ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್ ಅಭಿನಯದ ‘ಗಂಡುಗಲಿ ಮದಕರಿನಾಯಕ’ ಚಿತ್ರಕ್ಕೆ ಡಿ. 2ರಂದು ಮುಹೂರ್ತ

Last Updated 18 ನವೆಂಬರ್ 2019, 9:04 IST
ಅಕ್ಷರ ಗಾತ್ರ

‘ನಾನು ಕ್ಯೂ ಜಂಪ್‌ ಮಾಡುವುದು ಎರಡೇ ಸಲ. ಒಂದು ಐತಿಹಾಸಿಕ ಸಿನಿಮಾಗೆ; ಇನ್ನೊಂದು ಪೌರಾಣಿಕ ಚಿತ್ರಕ್ಕೆ’

–‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದ ಬಿಡುಗಡೆ ವೇಳೆ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಹೇಳಿದ್ದ ಮಾತು ಇದು. ಐತಿಹಾಸಿಕ ಮತ್ತು ಪೌರಾಣಿಕ ಸಿನಿಮಾ ನಿರ್ಮಿಸಲು ಮುಂದೆ ಬರುವ ನಿರ್ಮಾಪಕರಿಗೆ ನನ್ನ ಮೊದಲ ಆದ್ಯತೆ. ವ್ಯಾಪಾರಿ ಸಿನಿಮಾಗಳನ್ನು ಬದಿಗೆ ಸರಿಸಿ ಈ ಮಾದರಿಯ ಸಿನಿಮಾಗಳಿಗೆ ವಿಶೇಷ ಒತ್ತು ನೀಡುತ್ತೇನೆ ಎಂದಿದ್ದರು.

ಐತಿಹಾಸಿಕ ಚಿತ್ರಗಳು ಗಾಂಧಿನಗರದಿಂದ ತೆರೆಮರೆಗೆ ಸರಿಯುತ್ತಿವೆ ಎನ್ನುವ ಮಾತು ಕೇಳಿಬರುತ್ತಿರುವ ಹೊತ್ತಿನಲ್ಲಿಯೇ ದರ್ಶನ್‌ ಅವರ ಈ ಮಾತು ಸಿನಿಪ್ರಿಯರ ಮನ ಸೆಳೆದಿತ್ತು. ಆ ವೇಳೆಗೆ ಅವರು ‘ಗಂಡುಗಲಿ ಮದಕರಿನಾಯಕ’ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಯೂ ಹೊರಬಿದ್ದಿತು.

ಎಸ್.ವಿ. ರಾಜೇಂದ್ರಸಿಂಗ್‌ ಬಾಬು ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರ ಘೋಷಣೆಯಾಗಿ ಹಲವು ದಿನಗಳೇ ಕಳೆದಿದ್ದವು. ಡಿಸೆಂಬರ್‌ 2ರಂದು ಈ ಚಿತ್ರದ ಮುಹೂರ್ತ ನಡೆಯಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಚಿತ್ರದುರ್ಗ, ರಾಜಸ್ಥಾನ, ಮುಂಬೈನಲ್ಲಿ ಇದರ ಚಿತ್ರೀಕರಣ ನಡೆಯಲಿದೆಯಂತೆ. ಇದಕ್ಕಾಗಿ ಬೃಹತ್‌ ಸೆಟ್‌ಗಳ ನಿರ್ಮಾಣ ಆರಂಭವಾಗಿದೆ.

ಡಿಸೆಂಬರ್‌ನಲ್ಲಿ ಎಂ.ಡಿ. ಶ್ರೀಧರ್ ನಿರ್ದೇಶನದ ದರ್ಶನ್‌ ನಟನೆಯ ‘ಒಡೆಯ’ ಚಿತ್ರ ತೆರೆ ಕಾಣಲಿದೆ. ಜೊತೆಗೆ, ತರುಣ್‌ ಸುಧೀರ್‌ ನಿರ್ದೇಶನದ ‘ರಾಬರ್ಟ್‌’ ಚಿತ್ರದಲ್ಲೂ ದರ್ಶನ್‌ ತೊಡಗಿಸಿಕೊಂಡಿದ್ದಾರೆ. ಇದರ ಶೂಟಿಂಗ್‌ ಮುಗಿಯುವ ಹಂತದಲ್ಲಿದೆಯಂತೆ. ಆನಂತರ ಅವರು ಮದಕರಿ ನಾಯಕನ ಸೆಟ್‌ಗೆ ತೆರಳಿದ್ದಾರಂತೆ.

ಸಾಹಿತಿ ಬಿ.ಎಲ್‌. ವೇಣು ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ಚಿತ್ರಕ್ಕೆ ಬಂಡವಾಳ ಹೂಡಿರುವುದು ರಾಕ್‌ಲೈನ್‌ ವೆಂಕಟೇಶ್‌. ಹಂಸಲೇಖ ಸಂಗೀತ ಸಂಯೋಜಿಸಿದ್ದಾರೆ. ಅಶೋಕ್‌ ಕಶ್ಯಪ್‌ ಅವರ ಛಾಯಾಗ್ರಹಣವಿದೆ.

ನಾಗಣ್ಣ ನಿರ್ದೇಶನದ ದರ್ಶನ್‌ ನಟನೆಯ ಐತಿಹಾಸಿಕ ಚಿತ್ರ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿತ್ತು. ಈ ಇಬ್ಬರ ಕಾಂಬಿನೇಷನ್‌ನಡಿ ತೆರೆಕಂಡ ‘ಮುನಿರತ್ನ ಪೌರಾಣಿಕ’ ಸಿನಿಮಾವೂ ಶತದಿನೋತ್ಸವ ಕಂಡಿದೆ. ಹಾಗಾಗಿಯೇ, ಮದಕರಿನಾಯಕನ ಮೇಲೂ ನಿರೀಕ್ಷೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT