ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿ ಟೂ ಬಗ್ಗೆ ಮಾತಾಡಲು ಧೈರ್ಯ ಬೇಕು: ಶ್ರೇಯಸ್ ತಾಲ್ಪಡೆ

Last Updated 16 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಗೋಲ್‌ಮಾಲ್‌, ದೂರ್, ಹಮ್‌ ತುಮ್‌ ಶಬಾನಾ, ಪೇಯಿಂಗ್‌ಗೆಸ್ಟ್‌ನಂತಹ ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್‌ನ ಖ್ಯಾತ ನಟ ಶ್ರೇಯಸ್ ತಾಲ್ಪಡೆ ಫಿಟ್‌ನೆಸ್‌ಗೆ ಒತ್ತು ನೀಡುವ ಮಳಿಗೆಯೊಂದರ ಉದ್ಘಾಟನೆಗೆ ಬಂದಿದ್ದರು. ಫಿಟ್ನೆಸ್ ಟಿಪ್ಸ್‌ ಹೇಳುತ್ತಲೇ ಆರೋಗ್ಯ ಕಾಳಜಿ ವಹಿಸುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಅವರು ಪ್ರಜಾವಾಣಿಯೊಂದಿಗೆ ಮಾತನಾಡಿದರು.

* ಕರ್ನಾಟಕಕ್ಕೆ ಭೇಟಿ ನೀಡಿದ ಈ ಸಂದರ್ಭದಲ್ಲಿ ಕನ್ನಡಿಗರಿಗೆ ಏನು ಹೇಳಲು ಬಯಸುತ್ತೀರಿ?
ಕನ್ನಡಿಗರಿಗೆ ಏನು ಹೇಳಲಿ? ಆಹಾ... ಎಲ್ಲ ಕನ್ನಡಿಗರಿಗೆ ದಸರಾ ಹಬ್ಬದ ಶುಭಾಶಯಗಳು!

* ಗೂಗಲ್‌ನಲ್ಲಿ ಶ್ರೇಯಸ್‌ ತಾಲ್ಪಡೆ ಅಂತ ಟೈಪ್ ಮಾಡಿದ್ರೆ , ‘ಶ್ರೇಯಸ್‌ ತಾಲ್ಪಡೆ ಏಜ್’ ಕಾಣಿಸಿಕೊಳ್ಳುತ್ತದೆ. ಈ ಬಗ್ಗೆ ಏನೆನ್ನುತ್ತೀರಿ?ನಗು ತಡೆಯೋಕೆ ಆಗ್ತಿಲ್ಲ (ಜೋರಾಗಿ ನಗುತ್ತಾ). ಒಳ್ಳೆ ಜೋಕ್ ಹೇಳಿದ್ರಿ. ನಿಜವಾಗಿ ಹೇಳ್ತಿನಿ ನನ್ನ ವಯಸ್ಸು ಈಗ 43 ವರ್ಷ. ವಯಸ್ಸನ್ನು ಮುಚ್ಚಿಡುವ ಅಗತ್ಯ ನನಗೆ ಇಲ್ಲ. ಯಾವ ದಿನವೂ ವ್ಯಾಯಾಮ ತಪ್ಪಿಸಿಲ್ಲ. ಹೆಚ್ಚು ಮೇಕಪ್‌ ಮಾಡಿಕೊಳ್ಳುವುದೂ ನನಗೆ ಇಷ್ಟವಿಲ್ಲ. ನಾನು ಇರುವ ಹಾಗೆಯೇ ಇದ್ದೀನಿ. ಆರೋಗ್ಯವಾಗಿದ್ದೀನಿ.

* ಬೆಂಗಳೂರು ಹೇಗನಿಸುತ್ತಿದೆ?
ಎಂತಹ ಸುಂದರ ನಗರ ಇದು. ಇಲ್ಲಿನ ಆಹ್ಲಾದಕರ ವಾತಾವರಣ ಎಂಥವರ ಗಮನವನ್ನೂ ಸೆಳೆಯುತ್ತದೆ. ಇಲ್ಲಿ ನನ್ನ ಹಲವು ಚಿತ್ರಗಳು ಚಿತ್ರೀಕರಣಗೊಂಡಿವೆ. ನಾನಂತೂ ಬೆಂಗಳೂರಿಗೆ ಭೇಟಿ ನೀಡುವ ಅವಕಾಶ ಸಿಕ್ಕರೆ ಖಂಡಿತ ತಪ್ಪಿಸಿಕೊಳ್ಳುವುದಿಲ್ಲ.

* ಕನ್ನಡ ಚಿತ್ರರಂಗದ ಬಗ್ಗೆ ಏನು ಹೇಳುತ್ತೀರಿ?
ದೇಶದ ಪ್ರಮುಖ ಚಿತ್ರರಂಗಳಲ್ಲಿ ಸ್ಯಾಂಡಲ್‌ವುಡ್ ಕೂಡ ಒಂದು. ಒಳ್ಳೆಯ ಚಿತ್ರಗಳು ಬರುತ್ತಿವೆ. ಬಿಡುವಾದಾಗ ಕನ್ನಡ ಚಿತ್ರಗಳ್ನನು ನೋಡುತ್ತಿರುತ್ತೇನೆ. ಕನ್ನಡವಷ್ಟೇ ಅಲ್ಲ ದಕ್ಷಿಣ ಭಾರತದ ಎಲ್ಲ ಚಿತ್ರರಂಗಗಳ ಚಿತ್ರಗಳನ್ನೂ ನೋಡುತ್ತೇನೆ.

* ನೀವು ಈವರೆಗೆ ಯಾವೊಂದು ಕನ್ನಡ ಚಿತ್ರದಲ್ಲೂ ನಟಿಸಿಲ್ಲ ಯಾಕೆ?
ಇದು ನನಗೂ ಬೇಸರದ ವಿಚಾರವೇ. ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಒಳ್ಳೆಯ ಪಾತ್ರ ಸಿಕ್ಕರೆ, ಕಥೆ ಚೆನ್ನಾಗಿದ್ದರೆ ಚಂದನವನದಲ್ಲಿ ಬಣ್ಣ ಹಚ್ಚೋದಕ್ಕೆ ಹಿಂದು, ಮುಂದು ನೋಡೊದಿಲ್ಲ.

* ನಿಮಗಿಷ್ಟವಾಗುವ ಕನ್ನಡದ ನಟ ಯಾರು?
ಕನ್ನಡ ಚಿತ್ರರಂಗ ಎಂದ ಕೂಡಲೇ ನೆನಪಿಗೆ ಬರುವುದು ದಿ ಗ್ರೇಟ್ ರಾಜ್‌ಕುಮಾರ್‌. ಅವರ ನಟನೆ ನನಗೆ ತುಂಬಾ ಇಷ್ಟ.

* ಹೊಸ ತಲೆಮಾರಿನ ನಟರ ಪೈಕಿ ಯಾರಾದರೂ ಇಷ್ಟವಾದರೆ?
ರಾಕಿಂಗ್‌ ಸ್ಟಾರ್‌ ಯಶ್. ಅವರ ಸ್ಟೈಲಿಶ್ ಲುಕ್ ಗಮನ ಸೆಳೆಯುತ್ತದೆ. ಇನ್ನು ದರ್ಶನ್‌, ಸುದೀಪ್‌ ಅವರ ನಟನೆಯೂ ನನಗೆ ಇಷ್ಟವಾಗುತ್ತದೆ.

* ನೀವು ಹೆಚ್ಚಾಗಿ ಮಲ್ಟಿಸ್ಟಾರರ್ ಚಿತ್ರಗಳಲ್ಲೇ ನಟಿಸುತ್ತಿದ್ದೀರಿ. ಅಂತಹ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣ.
ಹಾಗೇನಿಲ್ಲ. ಪಾತ್ರ ಇಷ್ಟವಾದರೆ ಸಾಕು ಒಪ್ಪಿಕೊಳ್ಳುತ್ತೇನೆ. ನಾನು ಪಾತ್ರಕ್ಕೆ ಪ್ರಾಮುಖ್ಯತೆ ಕೊಡುತ್ತೇನೆ. ನಾನೊಬ್ಬನೇ ನಾಯಕನಟನಾಗಿ ನಟಿಸಿರುವಂತಹ ಚಿತ್ರಗಳೂ ಹಲವು ತೆರೆಕಂಡಿವೆ.

* ಮೀ ಟೂ ಬಗ್ಗೆ ಏನು ಹೇಳುತ್ತೀರಿ?
ಎಲ್ಲಿಗೆ ಹೋದರೂ ಇದೇ ವಿಷಯ ಕಾಡುತ್ತಿದೆ. ಇದು ಬಾಲಿವುಡ್‌ ಅನ್ನು ಕರಿಛಾಯೆಯಂತೆ ಆವರಿಸಿಕೊಳ್ಳುತ್ತಿದೆ. ಎಂದೋ ನಡೆದದ್ದನ್ನು ಇಂದು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಕೆಲವರು, ಲೈಂಗಿಕ ಕಿರುಕುಳಕ್ಕೆ ಅನುಭವಿಸಿದವರ ಕುರಿತು ಅಪಹಾಸ್ಯ ಮಾಡುತ್ತಿದ್ದಾರೆ. ನಾನು ಈ ವಿಷಯದಲ್ಲಿ ಹೇಳಲು ಬಯಸುವು ದೇನೆಂದರೆ, ಹೆಣ್ಣೊಬ್ಬಳು ನಿಸ್ಸಂಕೋಚವಾಗಿ ‘ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ’ ಎಂದು ಹೇಳುತ್ತಾಳೆ ಎಂದರೆ ಇಡೀ ಸಮಾಜ ಯೋಚಿಸಬೇಕು. ಆ ಮಾತು ಹೇಳಬೇಕೆಂದರೆ ಎಷ್ಟು ಧೈರ್ಯ ಬೇಕು ಎಂಬುದನ್ನು ಮಹಿಳೆಯರಾಗಿ ಹುಟ್ಟಿದವರಿಗೇ ಗೊತ್ತಿರುತ್ತದೆ. ಅದು ಯಾರೇ ತಪ್ಪು ಮಾಡಿರಲಿ ನ್ಯಾಯಾಂಗದ ಪ್ರಕಾರ ಕ್ರಮ ಜರುಗಿಸಬೇಕು. ದೊಡ್ಡ ಸ್ಟಾರ್‌ ಆಗಿದ್ದರೂ ಶಿಕ್ಷೆ ಆಗಲೇಬೇಕು.

* ಚಿತ್ರರಂಗದಲ್ಲಿ ಅವಕಾಶಗಳು ಹೇಗಿವೆ?
ತುಂಬಾ ಚೆನ್ನಾಗಿವೆ. ನಾನು ನಾಯಕನಾಗಿ ನಟಿಸಿರುವ ಎರಡು ಚಿತ್ರಗಳು ಮುಂದಿನ ವರ್ಷ ತೆರೆಕಾಣಲಿವೆ. ಸದ್ಯಕ್ಕಂತೂ ಬಿಡುವಿಲ್ಲದಂತೆ ಇದ್ದೇನೆ. ಹೀಗೆ ಇದ್ದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT