ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರರಂಗದ ‘ಮಹಾವೃಕ್ಷ’ದ ನೆನಪು

Last Updated 14 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಹಿರಿಯ ನಿರ್ದೇಶಕ ಎಸ್. ಸಿದ್ದಲಿಂಗಯ್ಯ ಅವರು ಕನ್ನಡ ಚಿತ್ರರಂಗಕ್ಕೆ ಮೇಕಿಂಗ್‌ನಲ್ಲಿ ಹೊಸ ವ್ಯಾಕರಣವನ್ನು ಕಲಿಸಿಕೊಟ್ಟ ಮಹಾಗುರು. ಅವರ ಪ್ರತಿಭೆ ಮತ್ತು ಚಿಂತನೆಗಳು ಎಷ್ಟು ಫಲವತ್ತಾಗಿರುತ್ತಿದ್ದವು ಎಂಬುದಕ್ಕೆ ಅವರು ಮಾಡಿದ ಪ್ರತಿ ಚಲನಚಿತ್ರಗಳೂ ನಿದರ್ಶನಗಳಾಗಬಲ್ಲವು.

1969ರಲ್ಲಿ ನಿರ್ದೇಶಿಸಿದ ಮೊದಲ ಚಿತ್ರ ‘ಮೇಯರ್‌ ಮುತ್ತಣ್ಣ’ದಲ್ಲೇ ಅದು ಸಾಬೀತಾಯಿತು. ‘ಬಂಗಾರದ ಮನುಷ್ಯ’, ‘ಭೂತಯ್ಯನ ಮಗ ಅಯ್ಯು’ ಚಿತ್ರಗಳು ಸರ್ವಾಂಗಸುಂದರವಾಗಿ ಮೂಡಿಬಂದು ದಾಖಲೆ ನಿರ್ಮಿಸಿದವು. ಕನ್ನಡ ಚಿತ್ರರಂಗದತ್ತ ಬೇರೆ ಭಾಷಾ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ತಿರುಗಿ ನೋಡುವಂತೆ ಮಾಡಿದ ದಿಗ್ಗಜರಲ್ಲಿ ಸಿದ್ದಲಿಂಗಯ್ಯ ಅವರ ಹೆಸರೂ ಮುಂಚೂಣಿಯಲ್ಲಿ ನಿಲ್ಲುತ್ತದೆ.

ಸಿದ್ದಲಿಂಗಯ್ಯ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತರೂರಿನವರು. ಗಾಂಧಿನಗರಕ್ಕೆ ಪರಿಚಯವಾದಾಗ ಮೈಸೂರಿನ ನವಜ್ಯೋತಿ ಸ್ಟುಡಿಯೊದಲ್ಲಿ ಲೈಟ್‌ ಬಾಯ್‌ ಮತ್ತು ಫ್ಲೋರ್‌ ಬಾಯ್‌ ಆಗಿ ಕೆಲಸ ಮಾಡುತ್ತಿದ್ದರು. ಶಂಕರ್‌ ಸಿಂಗ್‌ ಮತ್ತು ವಿಠಲಾಚಾರ್ಯ ಅವರಂತಹ ಮಹತ್ವದ ನಿರ್ದೇಶಕರೊಟ್ಟಿಗೆ ಸಹಾಯಕರಾಗಿ ಗಾಂಧಿ ನಗರದಲ್ಲಿ ಕಾಣಿಸಿಕೊಳ್ಳತೊಡಗಿದರು. ‘ಮೇಯರ್‌ ಮುತ್ತಣ್ಣ’ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಲು ಕಾರಣರಾದವರು ಹಿರಿಯ ನಟ ಬಾಲಕೃಷ್ಣ ಅವರು. ದ್ವಾರಕೀಶ್‌ ನಿರ್ಮಾಣ, ರಾಜನ್‌–ನಾಗೇಂದ್ರ ಸಂಗೀತ, ಸಿದ್ದಲಿಂಗಯ್ಯ ನಿರ್ದೇಶನ ಮತ್ತು ರಾಜ್‌ಕುಮಾರ್‌ ನಟನಾ ಸಾರಥ್ಯ!ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಲು ಇಷ್ಟು ಸಾಲದೇ? ಆದರೂ ನಿರ್ದೇಶಕನ ಕಲ್ಪನೆ, ಲೆಕ್ಕಾಚಾರ, ದೂರದೃಷ್ಟಿ ಮತ್ತು ಸಾಮರ್ಥ್ಯ ಚಿತ್ರಕ್ಕೆ ಹೆಚ್ಚಿನ ಶಕ್ತಿ ತುಂಬಿತು ಎಂದರೆ ಅತಿಶಯೋಕ್ತಿಯಾಗದು.

ಸಿದ್ದಲಿಂಗಯ್ಯ ಅವರನ್ನು ‘ಸಾಮಾಜಿಕ ನಿರ್ದೇಶಕ’ ಎಂದು ಗುರುತಿಸಲಾಗುತ್ತದೆ. ಇದಕ್ಕೆ ಕಾರಣ ಅವರ ಸಿನಿಮಾ ಪರಿಕಲ್ಪನೆಗಳು. ಕತೆಯನ್ನು ಕೈಗೆತ್ತಿಕೊಳ್ಳುವಾಗಲೇ ಅವರು ಆದ್ಯತೆ ಕೊಡುತ್ತಿದ್ದುದು ಗ್ರಾಮೀಣ ಚಿತ್ರಣಗಳಿಗೆ. ಮುಂದೆ ಅದನ್ನು ಚಿತ್ರಕತೆಯಾಗಿ ಹೇಗೆ ಸಮೃದ್ಧಗೊಳಿಸಬಹುದು, ಛಾಯಾಗ್ರಹಣದಿಂದ ಹೇಗೆ ಶ್ರೀಮಂತಗೊಳಿಸಬಹುದು, ನಟ ನಟಿಯರು ಯಾವ್ಯಾವ ಪೋಷಾಕಿನಲ್ಲಿ ಚಿತ್ರಕತೆಗೆ ಜೀವ ತುಂಬಬಹುದು... ಕ್ಷಣಮಾತ್ರದಲ್ಲಿ ಅವರ ತಲೆಯಲ್ಲಿ ಪೂರ್ಣಪ್ರಮಾಣದ ಚಲನಚಿತ್ರದ ಚಿತ್ರ ರೂಪುಗೊಳ್ಳುತ್ತಿತ್ತು.

ರೈತರು, ಕೃಷಿ, ಕೃಷಿ ಕೂಲಿ, ಹಳ್ಳಿಯ ತಾಜಾ ಚಿತ್ರಣ, ಸಂಸ್ಕೃತಿ, ಭಾಷೆ, ಪ್ರಕೃತಿ ಸೌಂದರ್ಯ ಹೀಗೆ ಹಲವು ಆಯಾಮಗಳಲ್ಲಿ ಗ್ರಾಮ್ಯ ಬದುಕನ್ನು ಅಭಿಮಾನದಿಂದ ನೋಡುವಂತೆ ಮಾಡಿದ ಹೆಗ್ಗಳಿಕೆ ಅವರದು. ಗೌಡಿಕೆ, ಜಮೀನ್ದಾರಿಕೆಯ ದೌಲತ್ತುಗಳು, ಶೋಷಣೆಯ ನಾನಾ ಮುಖಗಳು, ಗ್ರಾಮೀಣ ಮಕ್ಕಳು ಮತ್ತು ಹೆಣ್ಣು ಮಕ್ಕಳ ನೈಜ ಸ್ಥಿತಿ, ಶಿಕ್ಷಣ, ಪ್ರೀತಿ ಪ್ರೇಮವನ್ನೂ ಅವಿಸ್ಮರಣೀಯವಾಗಿ ಚಿತ್ರಿಸುವ ಮೂಲಕಪ್ರೇಕ್ಷಕರಿಗೆ ರಸದೌತಣ ಬಡಿಸಿದವರು.

ಸಿದ್ದಲಿಂಗಯ್ಯ ಅವರನ್ನು ಕನ್ನಡ ಚಿತ್ರರಂಗದ ಮಹಾವೃಕ್ಷ ಎನ್ನಬಹುದು. ಅವರ ಪ್ರತಿಭೆ ಮತ್ತು ಉದಾರ ಮನೋಭಾವದ ನೆರಳಿನ ಆಸರೆ ಪಡೆದು ಚಿಗುರಿದ ಗಿಡಗಳೆಷ್ಟೋ. ಅದಾಗಲೇ ಸೆಲೆಬ್ರಿಟಿಗಳಾದ ನಟ ನಟಿಯರಷ್ಟೇ ಆದ್ಯತೆಯನ್ನು ಹೊಸ ಮುಖಗಳಿಗೂ ಕೊಟ್ಟ ವಿಶಾಲ ಹೃದಯಿ ಅವರು.

ಹಿರಿಯ ನಟ ಲೋಕನಾಥ್‌ ಅವರು ‘ಭೂತಯ್ಯನ ಮಗ ಅಯ್ಯು’ ಚಿತ್ರಕ್ಕೆ ಆಯ್ಕೆಯಾದ ಸನ್ನಿವೇಶವನ್ನು ಸಿದ್ದಲಿಂಗಯ್ಯ ಅವರು ಮರಣಿಸಿದ ನಂತರ ಮೆಲುಕು ಹಾಕಿದ್ದರು. ‘ಬೇರೆ ಯಾರೋ ಆ ಪಾತ್ರ ಮಾಡಬೇಕಿತ್ತು. ಆದರೆ ಸಿದ್ದಣ್ಣ ಆ ಪಾತ್ರವನ್ನು ನನಗೆ ಕೊಟ್ಟರು. ಉಪ್ಪಿನಕಾಯಿ ನೆಕ್ಕುವ ದೃಶ್ಯ ಇವತ್ತಿಗೂ ಎಲ್ಲರ ಮನಸ್ಸಿನಲ್ಲಿ ನಾಟಿ ನಿಂತಿದೆ ಎಂದರೆ ಅದಕ್ಕೆ ಕಾರಣ ನಾನಲ್ಲ ಸಿದ್ದಲಿಂಗಯ್ಯ. ಆ ದೃಶ್ಯ ಅಂತಿಮವಾಗಿ ಓಕೆ ಆಗಬೇಕಾದರೆ ಒಂಬತ್ತು ಬಾರಿ ಹಸಿ ಖಾರದ ಉಪ್ಪಿನಕಾಯಿಯನ್ನು ನೆಕ್ಕಿ ನೆಕ್ಕಿ ಅವರಿಗೆ ತೋರಿಸಿದ್ದೆ. ಕೊನೆಗೂ ಓಕೆ ಆಯ್ತು’ ಎಂದು ಲೋಕನಾಥ್‌ ಸ್ಮರಿಸಿಕೊಂಡಾಗ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ನೆರೆದಿದ್ದವರು ನಕ್ಕು ನಕ್ಕು ಸುಸ್ತಾಗಿದ್ದರು.

ಅದೇ ಚಿತ್ರ ಶತದಿನ ಪೂರೈಸಿದಾಗ ಲೋಕನಾಥ್‌ ಅವರಿಗೆ ಸಿದ್ದಲಿಂಗಯ್ಯ ಅವರಿಂದ ಚಿನ್ನದ ಉಡುಗೊರೆಯೂ ಸಿಕ್ಕಿತ್ತು. ಯಶಸ್ವಿ ಚಿತ್ರಗಳ ನಿರ್ದೇಶಕರೊಬ್ಬರು ತಮ್ಮ ಸಿನಿಮಾದ ಯಶಸ್ಸನ್ನು ತಂಡದೊಂದಿಗೆ ಹಂಚಿಕೊಳ್ಳುವುದು ಎಂದರೆ ಸಿದ್ದಲಿಂಗಯ್ಯ ಅವರ ಹಾಗೆ!

ಅವರಿಗೆ ಸಾಟಿಯಾಗಬಲ್ಲ ಮತ್ತೊಬ್ಬ ನಿರ್ದೇಶಕರನ್ನುಕನ್ನಡ ಚಿತ್ರರಂಗ ಕಾಣಲಾರದೇನೊ. ಹಾಗಾಗಿ ಸಿದ್ದಲಿಂಗಯ್ಯ ಅವರಿಗೆ ಅವರೇ ಸಾಟಿ.

‘ದೂರದಬೆಟ್ಟ’ ಚಿತ್ರೀಕರಣದ ವೇಳೆ ಡಾ.ರಾಜ್‌ಕುಮಾರ್, ಭಾರತಿ ವಿಷ್ಣುವರ್ಧನ್‌ ಜೊತೆ ಸನ್ನಿವೇಶವೊಂದರ ಚರ್ಚೆಯಲ್ಲಿ
‘ದೂರದಬೆಟ್ಟ’ ಚಿತ್ರೀಕರಣದ ವೇಳೆ ಡಾ.ರಾಜ್‌ಕುಮಾರ್, ಭಾರತಿ ವಿಷ್ಣುವರ್ಧನ್‌ ಜೊತೆ ಸನ್ನಿವೇಶವೊಂದರ ಚರ್ಚೆಯಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT