ಮಹಿರ ಬಿಡುಗಡೆ ಯಾವಾಗ?

ಭಾನುವಾರ, ಮೇ 26, 2019
33 °C

ಮಹಿರ ಬಿಡುಗಡೆ ಯಾವಾಗ?

Published:
Updated:
Prajavani

ಹಿರಿಯ ರಂಗಭೂಮಿ ಕಲಾವಿದೆ ವರ್ಜಿನಿಯಾ ರೋಡ್ರಿಗಸ್ ಅಭಿನಯದ ‘ಮಹಿರ’ ಚಿತ್ರದ ಬಿಡುಗಡೆ ಯಾವಾಗ? ಹಿಂದೆ ಚಿತ್ರದ ಟೀಸರ್‌ ಬಿಡುಗಡೆ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ್ದ ನಿರ್ದೇಶಕ ಮಹೇಶ್ ಗೌಡ ಅವರು, ‘ಡಿಸೆಂಬರ್ ಅಥವಾ ಜನವರಿ ವೇಳೆಗೆ ಚಿತ್ರ ತೆರೆಗೆ ಬರಲಿದೆ’ ಎಂಬ ಸೂಚನೆ ನೀಡಿದ್ದರು.

ಆದರೆ, ಡಿಸೆಂಬ‌ರ್ ಹಾಗೂ ಜನವರಿ ತಿಂಗಳುಗಳು ಕಳೆದಿವೆ. ಏಪ್ರಿಲ್ ತಿಂಗಳ ಅರ್ಧಭಾಗ ಕೂಡ ಕಳೆದಿದೆ. ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ, ‘ಎಲೆಕ್ಷನ್‌ ಹಬ್ಬ ಮುಗಿದ ನಂತರ’ ಎನ್ನುವ ಉತ್ತರ ನೀಡುತ್ತಿದೆ.

‘ಮಹಿರ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ‘ಯು/ಎ’ ಪ್ರಮಾಣಪತ್ರ ನೀಡಿದೆ. ಅಂದರೆ, ಚಲನಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಬೋಳು ಮಂಡೆಯ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿರುವ ನಟ ರಾಜ್ ಬಿ. ಶೆಟ್ಟಿ, ‘ನನ್ನ ತಲೆಯಲ್ಲಿ ಕೂದಲು ಇಲ್ಲದಿರಬಹುದು. ಆದರೆ, ತಲೆಯೊಳಗೆ ಮಿದುಳು ಇಲ್ಲವೆಂದು ಭಾವಿಸಬೇಕಿಲ್ಲ’ ಎಂಬ ಡೈಲಾಗ್‌ ಮೂಲಕ ತಮ್ಮ ಪಾತ್ರ ಏನೆಂಬುದನ್ನು ಹೇಳಿದ್ದಾರೆ.

‘ಮುಂದಿನ ತಿಂಗಳ ಆರಂಭದಲ್ಲಿ ಅಥವಾ ಈ ತಿಂಗಳ ಕೊನೆಯಲ್ಲಿ ಚಿತ್ರದ ಪ್ರಚಾರ ಕಾರ್ಯ ಆರಂಭಿಸಲಾಗುವುದು. ಬೇರೆ ಯಾವೆಲ್ಲ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ, ಯಾವುವು ತೆರೆಗೆ ಬರಲಿವೆ, ಚುನಾವಣಾ ಹಬ್ಬ ಯಾವಾಗ ಮುಗಿಯಲಿದೆ ಎಂಬುದನ್ನೆಲ್ಲ ಗಮನಿಸಿ ಚಿತ್ರ ತೆರೆಗೆ ಬರುವ ದಿನ ತೀರ್ಮಾನ ಮಾಡಬೇಕು’ ಎನ್ನುತ್ತಿದೆ ಚಿತ್ರತಂಡ.

ಈ ಚಿತ್ರವು ಹೆಣ್ಣಿನ ಶಕ್ತಿ, ಆಕೆಯ ಬುದ್ಧಿಮತ್ತೆ, ಆಕೆಯ ಸಾಮರ್ಥ್ಯವನ್ನು ತೋರಿಸುತ್ತದೆ. ‘ಮಹಿರ’ ಎಂಬ ಪದ ಕೂಡ ಅದನ್ನು ಪ್ರತಿನಿಧಿಸುತ್ತದೆ ಎನ್ನುವುದು ಚಿತ್ರದ ಬಗ್ಗೆ ಮಹೇಶ್ ನೀಡುವ ವಿವರಣೆ. ‘ಕಡಲ ಕಿನಾರೆಯೊಂದರ ಸಮೀಪ ತಾಯಿಯೊಬ್ಬಳು ಕೆಫೆ ನಡೆಸುತ್ತಿರುತ್ತಾಳೆ. ಅವಳಿಗೆ ಒಬ್ಬಳು ಮಗಳಿರುತ್ತಾಳೆ. ಆ ತಾಯಿಗೆ ಒಂದು ಅಡಚಣೆ ಎದುರಾಗುತ್ತದೆ. ಅಲ್ಲೊಬ್ಬ ತನಿಖಾಧಿಕಾರಿಯ ಪ್ರವೇಶ ಕೂಡ ಆಗುತ್ತದೆ. ಅಡಚಣೆ ಏನು, ಮುಂದೆ ಏನಾಗುತ್ತದೆ ಎಂಬುದು ಸಿನಿಮಾ ಕಥೆ’ ಎಂಬುದು ಕಥೆ ಬಗ್ಗೆ ಅವರು ನೀಡುವ ವಿವರಣೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !