ಅಪ್ಪನ ಕನಸು ಈಡೇರಿಸಿದ ಚಾಣಾಕ್ಷ

7

ಅಪ್ಪನ ಕನಸು ಈಡೇರಿಸಿದ ಚಾಣಾಕ್ಷ

Published:
Updated:

‘ಸಿನಿಮಾ ರಂಗಕ್ಕೆ ಬರುವ ಸಾಮಾನ್ಯರಿಗೆ ಅವಕಾಶಗಳು ಸುಲಭವಾಗಿ ಸಿಗುತ್ತವೆ. ಆದರೆ, ಕಲಾವಿದರ ಮಕ್ಕಳು ಸಾಕಷ್ಟು ಸರ್ಕಸ್‌ ಮಾಡಬೇಕಾಗುತ್ತದೆ’ –ಹೀಗೆಂದು ಕಲಾವಿದರ ಮಕ್ಕಳು ಚಿತ್ರರಂಗ ಪ್ರವೇಶಿಸುವಾಗ ಎದುರಾಗುವ ಸಂಕಷ್ಟಗಳ ಬಗ್ಗೆ ಹೇಳಿದ್ದು ನಟ ದರ್ಶನ್.

‘ಚಾಣಾಕ್ಷ’ ಸಿನಿಮಾದ ಆಡಿಯೊ ಬಿಡುಗಡೆಗೆ ಆಗಮಿಸಿದ್ದ ಅವರು, ‘ಶೂಟಿಂಗ್‌ನಲ್ಲಿ ಹೊಸ ಕಲಾವಿದರು ಜಾಸ್ತಿ ಟೇಕ್‌ ತೆಗೆದುಕೊಂಡರೆ ನಿರ್ದೇಶಕರು ಸುಮ್ಮನಿರುತ್ತಾರೆ. ನಾವು ಇದನ್ನು ಮಾಡಿದರೆ ಕಲಾವಿದರ ಮಗನಾಗಿ ಹೀಗೆ ಮಾಡುತ್ತಿದ್ದಾನಲ್ಲಪ್ಪಾ ಎಂದು ಗೊಣಗುತ್ತಾರೆ’ ಎಂದರು.  

‘ಉದ್ಯಮದಲ್ಲಿ ತೆವಳಿ, ಉರುಳಿಕೊಂಡು ಅಂಬೆಗಾಲಿಡುತ್ತಾ ಇಲ್ಲಿಯವರೆಗೆ ಬಂದಿದ್ದೇನೆ. ನವಗ್ರಹ ಚಿತ್ರದಲ್ಲಿ ಧರ್ಮ ಕೀರ್ತಿರಾಜ್‌ನನ್ನು ಕ್ಯಾಡ್‌ಬರೀಸ್ ಅಂತಾ ನಾಮಕರಣ ಮಾಡಿದ್ದೆವು. ಈ ಚಿತ್ರದ ಹಾಡುಗಳು, ಆ್ಯಕ್ಷನ್ ನೋಡಿದಾಗ ಹಳೆಯ ಹೆಸರು ಅವನಿಗೆ ಅನ್ವಯಿಸುವುದಿಲ್ಲ. ಚಿತ್ರ ಸೂಪರ್ ಹಿಟ್ ಆಗಲಿ’ ಎಂದು ಶುಭ ಕೋರಿದರು.

ಅಪ್ಪನ ಕನಸನ್ನು ಮಗ ಚಾಣಾಕ್ಷನಾಗಿ ಹೇಗೆ ಈಡೇರಿಸುತ್ತಾನೆ ಎನ್ನುವುದೇ ಚಿತ್ರದ ತಿರುಳು. ‘ಲಾಕಪ್‌ಡೆತ್ ಚಿತ್ರದಲ್ಲಿ ಇದ್ದಂತಹ ಸಾಹಸ ದೃಶ್ಯಗಳು ಈ ಚಿತ್ರದಲ್ಲಿಯೂ ಇವೆ. ಪ್ರೀತಿ, ಸೆಂಟಿಮೆಂಟ್ ಜೊತೆಗೆ ಭರಪೂರ ಕಾಮಿಡಿ ಇದೆ’ ಎಂದರು ನಿರ್ದೇಶಕ ಮಹೇಶ್‌ ಚಿನ್ಮಯ್.

ನಿರ್ಮಾಪಕ ಜಿ. ವೆಂಕಟೇಶಮೂರ್ತಿ, ‘80 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸಾಹಸ ದೃಶ್ಯಗಳನ್ನು ಥ್ರಿಲ್ಲರ್‌ ಮಂಜು ಸಂಯೋಜಿಸಿದ್ದಾರೆ’ ಎಂದರು.

ನಾಯಕ ಧರ್ಮ ಕೀರ್ತಿರಾಜ್, ನಾಯಕಿ ಅರ್ಚನಾ, ಇನ್‌ಸ್ಪೆಕ್ಟರ್‌ ಪಾತ್ರ ಮಾಡಿರುವ ಅಭಯ್, ನೃತ್ಯ ನಿರ್ದೇಶಕ ತ್ರಿಭುವನ್ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಧನ್ಯವಾದ ಹೇಳಲು ಸಮಯ ಮೀಸಲಿಟ್ಟರು. ಚಿತ್ರಕ್ಕೆ ಯು/ ಎ ಪ್ರಮಾಣ ಪತ್ರ ಸಿಕ್ಕಿದ್ದು, ಮುಂಬರುವ ಜನವರಿಯಲ್ಲಿ ಚಿತ್ರ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !