ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಯಾಳಂನ ಖ್ಯಾತ ನಿರ್ಮಾಪಕ, ನಟ ವಿಜಯ್ ಬಾಬು ಮೇಲೆ ಅತ್ಯಾಚಾರ ಪ್ರಕರಣ ದಾಖಲು

Last Updated 27 ಏಪ್ರಿಲ್ 2022, 9:36 IST
ಅಕ್ಷರ ಗಾತ್ರ

ಕೊಚ್ಚಿ: ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮತ್ತು ಫೇಸ್‌ಬುಕ್ ಲೈವ್ ಮೂಲಕ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಮಲಯಾಳಂನ ಖ್ಯಾತ ನಿರ್ಮಾಪಕ, ನಟ ವಿಜಯ್ ಬಾಬು ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಮಹಿಳೆ ದೂರನ್ನು ಆಧರಿಸಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ ಬಳಿಕ ತಲೆಮರೆಸಿಕೊಂಡಿದ್ದ ಬಾಬು, ಫೇಸ್‌ಬುಕ್ ಲೈವ್‌ನಲ್ಲಿ ಕಾಣಿಸಿಕೊಂಡು ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ ಮತ್ತು ಪ್ರಕರಣದಲ್ಲಿ ತಾನೇ ನಿಜವಾದ ಸಂತ್ರಸ್ತ ಎಂದು ಹೇಳಿರುವುದಾಗಿ ವರದಿಯಾಗಿದೆ.

ನಿರ್ಮಾಣ ಸಂಸ್ಥೆ ಫ್ರೈಡೇ ಫಿಲ್ಮ್ ಹೌಸ್‌ನ ಸಂಸ್ಥಾಪಕರಾಗಿರುವ ಬಾಬು, ಸಂತ್ರಸ್ತೆಯ ಹೆಸರು ಮತ್ತು ಗುರುತನ್ನು ಬಹಿರಂಗಪಡಿಸಿರುವುದು ಅಪರಾಧವಾಗಿದೆ. 'ಅವರ ವಿರುದ್ಧ ಮೊದಲು ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುತ್ತಿದ್ದಂತೆ ಮತ್ತೊಂದು ಪ್ರಕರಣವನ್ನು ಸಹ ದಾಖಲಿಸಲಾಗಿದೆ. ಅವರೀಗ ತಲೆಮರೆಸಿಕೊಂಡಿದ್ದಾರೆ ಎಂದು ತೋರುತ್ತಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ವಿಜಯ್ ಬಾಬು ಅವರ ನಿರ್ಮಾಣ ಸಂಸ್ಥೆ ನಿರ್ಮಿಸಿದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಮಹಿಳೆ ಏ. 22 ರಂದು ಪೊಲೀಸರಿಗೆ ದೂರು ನೀಡಿದ್ದರು ಮತ್ತು ಈ ಹಿಂದೆ ನಿರ್ಮಾಪಕ ಮತ್ತು ನಟರಾಗಿರುವ ಬಾಬು ಅವರಿಂದ ಒಂದೂವರೆ ತಿಂಗಳು ತನ್ನ ಮೇಲಾದ ದೈಹಿಕ ಹಲ್ಲೆ ಮತ್ತು ಲೈಂಗಿಕ ಶೋಷಣೆಯನ್ನು ಫೇಸ್‌ಬುಕ್ ಪೋಸ್ಟ್ ಮೂಲಕ ವಿವರಿಸಿದ್ದಾರೆ.

ಮೊದಲಿಗೆ ಅವರು ನನ್ನ ವೈಯಕ್ತಿಕ ಮತ್ತು ವೃತ್ತಿಪರ ಸಮಸ್ಯೆಗಳಿಗೆ ಪರಿಹಾರ ನೀಡುವವರಂತೆ ವರ್ತಿಸಿದರು. ಆದರೆ, ಅದರ ಸೋಗಿನಲ್ಲಿಯೇ ನನ್ನನ್ನು ಲೈಂಗಿಕವಾಗಿ ಶೋಷಿಸಿದರು ಎಂದು ನಟಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ. 'ರಕ್ಷಕ ಕಮ್ ಫ್ರೆಂಡ್ ಕಮ್ ಲವರ್'ನಂತೆ ಪಾತ್ರ ನಿರ್ವಹಿಸಿದ್ದ ಅವರು ಕಳೆದ ಒಂದೂವರೆ ತಿಂಗಳಿನಲ್ಲಿ ಹಲವಾರು ಬಾರಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಅತ್ಯಾಚಾರ ಮತ್ತು ದೈಹಿಕ ಹಲ್ಲೆ ಜೊತೆಗೆ, ಆಲ್ಕೋಹಾಲ್ ಮತ್ತು 'ಹ್ಯಾಪಿ ಮಾತ್ರೆ' ಸೇವಿಸುವಂತೆ ಒತ್ತಾಯಿಸಿದರು. ಚಿತ್ರೋದ್ಯಮದಲ್ಲಿನ ಅವರ ಪ್ರಭಾವದಿಂದಾಗಿ ತನ್ನ ಮೇಲಾಗುತ್ತಿರುವ ಹಲ್ಲೆ ಮತ್ತು ಶೋಷಣೆಯ ಬಗ್ಗೆ ಇತರರೊಂದಿಗೆ ಚರ್ಚಿಸಲು ಭಯವಾಯಿತು ಎಂದು ಮಹಿಳೆ ಹೇಳಿದ್ದಾರೆ.

'ವಿಜಯ್ ಬಾಬು ಅವರ ಈ ಬಲೆಯಲ್ಲಿ ಇನ್ನೂ ಹಲವಾರು ಮಹಿಳೆಯರು ಸಿಲುಕಿದ್ದಾರೆ ಎಂದು ನನಗೆ ತಿಳಿದುಬಂದಿದೆ. ಅವರು ನನ್ನ ನಗ್ನ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಅದನ್ನು ಮುಂದಿಟ್ಟುಕೊಂಡು ನನಗೆ ಜೀವ ಬೆದರಿಕೆಯೊಡ್ಡಿದ್ದಾರೆ' ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಆದಾಗ್ಯೂ, ಮಂಗಳವಾರ ಫೇಸ್‌ಬುಕ್ ಲೈವ್‌ನಲ್ಲಿ ಕಾಣಿಸಿಕೊಂಡ ಬಾಬು, ಮಹಿಳೆ ಮಾಡಿರುವ ಆರೋಪಗಳನ್ನು ನಿರಾಕರಿಸಿದರು. ಆದರೆ, ಕಳೆದ ಐದು ವರ್ಷಗಳಿಂದ ಈ ನಟಿ ಗೊತ್ತಿರುವುದಾಗಿ ಒಪ್ಪಿಕೊಂಡರು.

ಆರೋಪಗಳನ್ನು ನಿರಾಕರಿಸಿದ್ದಲ್ಲದೆ, ತಮ್ಮ ಇಮೇಜ್‌ಗೆ ಧಕ್ಕೆ ತಂದಿದ್ದಕ್ಕಾಗಿ ದೂರುದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ ಅವರು, ಲೈವ್‌ನಲ್ಲಿ ಹಲವಾರು ಬಾರಿ ಸಂತ್ರಸ್ತೆಯ ಹೆಸರನ್ನು ಪ್ರಸ್ತಾಪಿಸಿದರು. ಆಕೆ ಬಲಿಪಶು ಅಲ್ಲ ಮತ್ತು ಪ್ರಕರಣದಲ್ಲಿ ನಿಜವಾದ ಬಲಿಪಶು ನಾನಾಗಿದ್ದೇನೆ. ಉದ್ದೇಶಪೂರ್ವಕವಾಗಿಯೇ ನನ್ನ ಮೇಲೆ ಆರೋಪ ಮಾಡಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT