ಅಂಬಿ ಪುತ್ರನ ಸಿನಿಮಾ 31ಕ್ಕೆ ತೆರೆಗೆ

ಬುಧವಾರ, ಜೂನ್ 26, 2019
28 °C

ಅಂಬಿ ಪುತ್ರನ ಸಿನಿಮಾ 31ಕ್ಕೆ ತೆರೆಗೆ

Published:
Updated:

ಅಂಬರೀಷ್‌ ಪುತ್ರ ಅಭಿಷೇಕ್‌ ನಟಿಸಿರುವ ಚೊಚ್ಚಿಲ ಸಿನಿಮಾ ‘ಅಮರ್‌’ ಇದೇ 31ರಂದು ತೆರೆಗೆ ಬರಲಿದೆ. ರಾಜ್ಯದಾದ್ಯಂತ ಸುಮಾರು 300 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಸಿನಿಮಾ ಶುರು ಮಾಡಿದ ಒಂದು ವರ್ಷದ ನಂತರ ಈ ಸುದ್ದಿ ಹಂಚಿಕೊಳ್ಳಲು ನಿರ್ದೇಶಕ ನಾಗಶೇಖರ್‌ ಚಿತ್ರತಂಡದೊಂದಿಗೆ ಶನಿವಾರ ಸುದ್ದಿಗೋಷ್ಠಿಗೆ ಹಾಜರಾಗಿದ್ದರು. 

ಈ ಹಿಂದೆ ಎರಡು ಬಾರಿ ‘ಅಮರ್‌’ ಸಿನಿಮಾದ ಪತ್ರಿಕಾಗೋಷ್ಠಿ ರದ್ದುಪಡಿಸಿದ್ದಕ್ಕೆ ‘ಪೊಲಿಟಿಕಲ್‌ ಫ್ರೆಸರ್‌ ಕಾರಣವಲ್ಲ, ನಾವೆಲ್ಲ ತುಂಬಾ ಬ್ಯುಸಿಯಾಗಿದ್ದೆವು’ ಎನ್ನುವ ಸಮಜಾಯಿಷಿ ಕೊಡುತ್ತಲೇ ಮಾತಿಗೆ ಇಳಿದಿರು ನಾಗಶೇಖರ್‌.

ಅವರ ಹಿಂದಿನ ಮೂರು ಹಿಟ್‌ ಸಿನಿಮಾಗಳಿಗಿಂತ ಈ ಸಿನಿಮಾವನ್ನು ಅತೀ ಹೆಚ್ಚು ಮುತುವರ್ಜಿಯಿಂದ ಮಾಡಿರುವ ವಿಶ್ವಾಸ ಅವರ ಮಾತು ಮತ್ತು ಮುಖದಲ್ಲಿ ಕಾಣಿಸುತ್ತಿತ್ತು. ‘ಹಿಂದಿನ ನನ್ನ ಮೂರು ಹಿಟ್‌ ಸಿನಿಮಾಗಳಿಗಿಂತ ಅಮರ್‌ 50 ಪಟ್ಟು ಮೇಲಿದೆ. ಖಂಡಿತಾ ಸೂಪರ್‌ ಹಿಟ್‌ ಆಗುತ್ತದೆ’ ಎನ್ನುವ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

1990ರ ಅವಧಿಯಲ್ಲಿ ಪಂಚಭಾಷೆಯ ನಟಿಯೊಬ್ಬರ ಬದುಕಿನಲ್ಲಿ ನಡೆದ ನಿಜ ಘಟನೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ ಎನ್ನುವ ಗುಟ್ಟು ಬಿಟ್ಟುಕೊಟ್ಟರು. ಆದರೆ, ಆ ನಟಿ ಯಾರೆನ್ನುವ ಗುಟ್ಟನ್ನು ಮಾತ್ರ ಅವರು ಬಹಿರಂಗಪಡಿಸಲಿಲ್ಲ. ಅಭಿ ಮತ್ತು ತಾನ್ಯಾ ಜೋಡಿಯು ‘ಪ್ರೇಮಲೋಕ’ದಲ್ಲಿ ಜೂಹಿ ಚಾವ್ಲಾ ಮತ್ತು ರವಿಚಂದ್ರನ್‌ ಮಾಡಿದ ಮೋಡಿಯನ್ನು ಮರುಕಳಿಸಲಿದೆದೆ. ಇದೊಂದು ಲವ್‌, ರೊಮ್ಯಾಂಟಿಕ್‌ ಸಿನಿಮಾ. ಇದರಲ್ಲಿ ಆಕ್ಷನ್‌ ಕೂಡ ಇರಲಿದೆ. ಅತಿ ದೊಡ್ಡ ಬಜೆಟ್‌ ಸಿನಿಮಾ ಎಂದರು.

ಈಗಾಗಲೇ ಸಿನಿಮಾದ ನಾಲ್ಕು ಹಾಡುಗಳು ಸಿನಿಪ್ರಿಯರ ಮನಗೆದ್ದಿದ್ದು, ಹಿಟ್‌ ಆಗಿವೆ. ಸಂಪೂರ್ಣ ಕೊಡವ ಭಾಷೆಯಲ್ಲೇ ಸಾಹಿತ್ಯ ರಚಿಸಿರುವ ಒಂದು ಹಾಡಂತೂ ಸಿಕ್ಕಾಪಟ್ಟೆ ಸದ್ದು ಮಾಡುವ ವಿಶ್ವಾಸವಿದೆ. ಈ ಹಾಡನ್ನು ಕೊಡಗಿನ ವೀರಯೋಧರಿಗೆ ಅರ್ಪಿಸುತ್ತಿದ್ದೇವೆ. ಈ ಹಾಡಿಗೆ ಕಿರಣ್‌ ಕಾವೇರಪ್ಪ ಸಾಹಿತ್ಯ ರಚಿಸಿದ್ದು, ಜೆಸ್ಸಿ ಗಿಫ್ಟ್‌ ಹಾಡಿದ್ದಾರೆ. ಸೋನು ನಿಗಮ್‌, ಅರ್ಮನ್‌, ಶ್ರೇಯಾ ಘೋಷಾಲ್‌, ಸಂಚಿತ್‌ ಹೆಗಡೆ ಅವರು ಹಾಡಿರುವ ಉಳಿದ ಹಾಡೂಗಳು ಸಖತ್‌ ಸೌಂಡ್‌ ಮಾಡುತ್ತಿವೆ ಎಂದರು.

85 ದಿನಗಳ ಕಾಲ ಈ ಸಿನಿಮಾ ಚಿತ್ರೀಕರಣ ಮಾಡಿದ್ದೇವೆ. ಸ್ವಿಡ್ಜರ್‌ಲ್ಯಾಂಡ್‌, ಮಲೇಷಿಯಾ ಸೇರಿದಂತೆ ಹಲವು ಸ್ಥಳಗಳಲ್ಲಿ ಶೂಟಿಂಗ್‌ ನಡೆಸಲಾಗಿದೆ. ಅತೀ ಹೆಚ್ಚು ಸ್ಥಳಗಳಲ್ಲಿ ಚಿತ್ರೀಕರಣವಾದ ಸಿನಿಮಾ ನಮ್ಮದೇ ಇರಬೇಕು. ಈ ಸಿನಿಮಾದ ಮೇಲೆ ಅಂಬರೀಷ್‌ ಪ್ರಭಾವ ಸಾಕಷ್ಟು ಇದೆ. ಈ ಸಿನಿಮಾ ನೋಡಿದಾಗ ಅಂಬರೀಷ್‌ ನಮ್ಮ ಜತೆಗೇ ಇದ್ದಾರೆ ಎನ್ನುವ ಫೀಲ್‌ ಸಿಗಲಿದೆ ಎನ್ನುವ ಮಾತು ಸೇರಿಸಿದರು ನಾಗಶೇಖರ್‌.


ನಾಗಶೇಖರ್

ನಾಯಕಿ ತಾನ್ಯಾ ಹೋಪ್‌ ಕೂಡ ಅವರ ಪಾತ್ರದ ಗುಟ್ಟು ಬಿಟ್ಟುಕೊಡಲಿಲ್ಲ. ‘ಈ ಸಿನಿಮಾ ನನಗೊಂದು ಅದ್ಭುತ ಅನುಭವ ನೀಡಿದೆ. ಅಭಿಷೇಕ್‌ ಜತೆಗೆ ನಟಿಸಿರುವುದು ತುಂಬಾ ಖುಷಿ ಕೊಟ್ಟಿತು. ಅಭಿ ತುಂಬಾ ಚೆನ್ನಾಗಿ ನಟಿಸುತ್ತಾರೆ. ಸೆಟ್‌ನಲ್ಲೂ ಕೂಡ ಫನ್ನಿಯಾಗಿ ಎಲ್ಲರನ್ನೂ ನಗಿಸುತ್ತಿದ್ದರು. ಸಿನಿಮಾದಲ್ಲಿ ಸಾಕಷ್ಟು ಅತ್ತಿದ್ದೇನೆ ಮತ್ತು ನಕ್ಕಿದ್ದೇನೆ. ಈ ಸಿನಿಮಾದಲ್ಲಿ ನಾನೂ ಸಹ ಒಂದು ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ’ ಎಂದು ತಾನ್ಯಾ ಚುಟುಕಾಗಿ ಮಾತು ಮುಗಿಸಿದರು.

ಮಧ್ಯಾಹ್ನ 12.30ಗೆ ನಿಗದಿಯಾಗಿದ್ದ ಪತ್ರಿಕಾಗೋಷ್ಠಿಗೆ ಒಂದು ತಾಸು ತಡವಾಗಿ ಬರಲು ನಿರ್ಮಾಪಕ ಎನ್‌.ಸಂದೇಶ್‌ ಅವರು ಮಾಡಿದ ವಾಟ್ಸ್‌ ಆ್ಯಪ್‌ ‘ಮಿಸ್‌ಗೈಡ್‌’ ಮೆಸೆಜ್‌ ಕಾರಣವೆಂದ ನಟ ಅಭಿಷೇಕ್‌, ಎಲ್ಲರಿಗೂ ಕ್ಷಮೆ ಕೋರಿ, ಥೇಟ್‌ ಅಪ್ಪನ ಶೈಲಿಯಲ್ಲೇ ಮಾತು ಆರಂಭಿಸಿದರು.

‘ಮೇ 23ಕ್ಕೆ ಚುನಾವಣಾ ಫಲಿತಾಂಶ ಮತ್ತು ಅಮ್ಮನ ಬರ್ತಡೇ ಕೂಡ ಅದೇ ದಿನ. 24ಕ್ಕೆ ಅಮ್ಮನ ಸಿನಿಮಾ ‘ಡಾಟರ್‌ ಆಫ್‌ ಪಾರ್ವತಮ್ಮ’ ಬಿಡುಗಡೆ, 29ಕ್ಕೆ ಅಪ್ಪನ ‘ಅಂತ’ ಸಿನಿಮಾ ಮರು ಬಿಡುಗಡೆ, 31ಕ್ಕೆ ನನ್ನ ಸಿನಿಮಾ ಬಿಡುಗಡೆ. ಈ ತಿಂಗಳು ನಮ್ಮ ಪಾಲಿಗೆ ‘ಅಂಬರೀಷ್‌ ಫ್ಯಾಮಿಲಿ ಫೆಸ್ಟಿವಲ್‌’ ಇದ್ದಂತೆ’ ಎನ್ನುವ ಮಾತು ಸೇರಿಸಿದರು ಅಭಿಷೇಕ್‌. 

‘ಯಂಗ್‌ ರೆಬೆಲ್‌ ಸ್ಟಾರ್‌’ ಬಿರುದಿನ ಬಗ್ಗೆ ತೇಲಿಬಂದ ಪ್ರಶ್ನೆಗೆ, ನಿರ್ದೇಶಕರು ಮತ್ತು ನಿರ್ಮಾಪಕರು ನೀಡಿರುವ ಬಿರುದು ಅದು. ಸಿನಿಮಾ ಜನರಿಗೆ ಇಷ್ಟವಾಗಿ ಜನರೂ ಹಾಗೆಯೇ ಕರೆದರೆ ಖುಷಿಪಡುತ್ತೇನೆ. ಜನರು ಒಪ್ಪದಿದ್ದರೆ ಅದನ್ನೂ ಸ್ವಾಗತಿಸುತ್ತೇನೆ’ ಎಂದರು.

ಸುದ್ದಿಗೋಷ್ಠಿ ಕೊನೆಯಲ್ಲಿ ಬಂದು ಚಿತ್ರತಂಡವನ್ನು ಸೇರಿಕೊಂಡ ಸುಮಲತಾ ಅಂಬರೀಷ್‌, ‘ಮೇ 23ಕ್ಕೆ ಟೆನ್ಶನ್‌ ಇಲ್ಲ, ಜಸ್ಟ್‌ ಕುತೂಹಲವಿದೆ. ಆದರೆ, ಮೇ 31 ನನಗೆ ತುಂಬಾ ಟೆನ್ಶನ್‌ ಇದೆ. ಏಕೆಂದರೆ ಅದು ಬರೀ ಸಿನಿಮಾ ಅಲ್ಲ. ಅದರಲ್ಲಿ ನನ್ನ ಮತ್ತು ಅಂಬರೀಷ್‌ ಅವರ ಕನಸುಗಳಿವೆ. ಪ್ರತಿ ತಂದೆತಾಯಿಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇರುವಂತೆ ನಮಗೂ ಇದೆ’ ಎಂದರು.

ದರ್ಶನ್‌ ವಿಶೇಷ ಪಾತ್ರದಲ್ಲಿ ನಟಿಸಿದ್ದು, ನಿರೂಪ್‌ ಭಂಡಾರಿ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುತಾರಾಗಣಕ್ಕಾಗಿ ಈ ರೀತಿ ಮಾಡಿಲ್ಲ. ಕಥೆ ಪಾತ್ರ ಬಯಸಿದ್ದರಿಂದಷ್ಟೇ ಅವರೆಲ್ಲರೂ ಇದರಲ್ಲಿ ನಟಿಸಿದ್ದಾರೆ. ಎಲ್ಲ ಪಾತ್ರಗಳು ಪ್ರೇಕ್ಷಕರಿಗೆ ಮಜಾ ಕೊಡುತ್ತವೆ. 

ಈ ಸಿನಿಮಾಕ್ಕೆ ಸಂದೇಶ್‌ ನಾಗರಾಜ್‌ ಕಂಬೈನ್ಸ್‌ ಲಾಂಛನದಡಿ ಅವರ ಪುತ್ರ ಎನ್‌.ಸಂದೇಶ್‌ ಆರ್ಥಿಕ ಇಂಧನ ಹೊದಗಿಸಿದ್ದಾರೆ. ಛಾಯಾಗ್ರಾಹಣ ಸತ್ಯ ಹೆಗಡೆ, ಸಂಕಲನ ಶ್ರೀಪಾದ್‌ ಅವರದ್ದು. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ತಾರಾಗಣದಲ್ಲಿ ದೇವರಾಜ್‌, ಅರುಣ್‌ ಸಾಗರ್‌, ಸುಧಾರಾಣಿ, ದೀಪಕ್‌ ಶೆಟ್ಟಿ, ಸಾಧುಕೋಕಿಲ, ಚಿಕ್ಕಣ್ಣ ಇದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !