ಸೈಕಲ್‌ ಏರಿದ ಜಾಕ್ವೆಲಿನ್‌

7

ಸೈಕಲ್‌ ಏರಿದ ಜಾಕ್ವೆಲಿನ್‌

Published:
Updated:
Deccan Herald

ಶ್ರೀಲಂಕಾ ಸುಂದರಿ, ‘ರೇಸ್‌ 3’ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಸೈಕಲ್‌ ಪಟುವಾಗಲಿದ್ದಾರೆ. ಕಟ್ಟುಮಸ್ತು ಕಾಯ ಕಾಪಾಡಿಕೊಂಡಿರುವ ಈ ಮಾದಕ ಸುಂದರಿ ಸೈಕ್ಲಿಂಗ್ ಮೂಲಕ ವ್ಯಾಯಾಮ ಮಾಡಲಿದ್ದಾರೋ ಏನೋ ಅಂದುಕೊಳ್ಳಬೇಡಿ. ಅದು ಅವರ ಹೊಸ ಸಿನಿಮಾದ ಪಾತ್ರ.

ಭಾರತದ ಸೈಕ್ಲಿಂಗ್‌ ತಾರೆ ಡೆಬೋರಾ ಹೆರೊಲ್ಡ್‌ ಜೀವನವನ್ನು ಆಧರಿಸಿ ನಿರ್ಮಾಣವಾಗಲಿರುವ ಹೊಸ ಚಿತ್ರಕ್ಕೆ ಜಾಕ್ವೆಲಿನ್‌ ಸಹಿ ಹಾಕಿದ್ದು, ದೆಬೋರಾ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

‘ಕಿರಿಕ್‌ ಪಾರ್ಟಿ’ಯ ಹಿಂದಿ ರಿಮೇಕ್‌ನಲ್ಲಿ ಅವರು ನಟಿಸುತ್ತಿರುವುದು ಹಳೆಯ ಸುದ್ದಿ. ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್‌ಗೆ ಜೋಡಿಯಾಗಿ ನಟಿಸಿದ ‘ರೇಸ್‌ 3’ ನಂತರ ಸ್ವಲ್ಪ ಬ್ರೇಕ್‌ ತೆಗೆದುಕೊಂಡರೂ ಹೊಸ ಚಿತ್ರಗಳಿಗೆ ಸಹಿ ಹಾಕುವಲ್ಲಿ ಹಿಂದೆ ಬಿದ್ದಿರಲಿಲ್ಲ. ‘ರೇಸ್‌ 3’ ನಂತರ ಈ ಸಿಂಹಳೀಯ ಸುಂದರಿಗೆ ಒಂದಾದ ಮೇಲೊಂದರಂತೆ ಅವಕಾಶಗಳು ಬರುತ್ತಲೇ ಇವೆ. ಆದರೆ ಬಂದ ಅವಕಾಶಗಳನ್ನೆಲ್ಲ ಬಾಚಿಕೊಳ್ಳುವುದಕ್ಕಿಂತ ಹೆಗ್ಗುರುತಾಗುವ ಅವಕಾಶಗಳನ್ನು ಹೆಕ್ಕಿಕೊಳ್ಳಬೇಕು ಎಂಬ ಲೆಕ್ಕಾಚಾರ ಅವರದು.

ಡೆಬೋರಾ ಪಾತ್ರದ ಚಿತ್ರಕತೆಯನ್ನು ಜಾಕ್ವೆಲಿನ್‌ ಮೆಚ್ಚಿಕೊಂಡಿದ್ದು ಮುಂದಿನ ವರ್ಷ ಸೆಟ್ಟೇರಲಿದೆ. ಈ ಪಾತ್ರಕ್ಕಾಗಿ ತಯಾರಿ ಈಗಾಗಲೇ ಆರಂಭವಾಗಿದೆ. ಸೈಕ್ಲಿಂಗ್‌ ಕುರಿತು ಕಠಿಣ ತರಬೇತಿಯಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ. 

23 ವರ್ಷದ ಡೆಬೋರಾ, ನಿಕೋಬಾರ್‌ ದ್ವೀಪದ ಕಾರ್ ನಿಕೋಬಾರ್‌ ಪ್ರದೇಶದವರು. ಯೂನಿಯನ್‌ ಸೈಕ್ಲಿಸ್ಟ್‌ ಇಂಟರ್‌ನ್ಯಾಷನಲ್‌ನಿಂದ (ಯುಸಿಐ) ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್‌ ಟ್ರ್ಯಾಕ್‌ಗಿಳಿದ ಮೊದಲ ಭಾರತೀಯ ಸೈಕ್ಲಿಸ್ಟ್‌ ಈಕೆ. 2020ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಡೆಬೋರಾ ಅದಕ್ಕಾಗಿ ತಯಾರಿ ನಡೆಸಿದ್ದಾರೆ. ವಾಯುಸೇನೆಯ ನಿವೃತ್ತ ಅಧಿಕಾರಿಯ ಮಗಳು ಡೆಬೋರಾ. 2004ರಲ್ಲಿ ನಿಕೋಬಾರ್‌ ದ್ವೀಪಕ್ಕೆ ಸುನಾಮಿ ಅಪ್ಪಳಿಸಿದಾಗ ಅವರು ನಂಬಲಸಾಧ್ಯವಾದ ರೀತಿಯಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದರು. ಮರವೇರಿ ಕುಳಿತಿದ್ದ ಈ ಸಾಹಸಿ ಒಂದು ವಾರ ಅಲ್ಲೇ ಕಳೆದಿದ್ದರು. ಇದು ಜಗತ್ತಿನೆಲ್ಲೆಡೆ ಭಾರಿ ಸುದ್ದಿಯಾಗಿತ್ತು. 

ಒಲಿಂಪಿಕ್ಸ್‌ ಹಾಗೂ ತಮ್ಮ ವೃತ್ತಿಜೀವನದ ಕನಸು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ‌ನಿಕೋಬಾರ್‌ನಿಂದ ದೆಹಲಿಗೆ ವಲಸೆ ಬಂದು ಐದು ವರ್ಷಗಳೇ ಆಗಿವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟ್ರ್ಯಾಕ್‌ಗಳಲ್ಲಿ ಚಿನ್ನದ ಪದಕಗಳನ್ನು ಬಾಚಿಕೊಳ್ಳುತ್ತಲೇ ಇರುವ ಡೆಬೋರಾ ಕುರಿತ ಸಿನಿಮಾದಲ್ಲಿ ಈ ಎಲ್ಲಾ ಅಂಶಗಳು ಒಳಗೊಂಡಿರುತ್ತವೆ. ಹಾಗಾಗಿ ಸಹಜವಾಗಿಯೇ ಜಾಕ್ವೆಲಿನ್‌ಗೆ ಅಂತರರಾಷ್ಟ್ರೀಯ ಮಟ್ಟದ ಸೈಕ್ಲಿಂಗ್‌ಪಟುವಾಗುವುದು ಸವಾಲಾಗಲಿದೆ.

ಜಾಕ್ವೆಲಿನ್‌ ಫರ್ನಾಂಡಿಸ್‌ ‘ದಿ ಗರ್ಲ್‌ ಆನ್‌ ದಿ ಟ್ರೈನ್‌’ ಎಂಬ ಸಿನಿಮಾಕ್ಕೆ ಈಗಾಗಲೇ ಸಹಿ ಹಾಕಿದ್ದಾರೆ. ಹೀಗೆ, 2017 ಮತ್ತು 2018ರಲ್ಲಿ ಜಾಕ್ವೆಲಿನ್‌ ಎಂಬ ಮಾದಕ ನಟಿ ಕೈತುಂಬಾ ಅವಕಾಶಗಳನ್ನು ಬಾಚಿಕೊಂಡಿರುವುದು ಸತ್ಯ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !