ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ಅವರನ್ನು ಬೆಂಬಲಿಸಿ, ಅವರು ಹೇಳುವ ಕ್ಷೇತ್ರಗಳಲ್ಲಿ ಪ್ರಚಾರ: ಸುದೀಪ್

Last Updated 7 ಏಪ್ರಿಲ್ 2023, 11:22 IST
ಅಕ್ಷರ ಗಾತ್ರ

ಬೆಂಗಳೂರು: ಚಲನಚಿತ್ರ ನಟ ಸುದೀಪ್‌ ಅವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೆಲವು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ನಗರದ ಅಶೋಕ ಹೊಟೇಲ್‌ನಲ್ಲಿ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ‘ನಾನು ಬಿಜೆಪಿ ಸೇರುತ್ತಿಲ್ಲ, ರಾಜಕೀಯವನ್ನು ಪ್ರವೇಶ ಮಾಡುತ್ತಿಲ್ಲ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಬಸವರಾಜ ಬೊಮ್ಮಾಯಿ ಅವರು ನನಗೆ ಚಿಕ್ಕಂದಿನಿಂದಲೂ ಪರಿಚಿತರು. ನಾನು ಚಿಕ್ಕವನಿದ್ದಾಗಿಂದಲೂ ಅವರನ್ನು ಮಾಮ ಎಂದೇ ಕರೆಯುತ್ತಿದ್ದೆ. ಚಿತ್ರರಂಗದಲ್ಲಿ ನಾನು ಕಡು ಕಷ್ಟದಲ್ಲಿ ಇದ್ದ ಸಂದರ್ಭದಲ್ಲಿ ನನ್ನ ಕೈ ಹಿಡಿದ ಬೆರಳೆಣಿಕೆಯ ಜನರಲ್ಲಿ ಬೊಮ್ಮಾಯಿ ಒಬ್ಬರು. ಈಗ ಅವರು ನನ್ನ ಬೆಂಬಲ ಕೇಳಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ನೆರವಾಗುವ ಮೂಲಕ ಕೃತಜ್ಞತೆ ಸಲ್ಲಿಸುವುದು ನನ್ನ ಕರ್ತವ್ಯ. ಆದ್ದರಿಂದ ಅವರು ಎಲ್ಲಿ ಹೇಳುತ್ತಾರೆಯೋ ಅಲ್ಲಿ ಪ್ರಚಾರ ನಡೆಸುತ್ತೇನೆ. ಹಾಗೆಂದು ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವಷ್ಟು ಸಮಯವೂ ಇಲ್ಲ, ಮಾಡುವುದೂ ಇಲ್ಲ. ಕೆಲವು ಕಡೆಗಳಲ್ಲಿ ಮಾತ್ರ ಪ್ರಚಾರ ಮಾಡುತ್ತೇನೆ’ ಎಂದರು.

‘ಪಕ್ಷ ಎನ್ನುವುದಕ್ಕಿಂತ ವೈಯಕ್ತಿಕ ನೆಲೆಯಲ್ಲಿ ಮುಖ್ಯಮಂತ್ರಿಯವರು ಕರೆದಿದ್ದಾರೆ. ಅವರ ಬೆಂಬಲಕ್ಕೆ ನಿಂತಿದ್ದೇನೆ. ಬೊಮ್ಮಾಯಿ ಅವರು ರಾಜಕೀಯ ಪ್ರವೇಶ ಮಾಡುವುದಕ್ಕೂ ಮೊದಲಿಂದಲೂ ಪರಿಚಿತರು. ಹೀಗಾಗಿ ಇಲ್ಲಿ ಪಕ್ಷಗಳ ವಿಚಾರ ಬರುವುದಿಲ್ಲ. ವ್ಯಕ್ತಿಗಾಗಿ ನಾನು ಬಂದಿದ್ದೇನೆ. ಕಳೆದ 27 ವರ್ಷಗಳಿಂದ ಚಿತ್ರರಂಗದಲ್ಲಿ ಕಠಿಣವಾಗಿ ಪರಿಶ್ರಮವನ್ನು ಹಾಕಿ ದೊಡ್ಡ ಅಭಿಮಾನಿ ಬಳಗವನ್ನು ಪಡೆದಿದ್ದೇನೆ. ಅವರಲ್ಲಿ ಎಲ್ಲ ಪಕ್ಷವನ್ನು ಬೆಂಬಲಿಸುವವರೂ ಇದ್ದಾರೆ. ಹೀಗಾಗಿ ರಾಜಕೀಯ ಪ್ರವೇಶ ಮಾಡುವುದಿಲ್ಲ. ಒಂದು ವೇಳೆ ರಾಜಕೀಯ ಸೇರುವುದೇ ಆದಲ್ಲಿ ಮುಂಚಿತವಾಗಿಯೇ ಹೇಳಿಯೇ ಸೇರುತ್ತೇನೆ’ ಎಂದೂ ಸುದೀಪ್‌ ಸ್ಪಷ್ಟಪಡಿಸಿದರು.

ನನ್ನ ಕಷ್ಟದಲ್ಲಿ ಯಾರು ನನ್ನ ಜತೆ ಇದ್ದರೋ ಅಂತಹವರು ಯಾವುದೇ ಪಕ್ಷದಲ್ಲಿದ್ದರೂ ಅವರ ನೆರವಿಗೆ ಹೋಗುತ್ತೇನೆ. ಮುನಿರತ್ನ ಅವರಿಗೂ ಪ್ರಚಾರ ಮಾಡಿದ್ದೆ. ಆಗ ಅವರು ಬೇರೆ ಪಕ್ಷದಲ್ಲಿದ್ದರು ಎಂದರು.

‘ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿ, ಈ ಸುದ್ದಿಗೋಷ್ಠಿಯನ್ನು ವೈಯಕ್ತಿಯ ನೆಲೆಯಲ್ಲಿ ಮಾಡಿದ್ದೇನೆ. ಸುದೀಪ್‌ ಅವರು ಪಕ್ಷ ಸೇರುತ್ತಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಬರುವಂತೆ ಕೇಳಿದೆ. ನಿಮಗೋಸ್ಕರ ಬರುತ್ತೇನೆ. ಅವರ ಸಮಯ ಮತ್ತು ಗೌರವ ನೋಡಿಕೊಂಡು ಎಲ್ಲೆಲ್ಲಿ ಪ್ರಚಾರ ಮಾಡಬೇಕು ಎಂಬುದನ್ನು ಅವರಿಗೆ ತಿಳಿಸುತ್ತೇವೆ’ ಎಂದು ಹೇಳಿದರು.

‘ನಮ್ಮ ಪಕ್ಷ ಮಾತ್ರವಲ್ಲ ಕಾಂಗ್ರೆಸ್‌ ಪಕ್ಷದಲ್ಲಿ ದೊಡ್ಡ ಸ್ಟಾರ್‌ಗಳಿದ್ದಾರೆ. ಇತ್ತೀಚೆಗೆ ದೊಡ್ಡ ಚಲನಚಿತ್ರ ಸಂಗೀತ ನಿರ್ದೇಶಕರೂ ಅವರ ಪಕ್ಷಕ್ಕೆ ಸೇರಿದ್ದಾರೆ. ಸುದೀಪ್ ಅವರು ಜನಪ್ರಿಯ ನಟ. ಅವರದ್ದೇ ಆದ ದೊಡ್ಡ ಅಭಿಮಾನ ಬಳಗ ಇದೆ. ಅವರು ಪ್ರಚಾರಕ್ಕೆ ಬರುತ್ತಾರೆ ಎಂಬ ವಿಷಯ ಯುವ ಜನತೆಯಲ್ಲಿ ಸಂಚಲನ ಮೂಡಿಸಿದೆ’ ಎಂದೂ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವ ಆರ್‌.ಅಶೋಕ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ತೋಟಗಾರಿಕಾ ಸಚಿವ ಮುನಿರತ್ನ ಇದ್ದರು.

ಮೋದಿ ಕೆಲಸಗಳ ಬಗ್ಗೆ ಹೆಮ್ಮೆ ಇದೆ:

‘ಈ ದೇಶದ ಪ್ರಜೆಯಾಗಿ ನನಗೂ ನನ್ನದೇ ಆದ ಅಭಿಪ್ರಾಯಗಳಿವೆ. ಅದರಂತೆ ಪ್ರಧಾನಿ ಮೋದಿಯವರು ದೇಶದ ಪ್ರಗತಿಗಾಗಿ ಹಲವು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅದರ ಬಗ್ಗೆ ತುಂಬಾ ಹೆಮ್ಮೆ ಇದೆ’ ಎಂದು ಸುದೀಪ್‌ ಹೇಳಿದರು.

‘ದೇಶದ ಅಭ್ಯುದಯಕ್ಕಾಗಿ ಉತ್ತಮ ಕೆಲಸಗಳನ್ನು ಮಾಡಿದಾಗ ಯಾರೇ ಆದರೂ ಆ ಬಗ್ಗೆ ಹೆಮ್ಮೆ ಪಡಲೇಬೇಕು. ಒಬ್ಬ ನಾಗರೀಕನಾಗಿ ಈ ವಿಚಾರ ಹಂಚಿಕೊಂಡಿದ್ದೇನೆ’ ಎಂದು ಹೇಳಿದರು.

ಬಿಜೆಪಿ ಪರ ಪ್ರಚಾರ ಮಾಡುವುದನ್ನು ಟೀಕಿಸಿ ಚಿತ್ರ ನಟ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿರುವ ಬಗ್ಗೆ ಪ್ರಶ್ನಿಸಿದಾಗ, ‘ಅವರೊಬ್ಬ ಉತ್ತಮ ನಟ. ಅವರ ಜತೆ ಒಂದು ಸಿನಿಮಾ ಮಾಡಿದ್ದೆ. ಇನ್ನೊಂದು ಸಿನಿಮಾ ಯಾವಾಗ ಮಾಡುವುದು ಎಂಬುದನ್ನು ಕಾಯ್ತಾ ಇದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT