ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರರಂಗ: ಜೀವಿತಾವಧಿ ಸಾಧಕರಿಗೆ ಪ್ರಶಸ್ತಿ ಪ್ರಕಟ

ಲಕ್ಷ್ಮೀಗೆ ರಾಜ್‌ ಕುಮಾರ್‌, ನಾರಾಯಣ್‌ಗೆ ಪುಟ್ಟಣ್ಣ ಕಣಗಾಲ್‌, ಲಕ್ಷ್ಮೀಪತಿಗೆ ವಿಷ್ಣುವರ್ಧನ್‌ ಪ್ರಶಸ್ತಿ
Last Updated 1 ಅಕ್ಟೋಬರ್ 2018, 14:47 IST
ಅಕ್ಷರ ಗಾತ್ರ

ಬೆಂಗಳೂರು: ಚಲನಚಿತ್ರ ರಂಗದಲ್ಲಿ ಜೀವಿತಾವಧಿಯ ಸಾಧನೆ ಮಾಡಿದವರಿಗೆ ನೀಡುವ ಡಾ.ರಾಜ್ ಕುಮಾರ್ ಪ್ರಶಸ್ತಿಗೆ ಹಿರಿಯ ಕಲಾವಿದೆ ಲಕ್ಷ್ಮೀ, ನಿರ್ದೇಶಕರಿಗೆ ನೀಡುವ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಎಸ್. ನಾರಾಯಣ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗೆ ಹಿರಿಯ ಚಲನಚಿತ್ರ ನಿರ್ಮಾಪಕ ಜಿ.ಎನ್. ಲಕ್ಷ್ಮೀಪತಿ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಗಳು ತಲಾ 50 ಗ್ರಾಂ ಚಿನ್ನದ ಪದಕ ಹಾಗೂ ₹ 2 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ.

ಲಕ್ಷ್ಮೀ ಅವರು ‘ಸಿಐಡಿ 999’ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ್ದರು. ತೆಲುಗು, ತಮಿಳು, ಮಲೆಯಾಳ, ಬಂಗಾಳಿ ಹಾಗೂ ಹಿಂದಿ ಭಾಷೆಯ ಚಿತ್ರಗಳೂ ಸೇರಿ 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. 1977ರಲ್ಲಿ ‘ಸಿಲ ನೆರಂಗಾಲ್ಲ ಸಿಲ ಮಂತರಗಾಲ’ ತಮಿಳು ಚಿತ್ರದ ಅಭಿನಯಕ್ಕೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ, 1993ರಲ್ಲಿ ‘ಹೂವು ಹಣ್ಣು’ ಕನ್ನಡ ಸಿನಿಮಾದ ನಟನೆಗೆ ರಾಜ್ಯಪ್ರಶಸ್ತಿ, 2008–09ರಲ್ಲಿ ‘ವಂಶಿ’ ಕನ್ನಡ ಚಲನಚಿತ್ರದ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದರು.

‘ಚೈತ್ರದ ಪ್ರೇಮಾಂಜಲಿ’ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ಎಸ್‌.ನಾರಾಯಣ್‌ ಸುಮಾರು 50 ಚಲನಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. 21 ಚಿತ್ರಗಳನ್ನು ನಿರ್ಮಿಸಿರುವ ಇವರು 30 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ನಂಜುಂಡ’, ‘ಅನುರಾಗದ ಅಲೆಗಳು’, ‘ಬೇವು ಬೆಲ್ಲ’, ‘ಕಲ್ಯಾಣಿ’, ‘ಭಾಮಾ ಸತ್ಯಭಾಮಾ’, ‘ವೀರಪ್ಪ ನಾಯಕ’, ‘ಸೂರ್ಯವಂಶ’, ‘ಗಲಾಟೆ ಅಳಿಯಂದಿರು’, ‘ಸಿಂಹಾದ್ರಿಯ ಸಿಂಹ’, ‘ಚಂದ್ರ ಚಕೋರಿ’, ‘ಚೆಲುವಿನ ಚಿತ್ತಾರ’ ಇವರ ನಿರ್ದೇಶನದ ಪ್ರಮುಖ ಚಿತ್ರಗಳು. 1999ರಲ್ಲಿ ಇವರು ನಿರ್ಮಿಸಿದ ‘ಶಬ್ದವೇದಿ’ ಚಿತ್ರ ‘ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ’ ಪ್ರಶಸ್ತಿಗೆ ಆಯ್ಕೆಯಾಗಿತ್ತು.

ನಿರ್ಮಾಪಕ ಲಕ್ಷ್ಮೀಪತಿ ಅವರು ‘ಕಾಡು’, ‘ಚಿತೆಗೂ ಚಿಂತೆ’, ‘ಒಂದಾನೊಂದು ಕಾಲದಲ್ಲಿ’, ‘ಉಯ್ಯಾಲೆ’ ಹಾಗೂ ‘ದೇವರ ಮಕ್ಕಳು’ ಚಿತ್ರಗಳನ್ನು ನಿರ್ಮಿಸಿದ್ದಾರೆ. ‘ಕಾಡು’ ಚಿತ್ರವು ರಾಷ್ಟ್ರೀಯ ಪ್ರಶಸ್ತಿ (ಎರಡನೇ ಅತ್ಯುತ್ತಮ ಕಥಾಚಿತ್ರ) ಸೇರಿದಂತೆ ಮೂರು ಪ್ರಶಸ್ತಿಗಳನ್ನು ಪಡೆದಿತ್ತು. ರಾಜ್ಯ ಸರ್ಕಾರದಿಂದ ಐದು ಪ್ರಶಸ್ತಿಗಳನ್ನು ಪಡೆದಿತ್ತು. ‘ಒಂದನೊಂದು ಕಾಲದಲ್ಲಿ’ ಚಿತ್ರವು 1979ರಲ್ಲಿ ರಜತ ಕಮಲ ಪ್ರಶಸ್ತಿಗೆ ಭಾಜನವಾಗಿತ್ತು. ‘ಚಿತೆಗೂ ಚಿಂತೆ’ ಚಿತ್ರಕ್ಕೆ 1978–79ರಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ.

ನಟ ಜೆ.ಕೆ.ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯ ಆಯ್ಕೆಸಮಿತಿಯಲ್ಲಿ ಛಾಯಾಗ್ರಾಹಕ ಬಿ.ಎಸ್.ಬಸವರಾಜು, ನಟಿ ಹೇಮಾ ಚೌಧರಿ, ಸಂಕಲನಕಾರ ಸುರೇಶ್ ಅರಸ್, ಹಾಗೂ ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಇದ್ದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸೋಮವಾರ ಭೇಟಿ ಮಾಡಿದ ಸಮಿತಿ ವರದಿಯನ್ನು ಸಲ್ಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT