ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಕೋಮು ರಾಜಕೀಯದ ಕಾಟ

‘ಜಸ್ಟ್‌ ಆಸ್ಕಿಂಗ್‌’ ಸಂವಾದದಲ್ಲಿ ಚಿತ್ರನಟ ಪ್ರಕಾಶ್‌ ರೈ ಆತಂಕ
Last Updated 23 ಏಪ್ರಿಲ್ 2018, 10:22 IST
ಅಕ್ಷರ ಗಾತ್ರ

ಮಡಿಕೇರಿ: ‘ಭಾರತವನ್ನು ಕೋಮು ರಾಜಕೀಯ ಬಲವಾಗಿ ಕಾಡುತ್ತಿದೆ’ ಎಂದು ಚಿತ್ರನಟ ಪ್ರಕಾಶ್‌ ರೈ ಆತಂಕ ವ್ಯಕ್ತಪಡಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ‘ಜಸ್ಟ್‌ ಆಸ್ಕಿಂಗ್‌’ ಸಂವಾದದಲ್ಲಿ ಅವರು ಮಾತನಾಡಿ, ‘ಕೋಮು ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದ್ದಕ್ಕೆ ಹಿಂದೂ ವಿರೋಧಿ ಪಟ್ಟ ಕಟ್ಟಲಾಯಿತು. ಯಾರ ವಿರೋಧಿಯೂ ನಾನಲ್ಲ. ಪ್ರಜಾಪ್ರಭುತ್ವದ ವಿರುದ್ಧ ನಡೆದರೆ ಅದನ್ನು ನಾನು ಖಂಡಿಸುವೆ’ ಎಂದು ಪ್ರತಿಕ್ರಿಯಿಸಿದರು.

‘ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣವು ನನ್ನನ್ನು ಬಹಳವಾಗಿ ಕಾಡಿತು. ಆಕೆಯ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯ ಇರಲಿಲ್ಲ. ಗೌರಿ ಹತ್ಯೆಯನ್ನೂ ಕೆಲವರು ಸಂಭ್ರಮಿಸಿದರು. ಅವರಿಗೆ ತಿಳಿಹೇಳಿ ಎಂದು ಪ್ರಧಾನಿ ಮೋದಿ ಅವರನ್ನು ಕೋರಿದೆ. ಅದಕ್ಕೆ ನನ್ನನ್ನು ಮೋದಿ ವಿರೋಧಿಯೆಂದು ಕರೆದರು. ನಾನೊಬ್ಬ ಪ್ರಜೆಯಾಗಿ ಅವರನ್ನು ಪ್ರಶ್ನಿಸಿದ್ದೆ’ ಎಂದು ಸ್ಪಷ್ಟನೆ ನೀಡಿದರು.

‘ಬಹುಮತ ಪಡೆದು ಅಧಿಕಾರಕ್ಕೆ ಬಂದ ಬಳಿಕ ಪಕ್ಷದ ಸಿದ್ಧಾಂತವನ್ನು ಸಮಾಜದ ಮೇಲೆ ಹೇರುವುದು ತಪ್ಪು. ನನಗೆ ರಾಜಕೀಯ ಇಷ್ಟವಿಲ್ಲ. ಶಾಸಕ, ಸಂಸದನಾಗುವ ಕನಸು ಇಲ್ಲ. ಸಮಾಜಕ್ಕೆ ಒಳ್ಳೆಯದು ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ. ಜನರು ಪ್ರಶ್ನೆ ಮಾಡದಿದ್ದರೆ ಅಭಿವೃದ್ಧಿಯೂ ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.

‘ಹಿಂದೆ ಸಾಹಿತಿಗಳ ನಡುವೆ ಭಿನ್ನಾಭಿಪ್ರಾಯವಿದ್ದರೂ ರಾಜ್ಯದ ಸಮಸ್ಯೆ ಎದುರಾದಾಗ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದರು. ಈಗ ಎಲ್ಲ ವರ್ಗದ ಜನರು ದ್ವೀಪವಾಗಿದ್ದಾರೆ. ಪರರ ಚಿಂತೆ ನಮಗ್ಯಾಕೆ ಎನ್ನುವ ಮನಸ್ಥಿತಿಯಿದೆ. ಇದು ದುರಂತ’ ಎಂದು ಎಚ್ಚರಿಸಿದರು.

‘ಧರ್ಮಗಳಿಂದ ಮನುಷ್ಯನಿಗೆ ನೆಮ್ಮದಿಯಿದೆ. ಅದರ ಪಾಲನೆಯೂ ತಪ್ಪಲ್ಲ. ಮತ್ತೊಂದು ಧರ್ಮವನ್ನು ತುಳಿಯುವ ಅಹಂಕಾರ ಒಳ್ಳೆಯ ಬೆಳವಣಿಗೆ ಅಲ್ಲ. ವಾಜಪೇಯಿ ಅವಧಿಯ ಬಿಜೆಪಿಯ ಬಗ್ಗೆ ಮಾತ್ರ ನನಗೆ ಗೌರವವಿತ್ತು’ ಎಂದು ಹೇಳಿದರು.

‘ಅಧಿಕಾರ ಯಾರ ಮನೆ ಆಸ್ತಿಯಲ್ಲ. ಜನರ ತೆರಿಗೆ ಹಣದಿಂದ ಅಧಿಕಾರ ನಡೆಸುತ್ತಿದ್ದಾರೆ ಅಷ್ಟೆ. ಪ್ರತಿಪಕ್ಷಗಳೇ ಇಲ್ಲದಂತೆ ಮಾಡುತ್ತೇವೆ ಎನ್ನುತ್ತಾರೆ ಮೋದಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳು ಇರಬೇಕು. ಮೋದಿ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’ ಎಂದು ದೂರಿದರು.

ಪ್ರತಾಪಸಿಂಹ ವಿರುದ್ಧ ಕಿಡಿ:

‘ಯಾರ ಮೇಲೆಯೂ ದ್ವೇಷವಿಲ್ಲ. ಬಿಜೆಪಿ ಕೆಲವು ನಾಯಕರು ಮಾತನಾಡುತ್ತಿದ್ದರೂ, ಮೋದಿ ಮೌನವಾಗಿದ್ದಾರೆ. ಸಂವಿಧಾನ ಬದಲಾವಣೆಯ ಮಾತನಾಡಿದರೂ ಮೋದಿ ಎಚ್ಚರಿಕೆ ನೀಡಲಿಲ್ಲ. ಪ್ರತಾಪ್‌ ಸಿಂಹ ಒಬ್ಬ ಸಂಸದನಾಗಿ ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಪೋಸ್ಟ್‌ ಮಾಡುತ್ತಿದ್ದಾರೆ; ಆತ ಕೊಳಕು ಮನಸ್ಸಿನ ವ್ಯಕ್ತಿ’ ಎಂದು ಕಿಡಿಕಾರಿದರು.

‘ಪ್ರಶ್ನೆ ಕೇಳಿದ್ದಕ್ಕೆ ಕೇಂದ್ರ ಸರ್ಕಾರವು ಉತ್ತರ ನೀಡಬೇಕೇ ಹೊರತು ಬಾಯಿ ಮುಚ್ಚಿಸುವ ಕೆಲಸ ಮಾಡಬಾರದು. 21 ರಾಜ್ಯಗಳ ಬಳಿಕ ಕರ್ನಾಟಕದಲ್ಲೂ ಅಧಿಕಾರ ಪಡೆದೇ ತೀರುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ; ಇದು ಸರ್ವಾಧಿಕಾರಿ ಧೋರಣೆ’ ಎಂದು ರೈ ಆಪಾದಿಸಿದರು.
‘ಟಿಪ್ಪು ಜಯಂತಿಯನ್ನು ಕಾಂಗ್ರೆಸ್‌ – ಬಿಜೆಪಿ ರಾಜಕೀಯಕ್ಕೆ ಬಳಸಿಕೊಂಡವು. ಜನರು ಬುದ್ಧಿವಂತರಾಗಬೇಕು. ನಿಜವಾದ ಇತಿಹಾಸ ಅರಿಯುವ ಕೆಲಸ ಆಗಬೇಕು’ ಎಂದು ಹೇಳಿದರು.

‘2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಚುನಾವಣೆ ಪೂರ್ವದಲ್ಲಿ ಮೋದಿ ನೀಡಿದ್ದ ಭರವಸೆ ಈಡೇರಿಲ್ಲ. ಕಪ್ಪುಹಣಕ್ಕೆ ಕಡಿವಾಣ ಹಾಕುತ್ತೇನೆ ಎಂಬುದು ಸಾಕಾರಗೊಂಡಿಲ್ಲ. ಕೈಮಗ್ಗ ಉತ್ಪನ್ನಗಳ ಮೇಲೆಯೂ ಶೇ 15 ಜಿಎಸ್‌ಟಿ ವಿಧಿಸಲಾಯಿತು. ಇದು ಅಭಿವೃದ್ಧಿಯೇ? ಭರವಸೆ ಈಡೇರಿಸಲು ಸಾಧ್ಯವಾಗದಿದ್ದಾಗ ತಮ್ಮ ಅಸಹಾಯಕತೆ ವ್ಯಕ್ತಪಡಿಸಿಕೊಳ್ಳಬೇಕಿತ್ತು. ಮೌನ ಉತ್ತರವಲ್ಲ. ಉತ್ತರ ನೀಡಿದ್ದರೆ ಆತ ನಿಜವಾದ ನಾಯಕ ಆಗುತ್ತಿದ್ದರು’ ಎಂದು ತಿರುಗೇಟು ನೀಡಿದರು.

ಸಂವಾದದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್‌ ಕುಟ್ಟ, ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಹಾಜರಿದ್ದರು.

‘ಕೊಡಗು ಪರಿಸರ ಹಾಳು’

ಮಡಿಕೇರಿ: ‘ಅನಧಿಕೃತ ಹೋಂ ಸ್ಟೇ, ಮರಳುಗಾರಿಕೆ, ಕೀಟನಾಶಕ ಬಳಕೆಯಿಂದ ಕೊಡಗು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಜನಪ್ರತಿನಿಧಿಗಳೂ ವೈಜ್ಞಾನಿಕವಾಗಿ ಚಿಂತನೆ ನಡೆಸುತ್ತಿಲ್ಲ. ಅದನ್ನು ಬಿಟ್ಟು ಜಾತಿ, ಧರ್ಮಗಳ ಬಗ್ಗೆ ಮಾತ್ರ ರಾಜಕಾರಣಿಗಳು ಮಾತನಾಡುತ್ತಾರೆ. ಕೊಡಗಿನವರೂ ನಾವು ವೀರರು– ಶೂರರೆಂದು ಮೌನವಾಗಿರದೇ ಹೋರಾಟ ನಡೆಸಲಿ’ ಎಂದು ಪ್ರಕಾಶ್‌ ರೈ ಹೇಳಿದರು.

‘ಜಸ್ಟ್‌ ಆಸ್ಕಿಂಗ್‌’ ವೇದಿಕೆಯ ಮೂಲಕ ಕಾವೇರಿ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳಲು ಸಭೆ ನಡೆಸಲಾಗುವುದು. ಎರಡು ತಿಂಗಳು ಸಮಯ ನೀಡಿ; ತಜ್ಞರೊಂದಿಗೆ ಕಾವೇರಿ ವಿವಾದ ಬಗೆ ಹರಿಸುವ ನಿಟ್ಟಿನಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

**

ಪ್ರತಿಭಟನಾಕಾರರನ್ನು ನಾಯಿಗೆ ಹೋಲಿಸುವ ಮುಖಂಡರನ್ನು ಹೇಗೆ ನಂಬುವುದು. ಅದೇ ನನ್ನ ಆತಂಕಕ್ಕೆ ಕಾರಣವಾಗಿದೆ
– ಪ್ರಕಾಶ್‌ ರೈ, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT