ಗ್ರಾ.ಪಂ. ಸದಸ್ಯರ ಕ್ಷಮೆ ಕೋರಿದ ‘ಅಯೋಗ್ಯ’ ಚಿತ್ರತಂಡ

7

ಗ್ರಾ.ಪಂ. ಸದಸ್ಯರ ಕ್ಷಮೆ ಕೋರಿದ ‘ಅಯೋಗ್ಯ’ ಚಿತ್ರತಂಡ

Published:
Updated:
‘ಅಯೋಗ್ಯ’ ಚಿತ್ರದ ಪೋಸ್ಟರ್

ಬೆಂಗಳೂರು:  ನಟ ನೀನಾಸಂ ಸತೀಶ್‌ ನಾಯಕನಾಗಿ ನಟಿಸಿರುವ ‘ಅಯೋಗ್ಯ’ ಚಿತ್ರದ ಅಡಿಬರಹ (ಟ್ಯಾಗ್‌ಲೈನ್) ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಚಿತ್ರತಂಡವು ಗ್ರಾಮ ಪಂಚಾಯಿತಿ ಸದಸ್ಯರ ಕ್ಷಮೆ ಕೋರಿದೆ.

ಈ ಚಿತ್ರಕ್ಕೆ ‘ಗ್ರಾಮ ಪಂಚಾಯಿತಿ ಸದಸ್ಯ’ ಎಂಬ ಅಡಿಬರಹವಿದೆ. ಇದನ್ನು ಖಂಡಿಸಿ ಮೈಸೂರು ಭಾಗದ ಕೆಲವು ಗ್ರಾಮ ಪಂಚಾಯಿತಿಗಳ ಸದಸ್ಯರು ಪ್ರತಿಭಟನೆ ನಡೆಸಿದ್ದರು. ನಿರ್ದೇಶಕರು ನಮ್ಮನ್ನು ‘ಅಯೋಗ್ಯ’ರೆಂದು ಜರಿದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒತ್ತಾಯಿಸಿದ್ದರು. 

ಎಸ್‌. ಮಹೇಶ್‌ಕುಮಾರ್‌ ಈ ಚಿತ್ರದ ನಿರ್ದೇಶಕ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು ತೆರೆಕಾಣಲು ಸಜ್ಜಾಗಿದೆ. ವಿವಾದ ತಲೆದೋರಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಚಿತ್ರತಂಡವು ‘ಅಯೋಗ್ಯ & ಗ್ರಾಮ ಪಂಚಾಯಿತಿ ಸದಸ್ಯ’ ಎಂಬ ಶೀರ್ಷಿಕೆ ಮತ್ತು ಅಡಿಬರಹದ ಮೂಲಕ ಸಿನಿಮಾ ಬಿಡುಗಡೆಗೆ ಮುಂದಾಗಿದೆ. ಆದರೆ, ವಾಣಿಜ್ಯ ಮಂಡಳಿಯಲ್ಲಿ ಈ ಶೀರ್ಷಿಕೆ ನೋಂದಣಿಯಾಗಿಲ್ಲ.  

‘ಪಾತ್ರಕ್ಕೆ ಈ ಅಡಿಬರಹ ಸೂಕ್ತವಾಗಿದ್ದರಿಂದ ಇಡಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರ ಬಗ್ಗೆ ನಮಗೆ ಗೌರವವಿದೆ. ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇವೆ’ ಎಂದು ನಟ ನೀನಾಸಂ ಸತೀಶ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಪಂಚಾಯಿತಿ ಸದಸ್ಯರು ಗ್ರಾಮಾಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತಾರೆ. ಆದರೆ, ರಾಜಕೀಯ ಕ್ಷೇತ್ರ ಅವಜ್ಞೆಗೆ ಗುರಿಯಾಗಿದೆ. ಈ ವ್ಯವಸ್ಥೆ ನೋಡಿಕೊಂಡು ಬೆಳೆದ ಹುಡುಗನೊಬ್ಬ ಗ್ರಾಮ ಪಂಚಾಯಿತಿ ಸದಸ್ಯನಾಗುತ್ತಾನೆ. ಆತ ಹೇಗೆ ಇತರರಿಗೆ ಮಾದರಿಯಾಗುತ್ತಾನೆ ಎನ್ನುವುದೇ ಚಿತ್ರದ ಕಥಾಹಂದರ. ಕ್ಲೈಮ್ಯಾಕ್ಸ್‌ವರೆಗೂ ‘ಅಯೋಗ್ಯ’ದ ಕಥೆ ಇದೆ. ಚಿತ್ರದಲ್ಲಿ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಪಂಚಾಯಿತಿ ಸದಸ್ಯರ ಮಹತ್ವ ಸಾರುವುದೇ ಚಿತ್ರದ ಮೂಲ ಆಶಯ’ ಎಂದು ಸಮರ್ಥಿಸಿಕೊಂಡರು.

ವಿವಾದ ಸಂಬಂಧ ವಾಣಿಜ್ಯ ಮಂಡಳಿಯೊಂದಿಗೆ ಚರ್ಚಿಸಲು ಬದ್ಧ. ‘ಅಯೋಗ್ಯ & ಗ್ರಾಮ ‍ಪಂಚಾಯಿತಿ ಸದಸ್ಯ’ ಎಂಬ ಶೀರ್ಷಿಕೆ ನೋಂದಣಿಗೆ ಅವಕಾಶ ನೀಡುವಂತೆ ಕೋರಲಾಗುವುದು ಎಂದು ತಿಳಿಸಿದರು.

ನಿರ್ದೇಶಕ ಮಹೇಶ್‌ಕುಮಾರ್, ‘ನನ್ನ ತಂದೆ ಮತ್ತು ತಾಯಿ ಕೂಡ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದವರು. ಪಂಚಾಯಿತಿ ಸದಸ್ಯರ ಕಾರ್ಯವೈಖರಿ ಬಗ್ಗೆ ನನಗೆ ಅರಿವಿದೆ. ಜುಲೈ 15ರಂದು ರಾಜ್ಯದ ನೂರು ಮಂದಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಿನಿಮಾ ತೋರಿಸಲಾಗುವುದು. ಅವರಿಂದ ಆಕ್ಷೇಪಣೆ ಬಂದರೆ ಅಡಿಬರಹ ಬದಲಾಯಿಸಲು ಸಿದ್ಧ. ಪಂಚಾಯಿತಿ ಸದಸ್ಯರು ಮತ್ತು ಅವರ ಕಾರ್ಯವೈಖರಿಯನ್ನು ಚಿತ್ರದಲ್ಲಿ ಅಗೌರವವಾಗಿ ತೋರಿಸಿಲ್ಲ’ ಎಂದು ಸಮಜಾಯಿಷಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !