‘ಉರ್ವಿ‘ಯ ಖಳನಾಯಕಿಗೆ ಫಿಲಂ ಫೇರ್ ಸಮ್ಮಾನ

7

‘ಉರ್ವಿ‘ಯ ಖಳನಾಯಕಿಗೆ ಫಿಲಂ ಫೇರ್ ಸಮ್ಮಾನ

Published:
Updated:
ಭವಾನಿ ಪ್ರಕಾಶ್

ಪ್ರದೀಪ್ ವರ್ಮ ನಿರ್ದೇಶಿಸಿದ ‘ಉರ್ವಿ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಆದರೆ ಆ ಚಿತ್ರದಲ್ಲಿ ‘ಹೆಣ... ಹೆಣ್ಣಾದ್ರೆ ಸಾಕು, ಅದನ್ನಿಟ್ಕೊಂಡು ದುಡ್ಡು ಮಾಡೋಳು ನಾನು’ ಎಂದು ರಕ್ತದ ಬದಲು ದುರುಳತನವೇ ನರನರಗಳಲ್ಲಿ ಹರಿಯುತ್ತಿದೆಯೇನೋ ಎಂಬಂತೆ ಅಬ್ಬರಿಸಿದ್ದ ಭವಾನಿ ಪ್ರಕಾಶ್ ಅವರ ನಟನೆ ಮಾತ್ರ ಚಿತ್ರ ನೋಡಿದವರೆಲ್ಲರ ರಕ್ತ ಕುದಿಯುವಂತೆ ಮಾಡಿತ್ತು.

ಅವರ ಈ ‘ಖಳತನ’ಕ್ಕೆ ಈಗ ಪ್ರಶಸ್ತಿಯ ಸಮ್ಮಾನ ದೊರಕಿದೆ! ಹೌದು, ‘ಉರ್ವಿ ಚಿತ್ರದ ನಟನೆಗೆ ಭವಾನಿ ಪ್ರಕಾಶ್ ಅವರು 2018ನೇ ಸಾಲಿನ ದಕ್ಷಿಣ ಭಾರತ ಫಿಲಂ ಫೇರ್ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ಪಡೆದಿದ್ದಾರೆ. ಮಿರಮಿರ ಹೊಳೆಯುವ ಕಪ್ಪು ಸುಂದರಿಯ ಹೊಳಪು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದಷ್ಟೇ ಅಲ್ಲದೆ ಇನ್ನಷ್ಟು ಒಳ್ಳೆಯ ಅವಕಾಶಗಳು ಸಿಗಲಿವೆ ಎಂಬ ಭರವಸೆಯನ್ನೂ ಹುಟ್ಟಿಸಿದೆ.

‘ಊರ್ವೀ ಚಿತ್ರದ ಪಾತ್ರ ತುಂಬ ಇಷ್ಟವಾಗಿತ್ತು. ನಿರ್ದೇಶಕ ಪ್ರದೀಪ್ ವರ್ಮ ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟರು. ನಾನು ಹೇಳಿ ಕೇಳಿ ರಂಗಭೂಮಿ ಹಿನ್ನೆಲೆ ಇರುವ ಕಲಾವಿದೆ. ಇಡೀ ಪಾತ್ರವನ್ನು ನುಂಗಿ ಅರಗಿಸಿಕೊಂಡು ನಟಿಸಿದೆ. ಚೆನ್ನಾಗಿ ನಟಿಸಿದ್ದೀರಾ, ಈ ಸಲ ನಿಮಗೆ ಪ್ರಶಸ್ತಿ ಬರುತ್ತದೆ ಎಂದು ಚಿತ್ರ ನೋಡಿದವರು ಹೇಳುತ್ತಿದ್ದರು. ಆದರೆ ನಾನು ಅದನ್ನು ತಮಾಷೆಯಾಗಿಯೇ ಸ್ವೀಕರಿಸಿದ್ದೆ. ಆದರೆ ಈಗ ನೋಡಿದರೆ ಅವರ ಹಾರೈಕೆ ನಿಜವಾಗಿದೆ. ಈ ಪಾತ್ರಕ್ಕೆ ಪ್ರಶಸ್ತಿ ಬಂದಿದೆ’ ಎಂದು ಅನಿರೀಕ್ಷಿತವಾಗಿ ಒಲಿದುಬಂದ ಪುರಸ್ಕಾರದ ಕುರಿತು ಸಂತೋಷದಿಂದ ಹೇಳಿಕೊಳ್ಳುತ್ತಾರೆ.

ರಂಗಭೂಮಿ, ಕಿರುತೆರೆ, ಸಿನಿಮಾ ಮೂರೂ ರಂಗಗಳಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಕೆಲಸ ಮಾಡಿದ ಅನುಭವ ಇರುವ ಭವಾನಿ, ಈಗ ತಮ್ಮ ನಟನಾಪ್ರತಿಭೆಯನ್ನು ಗುರ್ತಿತವಾದ ಖುಷಿಯಲ್ಲಿದ್ದಾರೆ. 

‘ರಂಗಭೂಮಿಯಲ್ಲಿ ವೇದಿಕೆಯ ಮೇಲೆಯೇ ಎಲ್ಲವೂ ಘಟಿಸುತ್ತದೆ. ನಾಟಕ ಆಡಿದರೆ ಮುಗಿಯಿತು, ತಪ್ಪು ಒಪ್ಪು ಏನಿದ್ದರೂ ಮುಗಿದುಹೋಗುತ್ತದೆ. ಆದರೆ ಸಿನಿಮಾ ಹಾಗಲ್ಲ, ಅಲ್ಲಿ ಮತ್ತೆ ಮತ್ತೆ ಟೇಕ್ ತೆಗೆದುಕೊಳ್ಳಬಹುದು. ಈ ಸಲ ಸರಿಯಾಗಿ ನಟಿಸಲು ಸಾಧ್ಯವಾಗಿಲ್ಲ ಅಂದರೆ ಮತ್ತೊಂದು ಅವಕಾಶ ಪಡೆದುಕೊಳ್ಳಬಹುದು. ಇದು ರಂಗಭೂಮಿ ಮತ್ತು ಸಿನಿಮಾಗೆ ಇರುವ ಮೂಲಭೂತ ವ್ಯತ್ಯಾಸ. ಆದರೆ ರಂಗಭೂಮಿ, ನಾಟಕಗಳು ಕೊಡುವ ಖುಷಿಯೇ ಬೇರೆ. ಹಾಗಂತ ಸಿನಿಮಾ ನಟನೆ ಖುಷಿ ಕೊಡುವುದಿಲ್ಲ ಎಂದಲ್ಲ’ ಎಂದು ಎರಡೂ ಕ್ಷೇತ್ರದ ಮೇಲೆ ತಮಗಿರುವ ಪ್ರೀತಿಯನ್ನು ಅಭಿವ್ಯಕ್ತಿಸುತ್ತಾರೆ ಭವಾನಿ. 

ಕನ್ನಡ ಚಿತ್ರರಂಗದಲ್ಲಿ ಫೋಷಕ ಪಾತ್ರಗಳಿಗೆ, ಅದರಲ್ಲಿಯೂ ಪೋಷಕ ನಟಿಯರಿಗೆ ಸಾಕಷ್ಟು ಮಹತ್ವ ಸಿಗುತ್ತಿಲ್ಲ ಎಂಬ ಬೇಸರವೂ ಅವರಿಗಿದೆ.

‘ಯಾಕೆ ಹೀಗೆ ಎಂದು ನನಗೂ ಗೊತ್ತಿಲ್ಲ. ಹಿಂದಿಯಲ್ಲಿ ನಟಿಯರಿಗೆ ಎಂದೇ ಸಿನಿಮಾಗಳನ್ನು ಮಾಡುತ್ತಾರೆ. ವಿದ್ಯಾಬಾಲನ್, ಶ್ರೀದೇವಿ ಅವರಂಥ ನಟಿಯರಿಗಾಗಿ ಕಥೆಗಳನ್ನು ಹೆಣೆಯುತ್ತಾರೆ. ಅವರಿಗೆ ಹೊಂದುವಂಥ ಪಾತ್ರಗಳನ್ನು ಸೃಷ್ಟಿಸುತ್ತಾರೆ. ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ಪೋಷಕ ನಟಿಯರಿಗೆ ಬಹಳ ವೈವಿಧ್ಯದ ಪಾತ್ರಗಳನ್ನು ಕೊಡುತ್ತಾರೆ. ನಮ್ಮಲ್ಲಿಯೂ ಕೆಲವು ಪ್ರತಿಭಾವಂತರು ಅಂಥ ಪಾತ್ರಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಅದು ಸೀಮಿತವಾಗಿದೆ. ಉಳಿದಂತೆ ಪೋಷಕ ನಟಿಯರಿಗೆ ಅಷ್ಟೊಂದು ಮಹತ್ವದ ಪಾತ್ರಗಳು ಸಿಗುವುದೇ ಇಲ್ಲ’ ಎಂಬುದು ಅವರ ವಿಶ್ಲೇಷಣೆ. 

ಹಾಗೆಂದು ಭವಾನಿ ನಿರಾಶಾವಾದಿಯಲ್ಲ. ‘ಕನ್ನಡ ಚಿತ್ರರಂಗದ ಮೇಲೆ ನನಗೆ ನಂಬಿಕೆ ಇದೆ. ಇಲ್ಲಿ ಹಲವು ಹೊಸ ಮನಸ್ಸುಗಳು ಹೊಸ ರೀತಿಯ ಚಿತ್ರಗಳನ್ನು ಮಾಡುತ್ತಿದ್ದಾರೆ. ಹೊಸ ಬಗೆಯ ಪಾತ್ರಗಳನ್ನು ಸೃಷ್ಟಿಸುತ್ತಿದ್ದಾರೆ. ಅವರು ಪೋಷಕ ಪಾತ್ರಗಳಿಗೂ ಮಹತ್ವ ಇರುವ ಸಿನಿಮಾಗಳನ್ನು ಮಾಡುತ್ತಾರೆ ಎಂಬ ನಂಬಿಕೆ ಇದೆ’ ಎಂದು ಚಂದನವನದ ನಾಳೆಗಳ ಕುರಿತು ವಿಶ್ವಾಸ ವ್ಯಕ್ತಪಡಿಸುತ್ತಾರೆ. 

ನಟಿಯಾಗಿಯೇ ಹೆಚ್ಚು ಪರಿಚಿತರಾಗಿದ್ದರೂ ಭವಾನಿ ಪ್ರಕಾಶ್ ಅವರಿಗೆ ನಿರ್ದೇಶನದಲ್ಲಿಯೂ ಆಸಕ್ತಿ ಇದೆ. ‘ಪ್ರಜಾವಾಣಿ’ ಪತ್ರಿಕೆಯ ‘ಕಾಮನಬಿಲ್ಲು’ ಪುರವಣಿಯಲ್ಲಿ ಕಲೀಂ ಉಲ್ಲಾ ಅವರು ಬರೆಯುತ್ತಿದ್ದ ಅಂಕಣ ಬರಹವೊಂದನ್ನು ಇಟ್ಟುಕೊಂಡು ಚಿತ್ರಕಥೆಯನ್ನೂ ಸಿದ್ಧಪಡಿಸಿಕೊಂಡಿದ್ದಾರೆ. ‘ಕಳೆದ ವರ್ಷವೇ ನಾನು ನಿರ್ದೇಶನ ಮಾಡಬೇಕಾಗಿತ್ತು. ಆದರೆ ಒಪ್ಪಿಕೊಂಡ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟೆ. ಅಲ್ಲದೆ ನನಗೆ ಕಮರ್ಷಿಯಲ್ ಮಾದರಿಯ, ಬರಿಯ ಮನರಂಜನೆ ಕೊಟ್ಟು ಹಣ ಗಳಿಸುವ ಮಾದರಿಯ ಚಿತ್ರಗಳನ್ನು ಮಾಡುವುದು ಗೊತ್ತಿಲ್ಲ. ಅಂಥ ಚಿತ್ರಗಳಲ್ಲಿ ನಟಿಸುತ್ತೇನೆ. ಆದರೆ ನಾನು ಮಾಡುವುದು ಬೇರೆಯದೇ ಮಾದರಿಯ ಸಿನಿಮಾ. ಆದ್ದರಿಂದ ಲಾಭ– ನಷ್ಟದ ಲೆಕ್ಕಾಚಾರ ಮಾಡದೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಬದ್ಧತೆಯಿಂದ ಹಣ ಹೂಡುವ ನಿರ್ಮಾಪಕರೂ ಬೇಕು. ಅಂಥ ನಿರ್ಮಾಪಕರೊಬ್ಬರಿಗಾಗಿ ಹುಡುಕುತ್ತಿದ್ದೇನೆ’ ಎಂದು ನಿರ್ದೇಶನದ ಕನಸು ನನಸಾಗಿಸಿಕೊಳ್ಳುವಲ್ಲಿನ ಸವಾಲಿನ ಕುರಿತು ಅವರು ಹೇಳುತ್ತಾರೆ. ‘ಹಾಗೆಂದು ನನ್ನ ಸಿನಿಮಾಗೆ ಹಣ ಹೂಡುವವರ ಹಣ ವಾಪಸ್ಸು ಬರುವುದಿಲ್ಲ ಎಂದಲ್ಲ. ಖಂಡಿತವಾಗಿಯೂ ಬಂಡವಾಳ ವಾಪಸ್ ಬರುತ್ತದೆ’ ಎಂದೂ ಅವರು ಭರವಸೆ ನೀಡುತ್ತಾರೆ.

ಭವಾನಿ ಹಾಡುಗಾರ್ತಿಯೂ ಹೌದು. ನಾಗತಿಹಳ್ಳಿ ರಮೇಶ್ ಅವರ ಒಂದು ಹಾಡನ್ನು ಅವರೇ ನಿರ್ದೇಶಿಸಿ, ಹಾಡಿ, ನಟಿಸಿ ಒಂದು ವಿಡಿಯೊ ಆಲ್ಬಂ ಮಾಡಿದ್ದರು. ಎಸ್‌.ಆರ್. ರಾಮಕೃಷ್ಣ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದರು. 

‘ಅತ್ತಿಹಣ್ಣು ಮತ್ತು ಕಣಜ’ ಅವರ ನಿರ್ಮಾಣದ ಸಿನಿಮಾ. ಈ ಚಿತ್ರವನ್ನು ಅವರ ಪತಿ ಕಲಾವಿದ ಪ್ರಕಾಶ್ ಬಾಬು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿಯೂ ಭವಾನಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ‘ಅತ್ತಿಹಣ್ಣು ಮತ್ತು ಕಣಜ’ ಚಿತ್ರದಿಂದ ನಾನು ಸಾಕಷ್ಟು ಕಲಿತಿದ್ದೇನೆ. ಆ ಚಿತ್ರದ ಹಿಂದೆ ಹಲವರ ಶ್ರಮ ಇದೆ’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಮುಂದಿನ ತಿಂಗಳು ಬಿಡುಗಡೆಯಾಗುತ್ತಿರುವ ‘ತ್ರಾಟಕ’ ಸಿನಿಮಾದಲ್ಲಿ ಭವಾನಿ ಪ್ರಕಾಶ್ ಒಂದು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಹಾಗೆಯೇ ‘ಅಮೋಘ’ ಮತ್ತು ‘ಸೋಲ್ಡ್‌’ ಎಂಬ ಮತ್ತೆರಡು ಚಿತ್ರಗಳನ್ನೂ ಒಪ್ಪಿಕೊಂಡಿದ್ದಾರೆ.

‘ಇಷ್ಟು ವರ್ಷದ ಶ್ರಮದ ನಂತರ ಈಗ ನನ್ನ ಪ್ರತಿಭೆಗೆ ಪುರಸ್ಕಾರ ಸಿಕ್ಕಿದೆ. ಇನ್ನು ಮುಂದೆ ನನಗೆ ಒಳ್ಳೆಯ ಪಾತ್ರಗಳಲ್ಲಿ ನಟಿಸುವ ಅವಕಾಶ ಸಿಗುತ್ತದೆ ಎಂಬ ನಂಬಿಕೆ ಇದೆ. ಅಂಥ ಅವಕಾಶಗಳಿಗಾಗಿ ಕಾತರಳಾಗಿ ಕಾಯುತ್ತಿದ್ದೇನೆ’ ಎಂದು ನಟನೆಯ ಹಸಿವನ್ನು ವ್ಯಕ್ತಪಡಿಸುತ್ತಾರೆ.

ರಂಗಭೂಮಿಯ ಬೇರು ಮತ್ತು ಸಿನಿಮಾ ಸಾಧ್ಯತೆಗಳ ಚಿಗುರು ಎರಡನ್ನೂ ಅರಗಿಸಿಕೊಂಡಿರುವ ಭವಾನಿ ಪ್ರಕಾಶ್ ಅವರಂಥ ಪ್ರತಿಭೆಯನ್ನು ಸೂಕ್ತವಾಗಿ ಬಳಸಿಕೊಳ್ಳುವುದು ಚಿತ್ರರಂಗದ ಅಗತ್ಯವೂ ಹೌದು.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 4

  Frustrated
 • 0

  Angry

Comments:

0 comments

Write the first review for this !