ತಾಯಿ ಮಗಳ ಥ್ರಿಲ್ಲರ್ ಕಥಾನಕ

7

ತಾಯಿ ಮಗಳ ಥ್ರಿಲ್ಲರ್ ಕಥಾನಕ

Published:
Updated:
Deccan Herald

ತಾಯಿ ಸೆಂಟಿಮೆಂಟ್ ಇರುವ ಚಿತ್ರಗಳಿಗೆ ಚಂದನವನದಲ್ಲಿ ಬರವಿಲ್ಲ. ಹಾಗೆಯೇ ಥ್ರಿಲ್ಲರ್ ಕಥೆಗಳನ್ನು ಇಟ್ಟುಕೊಂಡು ಬಂದ ಸಿನಿಮಾಗಳೂ ಕಮ್ಮಿಯೇನಿಲ್ಲ ಆದರೆ ಈ ಎರಡೂ ಅಂಶಗಳನ್ನು ಹೆಣೆದು ಒಂದು ಸಿನಿಮಾ ಮಾಡಿದರೆ ಹೇಗಿರುತ್ತದೆ? ಇದೇ ಆಲೋಚನೆಯೊಂದಿಗೆ ಸಿದ್ಧವಾದ ಸಿನಿಮಾ ‘ಮಹಿರ’.

ಮಹೇಶ್‌ ಗೌಡ ಈ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟು ಚಂದನವನ ಪ್ರವೇಶಿಸುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಾಹಿತಿಯನ್ನು ಹಂಚಿಕೊಳ್ಳಲಿಕ್ಕಾಗಿಯೇ ತಂಡ, ಪತ್ರಿಕಾಗೋಷ್ಠಿಯನ್ನು ಕರೆದಿತ್ತು.

‘ಇದು ನನ್ನ ಕನಸು. ಸಿನಿಮಾ ಮಾಡಬೇಕು ಎಂಬ ಕನಸನ್ನು ನನಸಾಗಿಸಿಕೊಳ್ಳಲಿಕ್ಕೆಂದೇ 2013ರಲ್ಲಿ ಇಂಗ್ಲೆಂಡ್‌ನಿಂದ ಭಾರತಕ್ಕೆ ಮರಳಿದೆ. ಇಷ್ಟು ವರ್ಷಗಳ ಕನಸು ಈಗ ನನಸಾಗುತ್ತಿದೆ. ಮಹಿರ ಎಂಬುದು ಸಂಸ್ಕೃತ ಶಬ್ದ. ಈ ಶಬ್ದಕ್ಕೆ ಹೆಣ್ಣಿನ ಶಕ್ತಿ, ಬುದ್ಧಿ, ಛಲ ಎಂಬ ಅರ್ಥಗಳಿವೆ. ಈ ಚಿತ್ರವೂ ಅಮ್ಮ ಮಗಳ ಕಥೆ. ಹಾಗೆಂದು ಸೆಂಟಿಮೆಂಟಲ್ ದೃಶ್ಯಗಳಿಂದ ತುಂಬಿಲ್ಲ. ಸಾಮಾಜಿಕ ಸಮಸ್ಯೆ ಅಥವಾ ಸ್ತ್ರೀ ವಾದ ಪ್ರತಿಪಾದನೆಯೂ ನಮ್ಮ ಉದ್ದೇಶ ಅಲ್ಲ. ಮಹಿರ ಒಂದು ಥ್ರಿಲ್ಲರ್ ಕಥೆ. ಶುದ್ಧ ಮನರಂಜನಾತ್ಮಕ ಚಿತ್ರ. ಮಾಯಾ ಎಂಬ ಹೆಣ್ಣು ತನ್ನ ಬದುಕಿನಲ್ಲಿ ಅಚಾನಕ್ಕಾಗಿ ಎದುರಾಗುವ ಸಂಕಷ್ಟಗಳನ್ನು ಹೇಗೆ ನೀಗಿಸಿಕೊಳ್ಳುತ್ತಾಳೆ ಎನ್ನುವುದೇ ಕಥಾಹಂದ’ ಎಂದು ವಿವರಿಸಿದರು ನಿರ್ದೇಶಕ ಮಹೇಶ್‌.

ಬೆಂಗಳುರು, ಪುತ್ತೂರು, ಮಂಗಳೂರು, ಹೊನ್ನಾವರಗಳಲ್ಲಿ ಅವರು ಚಿತ್ರೀಕರಣ ಮಾಡಿದ್ದಾರೆ.

ಮಲಯಾಳಂ ಭಾಷೆಯ ಎರಡು ಸಿನಿಮಾಗಳಲ್ಲಿ ನಟಿಸಿದ್ದ ವರ್ಜೀನಿಯಾ ರಾಡ್ರಗಸ್‌ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಇಂಗ್ಲಿಷ್ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಅವರಿಗೆ ಇದು ಮೊದಲ ಕನ್ನಡ ಸಿನಿಮಾ.

‘ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದರಿಂದ ನನಗೆ ಹಲವರ ಸ್ನೇಹ ಗಳಿಸಿಕೊಳ್ಳಲು ಸಾಧ್ಯವಾಗಿದೆ. ಸವಾಲಿನ ಪಾತ್ರವಿದು. ಈ ಚಿತ್ರಕ್ಕೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದರ ಮೇಲೆ ಕನ್ನಡ ಚಿತ್ರರಂಗದಲ್ಲಿ ಮುಂದುವರಿಯಬೇಕಾ ಬೇಡವಾ ಎನ್ನುವುದನ್ನು ನಿರ್ಧರಿಸುತ್ತೇನೆ’ ಎಂದು ವರ್ಜೀನಿಯಾ ಹೇಳಿದರು. ಮಹಿರದ ಚಿತ್ರದ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಹಲವು ಬಗೆಯ ಫೈಟ್‌ಗಳನ್ನು ಕಲಿತುಕೊಂಡಿದ್ದಾರೆ.

ಚೈತ್ರಾ ಈ ಚಿತ್ರದಲ್ಲಿ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಇತ್ತೀಚೆಗಷ್ಟೇ ಕಾಲೇಜು ಜೀವನ ಮುಗಿಸಿದ್ದೇನೆ. ಈ ಚಿತ್ರದಲ್ಲಿ ನಾನು ನಟಿಸುತ್ತಿರುವ ಪಾತ್ರವೂ ಕಾಲೇಜು ವಿದ್ಯಾರ್ಥಿನಿ. ಹಾಗಾಗಿ ತುಂಬ ಸುಲಭವಾಗಿ ಆ ಪಾತ್ರದಲ್ಲಿ ತಲ್ಲೀನಳಾಗುವುದು ನನಗೆ ಸಾಧ್ಯವಾಯಿತು. ಇದು ನನ್ನ ಮೊದಲ ಸಿನಿಮಾ. ತುಂಬ ಒಳ್ಳೆಯ ಅನುಭವ ಕೊಟ್ಟಿದೆ’ ಎಂದರು ಚೈತ್ರಾ. ಚಿತ್ರೀಕರಣ ಸಂದರ್ಭದಲ್ಲಿ ಎಲ್ಲರೂ ಅವರನ್ನು ‘ಗಿಳಿಮರಿ’ ಎಂದೇ ಕರೆಯುತ್ತಿದ್ದರಂತೆ.

‘ಒಂದು ಮೊಟ್ಟೆಯ ಕಥೆ’ ಚಿತ್ರದ ರಾಜ್ ಬಿ. ಶೆಟ್ಟಿ ಈ ಚಿತ್ರದಲ್ಲಿ ಇಂಟಲಿಜೆನ್ಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ‘ನನ್ನ ಮುಖದಲ್ಲಿ ಯಾವ ಇಂಟಲಿಜೆನ್ಸ್ ಕಾಣಿಸಿತೋ ಗೊತ್ತಿಲ್ಲ. ನಿರ್ದೇಶಕರು ನನ್ನನ್ನು ಇಂಟಲಿಜೆನ್ಸ್ ಅಧಿಕಾರಿಯಾಗಿ ಮಾಡಿದ್ದಾರೆ’’ ಎಂದು ತಮಾಷೆ ಮಾಡಿದರು ರಾಜ್‌.

ಬಾಲಾಜಿ ಮನೋಹರ್, ಗೋಪಾಲ್ ಕೃಷ್ಣ ದೇಶಪಾಂಡೆ ಅವರೂ ಈ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ‘ದ ಜಾಕ್‌ಫ್ರೂಟ್ ಪ್ರೊಡಕ್ಷನ್’ ಅಡಿಯಲ್ಲಿ ವಿವೇಕ್ ಕೋಡಪ್ಪ ಹಣ ಹೂಡಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಹಣ ಚಿತ್ರಕ್ಕಿದೆ.

ನವೆಂಬರ್‌ನಲ್ಲಿ ಇಂಗ್ಲೆಂಡ್, ಅಮೆರಿಕಗಳಲ್ಲಿ ಬಿಡುಗಡೆ ಮಾಡಿ ನಂತರ ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಆಲೋಚನೆಯಲ್ಲಿ ಚಿತ್ರತಂಡವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !