ಬದಲಾದ ಚಲನಚಿತ್ರೋತ್ಸವ ಸ್ವರೂಪ

7
ದಸರೆಗೆ ಸಿನಿಮಾ ರಂಗು

ಬದಲಾದ ಚಲನಚಿತ್ರೋತ್ಸವ ಸ್ವರೂಪ

Published:
Updated:
Deccan Herald

ವರ್ಷದಿಂದ ವರ್ಷಕ್ಕೆ ದಸರಾ ಚಲನಚಿತ್ರೋತ್ಸವ ತನ್ನ ವೈಭವವನ್ನು ಹೆಚ್ಚಿಸಿಕೊಳ್ಳುತ್ತಿದೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಮಟ್ಟಕ್ಕೆ ಚಿತ್ರಗಳನ್ನು ಆಯ್ಕೆ ಮಾಡಿ ಪ್ರದರ್ಶಿಸುತ್ತಿರುವುದು ಚಿತ್ರೋತ್ಸವದ ಬದಲಾದ ಸ್ವರೂಪವನ್ನು ಬಿಂಬಿಸುತ್ತದೆ.

ಏಳೆಂಟು ವರ್ಷಗಳ ಹಿಂದೆ ಐದಾರು ಚಿತ್ರಮಂದಿರಗಳಲ್ಲಿ ಮಾರ್ನಿಂಗ್‌ ಷೋ ಮಾತ್ರ ದಸರಾ ಚಲನಚಿತ್ರೋತ್ಸವ ಆಯೋಜಿಸಲಾಗುತ್ತಿತ್ತು. ಸಿನಿಮಾ ವೀಕ್ಷಕರ ಅಭಿರುಚಿ ಹಾಗೂ ಬೇಡಿಕೆ ಹೆಚ್ಚಾದಂತೆ ಸಿನಿಮಾಗಳು ಹಾಗೂ ತೆರೆಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಆಯ್ಕೆಯಲ್ಲೂ ಬದಲಾವಣೆಗಳಾದವು. ಇದೀಗ ಮೂರು ವಿಭಾಗಗಳಲ್ಲಿ (ಜನಪ್ರಿಯ ಕನ್ನಡ, ಪನೋರಮಾ ಹಾಗೂ ಜಾಗತಿಕ) ಚಿತ್ರ ಪ್ರದರ್ಶನ ಆಯೋಜಿಸುತ್ತಿರುವುದನ್ನು ನೋಡಬಹುದು.

ಈ ಬಾರಿ ಒಟ್ಟು 70 ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ‘ದಿ ಗ್ರೇಟ್ ಡಿಕ್ಟೇಟರ್‌’, ‘ದಿ ಪ್ರೆಸಿಡೆಂಟ್‌’, ‘ವುಮೆನ್‌ ವಿಥೌಟ್‌ ಮೆನ್‌’, ‘ದಿ ಟೂರಿನ್‌ ಹಾರ್ಸ್‌’, ‘ದಿ ಲೈವ್ಸ್‌ ಆಫ್‌ ಅದರ್ಸ್‌’ ಚಿತ್ರಗಳು ಪಟ್ಟಿಯಲ್ಲಿವೆ.

ಪ್ರಾದೇಶಿಕ ಚಿತ್ರಗಳಲ್ಲಿ ಅಸ್ಸಾಂನ ‘ವಿಲೇಜ್‌ ರಾಕ್‌ಸ್ಟಾರ್‌’, ಮರಾಠಿಯ ‘ವೆಂಟಿಲೇಟರ್‌’, ಮಲಯಾಳಂನ ‘ಟೇಕ್‌ ಆಫ್‌’, ಹಿಂದಿಯ ‘ಪಿಹು’ ಹಾಗೂ ತುಳು ಭಾಷೆಯ ‘ಪಡ್ಡಾಯಿ’ ಸಿನಿಆಸಕ್ತರ ಮೆಚ್ಚಿನ ಚಿತ್ರಗಳೆನಿಸಿವೆ.

‘ಟಗರು’, ‘ಹೆಬ್ಬೆಟ್‌ ರಾಮಕ್ಕ’, ಸ.ಹಿ.ಪ್ರಾ ಶಾಲೆ ಕಾಸರಗೂಡು’, ‘ಕಾನೂರಾಯಣ’ ‘ಒಂದಲ್ಲಾ ಎರಡಲ್ಲಾ’ ಸೇರಿದಂತೆ 26 ಕನ್ನಡ ಚಿತ್ರಗಳು ತೆರೆಕಾಣುತ್ತಿವೆ. ಮೈಸೂರಿನಲ್ಲಿ ಒಂದು ವರ್ಷದಿಂದ ಅಂತರರಾಷ್ಟ್ರೀಯ ಸಿನಿಮೋತ್ಸವವನ್ನು ನಿಲ್ಲಿಸಿರುವುದಕ್ಕೂ ಸಿನಿಮಾಸಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚಲನಚಿತ್ರೋತ್ಸವದ ಅಗತ್ಯದ ಬಗ್ಗೆ ಸಿನಿಮಾಸಕ್ತರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ನಾಲ್ಕು ವರ್ಷಗಳಿಂದ ಚಲನಚಿತ್ರೋತ್ಸವಕ್ಕೆ ಬರುತ್ತಿದ್ದೇನೆ. ಕಡಿಮೆ ಹಣದಲ್ಲಿ ಹೆಚ್ಚು ಸಿನಿಮಾಗಳನ್ನು, ಅದರಲ್ಲೂ ವಿಶ್ವದರ್ಜೆಯ ಚಿತ್ರಗಳನ್ನು ದೊಡ್ಡ ಸ್ಕ್ರೀನ್‌ನಲ್ಲಿ ನೋಡಬಹುದು. ಅಪರೂಪದ ಚಿತ್ರಗಳನ್ನು ಪ್ರತಿವರ್ಷ ಆಯ್ಕೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದರು ಶ್ರೀರಾಂಪುರ 2ನೇ ಹಂತದ ಉಮಾಚಂದ್ರ.

‘ಜಗತ್ತಿನ ವಿವಿಧ ಸಿನಿಮಾಗಳನ್ನು ನೋಡುವುದರಿಂದ ಅಲ್ಲಿನ ಸಂಸ್ಕೃತಿ, ಬದುಕು ಹಾಗೂ ಅವರ ಹೋರಾಟ ತಿಳಿಯುತ್ತದೆ. ದಸರಾದಲ್ಲಿ ಬಹಳಷ್ಟು ಕಡೆ ಕಾರ್ಯಕ್ರಮಗಳಿರುವುದರಿಂದ ಸಿನಿಮೋತ್ಸವಕ್ಕೆ ಬರುವವರಿಗೆ ತೊಂದರೆಯಾಗಬಹುದು. ಆದ್ದರಿಂದ ದಸರಾ ಮುಗಿದ ಮೇಲೆ ಚಲನಚಿತ್ರೋತ್ಸವ ಆಯೋಜಿಸಿದರೆ ಒಳ್ಳೆಯದು. ಹಾಗೂ ಆನ್‌ಲೈನ್‌ನಲ್ಲೂ ನೋಂದಣಿಗೆ ಅವಕಾಶ ಮಾಡಿಕೊಡಬೇಕು’ ಎಂದು ಹೇಳುತ್ತಾರೆ ವೈದ್ಯ ಶ್ರೀನಿವಾಸಮೂರ್ತಿ

ಪ್ರಚಾರದ ಕೊರತೆ: ಎರಡು ತಿಂಗಳಿಂದ ಚಲನಚಿತ್ರೋತ್ಸವಕ್ಕೆ ತಯಾರಿ ಮಾಡಿಕೊಂಡಿದ್ದೇವೆ. ಈ ಬಾರಿ ಚುನಾವಣೆ ನೀತಿಸಂಹಿತೆ ಜಾರಿಯಿದ್ದರಿಂದ ಪ್ರಚಾರಕ್ಕೆ ತೊಡಕಾಯಿತು. ಪರೀಕ್ಷೆ, ಪ್ರಾಜೆಕ್ಟ್‌ ನೆಪದಲ್ಲಿ ವಿದ್ಯಾರ್ಥಿಗಳು ಸಿನಿಮೋತ್ಸವದಿಂದ ದೂರ ಉಳಿಯುತ್ತಿದ್ದಾರೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬೇಕು. ಕಳೆದ ವರ್ಷ ಪಾಸ್‌ ಒಂದಕ್ಕೆ ₹600 ಇತ್ತು, ಈ ಬಾರಿ ₹ 300 ಮಾಡಿದ್ದೇವೆ. ಸಿನಿಮೋತ್ಸವಗಳಿಗೆ ಜನ ಬರಬೇಕೆಂಬುದೇ ನಮ್ಮ ಉದ್ದೇಶ ಎನ್ನುತ್ತಾರೆ’ ಹತ್ತು ವರ್ಷಗಳಿಂದ ಚಲನಚಿತ್ರೋತ್ಸವ ಆಯೋಜನೆಯಲ್ಲಿ ತೊಡಗಿಸಿಕೊಂಡಿರುವ ದಸರಾ ಚಲನಚಿತ್ರೋತ್ಸವ ಉಪಸಮಿತಿಯ ಮಧು.

ದಸರಾ ಚಲನಚಿತ್ರೋತ್ಸವಕ್ಕೆ ಈಗಾಗಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಅ.17ರವರೆಗೆ ಮಾಲ್‌ ಆಫ್ ಮೈಸೂರಿನ ಐನಾಕ್ಸ್‌ನಲ್ಲಿ ನಡೆಯುವ ಸಿನಿಮಾ ಹಬ್ಬ ಪ್ರವಾಸಿಗರಿಗೆ ಮನರಂಜನೆ ನೀಡಲಿದೆ.

ಮಾಹಿತಿ ಹಾಗೂ ನೋಂದಣಿಗೆ: 94480 92049, 89705 43203.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !