ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಡಬಲ್‌ ಧಮಾಕಾ ಖುಷಿಯಲ್ಲಿ ಆಶಿಕಾ

Published 5 ಏಪ್ರಿಲ್ 2024, 0:30 IST
Last Updated 5 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಆಶಿಕಾ ರಂಗನಾಥ್‌ ಕನ್ನಡದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿರುವಾಗಲೇ ಅವರು ನಟಿಸಿರುವ ಎರಡು ಕನ್ನಡ ಸಿನಿಮಾಗಳು ಈ ತಿಂಗಳಲ್ಲಿ ಬಿಡುಗಡೆಯಾಗುತ್ತಿವೆ. ಏ.5ಕ್ಕೆ ‘ಅವತಾರ ಪುರುಷ–2’ ಬಿಡುಗಡೆಯಾಗುತ್ತಿದ್ದು, ಏ.19ಕ್ಕೆ ಪಿಆರ್‌ಕೆ ಪ್ರೊಡಕ್ಷನ್ಸ್‌ನ ‘O2’ ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ಅವರು ಮಾತಿಗೆ ಸಿಕ್ಕಾಗ...

ಪ್ರ

‘ಅವತಾರ ಪುರುಷ–2’ ಹಾಗೂ ‘O2’ ಹೀಗೆ ಒಂದೇ ತಿಂಗಳಲ್ಲಿ ಎರಡು ಸಿನಿಮಾ ಬರುತ್ತಿದೆ. ಹೇಗನಿಸುತ್ತಿದೆ?

ಕಳೆದ ಬಾರಿ ‘ರೇಮೊ’ ಬಿಡುಗಡೆಯಾದ ದಿನದಂದೇ ತಮಿಳಿನ ನನ್ನ ಚೊಚ್ಚಲ ಚಿತ್ರ ‘ಪಟ್ಟತ್ತು ಅರಸನ್‌’ ಬಿಡುಗಡೆಯಾಗಿತ್ತು. ಆದರೆ ಕನ್ನಡದಲ್ಲಿ ಒಂದೇ ತಿಂಗಳಲ್ಲಿ ಎರಡು ಚಿತ್ರ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಆದರೆ ಇದ್ಯಾವುದೂ ಪೂರ್ವನಿಯೋಜಿತವಲ್ಲ. ಆಯಾ ಚಿತ್ರತಂಡಗಳ ನಿರ್ಧಾರವಿದು. ‘ಅವತಾರ ಪುರುಷ–2’ ಮಾರ್ಚ್‌ ಅಂತ್ಯಕ್ಕೇ ಬಿಡುಗಡೆಯಾಗಬೇಕಿತ್ತು. ಕೊನೆಯ ಕ್ಷಣದಲ್ಲಿ ಮುಂದೂಡಲ್ಪಟ್ಟಿತು. ‘ಆಶಿಕಾ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ’ ಎನ್ನುವ ಮಾತುಗಳು; ಪ್ರಶ್ನೆಗಳು ಕೇಳಿಬರುತ್ತಿರುವಾಗ, ಆ ಪ್ರಶ್ನೆಗಳಿಗೆಲ್ಲ ಉತ್ತರವಾಗಿ ಎರಡು ಸಿನಿಮಾಗಳು ಒಂದೇ ತಿಂಗಳಲ್ಲಿ ಬಿಡುಗಡೆಯಾಗುತ್ತಿವೆ. 

ಸದ್ಯ ನಾನು ಸಿಂಪಲ್‌ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ಹೀಗೆ ಕನ್ನಡದಲ್ಲೂ ನಟಿಸುತ್ತಿದ್ದೇನೆ. ಆದರೆ ಸಿನಿಮಾವೊಂದರ ಕಂಟೆಂಟ್‌ ಹೊರಬರದೇ ಇದ್ದರೆ ಅಥವಾ ತೆರೆಗಳಲ್ಲಿ ಕಾಣಿಸಿಕೊಳ್ಳದೇ ಹೋದರೆ ‘ಆಶಿಕಾ ಕನ್ನಡ ಸಿನಿಮಾ ಮಾಡುತ್ತಿಲ್ಲ’ ಎನ್ನುತ್ತಾರೆ. ಆದರೆ ನನ್ನ ಕೈಯಲ್ಲಿ ಏನೂ ಇಲ್ಲ. ಸಿನಿಮಾ ಎಂದರೆ ನಾನೊಬ್ಬಳಷ್ಟೇ ಅಲ್ಲವಲ್ಲ. ಯಾವಾಗ ಸಿನಿಮಾ ಬರಬೇಕು ಎನ್ನುವುದನ್ನು ತಂಡ ನಿರ್ಧರಿಸುತ್ತದೆ. ಇದರ ಮೇಲೆಯೇ ನಾವು ನಿಲ್ಲಬೇಕು. ಆ ಸಂದರ್ಭದಲ್ಲಿ ಕಲಾವಿದರಾಗಿ ಪ್ರಚಾರದ ವಿಚಾರದಲ್ಲಿ ಬೆಂಬಲಕ್ಕೆ ನಿಲ್ಲುವುದು ನಮ್ಮ ಜವಾಬ್ದಾರಿ. ಅದನ್ನು ಮಾಡುತ್ತಿದ್ದೇನೆ.   

ಪ್ರ

‘ಅವತಾರ ಪುರುಷ–2’ನೇ ಭಾಗದಲ್ಲಿ ‘ಸಿರಿ’ಯ ಪಾತ್ರವೆಷ್ಟಿದೆ?

ಈ ಸಿನಿಮಾದ ಕಥೆ ಆರಂಭವಾಗಿದ್ದೇ ನನ್ನ ‘ಸಿರಿ’ ಎಂಬ ಪಾತ್ರದಿಂದ. ಹೀಗಾಗಿ ಮೊದಲ ಭಾಗದಲ್ಲಿ ನನ್ನ ಪಾತ್ರದ ತೆರೆ ಅವಧಿ ಹೆಚ್ಚು ಇತ್ತು. ಕಮರ್ಷಿಯಲ್‌ ಅಂಶಗಳ ಜೊತೆ ಸಿನಿಮಾ ಸಾಗಿ, ಕ್ಲೈಮ್ಯಾಕ್ಸ್‌ನಲ್ಲಿ ಕಥೆಯೇ ಪ್ರಾಮುಖ್ಯತೆ ಪಡೆಯಿತು. ಎರಡನೇ ಭಾಗದಲ್ಲಿ ಕಥೆಯೇ ಮುಖ್ಯಭೂಮಿಕೆಯಲ್ಲಿದೆ. ಎಂದರೆ ಕಂಟೆಂಟ್‌ ಇಲ್ಲಿನ ಪ್ರಮುಖ ಅಂಶ. ನಾನು ಸಿನಿಮಾದಲ್ಲಿ ಇದ್ದೇನೆ ಎಂದು ನನ್ನ ದೃಶ್ಯಗಳನ್ನಾಗಲಿ ಅಥವಾ ನನ್ನ–ಶರಣ್‌ ಅವರ ದೃಶ್ಯಗಳನ್ನು ಅನಗತ್ಯವಾಗಿ ಇಲ್ಲಿ ಬಳಸಿಲ್ಲ. ಇದು ಟ್ರೇಲರ್‌ನಲ್ಲೇ ಸ್ಪಷ್ಟವಾಗುತ್ತದೆ. ಎರಡನೇ ಭಾಗದಲ್ಲಿ ‘ಸಿರಿ’ ಒಂದು ರೀತಿ ಪೋಷಕ ಪಾತ್ರವಾಗಿ ಬದಲಾಗುತ್ತದೆ. ಎರಡನೇ ಭಾಗದಲ್ಲಿ ಹೆಚ್ಚಿನ ಪಾತ್ರಗಳಿದ್ದು, ಒಂದು ಡ್ರೈವಿಂಗ್‌ ಫೋರ್ಸ್‌ ಆಗಿ ಇರುತ್ತೇನೆ. ಒಂದು ರೀತಿ ಮೂರನೇ ಪಾತ್ರವಾಗಿ ನಾನಿಲ್ಲಿದ್ದೇನೆ. 

ಎರಡನೇ ಭಾಗದಲ್ಲಿ ವಿಎಫ್‌ಎಕ್ಸ್‌, ಗ್ರಾಫಿಕ್ಸ್‌ ಹೆಚ್ಚಿನ ಪ್ರಮಾಣದಲ್ಲಿದೆ. ಈ ರೀತಿಯ ಜಾನರ್‌ನ ಸಿನಿಮಾವನ್ನು ಯಾರೂ ಪ್ರಯತ್ನಿಸಿಲ್ಲ. ತಾಂತ್ರಿಕವಾಗಿ ಹೆಚ್ಚು ಕೆಲಸವಿದ್ದ ಸಿನಿಮಾವಿದು. ಇಂತಹ ಸಿನಿಮಾಗಳಿಗೆ ಅದರದ್ದೇ ಆದ ಸಂಶೋಧನೆ, ಪ್ರಯತ್ನದ ಅಗತ್ಯವಿದೆ. ಹೀಗಾಗಿ ಸಿನಿಮಾ ತೆರೆಗೆ ಬರಲು ತಡವಾಯಿತು. ಸಿನಿಮಾ ಬಹಳ ಪರಿಣಾಮಕಾರಿಯಾಗಿ ಬಂದಿದೆ. ಹೀಗಾಗಿ ‘ಸಿನಿಮಾ ತಡವಾಯಿತು’ ಎನ್ನುವ ಮಾತುಗಳ ಬಗ್ಗೆ ಜನ ಯೋಚನೆ ಮಾಡುತ್ತಾರೆ ಎಂದೆನಿಸುವುದಿಲ್ಲ. 

ಪ್ರ

‘O2’ ಸಿನಿಮಾದಲ್ಲಿನ ‘ಶ್ರದ್ಧಾ’ ಯಾರು?

ಕೋವಿಡ್‌ ಲಾಕ್‌ಡೌನ್‌ ಅಂತ್ಯವಾದ ಸಂದರ್ಭದಲ್ಲಿ ಈ ಸಿನಿಮಾದ ಸ್ಕ್ರಿಪ್ಟ್‌ ನನ್ನ ಕೈಗೆ ಬಂತು. ‘ಶ್ರದ್ಧಾ’ ಪಾತ್ರಕ್ಕೆ ಹೆಚ್ಚಿನ ಹುಡುಕಾಟ ನಡೆದಿತ್ತಂತೆ. ಪಿಆರ್‌ಕೆ ಸಂಸ್ಥೆಯ ಸಿನಿಮಾವಾದ ಕಾರಣ ನನಗೂ ಹೆಚ್ಚಿನ ಆಸಕ್ತಿಯಿತ್ತು. ಪುನೀತ್‌ ರಾಜ್‌ಕುಮಾರ್‌ ಅವರು ಒಪ್ಪಿದ್ದ ಸ್ಕ್ರಿಪ್ಟ್‌ ಅದಾಗಿತ್ತು. ಕಥೆ ಓದಿದಾಗ ‘ಶ್ರದ್ಧಾ’ ಎಂಬ ಪಾತ್ರ ಬೀರುವ ಪರಿಣಾಮದ ಅರಿವಾಯಿತು. ಆ ಸಂದರ್ಭದಲ್ಲಿ ಯಾವ ಕಾರಣಕ್ಕೂ ಈ ಪ್ರಾಜೆಕ್ಟ್‌ ಬಿಟ್ಟುಕೊಡಬಾರದು ಎಂದು ನಿರ್ಧರಿಸಿದೆ. ಇಂತಹ ಅವಕಾಶಗಳು ಬರುವುದು ಬಹಳ ಅಪರೂಪ. ನಾನು ಹಿಂದೆಂದೂ ಈ ರೀತಿಯ ಪಾತ್ರ ಮಾಡಿಲ್ಲ. ನನಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುವ ಪಾತ್ರ ಹಾಗೂ ನಟಿಯಾಗಿ ನನ್ನ ಸಾಮರ್ಥ್ಯವನ್ನು ಜನರಿಗೆ ತೋರ್ಪಡಿಸುವ ಅವಕಾಶ ಈ ಪಾತ್ರದಲ್ಲಿತ್ತು. ಜೊತೆಗೆ ಪುನೀತ್‌ ಅವರ ಮಾರ್ಗದರ್ಶನದ ತಂಡದ ಮೇಲಿದ್ದ ನಂಬಿಕೆಯಿಂದ ಪ್ರಾಜೆಕ್ಟ್‌ ಒಪ್ಪಿಕೊಂಡೆ. ನಾನು ಇಲ್ಲಿಯವರೆಗೂ ಹೆಸರಾಂತ ನಿರ್ದೇಶಕರು ಹಾಗೂ ಸ್ಟಾರ್‌ ನಿರ್ದೇಶಕರ ಜೊತೆಯಷ್ಟೇ ಕೆಲಸ ಮಾಡಿದ್ದೆ. ‘O2’ನಲ್ಲಿ ನಿರ್ದೇಶಕರಿಬ್ಬರೂ ಹೊಸಬರು. ಆದರೆ ಇವರ ಬೆನ್ನಿಗೆ ಪಿಆರ್‌ಕೆ ಇತ್ತು. ನನಗೂ ಹೊಸ ಜನರೇಷನ್‌ ನಿರ್ದೇಶಕರ ಜೊತೆ ಕೆಲಸ ಮಾಡಿ ಭಿನ್ನ ಪಾತ್ರಗಳನ್ನು ನಿಭಾಯಿಸುವ ಆಸೆ ಇತ್ತು. 

ಪ್ರಸ್ತುತ ವಿಶ್ವದೆಲ್ಲೆಡೆ ಮಹಿಳೆಯ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿದೆ. ಸಾಕಷ್ಟು ಸಿನಿಮಾಗಳು ಇಂತಹ ವಿಷಯದ ಮೇಲೆಯೇ ಬಂದಿವೆ. ‘O2’ ಸಿನಿಮಾ ಕೇವಲ ಮಹಿಳಾ ಪ್ರಧಾನ ಚಿತ್ರವಲ್ಲ. ಹಲವು ವಿಷಯಗಳು ಚಿತ್ರದಲ್ಲಿವೆ. ಇದೊಂದು ರೀತಿಯ ಪ್ರಯೋಗಾತ್ಮಕ ವಿಷಯವಿರುವ ಸಿನಿಮಾ. ‘ಡಾಕ್ಟರ್‌ ಶ್ರದ್ಧಾ’ ಸಂಶೋಧನೆ ನಡೆಸಿ ‘O2’ ಎಂಬ ಔಷಧದ ಮೂಲಕ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವವರನ್ನು ಬದುಕಿಸುವ ಪ್ರಯತ್ನಕ್ಕೆ ಮುಂದಾಗುತ್ತಾಳೆ. ಆಗ ಎದುರಾಗುವ ಅಡೆತಡೆಗಳನ್ನು ಮೀರಿ ಗುರಿ ತಲುಪಲು ಆಕೆಗೆ ಸಾಧ್ಯವೇ ಎನ್ನುವುದು ಚಿತ್ರದ ಕಥೆ. 

ಪ್ರ

ಹೊಸ ಪ್ರಾಜೆಕ್ಟ್‌ಗಳು... 

ಸಿದ್ಧಾರ್ಥ್‌ ಅವರ ಜೊತೆ ನಟಿಸಿರುವ ತಮಿಳು ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ. ಲವ್‌ಸ್ಟೋರಿ ಜಾನರ್‌ನ ಈ ಸಿನಿಮಾದ ಶೀರ್ಷಿಕೆ ಇನ್ನಷ್ಟೇ ಘೋಷಣೆಯಾಗಬೇಕಿದೆ. ‘ನಾ ಸಾಮಿ ರಂಗ’ ಬಳಿಕ ಹೊಸ ತೆಲುಗು ಸಿನಿಮಾವೊಂದನ್ನು ಒಪ್ಪಿಕೊಂಡಿದ್ದೇನೆ. ಕನ್ನಡ ಹಾಗೂ ತಮಿಳಿನಲ್ಲಿ ಕಥೆಗಳನ್ನು ಕೇಳುತ್ತಿದ್ದೇನೆ.

ಒಂದೇ ಮಾದರಿಯ ಪಾತ್ರಗಳನ್ನು ಮಾಡಿದರೆ ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ. ಮನಸ್ಸಿಗೆ ಖುಷಿ ತರುವ ಪಾತ್ರಗಳು ಸದ್ಯ ಕನ್ನಡದಲ್ಲಿ ಬಂದಿಲ್ಲ. ಬಂದರೆ ಖಂಡಿತವಾಗಿಯೂ ಮಾಡುತ್ತೇನೆ. ‘O2’ನಂತಹ ಭಿನ್ನವಾದ ಮಾದರಿ ಸಿನಿಮಾಗಳು ಬಂದರೆ ಒಪ್ಪಿಕೊಳ್ಳುತ್ತೇನೆ. ಗ್ಲ್ಯಾಮರಸ್‌ ನಟಿ ಎನ್ನುವುದನ್ನು ನಾನು ಸಾಬೀತುಪಡಿಸಿದ್ದೇನೆ. ಹಾಗೆಂದು ಕೇವಲ ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರುವ ಸಿನಿಮಾಗಳನ್ನಷ್ಟೇ ಮಾಡುತ್ತೇನೆ ಎಂದಲ್ಲ. ಓರ್ವ ನಟಿಯಾಗಿ, ಗ್ಲ್ಯಾಮರಸ್‌ ಪಾತ್ರಗಳನ್ನು ಹಾಗೂ ಪಾತ್ರಕ್ಕೆ ಹೆಚ್ಚು ಒತ್ತು ನೀಡುವ ಕಥೆಗಳನ್ನು ಸಮಾನವಾಗಿ ಮಾಡಿಕೊಳ್ಳುತ್ತಾ ಹೋಗುತ್ತೇನೆ. ನಾನು ಒಂದು ಜಾನರ್‌ನ ಸಿನಿಮಾಗಳಿಗೆ ಅಂಟಿಕೊಂಡಿಲ್ಲ. ಹಲವು ಸಿನಿಮಾಗಳನ್ನು ಮಾಡಿರುವ ಕಾರಣ, ಪಾತ್ರದ ಬಗೆಗಿನ ನನ್ನ ನಿರೀಕ್ಷೆಗಳು ಜಾಸ್ತಿ ಇವೆ. ಹೀಗಾಗಿ ಕೊಂಚ ಸಮಯ ತೆಗೆದುಕೊಳ್ಳುತ್ತಿದ್ದೇನೆ ಅಷ್ಟೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT