ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ವೇದಿಕೆಗಳಲ್ಲೂ ಮಾಲಿವುಡ್ ಛಾಪು

Last Updated 28 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಮಲಯಾಳ ಚಿತ್ರರಂಗದಲ್ಲಿ ಕಲಾತ್ಮಕ ಸಿನಿಮಾಗಳು ಹಿಂದಿನಿಂದಲೂ ಮುಖ್ಯವಾಹಿನಿಯ ಸಿನಿಮಾಗಳಷ್ಟೆ ಪ್ರಾಮುಖ್ಯತೆ ಪಡೆದುಕೊಂಡಿವೆ. ಮಾಲಿವುಡ್‌ನ ಕಲಾತ್ಮಕ ನಿರ್ದೇಶಕರ ಪೈಕಿ ಮೊದಲ ಸ್ಥಾನದಲ್ಲಿ ನಿಲ್ಲುವವರು ಅಡೂರು ಗೋಪಾಲಕೃಷ್ಣನ್. ಇವರ ಚಿತ್ರಗಳನ್ನು ಪ್ರೇಕ್ಷಕರು ಮುಖ್ಯವಾಹಿನಿಯ ಸಿನಿಮಾಗಳಷ್ಟೆ ಪ್ರೀತಿಯಿಂದ ಇಷ್ಟಪಡುತ್ತಾರೆ.

ಇವರ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾಗಳು ದೇಶ ವಿದೇಶಗಳಲ್ಲಿ ನಡೆದ ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿವೆ ಮತ್ತು ಪ್ರಶಸ್ತಿಗಳನ್ನೂ ಬಾಚಿಕೊಂಡಿವೆ. ‘ಮುಖಾಮುಖಂ’, ‘ಅನಂತರಂ’, ‘ಮದಿಲುಗಳ್’, ‘ಕಥಾಪುರುಷನ್’ ಇವರು ನಿರ್ದೇಶಿಸಿರುವ ಪ್ರಮುಖ ಸಿನಿಮಾಗಳು. ಸಾಮಾನ್ಯರ ಬದುಕು, ಮಣ್ಣಿನ ಸತ್ವವನ್ನು ಹಿಡಿದಿಟ್ಟುಕೊಳ್ಳುವ ಚಿತ್ರಗಳು ಮಲಯಾಳದಲ್ಲಿ ಸಾಕಷ್ಟು ನಿರ್ಮಾಣವಾಗಿವೆ. ಈ ಕಾರಣಕ್ಕಾಗಿಯೇ ಅಲ್ಲಿನ ಪ್ರೇಕ್ಷಕರು ಇಂತಹ ಸಿನಿಮಾಗಳನ್ನು ಇಷ್ಟಪಡುತ್ತಾರೆ.

ಭರತನ್, ಜಿ. ಅರವಿಂದನ್, ಪಿ. ಪದ್ಮರಾಜನ್, ಶಾಜಿ ಎನ್. ಕರುಣ್ ಮೊದಲಾದವರ ನಿರ್ದೇಶನದಲ್ಲಿ ಮೂಡಿಬಂದಿರುವ ಕಲಾತ್ಮಕ ಚಿತ್ರಗಳು ಕೂಡ ಮಲಯಾಳ ಚಿತ್ರರಂಗಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟಿವೆ.

ಶಾಜಿ ಎನ್.ಕರುಣ್ ಅವರು ನಿರ್ದೇಶಿಸಿರುವ ‘ಪಿರವಿ’, ‘ಸ್ವಾಹಂ’ ,’ವಾನಪ್ರಸ್ಥಂ’ ಸಿನಿಮಾಗಳು ಹಲವು ಪ್ರಶಸ್ತಿಗಳಿಗೆ ಭಾಜನವಾಗಿವೆ. 1999ರಲ್ಲಿ ತೆರೆಕಂಡಿರುವ ಮೋಹನ್ ಲಾಲ್ ಅಭಿನಯದ ‘ವಾನಪ್ರಸ್ಥಂ’ ಸಿನಿಮಾ ಈಗಲೂ ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಾಣುತ್ತಿರುವುದು ಇಂತಹ ಸಿನಿಮಾಗಳಿಗೆ ಲಭಿಸಿರುವ ಅಂಗೀಕಾರಕ್ಕೆ ಸಾಕ್ಷಿ.

ಪ್ರಸಿದ್ಧ ಸಾಹಿತಿ ಹಾಗೂ ನಿರ್ದೇಶಕ ಎಂ.ಟಿ. ವಾಸುದೇವನ್ ನಾಯರ್ ಕೂಡ ‘ಒರು ಚೆರು ಪೂಂಜಿರಿ’, ‘ಕಡವು’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಪ್ರತಿಷ್ಠಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ 2017ರಲ್ಲಿ ‘ಟೇಕಾಫ್’ ಮತ್ತು 2018ರಲ್ಲಿ ‘ಈ ಮಾ ಯೋ’ ಮಲಯಾಳ ಸಿನಿಮಾಗಳು ಪ್ರಶಸ್ತಿಗೆ ಪಾತ್ರವಾಗಿವೆ.ಟೇಕಾಫ್ ಸಿನಿಮಾ ವಿಶೇಷ ಜ್ಯೂರಿ ಪ್ರಶಸ್ತಿಗೆ ಪಾತ್ರವಾಗುವುದರ ಜೊತೆಗೆ, ಚಿತ್ರದ ನಾಯಕಿ ಪಾರ್ವತಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. ಮಹೇಶ್ ನಾರಾಯಣ ಈ ಚಿತ್ರ ನಿರ್ದೇಶಿಸಿದ್ದರು.

‘ಈ ಮಾ ಯೋ’ ಸಿನಿಮಾದ ನಿರ್ದೇಶಕ ಲಿಜೊ ಜೋಸ್ ಪೆಳ್ಳಿಶ್ಶೇರಿ ಅತ್ಯುತ್ತಮ ನಿರ್ದೇಶಕ ಹಾಗೂ ನಾಯಕ ಚೆಂಬನ್ ವಿನೋದ್ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದರು.

ಇರಾಕ್‌ನಲ್ಲಿ ಸಿಲುಕಿದ್ದ ಕೇರಳದ ದಾದಿಯರನ್ನು ರಕ್ಷಿಸಿ ಕರೆತರುವ ಕಥಾಹಂದರ ಹೊಂದಿರುವ ‘ಟೇಕಾಫ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲೂ ದಾಖಲೆ ಸೃಷ್ಟಿಸಿತ್ತು. ಕುಂಜಾಕೊ ಬೋಬನ್, ಫಹಾದ್ ಫಾಜಿಲ್, ಪಾರ್ವತಿ ಸೇರಿದಂತೆ ಮಲಯಾಳಂನ ಪ್ರಸಿದ್ಧ ನಟ ನಟಿಯರ ದಂಡೇ ಈ ಚಿತ್ರದಲ್ಲಿ ಅಭಿನಯಿಸಿತ್ತು.

ಇನ್ನು ‘ಈ ಮ ಯೋ’ ಸಿನಿಮಾ ಪೋಷಕ ಪಾತ್ರಗಳಲ್ಲಿ ಮಿಂಚುತಿದ್ದ ಕಲಾವಿದರೇ ನಟಿಸಿರುವ ಸಿನಿಮಾ. ರೋಮನ್ ಕ್ಯಾಥೊಲಿಕ್ ಸಮುದಾಯದ ವಾವಚ್ಚನ್ ಮೇಸ್ತ್ರಿ ಎಂಬ ವ್ಯಕ್ತಿಯ ಸಾವು ಮತ್ತು ಆತನ ಅಂತ್ಯಸಂಸ್ಕಾರ ನಡೆಸಲು ಮಗ ನಡೆಸುವ ಪರದಾಟವೇ ಇಡೀ ಚಿತ್ರದ ಕೇಂದ್ರಬಿಂದು. ತಂದೆಗೆ ನೀಡಿದ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ವಿಫಲನಾಗುವ ಪುತ್ರನ ವಿಷಾದಮಯ ಸನ್ನಿವೇಶ ಪ್ರೇಕ್ಷಕರನ್ನು ವಿಷಾದಭಾವಕ್ಕೊಯ್ಯುತ್ತದೆ. ‘ಈ ಮ ಯೋ’ ಅಂದರೆ ‘ಈಶೋ ಮರಿಯಾ ಯೋಸೆಫ್’ ಎಂಬ ಪ್ರಾರ್ಥನೆಯ ಸಂಕ್ಷಿಪ್ತ ರೂಪವಾಗಿದೆ. ಉತ್ತಮ ಚಿತ್ರಗಳಿಗೆ ಮಲಯಾಳ ಪ್ರೇಕ್ಷಕರಿಂದ ಎಂದೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎನ್ನುವುದಕ್ಕೆ ಇಂತಹ ಸಿನಿಮಾಗಳ ಯಶಸ್ಸು ಸಾಕ್ಷಿ.

‘ಟೇಕಾಫ್‌’ ಚಿತ್ರದಲ್ಲಿ ಕುಂಜಾಕೊ ಬೋಬನ್‌ ಮತ್ತು ಪಾರ್ವತಿ
‘ಟೇಕಾಫ್‌’ ಚಿತ್ರದಲ್ಲಿ ಕುಂಜಾಕೊ ಬೋಬನ್‌ ಮತ್ತು ಪಾರ್ವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT