ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಚಿತ್ರರಂಗಕ್ಕೆ ಶಿವರಾಜ್‌ಕುಮಾರ್‌ ಸಾರಥ್ಯ

Last Updated 24 ಜುಲೈ 2020, 10:36 IST
ಅಕ್ಷರ ಗಾತ್ರ

ಕೋವಿಡ್‌–19ನಿಂದಾಗಿ ಕನ್ನಡ ಚಿತ್ರೋದ್ಯಮದ ಚಟುವಟಿಕೆಗಳು ಸ್ಥಗಿತಗೊಂಡಿವೆ. ಉದ್ಯಮ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳ ಬದುಕು ದುಸ್ತರವಾಗಿದೆ. ಈ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿರುವ ನಟ ಶಿವರಾಜ್‌ಕುಮಾರ್‌ ಅವರ ನಿವಾಸದಲ್ಲಿ ಶನಿವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಚಲನಚಿತ್ರ ನಿರ್ಮಾಪಕರ ಸಂಘ, ನಿರ್ದೇಶಕರ ಸಂಘದಿಂದ ಸಭೆ ನಡೆಯಿತು.

ಕೊರೊನಾ ಪರಿಣಾಮ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ರಾಜ್‌ಕುಮಾರ್‌, ವಿಷ್ಣುವರ್ಧನ್‌ ಹಾಗೂ ಅಂಬರೀಷ್‌ ಅವರ ನಿಧನದ ಬಳಿಕ ಕನ್ನಡ ಚಿತ್ರರಂಗ ನಾಯಕತ್ವದ ಕೊರತೆ ಎದುರಿಸುತ್ತಿದೆ. ಸಂಕಷ್ಟದ ಕುಲುಮೆಯೊಳಗೆ ಬೇಯುತ್ತಿದೆ. ಸಮರ್ಥ ನಾಯಕತ್ವದ ಅಗತ್ಯವಿದೆ. ಹಾಗಾಗಿ, ಶಿವರಾಜ್‌ಕುಮಾರ್‌ ಅವರು ಚಿತ್ರರಂಗದ ನಾಯಕತ್ವ ಹೊತ್ತುಕೊಳ್ಳಬೇಕು ಎಂದು ಸಭೆಯಲ್ಲಿ ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ನಿರ್ದೇಶಕ ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ಮಾತನಾಡಿ, ‘ಈ ಹಿಂದೆ ಚಿತ್ರರಂಗಕ್ಕೆ ಯಾವುದೇ ಸಮಸ್ಯೆ ಎದುರಾದರೂ ಅಣ್ಣಾವ್ರ ಮನೆಯಲ್ಲಿಯೇ ಕುಳಿತು ಆ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುತ್ತಿತ್ತು. ಈಗ ಚಿತ್ರರಂಗಕ್ಕೆ ನಾಯಕನೊಬ್ಬನ ಅಗತ್ಯವಿದೆ. ಶಿವರಾಜ್‌ಕುಮಾರ್‌ ಅವರು ನಾಯಕತ್ವವಹಿಸಿಕೊಳ್ಳಬೇಕು ಎಂದು ನಾವೆಲ್ಲರೂ ಒಟ್ಟಾಗಿ ನಿರ್ಣಯಿಸಿದ್ದೇವೆ’ ಎಂದು ಘೋಷಿಸಿದರು.

ನಿರ್ಮಾಪಕ ಸಾ.ರಾ. ಗೋವಿಂದು, ‘ಇನ್ನು ಮುಂದೆ ಶಿವಣ್ಣ ಅವರ ನಾಯಕತ್ವದಡಿ ಕನ್ನಡ ಚಿತ್ರರಂಗ ಮುನ್ನೆಡೆಯಲಿದೆ’ ಎಂದರು.

ಒಟ್ಟಾಗಿ ಸಾಗೋಣ...

ಶಿವರಾಜ್‌ಕುಮಾರ್‌ ಮಾತನಾಡಿ, ‘ಪ್ರಸ್ತುತ ಕನ್ನಡ ಚಿತ್ರರಂಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ನಿರ್ಮಾಪಕರು, ನಿರ್ದೇಶಕರು, ಪ್ರದರ್ಶಕರು, ವಿತರಕರು ಸೇರಿದಂತೆ ಚಿತ್ರರಂಗದ ಎಲ್ಲರೂ ಒಟ್ಟಾಗಿ ಸಭೆಯಲ್ಲಿ ಪಾಲ್ಗೊಂಡಿರುವುದು ಖುಷಿ ನೀಡಿದೆ’ ಎಂದು ಪ್ರತಿಕ್ರಿಯಿಸಿದರು.

‘ಸಾವಿರ ಜನರನ್ನು ಹಿಂದೆ ಇಟ್ಟುಕೊಂಡ ಮಾತ್ರಕ್ಕೆ ಯಾರೊಬ್ಬರು ನಾಯಕ ಆಗಲು ಸಾಧ್ಯವಿಲ್ಲ. ಎಲ್ಲರ ಸಮಸ್ಯೆಗಳನ್ನು ಅರಿತುಕೊಂಡು ಒಟ್ಟಾಗಿ ಕರೆದುಕೊಂಡು ಹೋಗಬೇಕು. ಅದು ಶ್ರೇಷ್ಠ ನಾಯಕತ್ವದ ಗುಣ. ಕೊರೊನಾ ಎದುರಿಸುವುದು ದೊಡ್ಡ ವಿಷಯವಲ್ಲ. ಎಲ್ಲಾ ಸ್ಟಾರ್‌ ನಟರೊಟ್ಟಿಗೂ ಕುಳಿತು ಮಾತನಾಡುತ್ತೇನೆ. ಕನ್ನಡ ಇಂಡಸ್ಟ್ರಿಯನ್ನು ಮಾದರಿ ಚಿತ್ರರಂಗವಾಗಿ ರೂಪಿಸಲು ಎಲ್ಲರೂ ಒಟ್ಟಾಗಿ ಸಾಗೋಣ’ ಎಂದು ಹೇಳಿದರು.

ಬೇಡಿಕೆ ಮಂಡನೆ

ಸಿನಿಮಾಗಳ ಶೂಟಿಂಗ್‌ಗೆ ಅನುಮತಿ ಸಿಕ್ಕಿದರೆ ಸಾಕಷ್ಟು ಜನರಿಗೆ ಉದ್ಯೋಗ ಸಿಗಲಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಸ್ಟಾರ್‌ ನಟರು ವರ್ಷಕ್ಕೆ ಒಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರಿಂದ ನಿರ್ಮಾಪಕರು, ಪ್ರದರ್ಶಕರು, ವಿತರಕರು ಸಮಸ್ಯೆ ಎದುರಿಸುತ್ತಿದ್ದಾರೆ. ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದರೆ ಉದ್ಯೋಗಾವಕಾಶ ಸಿಗಲಿದೆ. ಕನ್ನಡ ಸಿನಿಮಾಗಳಿಗೆ ಹೆಚ್ಚು ಚಿತ್ರಮಂದಿರಗಳು ಸಿಗಲಿವೆ. ಆಗ ಪರಭಾಷಾ ಸಿನಿಮಾಗಳ ಹಾವಳಿ ಕಡಿಮೆಯಾಗಲಿದೆ ಎಂದು ನಿರ್ಮಾಪಕರು ಮತ್ತು ನಿರ್ದೇಶಕರು ಒಕ್ಕೊರಲಿನಿಂದ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್‌ಕುಮಾರ್‌, ‘ರಾಜ್ಯ ಸರ್ಕಾರ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಕೇಳುವ ಮೊದಲು ನಾವೇ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು. ಬಳಿಕ ಸರ್ಕಾರದ ಮುಂದೆ ಬೇಡಿಕೆ ಮಂಡಿಸಬೇಕು’ ಎಂದರು.

ಸಭೆಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ, ಅಶೋಕ್‌, ಕೆ.ಪಿ. ಶ್ರೀಕಾಂತ್‌, ಎಸ್‌.ಎ. ಚಿನ್ನೇಗೌಡ, ಉಮೇಶ್‌ ಬಣಕಾರ್‌, ಎನ್‌.ಎಂ. ಸುರೇಶ್‌, ಎ. ಗಣೇಶ್‌, ಜಯಣ್ಣ, ಆರ್‌.ಎಸ್. ಗೌಡ್ರು, ಕಾರ್ತಿಕ್‌ ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT