ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕನಾಥ್: ಈಸ್ಟ್‌ಮನ್‌ ನೆನಪುಗಳು...

Last Updated 22 ಜನವರಿ 2019, 9:24 IST
ಅಕ್ಷರ ಗಾತ್ರ

ಕನ್ನಡ ಚಿತ್ರರಸಿಕರಿಗೆ ಲೋಕನಾಥ್‌ (ಆಗಸ್ಟ್ 14, 1927 – ಡಿಸೆಂಬರ್ 31, 2018) ಓರ್ವ ಸಹೃದಯಿ ಕಲಾವಿದನಾಗಿ ಪರಿಚಿತರು. ದೊಡ್ಡ ದೇಹದ ಹಾಗೂ ಅಷ್ಟೇ ದೊಡ್ಡ ವ್ಯಕ್ತಿತ್ವದ ಲೋಕನಾಥ್‌ರ ವೈಯಕ್ತಿಕ ಬದುಕು ಕೂಡ ಅವರ ಕಲೆಯಷ್ಟೇ ಘನವಾದುದು.

ಮಧ್ಯಮವರ್ಗದಿಂದ ಬಂದ ವ್ಯಕ್ತಿಯೊಬ್ಬ ಕಲಾವಿದನಾಗಿ ರೂಪುಗೊಂಡ ಕಥೆ ‘ಈಸ್ಟ್‌ಮನ್‌’ ಸಿನಿಮಾಕ್ಕಿಂಥ ಭಿನ್ನವೇನಲ್ಲ. ಅವರ ಮದುವೆಯ ಕಥೆಯನ್ನು ಕೇಳಿ. ಒಂದು ದಿನ, ‘ಮದುವೆಗೆ ಹೋಗೋಣ ನಡೆ’ ಎಂದು ಹೆತ್ತವರು ಹೊರಡಿಸಿದಾಗ ಲೋಕನಾಥ್‌ ಕುತೂಹಲದಿಂದ ಕೇಳಿದ್ದು – ‘ಯಾರ ಮದುವೆ?’. ನಿನ್ನದೇ ಮದುವೆ ಎಂದು ಅಪ್ಪ ಹೇಳಿದಾಗ ಚಿಗುರುಮೀಸೆ ಹುಡುಗ ತಬ್ಬಿಬ್ಬು. ಹುಡುಗಿಯನ್ನೇ ನೋಡದೆ ಮದುವೆ ಆಗುವುದು ಹೇಗೆ ಎಂದು ಹುಡುಗ ಹಿಂದೆಮುಂದೆ ನೋಡಿದರೂ ಮನೆಯವರು ಬಿಡಬೇಕಲ್ಲ. ‘ಸುಮ್ಮನೆ ತರಲೆ ಮಾಡಬೇಡ. ಮದುವೆ ಮಂಟಪದಲ್ಲಿ ಹುಡುಗಿಯನ್ನು ನೋಡುವೆಯಂತೆ ನಡೆ’ ಎಂದು ಹೊರಡಿಸಿಬಿಟ್ಟರು. ವರ ಮುಸುಮುಸಿ ಎನ್ನುತ್ತಲೇ ಮದುವೆ ಮುಗಿಯಿತು. ಆನಂತರದ್ದು ‘ನಾ ನಿನಗೆ ನೀನೆನಗೆ ಜೇನಾಗುವಾ’ ಎನ್ನುವಂತಹ ಸವಿದಾಂಪತ್ಯದ ಬದುಕು.

ಲೋಕನಾಥ್‌ ಒಮ್ಮೆ ತಮ್ಮ ಪತ್ನಿಯೊಂದಿಗೆ ಅಮೆರಿಕಗೆ ಹೋಗಿದ್ದರು. ನಯಾಗರಾ ಜಲಪಾತವನ್ನು ವೀಕ್ಷಿಸಲು ದಂಪತಿ ಹೊರಟರು. ಪ್ರಕೃತಿಯ ಸನ್ನಿಧಿಯಲ್ಲಿದ್ದರೂ ಲೋಕನಾಥ್‌ರ ಮನಸ್ಸಿನ ತುಂಬ ಪ್ರವಾಸಕ್ಕಾಗಿ ಖರ್ಚು ಮಾಡಿದ ಭಾರೀ ಮೊತ್ತದ್ದೇ ಚಿಂತೆ. ಜಲಪಾತವನ್ನು ನೋಡುತ್ತಾ ಸಾಗುತ್ತಿರಬೇಕಾದರೆ, ಒಂದು ಸುರಂಗದಿಂದ ಒಮ್ಮೆಗೇ ಸಾವಿರಾರು ಪಾರಿವಾಳಗಳು ಹೊರಬಂದವಂತೆ. ಜಲಪಾತದ ಮಾಂತ್ರಿಕ ಭಿತ್ತಿಯ ಹಿನ್ನೆಲೆಯಲ್ಲಿ, ಆ ಜಲಧಾರೆಯಿಂದಲೇ ಜೀವತಳೆದು ಚಿಮ್ಮಿದಂತೆ ಕಾಣಿಸುತ್ತಿದ್ದ ಪಾರಿವಾಳಗಳ ಹಿಂಡನ್ನು ನೋಡಿ ಲೋಕನಾಥ್‌ ಮಂತ್ರಮುಗ್ಧರಾದರಂತೆ. ಅವರ ಮನಸ್ಸನ್ನು ಕವಿದಿದ್ದ ದುಡ್ಡಿನ ಲೆಕ್ಕಾಚಾರ ಕ್ಷಣಾರ್ಧದಲ್ಲಿ ಇಲ್ಲವಾಗಿತ್ತು. ಆ ಕ್ಷಣಕ್ಕೆ, ‘ಇಷ್ಟೊಂದು ದುಡ್ಡು ಖರ್ಚು ಮಾಡಿ ಇಲ್ಲಿಗೆ ಬಂದಿದ್ದು ಸಾರ್ಥಕವಾಯಿತು’ ಎಂದು ತಮಗನ್ನಿಸಿದ್ದನ್ನು ದಶಕಗಳ ನಂತರ ಹೇಳುವಾಗ ಅವರ ಕಣ್ಣುಗಳಲ್ಲಿ ಮಧುಚಂದ್ರ ಮುಗಿಸಿಕೊಂಡು ಬಂದ ತರುಣನ ರಂಗು ಕಾಣಿಸುತ್ತಿತ್ತು.

ಮದುವೆಯಷ್ಟೇ ಅಲ್ಲ, ಲೋಕನಾಥ್‌ ನಟರಾದುದು ಕೂಡ ಆಕಸ್ಮಿಕವೇ. ಅಪ್ಪನ ವಹಿವಾಟಿನಲ್ಲಿ ನೆರವಾಗಲೆಂದು ಎಂಜಿನಿಯರಿಂಗ್‌ ಅರ್ಧಕ್ಕೆ ಬಿಟ್ಟಿದ್ದ ವಿನಯವಂತ ಮಗ ಅವರು. ಅಪ್ಪನ ಜವಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ತನ್ನ ಪಾಡಿಗೆ ತಾನಿದ್ದ ಈ ಹುಡುಗನಿಗಿದ್ದುದು ಸಿನಿಮಾ ಹುಚ್ಚಲ್ಲ; ಗರಡಿಮನೆಯ ಆಕರ್ಷಣೆ. ಉಳಿದಂತೆ ಸಂಗೀತದ ಬಗ್ಗೆ ಸ್ವಲ್ಪ ಆಸಕ್ತಿಯಿತ್ತು. ತಬಲಾ ಕಲಿಯಬೇಕೆನ್ನುವ ಆಸೆಯೂ ಇತ್ತು. ಆದರೆ, ಸಂಪ್ರದಾಯಕ್ಕೆ ಹೆಸರಾದ ಮನೆಯಲ್ಲಿ ತಬಲಾ ಉಂಟುಮಾಡಬಹುದಾದ ಕಂಪನಗಳನ್ನು ನೆನಪಿಸಿಕೊಂಡೇ ಅವರು ತಮ್ಮ ಆಸೆಯನ್ನು ಕೈಬಿಟ್ಟರು. ಆದರೆ, ದೇಹದಾರ್ಢ್ಯದ ಮೇಲಿನ ಮೋಹದಿಂದಾಗಿ ಕೆ.ವಿ. ಅಯ್ಯರ್‌ ಅವರ ವ್ಯಾಯಾಮಶಾಲೆಗೆ ನಿಯಮಿತವಾಗಿ ಹೋಗಿ ಸಾಮು ಮಾಡುತ್ತಿದ್ದರು. ಆಕರ್ಷಕ ಮೈಕಟ್ಟಿನ ತರುಣ ಅಯ್ಯರ್ ಅವರ ಗಮನಸೆಳೆಯಲು ಹೆಚ್ಚು ದಿನ ಬೇಕಾಗಲಿಲ್ಲ. ಒಂದು ದಿನ ಅಯ್ಯರ್‌, ತಮ್ಮ ಗೆಳೆಯ ಬಿ.ಎಸ್‌. ನಾರಾಯಣ್‌ ಅವರಿಗೆ ಲೋಕನಾಥ್‌ರನ್ನು ಪರಿಚಯಿಸಿದರು. ‘ರವಿ ಕಲಾವಿದರು’ ತಂಡದ ರೂವಾರಿಗಳಲ್ಲೊಬ್ಬರಾಗಿದ್ದ ನಾರಾಯಣ್‌, ಸಿನಿಮಾ ನಿರ್ದೇಶಕರೂ ಹೌದು. ಅವರೊಂದಿಗಿನ ನಂಟು ಲೋಕನಾಥ್‌ರನ್ನು ಗರಡಿಮನೆಯಿಂದ ರಂಗಭೂಮಿಗೆ, ಅಲ್ಲಿಂದ ಸಿನಿಮಾಕ್ಕೆ ಕರೆತಂದಿತು. ಹಾಂ, ನಾಟಕದಲ್ಲಿ ನಟಿಸಲು ಕೂಡ ಅವರಿಗೆ ಇಷ್ಟವಿರಲಿಲ್ಲ. ಅಯ್ಯರ್‌ ಪ್ರೀತಿಯಿಂದ ಗದರಿದ ಮೇಲೆಯೇ ಅವರು ಹೂಂ ಅಂದರಂತೆ.

ನಾಟಕವೊಂದರಲ್ಲಿ ಇಪ್ಪತ್ತಮೂರರ ಲೋಕನಾಥ್‌ಗೆ ತಂದೆಯ ಪಾತ್ರ ದೊರೆತಿತ್ತು. ಆ ನಾಟಕದ ಪ್ರೇಕ್ಷಕಗಣದಲ್ಲಿದ್ದ ಪುಟ್ಟಣ್ಣ ಕಣಗಾಲರಿಗೆ ರಂಗದ ಮೇಲಿದ್ದ ಹುಡುಗನ ಕಣ್ಣೊಗಳೊಳಗೆ ಕಿಡಿ ಕಾಣಿಸಿರಬೇಕು; ತಮ್ಮ ‘ಗೆಜ್ಜೆಪೂಜೆ’ ಚಿತ್ರದ ಪಾತ್ರವೊಂದಕ್ಕೆ ಆಹ್ವಾನ ನೀಡಿದರು. ಯಥಾಪ್ರಕಾರ ಲೋಕನಾಥ್‌ ತಲೆಯಾಡಿಸಿದರು. ಈ ಸಾರಿ ಅಯ್ಯರ್‌ ಜೊತೆ ನಾರಾಯಣ್‌ ಕೂಡ ಲೋಕನಾಥ್‌ ‘ಹೂಂ’ ಎನ್ನುವಂತೆ ಒತ್ತಾಯಿಸಿದರು.

‘ಗೆಜ್ಜೆಪೂಜೆ’ ನಂತರ ಪುಟ್ಟಣ್ಣನವರ ‘ನಾಗರಹಾವು’ ಚಿತ್ರದಲ್ಲೂ ಪುಟ್ಟ ಪಾತ್ರವೊಂದು ದೊರೆಯಿತು. ಸಂಪ್ರದಾಯಕ್ಕೆ ಜೋತುಬಿದ್ದ ಅಪ್ಪನ ಪಾತ್ರದಲ್ಲಿ ಲೋಕನಾಥ್‌ ನೋಡುಗರ ಮನಸ್ಸು ಗೆದ್ದರು. ಹಾಗೆ ನೋಡಿದರೆ ಲೋಕನಾಥ್‌ಗೆ ಸಣ್ಣ ಪಾತ್ರಗಳೇ ಹೆಚ್ಚಿನ ಪ್ರಸಿದ್ಧಿ ತಂದುಕೊಟ್ಟಿದ್ದು. ‘ಬೂತಯ್ಯನ ಮಗ ಅಯ್ಯು’ ಚಿತ್ರದ ಉಪ್ಪಿನಕಾಯಿ ಮೋಹಿಯ ಮೋಚಿಯ ಪಾತ್ರ ಅವರ ಹೆಸರಿನ ಜೊತೆಗೇ ನೆನಪಾಗುವಷ್ಟು ಪ್ರಸಿದ್ಧವಾಯಿತು. ನಾಡು ಮೆಚ್ಚಿಕೊಂಡರೂ ಲೋಕನಾಥ್‌ರ ಪತ್ನಿ ಗಂಗಮ್ಮನವರಿಗೆ ಮಾತ್ರ ಆ ಪಾತ್ರ ಇಷ್ಟವಾಗಿರಲಿಲ್ಲವಂತೆ! (‘ಉಪ್ಪಿನಕಾಯಿ ಅಂಕಲ್‌’ ಎಂದೇ ಪ್ರಸಿದ್ಧರಾದರೂ ಅವರು ಉಪ್ಪಿನಕಾಯಿ ತಿನ್ನುವುದರಿಂದ ದೂರವಿದ್ದರು ಎನ್ನುವುದು ಹೆಚ್ಚು ಜನಕ್ಕೆ ಗೊತ್ತಿಲ್ಲ. ಅವರ ಉಪ್ಪಿನಕಾಯಿ ಮೋಹಕ್ಕೆ ದೇಹಪ್ರಕೃತಿ ಅಡ್ಡಗಾಲಾಗಿತ್ತು.)

‘ಮಿಂಚಿನ ಓಟ’ ಲೋಕನಾಥ್‌ರಿಗೆ ಹೆಸರು ತಂದುಕೊಟ್ಟ ಮತ್ತೊಂದು ಸಿನಿಮಾ. ಆ ಸಿನಿಮಾಕ್ಕೆ ಸಂಬಂಧಿಸಿದಂತೆ ಕೂಡ ಒಂದು ಕಥೆಯಿದೆ. ಜೈಲಿನಿಂದ ತಪ್ಪಿಸಿಕೊಳ್ಳುವ ಪ್ರಸಂಗದಲ್ಲಿ ಗೋಡೆಯ ಮೇಲಿನಿಂದ ಲೋಕನಾಥ್‌ ಜಿಗಿಯಬೇಕಿತ್ತು. ‘ಉಹುಂ, ನನ್ನಿಂದ ಸಾಧ್ಯವೇ ಇಲ್ಲ’ ಎಂದು ಲೋಕನಾಥ್‌ ಪಟ್ಟುಹಿಡಿದರು. ‘ಏನೂ ಆಗುವುದಿಲ್ಲ. ಕೆಳಗೆ ಉಸುಕಿದೆ. ಪೆಟ್ಟಾಗುವುದಿಲ್ಲ, ಜಿಗಿ’ ಎಂದು ಚಿತ್ರತಂಡ ಹುರಿದುಂಬಿಸಿತಂತೆ. ಆ ಮಾತನ್ನು ನಂಬಿ ಜಿಗಿದದ್ದಷ್ಟೇ ಲೋಕನಾಥ್‌ರಿಗೆ ನೆನಪು. ಕಣ್ಣುಬಿಟ್ಟಾಗ ಮೈತುಂಬಾ ಬ್ಯಾಂಡೇಜು! ಮರುದಿನ ನಡೆದ ಮಗಳ ಮದುವೆಗೆ ಬ್ಯಾಂಡೇಜಿನೊಂದಿಗೇ ಹೋದರಂತೆ.

‘ಬಂಗಾರದ ಮನುಷ್ಯ’, ‘ದೂರದ ಬೆಟ್ಟ’, ‘ಶರಪಂಜರ’, ‘ಹೇಮಾವತಿ’, ‘ಬಂಗಾರದ ಪಂಜರ’, ‘ಹೃದಯ ಸಂಗಮ’, ‘ಹೊಸ ನೀರು’, ‘ಮನೆ ಮನೆ ಕಥೆ’, ‘ಒಲವಿನ ಆಸರೆ’ – ಈ ಸಿನಿಮಾ ಹೆಸರುಗಳೇ ಲೋಕನಾಥ್‌ರ ಕಲಾಪ್ರಪಂಚದ ಪಯಣವನ್ನು ಸೂಚಿಸುವಂತಿವೆ. ಸುಮಾರು 650 ಚಿತ್ರಗಳಲ್ಲಿ ನಟಿಸಿದ್ದ ಅವರು, 1000ಕ್ಕೂ ಹೆಚ್ಚು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಲೋಕನಾಥ್‌ ಅವರದು ರಸಿಕತೆ ಹಾಗೂ ಸ್ವಾಭಿಮಾನದ ಹದ ಬೆರೆತ ವ್ಯಕ್ತಿತ್ವ. ಅವರ ಸ್ವಾಭಿಮಾನಕ್ಕೆ ಒಂದು ಉದಾಹರಣೆ ನೋಡಿ. ನಿರ್ಮಾಪಕ ಎನ್‌. ವೀರಾಸ್ವಾಮಿ ಅವರ ಆಪ್ತಬಳಗದಲ್ಲಿ ಲೋಕನಾಥ್‌ ಕೂಡ ಒಬ್ಬರಾಗಿದ್ದರು. ಗಾಂಧಿನಗರದಲ್ಲಿ ಅವರ ಕಚೇರಿಯಲ್ಲಿ ಪ್ರತಿದಿನ ನಡೆಯುತ್ತಿದ್ದ ಹರಟೆಯ ಗೋಷ್ಠಿಗಳಲ್ಲಿ ಲೋಕನಾಥ್‌ ಕಾಯಂ ಸದಸ್ಯರಲ್ಲೊಬ್ಬರು. ವೀರಾಸ್ವಾಮಿ ಅವರ ಕಚೇರಿ ಎಂದಮೇಲೆ ಚಹಾ, ಸಿಗರೇಟಿಗೇನು ಕೊರತೆಯೇ? ಒಮ್ಮೆ ಯಾವುದೋ ಕಹಿ ಗಳಿಗೆಯಲ್ಲಿ ಯಜಮಾನರು ಮುನಿಸಿಕೊಂಡರು. ‘ನೀನು ನನ್ನ ಸಿಗರೇಟ್‌ನ ಋಣದಲ್ಲಿರುವೆ’ ಎನ್ನುವ ಅರ್ಥದ ಮಾತನ್ನಾಡಿದರು. ಸ್ನೇಹಿತನಿಂದ ಅಂಥ ಮಾತು ನಿರೀಕ್ಷಿಸಿರದ ಲೋಕನಾಥ್‌ ತಕ್ಷಣವೇ ಜಾಗ ಖಾಲಿ ಮಾಡಿದರು. ಮರುದಿನ ದೊಡ್ಡದೊಂದು ಸಿಗರೇಟ್‌ ಕೇಸ್‌ನೊಂದಿಗೆ ವೀರಾಸ್ವಾಮಿ ಕಚೇರಿಯಲ್ಲಿ ಹಾಜರ್‌. ‘ಈವರೆಗೆ ನಾನು ಸೇದಿರುವುದಕ್ಕಿಂತ ಹೆಚ್ಚಿನ ಸಿಗರೇಟ್‌ಗಳು ಇದರಲ್ಲಿವೆ. ಇಲ್ಲಿಗೆ ಲೆಕ್ಕಾ ಚುಕ್ತಾ ಆಯಿತು’ ಎಂದು ಹೇಳಿ ವಾಪಸ್ಸಾದರು. ಈ ಘಟನೆ ನಡೆದ ನಂತರ ಅನೇಕ ವರ್ಷಗಳವರೆಗೆ ಇಬ್ಬರಿಗೂ ಮಾತಿಲ್ಲ ಕಥೆಯಿಲ್ಲ. ಒಂದು ದಿನ ವೀರಾಸ್ವಾಮಿ ಅನಾರೋಗ್ಯದಿಂದ ಮಲಗಿದ ಸುದ್ದಿ ಬಂತು. ಲೋಕನಾಥ್‌ರ ಮನಸ್ಸು ತಡೆಯಲಿಲ್ಲ. ಬಿಗುಮಾನ ಮರೆತು ಗೆಳೆಯನನ್ನು ನೋಡಲು ಹೋದರು. ‘ಕಡೆಗೂ ಬಂದೆಯಲ್ಲ’ ಎನ್ನುವಂತೆ ವೀರಾಸ್ವಾಮಿ ಕಣ್ಣುಗಳಲ್ಲಿ ನೀರು. ಲೋಕನಾಥ್‌ ಕೂಡ ಹನಿಗಣ್ಣು.

ಲೋಕನಾಥ್‌ ಬಹುತೇಕ ಸಿನಿಮಾ ಕಲಾವಿದರಂತೆ ಜಡಗಟ್ಟಿದವರಾಗಿರಲಿಲ್ಲ. ಮೇಲ್ನೋಟಕ್ಕೆ ಸಾಂಪ್ರದಾಯಿಕ ಮನೋಭಾವದವರಂತೆ ಕಾಣಿಸಿದರೂ ಆಚಾರ ವಿಚಾರಗಳಲ್ಲಿ ಆಧುನಿಕರಾಗಿದ್ದರು. ಕುಟುಂಬದ ಬಗ್ಗೆ, ಸಿನಿಮಾಕುಟುಂಬದ ಬಗ್ಗೆ ಅವರಿಗೆ ಅಪಾರ ವಾತ್ಸಲ್ಯವಿತ್ತು. ಕಿರಿಯರ ಬಗೆಗಿನ ಅವರ ಅಂತಃಕರಣ ಅಪರೂಪದ್ದು. ಅವರೊಂದಿಗೆ ಮಾತನಾಡುವುದೆಂದರೆ ಸಂದುಹೋದ ಕಾಲಘಟ್ಟವೊಂದರ ಪುಟಗಳನ್ನು ತಿರುವಿಹಾಕಿದಂತಾಗುತ್ತಿತ್ತು. ಈಗ ಅಜ್ಜ ಅಗಲಿದ್ದಾರೆ. ನೆನಪಿನಬುತ್ತಿಯಷ್ಟೇ ಉಳಿದಿದೆ. ಆ ಬುತ್ತಿ ಇಂದಿನ ತಲೆಮಾರಿಗೆ ಪ್ರೇರಣೆಯೂ ಮಾದರಿಯೂ ಆಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT