ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಂ ನಟನ ಹಂಗಾಮಿ ನಿರ್ದೇಶನ

Last Updated 23 ಫೆಬ್ರುವರಿ 2019, 10:48 IST
ಅಕ್ಷರ ಗಾತ್ರ

‘ಚಂಬಲ್‌’ ಸಿನಿಮಾ ಒಪ್ಪಿಕೊಳ್ಳಲು ಬಹುಮುಖ್ಯ ಕಾರಣ ಹೇಳಿ?

ಮೊದಲನೆಯದಾಗಿ ಜೇಕಬ್‌ ವರ್ಗೀಸ್‌. ಅವರ ನಿರ್ದೇಶನದ ‘ಸವಾರಿ’ ಮತ್ತು ‘ಪೃಥ್ವಿ‍’ ಸಿನಿಮಾಗಳನ್ನು ನೋಡಿ ನಾನು ಅವರ ಅಭಿಮಾನಿಯಾಗಿದ್ದೆ. ಎರಡನೆಯದಾಗಿ ಚಿತ್ರದಲ್ಲಿನ ನನ್ನ ಪಾತ್ರ. ಐಎಎಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಆ ಕಥೆಯೂ ಅಷ್ಟೇ ಅದ್ಭುತವಾಗಿದೆ. ಇಷ್ಟೆಲ್ಲ ಒಟ್ಟಿಗೇ ಕೂಡಿಬಂದಾಗ ಒಪ್ಪಿಕೊಳ್ಳದೆ ಇರಲು ಕಾರಣಗಳೇ ಇರಲಿಲ್ಲ.

ಇದು ಡಿ.ಕೆ. ರವಿ ಅವರ ಜೀವನಾಧಾರಿತ ಸಿನಿಮಾ ಎಂಬ ಸುದ್ದಿ ಇದೆಯಲ್ಲ?

ನಾನು ಆ ಬಗ್ಗೆ ಯಾವ ಸ್ಪಷ್ಟನೆಯನ್ನೂ ಕೊಡುವುದಿಲ್ಲ. ಅವರವರ ದೃಷ್ಟಿಕೋನಕ್ಕೆ ಬಿಟ್ಟ ವಿಚಾರ. ಎಲ್ಲ ಸಿನಿಮಾಗಳನ್ನೂ ಜನರಿಗೇ ನಿರ್ಧರಿಸಲು ಬಿಡಬೇಕು. ಇದೊಂದು ದಕ್ಷ ಅಧಿಕಾರಿಯ ಕಥೆ. ಸಮಾಜದಲ್ಲಿ ನಡೆದಿರುವ ಹಲವು ಸತ್ಯಘಟನೆಗಳಿಂದ ಸ್ಫೂರ್ತಿ ಪಡೆದಿರುವ ಸಿನಿಮಾ. ನಾನಿದರಲ್ಲಿ ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ ಎಂದಷ್ಟೇ ಹೇಳಬಲ್ಲೆ.

ಜೇಕಬ್‌ ವರ್ಗೀಸ್‌ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಬೇರೆಯೇ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡಿದ ಅನುಭವ ಸಿಕ್ಕಿತು. ಇದು ಒಂಥರ ಹೊಸ ಅನುಭವ. ತಾಜಾ ಆಗಿ ಏನೋ ಕಲೀತಾ ಇದ್ದೀನಿ ಎನಿಸುತ್ತಿತ್ತು. ನಟನೆಯಾಗಲಿ, ಮೇಕಿಂಗ್‌ ಸ್ಟೈಲ್‌ ಆಗಲಿ ಸಣ್ಣ ಸಣ್ಣ ಸೂಕ್ಷ್ಮಗಳನ್ನು ಇಟ್ಟುಕೊಂಡು ಕೆಲಸ ಮಾಡುವ ನಿರ್ದೇಶಕ ಅವರು. ಅದು ನನಗೆ ಇಷ್ಟವಾಯ್ತು. ನಾನು ಕಲಿತುಕೊಳ್ಳಲಿಕ್ಕೂ ಸಾಕಷ್ಟು ವಿಷಯಗಳಿದ್ದವು.

ಸತೀಶ್‌ ಅವರಿಗೇ ಈ ಪಾತ್ರವನ್ನು ಬರೆಯುತ್ತಿದ್ದೇನೆ ಎಂದು ನಿರ್ಧರಿಸಿಕೊಂಡು ಸೃಷ್ಟಿಸಿದ ಪಾತ್ರಗಳಲ್ಲಿ ನಟಿಸುವುದು ಬೇರೆ. ಆದರೆ ಕೆಲವರು ಸತೀಶ್‌ ಇಂಥ ಪಾತ್ರಗಳನ್ನೂ ನಿರ್ವಹಿಸುತ್ತಾರೆ ಎಂದು ನಿರ್ಧರಿಸಿ ಅವಕಾಶ ಕೊಡುತ್ತಾರೆ. ಅದು ಬೇರೆಯದೇ ಅನುಭವ. ಹೀಗೆ ಇಂಥ ಪಾತ್ರಗಳನ್ನೂ ನೀನು ಮಾಡಬಹುದು ಎಂದು ಮಾಡಿಸಿದ ಸಿನಿಮಾ ಇದು.

‘ಅಯೋಗ್ಯ’ ಯಶಸ್ಸನ್ನು ಕಂಡಿತು. ಅಂದ ಮೇಲೆ ‘ಚಂಬಲ್‌’ ಮೇಲೂ ಜನರಿಗೆ ನಿರೀಕ್ಷೆ ಇರುತ್ತದೆ. ಜನರ ನಿರೀಕ್ಷೆಯನ್ನು ಪೂರ್ತಿಗೊಳಿಸಬಹುದಾ?

ಖಂಡಿತ ನಿರೀಕ್ಷೆ ತಣಿಸುತ್ತದೆ. ಆದರೆ ಜನರು ‘ಅಯೋಗ್ಯ’ದಲ್ಲಿ ಇರುವುದನ್ನೇ ಈ ಸಿನಿಮಾದಲ್ಲಿಯೂ ನಿರೀಕ್ಷೆ ಮಾಡಬಾರದು. ಮೊದಲೇ ಹೇಳಿದ ಹಾಗೆ ಇದರಲ್ಲಿ ನನ್ನದು ದಕ್ಷ ಐಎಎಸ್‌ ಅಧಿಕಾರಿ ಪಾತ್ರ. ಇದನ್ನು ಮಾಸ್‌ ಅಂತಲೂ ಕರೆಯಬಹುದು; ಕ್ಲಾಸ್‌ ಅಂತ ಬೇಕಾದರೂ ಕರೆಯಬಹುದು. ಸಾಂಗ್ಲಿಯಾನ ಜೊತೆಗೂ ಹೋಲಿಸಬಹುದು. ಹೀಗೆ ಬೇರೆ ಬೇರೆ ಆಯಾಮಗಳಿವೆ. ಖಂಡಿತ ಮನರಂಜನೆ ಇದೆ. ಮನರಂಜನೆ ಅಂದಾಕ್ಷಣ ನಗಿಸುವುದು ಮಾತ್ರ ಅಲ್ಲವಲ್ಲ. ಥ್ರಿಲ್ಲರ್ ಸಿನಿಮಾ ಇದು. ಪಕ್ಕಾ ಕಮರ್ಷಿಯಲ್‌ ಸಿನಿಮಾ. ಹೀರೊಯಿಸಂ ಇದೆ. ಜೊತೆಗೆ ಒಂದು ಸಂವೇದನಾಶೀಲ ಕಥೆಯೂ ಇದೆ.

ನಿರ್ದೇಶನಕ್ಕೂ ಇಳಿಯುತ್ತಿದ್ದೀರಿ. ವೃತ್ತಿಜೀವನದ ಏರುಸ್ಥಿತಿಯಲ್ಲಿರುವಾಗ ನಿರ್ದೇಶನಕ್ಕಿಳಿಯುವುದು ರಿಸ್ಕ್‌ ಅನಿಸುವುದಿಲ್ಲವಾ?

ರಿಸ್ಕ್‌ ಇದೆ. ಆದರೆ ರಿಸ್ಕ್‌ ತೆಗೆದುಕೊಳ್ಳದೆ ಏನೂ ಮಾಡಕ್ಕಾಗಲ್ಲ ಜೀವನದಲ್ಲಿ. ನಮಗೆ ಅನಿಸಿದಾಗ ಅದನ್ನು ಮಾಡಿಬಿಡಬೇಕು. ಇನ್ನು ಐದೋ ಹತ್ತೋ ವರ್ಷ ಬಿಟ್ಟು ನಿರ್ದೇಶನ ಮಾಡಬಹುದು. ಆದರೆ ಆಗ ಈ ಸ್ಕ್ರಿಪ್ಟ್ ಮಾಡಕ್ಕಾಗುವುದಿಲ್ಲ. ಈ ಸ್ಕ್ರಿಪ್ಟ್‌ಗೋಸ್ಕರ ನಿರ್ದೇಶನಕ್ಕಿಳಿದಿರುವುದು.

ನಾನು ನಿರ್ದೇಶಿಸುತ್ತಿರುವ ‘ಮೈ ನೇಮ್ ಇಸ್ ಸಿದ್ದೇಗೌಡ’ ರೊಮ್ಯಾಂಟಿಕ್‌ ಕಾಮಿಡಿ ಡ್ರಾಮಾ. ಎಲ್ಲಿಂದಲೋ ಬಂದು, ನೀನಾಸಂಗೆ ಹೋಗಿ ರಂಗಭೂಮಿಯಲ್ಲಿ ಕೆಲಸ ಮಾಡಿ, ಸಿನಿಮಾಗೆ ಬಂದು ನಾಯಕನಟನಾಗಿರುವ ನನ್ನ ಬದುಕಿನ ಬಗ್ಗೆ ಯೋಚಿಸಿದರೆ ನನಗೇ ಆಶ್ಚರ್ಯವಾಗುತ್ತದೆ. ನನ್ನ ಬದುಕಿನ ಜರ್ನಿಯೇ ಈ ಸಿನಿಮಾಗೆ ಸ್ಫೂರ್ತಿ. ನನ್ನ ಬದುಕಿನ ಕಥೆಗೂ ಆ ಸಿನಿಮಾಗೂ ತುಂಬ ಸಾಮ್ಯತೆ ಇದೆ.

ನಿರ್ದೇಶಕನಾಗಿಯೂ ಮುಂದುವರಿಯುತ್ತೀರಾ?

ನಾನು ಮೂಲತಃ ನಟ. ನಟನಾಗಿಯೇ ಇರುತ್ತೇನೆ. ಎಲ್ಲೋ ಎರಡು ಮೂರು ಸ್ಕ್ರಿಪ್ಟ್‌ ನಿರ್ದೇಶನ ಮಾಡಬಹುದಷ್ಟೆ. ನನಗೆ ಇಷ್ಟವಾಗಿದ್ದು, ನಾನು ಮಾತ್ರ ಮಾಡಬಹುದು ಅನಿಸುವಂಥದ್ದು, ನಾನೇ ಮಾಡಬೇಕು ಎಂದು ತೀವ್ರವಾಗಿ ಅನಿಸಿದ ಕಥೆಗಳನ್ನು ನಿರ್ದೇಶಿಸುತ್ತೇನೆ ಅಷ್ಟೆ. ನಿರ್ದೇಶನವನ್ನು ವೃತ್ತಿಯಾಗಿ ತೆಗೆದುಕೊಳ್ಳುವ ಆಲೋಚನೆ ಖಂಡಿತ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT