ಶನಿವಾರ, ಸೆಪ್ಟೆಂಬರ್ 19, 2020
22 °C

'ಗುಂಜನ್ ಸಕ್ಸೇನಾ' ಸಿನಿಮಾ ದೃಶ್ಯ ಆಕ್ಷೇಪಿಸಿ ಸೆನ್ಸಾರ್ ಮಂಡಳಿಗೆ ವಾಯುಸೇನೆ ಪತ್ರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: 'ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್' ಸಿನಿಮಾದಲ್ಲಿ ವಾಯುಪಡೆಯ ಆಶಯಗಳನ್ನು ಸರಿಯಾಗಿ ಬಿಂಬಿಸಿಲ್ಲ ಎಂದು ಆಕ್ಷೇಪಿಸಿ ಭಾರತೀಯ ವಾಯುಸೇನೆಯು ಕೇಂದ್ರ ಸೆನ್ಸಾರ್ ಮಂಡಳಿಗೆ ಆಕ್ಷೇಪಣಾ ಪತ್ರ ಬರೆದಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. 'ಗುಂಜನ್ ಸಕ್ಸೇನಾ' ಸಿನಿಮಾ ಇಂದು (ಆಗಸ್ಟ್ 12) ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಘೋಷಿಸಿದ್ದರು.

ಸೆನ್ಸಾರ್ ಮಂಡಳಿಗೆ ಬರೆದಿರುವ ಪತ್ರವನ್ನು ವಾಯುಸೇನೆಯು ನೆಟ್‌ಫ್ಲಿಕ್ಸ್ ಮತ್ತು ಧರ್ಮ ಪ್ರೊಡಕ್ಷನ್ಸ್‌ಗೂ ಕಳಿಸಿಕೊಟ್ಟಿದೆ. 'ಸರಿಯಾದ ಮಾಹಿತಿಯನ್ನು ಸಮರ್ಪಕವಾಗಿ ನೀಡುವ ಮೂಲಕ ವಾಯುಪಡೆಯ ಹೊಸ ತಲೆಮಾರಿನ ಅಧಿಕಾರಿಗಳಿಗೆ ಸ್ಫೂರ್ತಿದಾಯಕವಾಗಿರುವಂತೆ ಚಿತ್ರ ತೆಗೆಯುವುದಾಗಿ ಧರ್ಮ ಪ್ರೊಡಕ್ಷನ್ಸ್‌ ಹೇಳಿತ್ತು' ಎಂದು ಪತ್ರವು ಉಲ್ಲೇಖಿಸಿದೆ.

'ಈಚೆಗೆ ಬಿಡುಗಡೆಯಾದ ಟ್ರೇಲರ್ ನೋಡಿದಾಗ ಕೆಲ ದೃಶ್ಯಗಳು ಮತ್ತು ಸಂಭಾಷಣೆಗಳು ವಾಯುಪಡೆಯನ್ನು ಸಮರ್ಪಕವಾಗಿ ಬಿಂಬಿಸಿಲ್ಲ ಎಂಬುದು ಅರಿವಾಯಿತು. ಸಿನಿಮಾದ ಮುಖ್ಯ ಪಾತ್ರವಾದ (ನಿವೃತ್ತ) ಫ್ಲೈಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೆನಾ ಅವರನ್ನು ವೈಭವೀಕರಿಸಲು ವಾಯುಪಡೆಯ ಸಂಸ್ಕೃತಿಗೆ ವ್ಯತಿರಿಕ್ತವಾಗಿರುವ ಕೆಲ ದೃಶ್ಯ ಮತ್ತು ಸಂಭಾಷಣೆಗಳನ್ನು ಜೋಡಿಸಲಾಗಿದೆ' ಎಂದು ವಾಯುಪಡೆಯು ಪತ್ರದಲ್ಲಿ ಉಲ್ಲೇಖಿಸಿದೆ. ಈ ಪತ್ರವು ಎಎನ್‌ಐ ಪ್ರತಿನಿಧಿಗೆ ದೊರೆತಿದೆ.

'ವಾಯುಪಡೆಯು ಲಿಂಗ ಸಮಾನತೆಯ ಶಿಷ್ಟಾಚಾರವನ್ನು ಅನುಸರಿಸುತ್ತಿದೆ. ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅವಕಾಶಗಳನ್ನು ಕೊಡುತ್ತಿದೆ. ಆದರೆ ಚಿತ್ರದಲ್ಲಿ ಈ ವಿಚಾರವನ್ನು ತಿರುಚಲಾಗಿದೆ' ಎಂದು ವಾಯುಪಡೆಯು ಆಕ್ಷೇಪಿಸಿದೆ.

ಕರಣ್ ಜೋಹರ್ ಮಾಲೀಕತ್ವದ ಧರ್ಮ ಪ್ರೊಡಕ್ಷನ್ಸ್‌ ಸಂಸ್ಥೆಯು 'ನಾವು ಸೂಚಿಸಿದ ನಂತರವೂ ಆಕ್ಷೇಪಾರ್ಹ ಭಾಗವನ್ನು ತೆಗೆದಿಲ್ಲ, ಮಾರ್ಪಡಿಸಿಲ್ಲ. ಬದಲಾಗಿ ಚಿತ್ರದಲ್ಲಿ ಈ ಕುರಿತು ಘೋಷಣೆಯೊಂದನ್ನು ತೋರಿಸುವುದಾಗಿ ಹಾಗೂ ಮಾಧ್ಯಮಗಳಲ್ಲಿ ಸರಿಯಾಗಿ ಬಿಂಬಿಸುವುದಾಗಿ ಹೇಳಿದೆ' ಎಂದು ವಾಯುಪಡೆ ತಿಳಿಸಿದೆ.

'ಅಸಮರ್ಪಕ ಮತ್ತು ತಪ್ಪು ಮಾಹಿತಿ ಇರುವ ದೃಶ್ಯಗಳನ್ನು ತೆಗೆದ ನಂತರವೇ ಚಿತ್ರದ ಬಿಡುಗಡೆಗೆ ನಿರಾಪೇಕ್ಷಣಾ ಪತ್ರ ನೀಡಲು ಯೋಚಿಸಲಾಗುವುದು' ಎಂದು ವಾಯುಸೇನೆ ತಿಳಿಸಿದೆ.

1999ರ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ವಾಯುಪಡೆಯ ಮೊದಲ ಮಹಿಳಾ ಪೈಲಟ್ ಜೀವನ ಆಧರಿಸಿದ ಚಿತ್ರ 'ಗುಂಜನ್ ಸಕ್ಸೆನಾ'. ಕಾರ್ಗಿಲ್ ಯುದ್ಧದ ಗಾಯಾಳುಗಳನ್ನು ಸ್ಥಳಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಕ್ಸೇನಾ ಅವರಿಗೆ ಶೌರ್ಯ ವೀರ ಪುರಸ್ಕಾರವೂ ಸಂದಿತ್ತು.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು