ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರ್ಘ್ಯಂ’ ಚಿತ್ರೀಕರಣ ಮುಕ್ತಾಯ

Last Updated 8 ಮೇ 2019, 10:20 IST
ಅಕ್ಷರ ಗಾತ್ರ

ನೀರಿನ ಮಹತ್ವವನ್ನು ಸಾರುವ ಉದ್ದೇಶದ ‘ಅರ್ಘ್ಯಂ’ ಹೆಸರಿನ ಸಿನಿಮಾ ಮಾಡುವುದಾಗಿ ನಿರ್ದೇಶಕ ಆಡಿಟರ್ ಶ್ರೀನಿವಾಸ್ ಅವರು ತಿಂಗಳುಗಳ ಹಿಂದೆ ಘೋಷಣೆ ಮಾಡಿದ್ದರು. ಅದರ ಮುಹೂರ್ತ ಸಮಾರಂಭ ಬೆಂಗಳೂರಿನ ಕಂಠೀರವ ಸ್ಟುಡಿಯೋನಲ್ಲಿ ನಡೆದಿತ್ತು. ಅದಾದ ನಂತರ ಕೆಲವು ಕಾಲ ಸುಮ್ಮನಿದ್ದ ನಿರ್ದೇಶಕರು, ದಿಢೀರನೆ ಸುದ್ದಿಗೋಷ್ಠಿ ಕರೆದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಪಕ್ಕದಲ್ಲಿ ಕುಳಿತಿದ್ದವರು ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ. ಸಿನಿಮಾ ಬಗ್ಗೆ ಮೊದಲ ಮಾತುಗಳನ್ನು ಹೇಳುವಂತೆ ಎಚ್‌ಎಸ್‌ವಿ ಅವರಿಗೇ ಮೈಕ್‌ ನೀಡಲಾಯಿತು. ‘ಸಿನಿಮಾ ಮಾಡುವ ಕಷ್ಟ ಏನು ಎಂಬುದು ನನಗೆ ಅನುಭವದಿಂದ ಗೊತ್ತಾಗಿದೆ. ಸಿನಿಮಾ ಲೋಕದಲ್ಲಿ ಒಂದು ಸಾಹಸ ಮಾಡಿದ್ದೇನೆ. ಇನ್ನೊಂದು ಬಾರಿ ಅಂಥದ್ದೇ ಸಾಹಸ ಮಾಡುತ್ತೇನೋ ಇಲ್ಲವೋ ಗೊತ್ತಿಲ್ಲ’ ಎನ್ನುತ್ತ ಮಾತು ಆರಂಭಿಸಿದರು ಎಚ್‌ಎಸ್‌ವಿ.

ಅವರನ್ನು ಈ ಸುದ್ದಿಗೋಷ್ಠಿಗೆ ಕರೆಸಿದ್ದೇಕೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯ ಅಲ್ಲಿದ್ದ ಯಾರಿಗೂ ಕಂಡುಬರಲಿಲ್ಲ! ಅವರು ಚಿತ್ರಕ್ಕೆ ಎರಡು ಮಧುರವಾದ ಹಾಡುಗಳನ್ನು ಬರೆದುಕೊಟ್ಟಿದ್ದಾರೆ. ‘ಸಮಾಜಕ್ಕೆ ಏನಾದರೂ ಒಳ್ಳೆಯ ಸಂದೇಶ ಕೊಡಬೇಕು ಎಂಬ ಉದ್ದೇಶದಿಂದ ಕೆಲಸ ಮಾಡುವ ಕಲಾವಿದರು ಈಗ ಕಡಿಮೆ. ಆದರೆ, ಅಂಥದ್ದೊಂದು ಕೆಲಸವನ್ನು ಈ ಸಿನಿಮಾ ತಂಡ ಮಾಡಿದೆ’ ಎಂದು ಮೆಚ್ಚುಗೆಯ ಮಾತು ಆಡಿದರು.

ಈ ಸಿನಿಮಾದಲ್ಲಿ ಗಾಂಭೀರ್ಯ ಇದೆ. ನೀರಿನ ಸಮಸ್ಯೆ ಇಂದು ಇಷ್ಟು ಉಲ್ಬಣಗೊಂಡಿರುವುದಕ್ಕೆ ಪ್ರಕೃತಿಯನ್ನು ದೂಷಿಸುವುದರಲ್ಲಿ ಅರ್ಥವಿಲ್ಲ ಎನ್ನುವ ಸಂದೇಶವನ್ನು ಸಿನಿಮಾ ನೀಡುತ್ತದೆ ಎಂದರು ಎಚ್‌ಎಸ್‌ವಿ. ಅವರು ಈ ಚಿತ್ರಕ್ಕಾಗಿ ಬರೆದ ‘ನೀರು, ನೆರಳು, ಬೆಳಕು ಸರ್ವ ಸಮಾನ’ ಎನ್ನುವ ಸಾಲೊಂದು ನಿರ್ದೇಶಕರ ಮನಸ್ಸನ್ನು ಬಹುವಾಗಿ ತಟ್ಟಿದೆಯಂತೆ.

ನೀರನ್ನು ಉತ್ಪಾದಿಸಲು ಸಾಧ್ಯವಿಲ್ಲ. ಇರುವ ನೀರನ್ನು ಉಳಿಸಿಕೊಳ್ಳಬೇಕು ಎನ್ನುವ ಸ್ಫೂರ್ತಿಯನ್ನು ಈ ಸಿನಿಮಾ ನೀಡುತ್ತದೆ ಎನ್ನುವುದು ನಿರ್ದೇಶಕ ಶ್ರೀನಿವಾಸ್ ಅವರಲ್ಲಿರುವ ವಿಶ್ವಾಸ. ‘ಈ ಚಿತ್ರವು ನೀರಿಗಾಗಿನ ಹಾಹಾಕಾರದಿಂದ ಆರಂಭವಾಗಿ, ಆಹಾಕರದೊಂದಿಗೆ ಮುಕ್ತಾಯ ಕಾಣುತ್ತದೆ’ ಎಂದರು ನಾಯಕ ನಟ ರಾಜೇಶ್. ಆನಂದ್ ಅವರು ಈ ಚಿತ್ರದಲ್ಲಿ ಹಳ್ಳಿಯ ಸ್ವಾಭಿಮಾನಿ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಆಗಸ್ಟ್‌ ಕೊನೆಯ ಭಾಗದಲ್ಲಿ ಅಥವಾ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಇದು ತೆರೆಗೆ ಬರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT