವ ಅವಕಾಶ ಬಂದಿದೆ. ಇದು ಮಾತುಕತೆಯ ಹಂತದಲ್ಲಿದೆ. ನಾಯಕಿ ಪ್ರಧಾನ ಚಿತ್ರ ಇದಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !