‘ಚಿಟ್ಟೆ’ ಸಿನಿಮಾ ಹಾರಲು ರೆಡಿ!

7

‘ಚಿಟ್ಟೆ’ ಸಿನಿಮಾ ಹಾರಲು ರೆಡಿ!

Published:
Updated:
ದೀಪಿಕಾ

ಒಂದು ವರ್ಷದ ಹಿಂದೆ ಜನ್ಮ ತಳೆದ ‘ಚಿಟ್ಟೆ’ ಈಗ ಹಾರಲು ಸಿದ್ಧವಾಗಿದೆ. ಅಂದರೆ, ತೆರೆಗೆ ಬರಲು, ಕನ್ನಡ ಸಿನಿಮಾ ವೀಕ್ಷಕರ ಮನ ತಣಿಸಲು ಸಿದ್ಧವಾಗಿದೆ. ಎಂ.ಎಲ್. ಪ್ರಸನ್ನ ನಿರ್ದೇಶನದ ಈ ಚಿತ್ರ ಶುಕ್ರವಾರ (ಜೂನ್‌ 29) ಬಿಡುಗಡೆ ಆಗುತ್ತಿದೆ.

ಈ ಹಿನ್ನೆಲೆಯಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ನಾಯಕಿ ಹರ್ಷಿಕಾ ಪೂಣಚ್ಚ, ಪ್ರಸನ್ನ ಸೇರಿದಂತೆ ಚಿತ್ರತಂಡದ ಹಲವರು ಅಲ್ಲಿದ್ದರು. ‘ನಾಯಕ ನಟ ಯಶಸ್ ಸೂರ್ಯ ಬೇರೊಂದು ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ಕಾರಣ ಬಂದಿಲ್ಲ’ ಎಂದು ಹೇಳಿತು ‘ಚಿಟ್ಟೆ’ ತಂಡ.

‘ವರ್ಷದ ಹಿಂದೆ ಶುರುವಾದ ಕೆಲಸ ಈಗ ಸಿನಿಮಾ ಬಿಡುಗಡೆ ಹಂತಕ್ಕೆ ಬಂದಿದೆ. ಇದುವರೆಗೆ ಅಂದಾಜು ಎರಡು ಕೋಟಿ ರೂಪಾಯಿ ಖರ್ಚಾಗಿದೆ. ಸಿನಿಮಾ ಮಾಡುವಲ್ಲಿ ಅಡೆತಡೆಗಳು ಎದುರಾಗಿದ್ದರೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ’ ಎಂದರು ಪ್ರಸನ್ನ.

ಇಷ್ಟು ಹೇಳಿದ ಪ್ರಸನ್ನ, ನಾಯಕಿ ಹರ್ಷಿಕಾ ಬಗ್ಗೆ ಒಂದಿಷ್ಟು ಮೆಚ್ಚುಗೆಯ ಮಾತುಗಳನ್ನು ಹೇಳಿದರು. ‘ಸಿನಿಮಾ ಕೆಲಸಗಳು ಮುಗಿದ ನಂತರ, ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿ, ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದ ರೋಡ್ ಶೋಗಳಲ್ಲಿ ಹರ್ಷಿಕಾ ಪಾಲ್ಗೊಂಡಿದ್ದಾರೆ. ಸ್ವಲ್ಪವೂ ಆ್ಯಟಿಟ್ಯೂಡ್ ತೋರಿಸಲಿಲ್ಲ ಅವರು. ಇದು ತಮ್ಮದೇ ನಿರ್ಮಾಣದ ಚಿತ್ರವೇನೂ ಎಂಬಂತೆ ಅವರು ಸಹಕಾರ ನೀಡಿದ್ದಾರೆ. ಈ ಸಿನಿಮಾಕ್ಕೆ ಅವರು ಒಂದು ಶಕ್ತಿ’ ಎಂದರು.

ಕಿರುತೆರೆ ನಟಿ ದೀಪಿಕಾ ಅವರು ಈ ಚಿತ್ರದಲ್ಲಿ ಒಂದು ಪಾತ್ರ ನಿಭಾಯಿಸಿದ್ದಾರೆ. ಈ ಪಾತ್ರ ಇದೆ ಎಂಬುದನ್ನು ಬಹಿರಂಗಪಡಿಸಲೇಬಾರದು ಎಂದು ಚಿತ್ರತಂಡ ಮೊದಲು ನಿರ್ಧರಿಸಿತ್ತಂತೆ. ಆದರೆ, ಕೊನೆಗೆ ಅವರ ಪಾತ್ರ ಇರುವುದನ್ನು ಸಿನಿಪ್ರೇಮಿಗಳಿಗೆ ತಿಳಿಸಲೇಬೇಕಾಯಿತು. ‘ನನ್ನದು ಸಿಕ್ಕಾಪಟ್ಟೆ ಸಸ್ಪೆನ್ಸ್ ಇರುವ ಪಾತ್ರ. ಸೆಕೆಂಡ್ ಹಾಫ್‌ನಲ್ಲಿ ಈ ಸಿನಿಮಾ ದೊಡ್ಡ ತಿರುವು ಪಡೆದುಕೊಳ್ಳುತ್ತದೆ. ನನಗೆ ಇದರಲ್ಲಿ ಬಹಳ ಒಳ್ಳೆಯ ಪಾತ್ರ ಸಿಕ್ಕಿದೆ. ನನ್ನ ಪಾತ್ರ ಕಂಡು ಸ್ವಲ್ಪ ಭಯಪಟ್ಟುಕೊಳ್ಳಿ’ ಎಂದರು ದೀಪಿಕಾ. ಹರ್ಷಿಕಾ ಅವರು ಈ ಚಿತ್ರದ ಡಬ್ಬಿಂಗ್‌ ವೇಳೆ ಭಯಪಟ್ಟುಕೊಂಡ ಸಂದರ್ಭವೂ ಇತ್ತಂತೆ. ‘ಈ ಚಿತ್ರದಲ್ಲಿ ಹಾರರ್‌ ಅಂಶ ಕೂಡ ಇದೆ. ನನಗೆ ಇದುವರೆಗೆ ಹೆದರಿಕೊಳ್ಳುವುದು ಮಾತ್ರ ಗೊತ್ತಿತ್ತು. ಆದರೆ ಇದರಲ್ಲಿ ನಾನು ಹೆದರಿಸುವ ಕೆಲಸವನ್ನೂ ಮಾಡಿದ್ದೇನೆ’ ಎಂದರು ನಕ್ಕರು ಹರ್ಷಿಕಾ.

ಪ್ರಸನ್ನ ಅವರೂ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಇವರಲ್ಲದೆ, ಬಿ. ಶ್ರೀನಿವಾಸ ರಾವ್ ಹಾಗೂ ಎಚ್.ಎಸ್. ಪೂರ್ಣಿಮಾ ಇದಕ್ಕೆ ಹಣ ಹೂಡಿದ್ದಾರೆ. ಕೆಜೆಟನ್ ಡಯಾಸ್ ಹಿನ್ನೆಲೆ ಸಂಗೀತ, ವಿಶ್ವಜಿತ್ ರಾವ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !