ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೆಕ್ಸ್ ಸುತ್ತ ಸುತ್ತುವ ‘ಭೂತ ಮಿಸ್ಸಿಂಗ್

ಕಿರುದಾರಿ
Last Updated 30 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಫ್ಲೆಕ್ಸ್ ಹಾವಳಿಯನ್ನೇ ಕಥೆಯಾಗಿರಿಸಿಕೊಂಡಿರುವ ‘ಭೂತ ಮಿಸ್ಸಿಂಗ್’ ಕಿರುದಾರಿ ಯುವ ಮನಗಳಿಗೆ ಕಚಗುಳಿಯಿಡುವಂಥ ಕಿರುಚಿತ್ರ. ಕೊಳೆಗೇರಿಯೊಂದರ ನಾಲ್ವರು ಸ್ನೇಹಿತರು ಹೇಗಾದರೂ ಮಾಡಿ ಫ್ಲೆಕ್ಸ್‌ನಲ್ಲಿ ತಮ್ಮ ಫೋಟೊ ಬರಬೇಕೆಂಬ ಹಂಬಲದ ಕಥೆಯನ್ನು ಈ ಕಿರುಚಿತ್ರ ಹೊಂದಿದೆ.

ಪ್ರಸಕ್ತ ರಾಜಕಾರಣ, ಫ್ಲೆಕ್ಸ್ ಕ್ರೇಜ್, ಕೊಳೆಗೇರಿ ಹುಡುಗರ ಅಸ್ತಿತ್ವಕ್ಕಾಗಿ ಹುಡುಕಾಟ ಎಲ್ಲವೂ ಸಹಜವಾಗಿ ಇಲ್ಲಿ ಮೂಡಿಬಂದಿದೆ. ಯುವಜನರ ಪ್ರತಿನಿಧಿಯಾಗಿರುವ ನಾಲ್ವರು ಹುಡುಗರು ತಮ್ಮ ಮೂಲ ಹೆಸರನ್ನೇ ಮರೆತುಹೋಗುವಷ್ಟು ಅಡ್ಡ ಹೆಸರುಗಳಿಂದಲೇ ಆ ಬಡಾವಣೆಯಲ್ಲಿ ಫೇಮಸ್. ಅಲೆಮಾರಿಗಳಾಗಿರುವ ಈ ಹುಡುಗರಿಗೆ ಬಡಾವಣೆಯಲ್ಲಿ ತಮ್ಮ ಖದರು ತೋರಿಸಬೇಕೆಂಬ ಆಸೆ. ಅದಕ್ಕಾಗಿ ಗೋಲ್ಡಿ ಮೋಹನ ಹತ್ತಿರ ಬರುವ ಅವರು ಆತನ ಫ್ಲೆಕ್ಸ್‌ನಲ್ಲಿ ತಮ್ಮ ಫೋಟೊ ಬರಬೇಕೆಂದು ಅಂಗಲಾಚುತ್ತಾರೆ. ಅವರ ಒತ್ತಡಕ್ಕೆ ಮಣಿಯುವ ಗೋಲ್ಡಿ ಕೊನೆಗೂ ಒಪ್ಪುತ್ತಾನೆ. ಆದರೆ, ಫ್ಲೆಕ್ಸ್‌ನಲ್ಲಿ ಜಾಗವಿರದ ಕಾರಣ ಹುಡುಗರ ಆಸೆಗೆ ಮತ್ತೊಮ್ಮೆ ತಣ್ಣೀರು ಎರಚುತ್ತಾನೆ ಫ್ಲೆಕ್ಸ್ ಅಂಗಡಿಯ ಮಾಲೀಕ. ಅಂತೂ ಇಂತೂ ಫ್ಲೆಕ್ಸ್‌ನಲ್ಲಿ ತಮ್ಮ ಮುಖಗಳನ್ನು ತೂರಿಸುವ ಹುಡುಗರ ಪೈಕಿ ಭೂತ ಎಂಬಾತನ ಮುಖವೇ ಕಾಣೆಯಾಗಿರುತ್ತದೆ.

ಇದೇ ಸಮಯದಕ್ಕೆ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಮನಸ್ಥಿತಿಯ ಉತ್ತರ ಭಾರತೀಯನೊಬ್ಬ ಕುಡಿದ ಅಮಲಿನಲ್ಲೇ ಈ ಗೋಲ್ಡಿ ಮೋಹನ ಮತ್ತು ಹುಡುಗರು ಇರುವ ಫ್ಲೆಕ್ಸ್‌ಗಳನ್ನು ಕಿತ್ತು ಹಾಕುತ್ತಾನೆ. ಫ್ಲೆಕ್ಸ್‌ನಲ್ಲಿ ತನ್ನ ಫೋಟೊ ಇಲ್ಲದ್ದನ್ನು ಕಂಡು ಕೆಂಡಾಮಂಡಲವಾಗುವ ಭೂತ ಎಲ್ಲಾ ಫ್ಲೆಕ್ಸ್ ಕಿತ್ತು ಮರುದಿನ ತನ್ನ ಆಳೆತ್ತರದ ಫ್ಲೆಕ್ಸ್‌ನಲ್ಲಿ ವೃತ್ತವೊಂದರಲ್ಲಿ ತಂದು ನಿಲ್ಲಿಸುವ ಮೂಲಕ ‘ಭೂತ ಮಿಸ್ಸಿಂಗ್’ ಅಂತ್ಯವಾಗುತ್ತದೆ.

ನಟರ ಸಹಜಾಭಿನಯ, ಸರಳ ಮೇಕಪ್, ಯುವಜನರಿಗೆ ಸುಲಭವಾಗಿ ದಾಟಿಸಬಹುದಾದ ಕಥಾವಸ್ತುವನ್ನು ನಿರ್ದೇಶಕ ಶಶಾಂಕ್ ಸೋಗಾಲ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಲ್ಲಿ ತುಸು ಡಬ್ಬಲ್ ಮೀನಿಂಗ್ ಅನಿಸುವ ಸಂಭಾಷಣೆಗಳು ಬರುತ್ತವೆಯಾದರೂ ಅದು ಚಿತ್ರದ ಕಥೆಗೆ ಪೂರಕವಾಗಿದೆ. ಪಕ್ಕಾ ಕೊಳೆಗೇರಿ ಹುಡುಗರ ಪಾತ್ರದಲ್ಲಿ ಅಭಿನಯತರಂಗದ ವಿದ್ಯಾರ್ಥಿಗಳು ಜೀವತುಂಬಿದ್ದಾರೆ.

ಅಭಿನಯ ತರಂಗ ವಿದ್ಯಾರ್ಥಿಗಳಿಗಾಗಿ ತಯಾರಿಸಿರುವ ಈ ಕಿರುಚಿತ್ರವನ್ನು ಇದುವರೆಗೆ ಯೂ ಟ್ಯೂಬ್‌ನಲ್ಲಿ ಎಂಟೂವರೆ ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ನಿರ್ದೇಕರ ಮಾತು
‘ಫ್ಲೆಕ್ಸ್’ ಬ್ಯಾನ್ ಆಗುವ ಮುಂಚೆಯೇ ಈ ಕಿರುಚಿತ್ರ ನಿರ್ಮಿಸಿದ್ದೆ. ನಾನು ಬಯಸುವ ಮಾಧ್ಯಮ ಸಿನಿಮಾ. ಅದಕ್ಕಾಗಿಯೇ ಈ ಮಾಧ್ಯಮದಲ್ಲಿ ಫ್ಲೆಕ್ಸ್ ಬಗ್ಗೆ ಹೇಳಿದರೆ ಚೆನ್ನಾಗಿರುತ್ತದೆ ಅಂತ ಕಿರುಚಿತ್ರ ಮಾಡಿದೆ. ಅಭಿನಯತರಂಗದ ವಿದ್ಯಾರ್ಥಿಗಳಿಗಾಗಿ ಈ ಬಾರಿ ಕಿರುಚಿತ್ರವನ್ನೂ ಹೇಳಿಕೊಡುತ್ತಿದ್ದಾರೆ. ಅವರಿಗಾಗಿಯೇ ಈ ಕಿರುಚಿತ್ರ ನಿರ್ಮಿಸಿದೆ. ಕೇವಲ ಎರಡು ದಿನಗಳಲ್ಲೇ ಈ ಚಿತ್ರ ನಿರ್ಮಿಸಿದ್ದೇನೆ.

ಫ್ಲೆಕ್ಸ್ ಬಗ್ಗೆ ಪ್ರಚಾರಪ್ರಿಯರಿಗಿರುವ ವ್ಯಾಮೋಹ ಅತೀವವಾದದ್ದು. ಅವರಿಗೆ ಪರಿಸರ ಮಾಲಿನ್ಯದ ಬಗೆಗಿನ ಕಾಳಜಿಗಿಂತ ಜನಪ್ರಿಯತೆಯೇ ಮಾನದಂಡ. ಹಾಗಾಗಿ, ಅಂಥವರ ಮನಸ್ಥಿತಿಗಳು ಎಂದಿಗೂ ಬದಲಾಗದು. ಎರಡು ಸಾವಿರ ರೂಪಾಯಿ ಸಿಕ್ಕರೆ ಸಾಕು ಸುಲಭವಾಗಿ ಫ್ಲೆಕ್ಸ್ ಹಾಕಿಸಿಬಿಡಬಹುದು ಅನ್ನುವ ಮನಸ್ಥಿತಿ ಕೆಲವರದ್ದು. ಆ ಮನಸ್ಥಿತಿಯನ್ನೇ ‘ಭೂತ ಮಿಸ್ಸಿಂಗ್’ ಕಿರುಚಿತ್ರದಲ್ಲಿ ತರಲು ಪ್ರಯತ್ನಿಸಿದ್ದೇನೆ.

ಸಿನಿಮಾ ಕಲ್ಚರ್‌ಗೆ ಮೀರಿ ತುಸು ಕಚ್ಚಾ ಭಾಷೆಯನ್ನೇ ಬಳಸಿಕೊಂಡಿದ್ದೇನೆ. ಪ್ರಪಂಚದ ಶ್ರೇಷ್ಠ ಸಿನಿಮಾಗಳಲ್ಲಿ ವಾಸ್ತವಿಕತೆಗೆ ಹತ್ತಿರವಾಗುವಂಥ ಅಂಶಗಳಿರುತ್ತವೆ. ಅದನ್ನೇ ಇಲ್ಲಿ ಪ್ರಯೋಗಿಸಿದ್ದೇನೆ ಅಷ್ಟೇ. ಭಾಷೆಯ ವಿಚಾರದಲ್ಲಿ ತುಂಬಾ ಮಡಿಮೈಲಿಗೆ ಇರಬಾರದು ಅನ್ನೋದು ನನ್ನ ನಂಬಿಕೆ. ಕೆಲವರಿಗೆ ಅದು ಇಷ್ಟವಾಗಬಹುದು, ಇನ್ನು ಕೆಲವರಿಗೆ ಇಷ್ಟವಾಗದಿರಬಹುದು. ಆದರೆ, ಈ ಕಿರುಚಿತ್ರಕ್ಕೆ ಅಂಥ ಭಾಷೆಯ ಅಗತ್ಯವಿತ್ತು ಅನಿಸಿತು. ಹಾಗಾಗಿ, ಕಚ್ಚಾ ಭಾಷೆಯನ್ನೇ ಉಳಿಸಿಕೊಂಡೆ.
–ಶಶಾಂಕ್ ಸೋಗಾಲ, ನಿರ್ದೇಶಕ

***

ಕಿರುಚಿತ್ರದ ಹೆಸರು: ಭೂತ ಮಿಸ್ಸಿಂಗ್
ಚಿತ್ರಕಥೆ ಸಂಭಾಷಣೆ: ಅನಂತ ಶಾಂದ್ರೇಯ
ನಿರ್ದೇಶನ: ಶಶಾಂಕ್ ಸೋಗಾಲ
ಸಂಗೀತ: ವಿಜಯ್ ರಾಜ್
ಸಂಕಲನ: ಚಂದನ್ ಸಿ.ಎಂ.
ಛಾಯಾಗ್ರಹಣ: ರಾಹುಲ್ ರಾಯ್
ಕಲಾವಿದರು: ಅಭಯ್ ಎಸ್., ಅಭಿಷೇಕ್ ಎಸ್., ಚೇತನ್ ರಾಜ್, ಜೀವನ್ ಮಾದೇಶ್, ಪ್ರವೀಣ್ ಜಿ., ಪ್ರೀತಂ ಗೌಡ, ಯುವ, ಶಿವರಾಜ್ ಡಿಎನ್‌ಎಸ್, ಸಿದ್ದಾರೂಢ ಕಮಟಗಿ, ಸುಮನ್ ಚಂದ್ರಶೇಖರ್, ಸೂರಜ್ ಶೆಟ್ಟಿ

ಯುಟ್ಯೂಬ್ ಲಿಂಕ್: WD3zrIqRpF8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT