ಐಶಾನಿ ಹೊಸ ನಮೂನಿ...

7

ಐಶಾನಿ ಹೊಸ ನಮೂನಿ...

Published:
Updated:
Deccan Herald

ನಟಿ ಐಶಾನಿ ಶೆಟ್ಟಿ ಮತ್ತೆ ಬಂದಿದ್ದಾರೆ! ಎರಡು ವರ್ಷಗಳ ಅಂತರದ ನಡುವೆ ಅವರು ‘ನಡುವೆ ಅಂತರವಿರಲಿ’ ಎಂಬ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಅವರ ಶೈಕ್ಷಣಿಕ ಅರ್ಹತೆಯ ಪಟ್ಟಿಯಲ್ಲಿ ‘ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ’ ಸ್ನಾತಕೋತ್ತರ ಪದವಿಯೂ ತಾವು ಪಡೆದಿದೆ. 

‘ವಾಸ್ತು ಪ್ರಕಾರ’ ಚಿತ್ರದಲ್ಲಿ ತುಂಟಿಯಾಗಿ, ‘ರಾಕೆಟ್‌’ ಚಿತ್ರದಲ್ಲಿ ಮುದ್ದು ಮುಖದ ಮುಗ್ಧೆಯಾಗಿ ಮಿಂಚಿದ್ದ ಐಶಾನಿ ಇದ್ದಕ್ಕಿದ್ದ ಹಾಗೆ, ಮಿಂಚಿನಂತೆಯೇ ಮಾಯವಾಗಿಬಿಟ್ಟಿದ್ದರು. ನಡುವೆ ಒಬ್ಬ ‘ಕಾಜಿ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಅದಕ್ಕೆ 2018ರ ಸೈಮಾ ಕಿರುಚಿತ್ರ ಪ್ರಶಸ್ತಿಯೂ ಸಂದಿದೆ. ಆದರೆ, ಇದೀಗ ಪೂರ್ಣಪ್ರಮಾಣದಲ್ಲಿ ನಟಿಯಾಗಿ ತೊಡಗಿಸಿಕೊಳ್ಳುವ ನಿರ್ಧಾರದೊಂದಿಗೆ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ಈ ಹೊಸ ಶುರುವಾತಿಗೆ ‘ರವೀನ್‌ ನಿರ್ದೇಶನದ ‘ನಡುವೆ ಅಂತರವಿರಲಿ’ ಸಿನಿಮಾ ಒದಗಿಬಂದಿದೆ.

ಈ ಎರಡು ವರ್ಷಗಳ ಅಂತರ ಮತ್ತು ತಾವು ಮುಗಿಸಿದ ಕೋರ್ಸ್‌ ಕುರಿತು ಅವರು ಹೇಳುವುದು ಹೀಗೆ: ‘ನಾನು ವಾಸ್ತು ಪ್ರಕಾರ ಮತ್ತು ರಾಕೆಟ್‌ ಸಿನಿಮಾಗಳಲ್ಲಿ ನಟಿಸುವಾಗ ಪದವಿ ವ್ಯಾಸಂಗ ಮಾಡುತ್ತಿದ್ದೆ. ಕಾಲೇಜಿಗೆ ಹೋಗುತ್ತಲೇ ಬಿಡುವಿನಲ್ಲಿ ಮತ್ತು ರಜೆ ಹಾಕಿ ನಟಿಸುತ್ತಿದ್ದೆ. ಆದರೆ, ಸ್ನಾತಕೋತ್ತರ ಪದವಿ ಮಾಡುವಾಗ ಅದರಲ್ಲಿಯೇ ಸಂಪೂರ್ಣ ತೊಡಗಿಕೊಳ್ಳಬೇಕು ಎಂಬ ಕಾರಣಕ್ಕೆ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂ.ಎ. ಮಾಡಿದ್ದರಿಂದ ನನ್ನ ವ್ಯಕ್ತಿತ್ವ ಇನ್ನಷ್ಟು ಗಟ್ಟಿಯಾಗಿದೆ. ಈಗ ನಾನು ಇನ್ನಷ್ಟು ಪ್ರಬುದ್ಧಳಾಗಿದ್ದೇನೆ. ಸಮಾಜವನ್ನು, ಅಲ್ಲಿನ ಸಮಸ್ಯೆಗಳನ್ನು ನಾನು ನೋಡುವ, ಗ್ರಹಿಸುವ ರೀತಿ ಬದಲಾಗಿದೆ. ಈ ಕಾರಣಕ್ಕಾಗಿಯೇ ನಾನು ‘ಕಾಜಿ’ ಎಂಬ ಕಿರುಚಿತ್ರವನ್ನೂ ಮಾಡಿದೆ’ ಎಂದು ವಿವರಿಸುತ್ತಾರೆ.

ಇದೀಗ ಅವರ ವಿದ್ಯಾರ್ಥಿ ಜೀವನ ಮುಗಿದಿದೆ. ‘ಚಿನ್ನದ ದಿನಗಳು’ ಮುಗಿದಿರುವ ಕುರಿತು ವಿಷಾದಕ್ಕಿಂತ ಮುಂದಿನ ಭವಿಷ್ಯವನ್ನು ಚಿನ್ನವಾಗಿಸಿಕೊಳ್ಳುವ ಕನಸೇ ಅವರಲ್ಲಿ ಹೆಚ್ಚು ವ್ಯಕ್ತವಾಗುತ್ತದೆ. ‘ಇದುವರೆಗೆ ನನಗೆ ನಟನೆ ಎನ್ನುವುದು ಒಂದು ಹವ್ಯಾಸವಾಗಿತ್ತು. ವಿದ್ಯಾಭ್ಯಾಸ ಮುಖ್ಯವಾಗಿತ್ತು. ಆದರೆ, ಇನ್ನು ಮೇಲೆ ಹಾಗಲ್ಲ. ನಾನು ಒಳ್ಳೆಯ ನಟಿಯಾಗಿ ಗುರ್ತಿಸಿಕೊಳ್ಳಬೇಕು ಎಂಬ ನನ್ನ ಬಹುದಿನದ ಕನಸನ್ನು ನನಸಾಗಿಸಿಕೊಳ್ಳುವ ಗಳಿಗೆ ನನ್ನೆದುರು ಇದೆ. ಅದರತ್ತ ಇನ್ನಷ್ಟು ಶ್ರದ್ಧೆಯಿಂದ ತೊಡಗಿಕೊಳ್ಳಬೇಕಿದೆ’ ಎಂದು ಹೇಳುವಾಗ ಅವರ ಮುದ್ದು ಮುಖಕ್ಕೆ ಕೊಂಚ ಭಾರವೆನಿಸುವಷ್ಟು ಗಾಂಭೀರ್ಯದ ಗೆರೆಗಳು ಎದ್ದು ಕಾಣುತ್ತವೆ.

ವಿದ್ಯಾಭ್ಯಾಸದ ನಡುವೆಯೇ ಕಥೆ ತುಂಬ ಇಷ್ಟವಾಯ್ತು ಎನ್ನುವ ಕಾರಣಕ್ಕೆ ಅವರು ‘ನಡುವೆ ಅಂತರವಿರಲಿ’ ಸಿನಿಮಾ ಒಪ್ಪಿಕೊಂಡು ನಟಿಸಿದ್ದಾರೆ. ಆ ಚಿತ್ರ ಈಗಾಗಲೇ ಪೂರ್ತಿಯಾಗಿದ್ದು ಬಿಡುಗಡೆಗೆ ಸಜ್ಜಾಗಿದೆ. ‘ಮೊದಲು ರವೀನ್ ನನ್ನ ಬಳಿ ಬಂದು ಸಿನಿಮಾದಲ್ಲಿ ನಟಿಸಿ ಎಂದಾಗ ಒಪ್ಪಿಕೊಂಡಿರಲಿಲ್ಲ. ಆದರೆ, ಒತ್ತಾಯ ಮಾಡಿ ಕಥೆ ಹೇಳಿದರು. ಕಥೆ ಕೇಳಿದ ಮೇಲೆ ಈ ಚಿತ್ರದಲ್ಲಿ ಕಷ್ಟಪಟ್ಟಾದರೂ ನಾನು ನಟಿಸಲೇಬೇಕು ಅನಿಸಿತು. ಇದು ಮಾಮೂಲಿ ಜನಪ್ರಿಯ ಮಾದರಿಯ ಸಿನಿಮಾ ಅಲ್ಲ. ತುಂಬ ಕ್ಯೂಟ್‌ ಲವ್‌ ಸ್ಟೋರಿ. ಹದಿಹರೆಯದಲ್ಲಿ ನಮಗೆ ಗೊತ್ತಿಲ್ಲದೆಯೇ ನಮ್ಮ ವ್ಯಕ್ತಿತ್ವದಲ್ಲಿ ಎಂಥ ಛಾಯೆಗಳು ಸೇರಿಕೊಳ್ಳುತ್ತವೆ. ಅದರ ಪರಿಣಾಮ ಏನಾಗುತ್ತದೆ ಎನ್ನುವುದನ್ನು ನಿರ್ದೇಶಕರು ಹೇಳಹೊರಟಿದ್ದಾರೆ. ಹರೆಯದವರೊಟ್ಟಿಗೆ ಹಿರಿಯರೂ ನೋಡಬೇಕಾದ ಸಿನಿಮಾ ಇದು’ ಎಂದು ಅವರು ಶಿಫಾರಸು ಮಾಡುತ್ತಾರೆ.

ಮುಂದೆ ಯಾವ ರೀತಿಯ ಪಾತ್ರಗಳಲ್ಲಿ ನಟಿಸುವ ಆಸೆ ಇದೆ ಎಂದು ಕೇಳಿದರೆ ತಮ್ಮ ಹಿಂದಿನ ಚಿತ್ರಗಳತ್ತ ಅವರು ಬೊಟ್ಟು ಮಾಡುತ್ತಾರೆ. ‘ನಾನು ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳದೆ ಎರಡು ವರ್ಷ ಆಯ್ತು. ಆದರೂ ಜನ ನನ್ನನ್ನು ಮರೆತಿಲ್ಲ. ಅದಕ್ಕೆ ಕಾರಣ ಹಿಂದಿನ ಎರಡು ಸಿನಿಮಾಗಳಲ್ಲಿನ ನನ್ನ ಪಾತ್ರ. ‘ವಾಸ್ತು ಪ್ರಕಾರ’ ಮತ್ತು ‘ರಾಕೆಟ್‌’ ಎರಡೂ ಸಿನಿಮಾಗಳಲ್ಲಿ ನನ್ನ ಪಾತ್ರಕ್ಕೆ ಸಾಕಷ್ಟು ಮಹತ್ವ ಇತ್ತು. ಒಂದು ಡಾನ್ಸ್‌, ಮೂರು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಪಾತ್ರದಲ್ಲಿ ನಾನು ನಟಿಸಲಾರೆ. ನನಗೆ ನಾಯಕಿ ಆಗಬೇಕು, ಸ್ಟಾರ್‌ ಆಗಬೇಕು ಎಂಬ ಹಟ ಇಲ್ಲ. ಒಳ್ಳೆಯ ನಟಿ ಎನಿಸಿಕೊಳ್ಳಬೇಕು ಎಂಬ ಹಂಬಲ ಇದೆ. ಆ ಹಂಬಲಕ್ಕೆ ಇಂಬು ಕೊಡುವ ಪಾತ್ರಗಳಲ್ಲಿಯೇ ಮುಂದೆಯೂ ಕಾಣಿಸಿಕೊಳ್ಳುತ್ತೇನೆ’ ಎಂದು ಸ್ಪಷ್ಟವಾಗಿಯೇ ನುಡಿಯುತ್ತಾರೆ. 

ಸದ್ಯಕ್ಕೆ ನಟನೆಯೇ ಅವರ ಪ್ರಥಮ ಆದ್ಯತೆ ಆಗಿದ್ದರೂ ಬರವಣಿಗೆಯ ಹವ್ಯಾಸವೂ ಅವರಿಗಿದೆ. ನಿರ್ದೇಶನದ ಕನಸನ್ನೂ ಕಣ್ಣಲ್ಲಿ ತುಂಬಿಕೊಂಡಿದ್ದಾರೆ.

‘ಕಳೆದ ಎರಡು ವರ್ಷದಲ್ಲಿ ನಾನು ನಟಿಸದಿದ್ದರೂ ಬರವಣಿಗೆಯನ್ನು ಬಿಟ್ಟಿರಲಿಲ್ಲ. ಎರಡು ಸಿನಿಮಾಗಳ ಸ್ಕ್ರಿಪ್ಟ್‌ ಬರೆದಿದ್ದೇನೆ. ಅದನ್ನು ಇನ್ನಷ್ಟು ತಿದ್ದಬೇಕಿದೆ. ‘ಕಾಜಿ’ ಕಿರುಚಿತ್ರ ನನಗೆ ಒಳ್ಳೆಯ ಅನುಭವ ಕೊಟ್ಟಿದೆ. ನಿರ್ದೇಶನ ಮಾಡಬೇಕು ಎಂಬ ಆಸೆಯನ್ನೂ ಹುಟ್ಟಿಸಿದೆ. ಆದರೆ, ನಿರ್ದೇಶನ ಮಾಡಲು ನಾನಿನ್ನೂ ಕಲಿತುಕೊಳ್ಳುವುದು ಬಹಳೇ ಇದೆ. ತಾಂತ್ರಿಕ ಜ್ಞಾನವನ್ನೂ ಗಳಿಸಿಕೊಂಡ ಮೇಲೆ ಖಂಡಿತ ನಿರ್ದೇಶನ ಮಾಡುತ್ತೇನೆ’ ಎಂದು ಖಚಿತವಾಗಿ ನುಡಿಯುವ ಐಶಾನಿ, ಮಹಿಳಾ ನಿರ್ದೇಶಕಿಯರಿಗಿರುವ ಸವಾಲಿನ ಕುರಿತೂ ಗಮನ ಸೆಳೆಯುತ್ತಾರೆ.

‘ನಮ್ಮಲ್ಲಿ ಮಹಿಳಾ ನಿರ್ದೇಶಕರಿಯರ ಸಂಖ್ಯೆ ತುಂಬ ಕಮ್ಮಿ. ಹೆಣ್ಣೊಬ್ಬಳು ನಿರ್ದೇಶಕಿಯಾಗಿ ಗೆಲ್ಲುವುದು ಕಷ್ಟ ಎನ್ನುವ ವಾತಾವರಣ ಇದೆ. ಅದನ್ನು ಸುಳ್ಳು ಮಾಡಬೇಕು. ಆ ಕೊರತೆಯನ್ನು ನೀಗಬೇಕು ಎಂಬುದು ನನ್ನ ಆಸೆ. ಬದಲಾವಣೆ ಒಮ್ಮಿಂದೊಮ್ಮೆಲೇ ಆಗುವುದಿಲ್ಲ. ನಮ್ಮಿಂದೇನಾಗುತ್ತದೆಯೋ ಅದನ್ನು ನಾವು ಮಾಡಬೇಕು. ನನ್ನಂತೆ ಹಲವರು ಯೋಚಿಸಿದರೆ ಹನಿ ಹನಿ ಗೂಡಿ ಹಳ್ಳವಾಗುವ ಹಾಗೆಯೇ ಚಿತ್ರರಂಗದ ಪರಿಸ್ಥಿತಿ ಬದಲಾಗಬಹುದು’ ಎಂದ ಐಶಾನಿ ಮಾತುಗಳಲ್ಲಿ, ಚಿತ್ರರಂಗದ ಭವಿಷ್ಯದ ಜತೆಗೆ ತಮ್ಮ ವೃತ್ತಿಜೀವನದ ದಿಕ್ಸೂಚಿಯ ಸೂಚನೆಗಳೂ ಇದ್ದಂತಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !