ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೇ ಏನಾಯ್ತು? ಅಸ್ಸಾಂನ ಕಾಜಿರಂಗ ಕಾಡು ಸೇರಿದ ರಾನಾ ದಗ್ಗುಬಾಟಿ!

Last Updated 1 ಮಾರ್ಚ್ 2020, 9:11 IST
ಅಕ್ಷರ ಗಾತ್ರ

ಅನಾರೋಗ್ಯದ ಗಾಳಿ ಸುದ್ದಿ ಬಳಿಕ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ‘ಬಾಹುಬಲಿ’ ಖ್ಯಾತಿಯ ತೆಲುಗು ನಟ ಮತ್ತು ದಗ್ಗುಬಾಟಿ ಕುಟುಂಬದ ಕುಡಿ ರಾನಾ ಕಾಡು ಸೇರಿದ್ದಾರೆ!

ಅಸ್ಸಾಂನ ಕಾಜಿರಂಗ ದಟ್ಟ ಅರಣ್ಯದಲ್ಲಿ ಆನೆಗಳ ಹಿಂಡು, ವನ್ಯಜೀವಿಗಳ ಗುಂಪಿನಲ್ಲಿ ಸಣಕಲು ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದಾರೆ. ಎಣ್ಣೆ ಕಾಣದ ಕೆದರಿದ ಕೆಂಜು ಕೂದಲು,ಉದ್ದನೆಯ ಗಡ್ಡ, ಮೀಸೆಯ ಸಣಕಲು ವ್ಯಕ್ತಿ ಕೈಯಲ್ಲಿ ಕೋಲು ಹಿಡಿದು ತಿರುಗುತ್ತಿರುವ ವ್ಯಕ್ತಿ ಥೇಟ್‌ ಕಾಡುಗಳ್ಳ ವೀರಪ್ಪನ್‌ ರೀತಿ ಕಾಣುತ್ತಿದ್ದಾರೆ. ಕಾನನದಲ್ಲಿ ತಿರುಗುತ್ತಿರುವ ವ್ಯಕ್ತಿ ಕಾಡುಗಳ್ಳನಲ್ಲ, ವನ್ಯಜೀವಿಗಳ ರಕ್ಷಕ. ಅದು ಬೇರಾರು ಅಲ್ಲ ರಾನಾ!

ಕಾಡು ಸೇರುವಂಥದ್ದು ರಾನಾಗೆ ಏನಾಯಿತು? ಇಷ್ಟು ಬೇಗ ವೈರಾಗ್ಯ ಮೂಡಿತೆ? ಇಂತಹ ಮುಂತಾದ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಮೂಡುವುದು ಸಹಜ.

‘ಹಾಥಿ ಮೇರಿ ಸಾಥಿ’ ಎಂಬ ಇನ್ನೂ ಬಿಡುಗಡೆಯಾಗದ ಬಾಲಿವುಡ್‌ ಚಿತ್ರದಲ್ಲಿ ರಾನಾ ಈ ರೀತಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರದು ವನ್ಯಜೀವಿಗಳ ರಕ್ಷಕ ವನದೇವ ಎಂಬ ಪಾತ್ರ. ಅನಾರೋಗ್ಯದ ವದಂತಿ ಬಳಿಕ ಮೊದಲ ಬಾರಿಗೆ ಅವರು ಈ ದೊಡ್ಡ ಬಜೆಟ್‌ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಫಸ್ಟ್‌ ಲುಕ್‌ ಅನ್ನು ಚಿತ್ರತಂಡ ಈಚೆಗೆ ಬಿಡುಗಡೆ ಮಾಡಿದೆ. 6 ಅಡಿ ಎತ್ತರದ ರಾನಾ ಈ ಚಿತ್ರಕ್ಕಾಗಿ ಅತ್ಯಂತ ಕಟ್ಟುನಿಟ್ಟಿನ ಡಯೆಟ್‌ ಮಾಡಿ ಹೆಚ್ಚೂ ಕಡಿಮೆ 30 ಕೆ.ಜಿ ತೂಕ ಕರಗಿಸಿಕೊಂಡಿದ್ದಾರಂತೆ.

ತಮ್ಮ ಪಾತ್ರದ ಬಗ್ಗೆ ರಾನಾ ಅನುಭವ ಹಂಚಿಕೊಂಡಿದ್ದು ಹೀಗೆ;‘ಚಿತ್ರದಲ್ಲಿ ಎಲ್ಲವೂ ನೈಜ ಮತ್ತು ಸಹಜವಾಗಿ ಮೂಡಿ ಬರಬೇಕು ಎನ್ನುವುದು ನಿರ್ದೇಶಕ ಮತ್ತು ನಿರ್ಮಾಪಕರ ಇಚ್ಛೆಯಾಗಿತ್ತು. ಪಾತ್ರದ ಅಗತ್ಯಕ್ಕೆ ತಕ್ಕಂತೆ ತೂಕ ಕಡಿಮೆ ಮಾಡಿಕೊಳ್ಳುವಂತೆ ಸೂಚಿಸಿದ್ದರು. ನನ್ನಂತ ದೊಡ್ಡ ದೇಹದ ಅಷ್ಟು ತೂಕ ಕರಗಿಸುವುದು ತುಸು ಕಷ್ಟದ ಕೆಲಸವೇ’ ಎಂದು ಅವರು ಹೇಳಿಕೊಂಡಿದ್ದಾರೆ.

ನಿರೀಕ್ಷೆ ಹೆಚ್ಚಿಸಿದ ‘ಕಾದನ್‘ ಟೀಸರ್

ಖ್ಯಾತ ನಿರ್ದೇಶಕ ಪ್ರಭು ಸೊಲೊಮನ್‌ ನಿರ್ದೇಶನದ ಬಹುಭಾಷಾ ಚಲನಚಿತ್ರ ತಮಿಳಿನ ‘ಕಾದನ್‘ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಏರೋಸ್‌ ಇಂಟರ್‌ನ್ಯಾಶನಲ್‌ ಪ್ರೊಡಕ್ಷನ್‌ ಈ ಚಿತ್ರವನ್ನು ನಿರ್ಮಿಸುತ್ತಿದೆ. ಇದು ಈ ವರ್ಷದ ಬಿಗ್‌ ಬಜೆಟ್‌ ಚಿತ್ರ ಎಂದು ಹೇಳಲಾಗುತ್ತಿದೆ.

‘ಬಾಹುಬಲಿ‘ ಸಿನಿಮಾದ ಬಲ್ಲಾಳ ಪಾತ್ರಧಾರಿ ಖ್ಯಾತಿಯ ದಗ್ಗುಬಾಟಿ ರಾನಾ ನಾಯಕನಟನಾಗಿರುವ ಈ ಚಿತ್ರ ಹಿಂದಿಯಲ್ಲಿ ‘ಹಾತಿ ಮೇರೆ ಸಾಥಿ‘ ಹಾಗೂ ತೆಲುಗಿನಲ್ಲಿ ‘ಅರಣ್ಯ‘ ಹೆಸರಿನಲ್ಲಿ ಸಿದ್ಧವಾಗುತ್ತಿದೆ. ಇದೇ ಏಪ್ರಿಲ್ 2ಕ್ಕೆ ಬಿಡುಗಡೆಯಾಗುವುದಾಗಿ ಚಿತ್ರ ತಂಡ ಹೇಳಿಕೊಂಡಿದೆ. ಚಿತ್ರದಲ್ಲಿ ವಿಷ್ಣು ವಿಶಾಲ್, ಪುಲ್ಕಿತ್ ಸಾಮ್ರಾಟ್, ಶ್ರೀಯಾ ಪಿಲಗಾಂವ್ಕರ್ ಮತ್ತು ಝೋಯಾ ಹುಸ್ಸೇನ್ ಪ್ರಮುಖ ಪಾತ್ರದಲ್ಲಿದ್ದಾರೆ.

‘ಅಸ್ಸಾಂನ ಕಾಜಿರಂಗ ಸುತ್ತಮುತ್ತಲಿನ ಪ್ರದೇಶದಲ್ಲಿ ಆನೆ ಮತ್ತು ಮನುಷ್ಯರ ನಡುವಿನ ಸಂಘರ್ಷದ ನೈಜ ಘಟನೆಗಳು ಚಿತ್ರದ ಕಥಾವಸ್ತು‘ ಎಂದು ಚಿತ್ರತಂಡ ಸಣ್ಣ ಸುಳಿವು ನೀಡಿದೆ. ವನ್ಯಜೀವಿಗಳ ಸಂರಕ್ಷಣೆಗೆ ಪಣ ತೊಟ್ಟ ವ್ಯಕ್ತಿಯೊಬ್ಬ ತನ್ನ ಜೀವನದ ಬಹುಭಾಗವನ್ನು ಅರಣ್ಯದಲ್ಲಿಯೇ ಕಳೆಯುತ್ತಾನೆ. ರಾನಾ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಫೆಬ್ರುವರಿ ಆರಂಭದಲ್ಲಿ ‘ಕಾದನ್‘ ಸಿನಿಮಾದ ಟೀಸರ್‌ ರಿಲೀಸ್ ಆದ ಮೇಲೆ, ಅದರಲ್ಲಿನ ದೃಶ್ಯಗಳು, ರಾನಾ ನಟನೆ ಕಂಡು ಅಭಿಮಾನಿಗಳು ’ಚಿತ್ರ ಎಂದು ತೆರೆಗೆ ಬರುತ್ತದೋ‘ ಎಂಬ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ದೊಡ್ಡ ದೊಡ್ಡ ಪರದೆಗಳ ಮೇಲೆ ‘ಕಾದನ್‘ ಸಿನಿಮಾದ ಟೀಸರ್‌ ಬಿತ್ತರಗೊಳ್ಳು ತ್ತಿದೆ. ಏಪ್ರಿಲ್ 2 ರಂದು ಸಿನಿಮಾ ಬಿಡುಗಡೆಯಾಗುವ ವಿಷಯವನ್ನು ಪ್ರಕಟಿಸುತ್ತಿದೆ. ಅರಣ್ಯ ನಾಶದಿಂದ ಆನೆಗಳ ಮೇಲಾಗುವ ಪರಿಣಾಮ ಮತ್ತು ಅವುಗಳನ್ನು ರಕ್ಷಿಸಲು ಹೋರಾಡುವ ಕಥಾನಕವೇ ’ಕಾದನ್‘ ಸಿನಿಮಾದ ಕಥಾ ಹಂದರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT