ಪ್ರೀತಿಯ ಕಮಾನು ಕಟ್ಟಿದ 'ಮಳೆಬಿಲ್ಲು'

ಭಾನುವಾರ, ಜೂಲೈ 21, 2019
22 °C

ಪ್ರೀತಿಯ ಕಮಾನು ಕಟ್ಟಿದ 'ಮಳೆಬಿಲ್ಲು'

Published:
Updated:
Prajavani

‌‘ಕಾಮನಬಿಲ್ಲು ಕಮಾನು ಕಟ್ಟಿದೆ ಮೋಡದ ನಾಡಿನ ಬಾಗಿಲಿಗೆ...’ ಆಗಸದಲ್ಲಿ ಕಾಮನಬಿಲ್ಲು ಅಥವಾ ಮಳೆಬಿಲ್ಲು ಮೂಡಿದಾಗ‌ ಪ್ರಾಥಮಿಕ ಶಾಲೆಯಲ್ಲಿ ಓದಿದ ಈ ಪದ್ಯ ಮನದಲ್ಲಿ ಥಟ್ಟನೆ ಗುನುಗುಡುತ್ತದೆ.

ಭೂಮಿಯ ವಾತಾವರಣದಲ್ಲಿನ ಸಣ್ಣ ಹನಿಗಳ ಮೇಲೆ ನೇಸರ ಬೆಳಗಿದಾಗ ಗಗನದಲ್ಲಿ ಕಾಣಿಸುವ ಬೆಳಕಿನ ಬಣ್ಣಗಳ ಪಟ್ಟಿಗೆ ಮಳೆಬಿಲ್ಲು ಎನ್ನುತ್ತೇವೆ. ಮಳೆ ಹೊರತುಪಡಿಸಿ ನೀರಿನ ಇತರೇ ಸ್ವರೂಪದಲ್ಲೂ ಇದು ಜೀವ ತಳೆಯುತ್ತದೆ. ಅಂದಹಾಗೆ ಗಾಂಧಿನಗರದಲ್ಲಿ ‘ಮಳೆಬಿಲ್ಲು’ ಹೆಸರಿನ ಸಿನಿಮಾವೊಂದು ಪ್ರೀತಿಯ ಕಮಾನು ಕಟ್ಟಿ ಬಿಡುಗಡೆಗೆ ಸಿದ್ಧವಾಗಿದೆ.

ಸಿನಿಮಾ ಕುರಿತು ಮಾಹಿತಿ ಹಂಚಿಕೊಳ್ಳಲು ನಿರ್ದೇಶಕ ನಾಗರಾಜ್ ಹಿರಿಯೂರು ಚಿತ್ರತಂಡದ ಸಮೇತ ಸುದ್ದಿಗೋಷ್ಠಿಗೆ ಹಾಜರಾಗಿದ್ದರು. ‘ಹುಡುಗರದು ಕಪ್ಪು– ಬಿಳುಪಿನ ಬದುಕು. ಅವರ ಜೀವನದಲ್ಲಿ ಹುಡುಗಿಯರು ಬಂದಾಗ ಮಳೆಬಿಲ್ಲು ಮೂಡುತ್ತದೆ. ಅದನ್ನೇ ಚಿತ್ರದಲ್ಲಿ ಹೇಳಿದ್ದೇವೆ’ ಎಂದರು ನಕ್ಕರು.

ಹೈಸ್ಕೂಲ್‌ನಲ್ಲಿ ಓದುತ್ತಿದ್ದಾಗ ನಡೆದ ಸಣ್ಣ ಘಟನೆಯ ಎಳೆ ಆಧರಿಸಿ ಈ ಕಥೆ ಹೊಸೆಯಾಗಿದೆಯಂತೆ. ಆ ಘಟನೆಯನ್ನೇ ಸಂಪೂರ್ಣವಾಗಿ ಆಧರಿಸಿ ಸಿನಿಮಾ ನಿರ್ಮಿಸಿಲ್ಲ ಎಂಬ ಸ್ಪಷ್ಟನೆಯನ್ನೂ ನೀಡಿದರು. ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚನೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ.

ಅಣ್ಣನ ಬಣ್ಣದ ಲೋಕದ ಆಸೆ ಈಡೇರಿಸಲು ತಮ್ಮ ನಿಂಗಪ್ಪ ಎಲ್‌. ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಅಣ್ಣನಿಗೆ ಸಾಹಿತ್ಯದ ಮೇಲೆ ಆಸಕ್ತಿ ಹೆಚ್ಚಿದೆ. ಅವನಿಗೆ ಸಿನಿಮಾದ ಮೇಲೆ ಮೋಹ ಬೆಳೆದಾಗ ನಾವು ತಿರಸ್ಕರಿಸಿದೆವು. ಕೊನೆಗೆ, ಕಥೆ ಬಗ್ಗೆ ಹೇಳಿದಾಗ ಸಿನಿಮಾ ಮಾಡಲು ನಿರ್ಧರಿಸಿದೆ’ ಹೇಳಿಕೊಂಡರು.

ಶರತ್‌ ಈ ಚಿತ್ರದ ನಾಯಕ. ಅವರಿಗೆ ಇದು ಎರಡನೇ ಚಿತ್ರ. ಅವರದು ಎರಡು ಶೇಡ್‌ಗಳಿರುವ ಪಾತ್ರ. ‘ಹೈಸ್ಕೂಲ್‌ ಮತ್ತು ಕಾಲೇಜು ಹುಡುಗನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಹೈಸ್ಕೂಲ್‌ ಪಾತ್ರಕ್ಕಾಗಿ ನಿರ್ದೇಶಕರು ನೇರವಾಗಿ ನನ್ನನ್ನು ಹೈಸ್ಕೂಲ್‌ ವಿದ್ಯಾರ್ಥಿಗಳ ಜೊತೆಯಲ್ಲಿಯೇ ಕೂರಿಸಿದ್ದರು’ ಎಂದು ನೆನಪಿಗೆ ಜಾರಿದರು.

ಮೂವರು ನಾಯಕಿಯರಲ್ಲಿ ನಟಿ ಸಂಜನಾ ಆನಂದ್‌ ಕೂಡ ಒಬ್ಬರು. ಬಜಾರಿ ಹುಡುಗಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಚಿತ್ರದಲ್ಲಿ ನನ್ನದು ಭಾರ್ಗವಿ ಹೆಸರಿನ ಪಾತ್ರ. ಚಿತ್ರದಲ್ಲಿ ನವೀರಾದ ಪ್ರೇಮಕಥೆ ಇದೆ’ ಎಂದರು. 

ನಟಿ ನಯನಾಗೆ ಇದು ಮೂರನೇ ಚಿತ್ರ. ಕಾಲೇಜು ಹುಡುಗಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಾಯಕಿ ಸೌಮ್ಯಾ ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುವ ಖುಷಿಯಲ್ಲಿದ್ದಾರೆ.

ಚಿತ್ರದಲ್ಲಿ ಹತ್ತು ಹಾಡುಗಳಿದ್ದು ಆರ್‌.ಎಸ್‌. ಗಣೇಶ್‌ ನಾರಾಯಣ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸಿ. ನಾರಾಯಣ್‌ ಅವರದು. ಎಸ್‌.ಎ. ಚಿನ್ನೇಗೌಡ, ಸಾಯಿಪ್ರಕಾಶ್‌, ಭಾ.ಮಾ. ಹರೀಶ್‌ ಚಿತ್ರತಂಡಕ್ಕೆ ಶುಭ ಕೋರಿದರು.

Post Comments (+)